ADVERTISEMENT

ದಕ್ಷಿಣ ಕನ್ನಡ: ಬೇಸಿಗೆಯಲ್ಲಿ ಆಗದು ಮೇವಿನ ಕೊರತೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2025, 6:59 IST
Last Updated 19 ಮಾರ್ಚ್ 2025, 6:59 IST
ಮಂಗಳೂರಿನ ಡೊಂಗರಕೇರಿಯಲ್ಲಿ ಕೊಟ್ಟಿಗೆಯಲ್ಲಿ ಹಸುವಿಗೆ ಮೇವು ಕೊಡುತ್ತಿರುವುದು  ಪ್ರಜಾವಾಣಿ ಸಂಗ್ರಹ ಚಿತ್ರ
ಮಂಗಳೂರಿನ ಡೊಂಗರಕೇರಿಯಲ್ಲಿ ಕೊಟ್ಟಿಗೆಯಲ್ಲಿ ಹಸುವಿಗೆ ಮೇವು ಕೊಡುತ್ತಿರುವುದು  ಪ್ರಜಾವಾಣಿ ಸಂಗ್ರಹ ಚಿತ್ರ   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗುವ ಸಾಧ್ಯತೆ ಕಡಿಮೆ. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಪ್ರಕಾರ, ಜಿಲ್ಲೆಯಲ್ಲಿ ಲಭ್ಯವಿರುವ ಮೇವಿನ ದಾಸ್ತಾನು ಮುಂದಿನ 22 ವಾರಗಳವರೆಗೆ ಸಾಕಾಗಲಿದೆ.

ಜಾನುವಾರು ಗಣತಿಯ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2,52,423 ದನಗಳು, 32,508 ಕುರಿ ಮತ್ತು ಮೇಕೆಗಳಿವೆ. ಇವುಗಳಿಗೆ ವಾರಕ್ಕೆ ಅಂದಾಜು 10,715 ಟನ್ ಮೇವು ಬೇಕಾಗುತ್ತದೆ. ಪ್ರಸ್ತುತ ಜಿಲ್ಲೆಯಲ್ಲಿ 2,43,351 ಟನ್ ಮೇವಿನ ದಾಸ್ತಾನು ಇದೆ ಎಂದು  ಇಲಾಖೆಯ ಉಪನಿರ್ದೇಶಕ ಡಾ. ಅರುಣ್ ಕುಮಾರ್ ಶೆಟ್ಟಿ ‘ಪ್ರಜಾವಾಣಿ‘ಗೆ ತಿಳಿಸಿದರು.

ಹೆಚ್ಚುವರಿಯಾಗಿ, ಜಿಲ್ಲೆಯಲ್ಲಿ ವಾರಕ್ಕೆ 5,120 ಟನ್ ಮೇವು ಉತ್ಪಾದನೆಯಾಗುತ್ತಿದೆ.

ADVERTISEMENT

‘ಕಳೆದ ವರ್ಷ ರೈತರಿಗೆ ಸಾಕಷ್ಟು ಪ್ರಮಾಣದಲ್ಲಿ ಮೇವಿನ ಬೀಜಗಳನ್ನು ಪೂರೈಸಿ, ಹಸಿ ಮೇವು ಬೆಳೆಯಲು ಪ್ರೋತ್ಸಾಹ ನೀಡಲಾಗಿದೆ. ಅಲ್ಲದೆ, ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್‌)ನವರು ಡಿಸೆಂಬರ್‌ ಮತ್ತು ಜನವರಿ ತಿಂಗಳಲ್ಲಿ ರೈತರಿಗೆ ಮಿನಿ ಕಿಟ್‌ಗಳನ್ನು ವಿತರಿಸಿದ್ದಾರೆ. ಈ ಮೇವು ಈಗ ಕೊಯ್ಲಿಗೆ ಸಿದ್ಧವಾಗಿದೆ’ ಎಂದು ಅವರು ಹೇಳಿದರು.

ಕೊಯಿಲ ಜಿಲ್ಲಾ ಗೋಶಾಲೆಯ ಆವರಣದಲ್ಲಿ ಐದರಿಂದ ಆರು ಎಕರೆ ಪ್ರದೇಶದಲ್ಲಿ ಹಸಿರು ಮೇವನ್ನು ಬೆಳೆಸಲಾಗುತ್ತಿದೆ. ಇದರ ಜೊತೆಗೆ, ಗೋಶಾಲೆಯಲ್ಲಿ ದನಗಳಿಗೆ ಒಣಹುಲ್ಲನ್ನು ಸಂಗ್ರಹಿಸಲಾಗಿದೆ. ಮಳೆಗಾಲದಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದರಿಂದ  ಹಸಿರು ಮೇವು ಬೆಳೆಯುವ ರೈತರಿಗೆ ಅನುಕೂಲವಾಯಿತು.

‘ಸದ್ಯ ಮೇವಿನ ಕೊರತೆ ಇಲ್ಲ. ಆದರೆ, ಮುಂಗಾರು ಪೂರ್ವ ಮಳೆ ಬಾರದಿದ್ದರೆ ಮೇ ತಿಂಗಳ ಅಂತ್ಯದಲ್ಲಿ ಸಮಸ್ಯೆಯಾಗಬಹುದು’ ಎಂದು ರೈತ ಮೋಹನ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.