ಮಂಗಳೂರು: ನಗರದ ನಂತೂರು ವೃತ್ತದಲ್ಲಿ ಶನಿವಾರ ದಿನವಿಡೀ ಸಂಚಾರ ದಟ್ಟಣೆ ಉಂಟಾಗಿದ್ದು, ವಾಹನಗಳು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತಿದ್ದವು. ದಟ್ಟಣೆ ನಿವಾರಿಸಲು ಸಂಚಾರ ಪೊಲೀಸರು ಹೈರಾಣಾದರು.
ಭಾರಿ ಮಳೆಯಿಂದಾಗಿ ನಂತೂರು ವೃತ್ತದ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹಾಗೂ ಪಡೀಲ್ ಕಡೆಗಿನ ಬೈಪಾಸ್ ರಸ್ತೆಯಲ್ಲಿ ಭಾರಿ ಗಾತ್ರದ ಗುಂಡಿಗಳು ಬಿದ್ದಿವೆ. ಇಲ್ಲಿ ವಾಹನಗಳು ನಿಧಾನವಾಗಿ ಸಂಚರಿಸುತ್ತಿವೆ. ಜೋರು ಮಳೆಯಾದಾಗಲೆಲ್ಲ ವಾಹನಗಳು ಆಮೆಗತಿಯಲ್ಲಿ ಸಾಗುತ್ತವೆ. ಶನಿವಾರ ಬಿಟ್ಟು ಬಿಟ್ಟು ಧಾರಾಕಾರ ಮಳೆ ಸುರಿಯುತ್ತಿತ್ತು. ಬಿಕರ್ನಕಟ್ಟೆ ಬಳಿ ವಾಹನವೊಂದು ಕೆಟ್ಟು ನಿಂತಿತ್ತು. ಬೈತುರ್ಲಿ ಬಳಿ ಭಾರಿ ಗಾತ್ರದ ಕಂಟೈನರ್ ಸಾಗಿಸುವ ಲಾರಿ ಉರುಳಿ ಬಿದ್ದಿತ್ತು. ಇದರಿಂದಾಗಿ ವಾಹನ ದಟ್ಟಣೆ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಂಡಿತು ಎಂದು ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ನಂತೂರುನಲ್ಲಿ ವಾಹನ ದಟ್ಟಣೆ ಉಂಟಾಗಿರುವುದನ್ನು ತಿಳಿದು ಕೆಲವು ಮೂಡುಬಿದಿರೆ, ಕಾರ್ಕಳ ಕಡೆಯಿಂದ ನಗರಕ್ಕ ಬರುವ ಕೆಲವು ಖಾಸಗಿ ಎಕ್ಸ್‌ಪ್ರೆಸ್ ಬಸ್‌ಗಳು ಮಾರ್ಗ ಬದಲಾಯಿಸಿ ಚಲಿಸಿದವು. ವಾಮಂಜೂರಿನಿಂದ ಪಚ್ಚನಾಡಿ– ಕೆಪಿಟಿ ಮಾರ್ಗವಾಗಿ ನಗರವನ್ನು ಪ್ರವೇಶಿಸಿದವು. ಇದರಿಂದಾಗಿ ಪ್ರಯಾಣಿಕರು ಸಮಸ್ಯೆ ಎದುರಿಸಿದರು. ಇದು ಕೆಪಿಟಿ ಜಂಕ್ಷನ್‌ನಲ್ಲೂ ವಾಹನ ದಟ್ಟಣೆ ಉಂಟಾಗುವಂತೆ ಮಾಡಿತು.
ಮಳೆಗಾಲ ಶುರುವಾದ ಬಳಿಕ ನಂತೂರು ವೃತ್ತದಲ್ಲಿ ಪದೇ ಪದೇ ವಾಹನ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇದಕ್ಕೆ ಪರಿಹಾರೋಪಾಯವೇ ತೋಚುತ್ತಿಲ್ಲ. ವಾಹನ ದಟ್ಟಣೆ ನಿವಾರಣೆಗೆ ನಮ್ಮ ಇಲಾಖೆಯ ಸಿಬ್ಬಂದಿ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ ಎಂದು ಡಿಸಿಪಿ (ಸಂಚಾರ) ದಿನೇಶ್ ಕುಮಾರ್ ತಿಳಿಸಿದರು.
‘ಸೋಮವಾರ, ಗುರುವಾರ ಹಾಗೂ ಶನಿವಾರ ನಂತೂರು ವೃತ್ತದಲ್ಲಿ ಸಂಚಾರ ದಟ್ಟಣೆ ಜಾಸ್ತಿ. ಸಾಕಷ್ಟು ಸಿಬ್ಬಂದಿಯನ್ನು ಇಲ್ಲಿ ಸಂಚಾರ ನಿಯಂತ್ರಣಕ್ಕೆ ನಿಯೋಜಿಸುತ್ತಿದ್ದೇವೆ‘ ಎಂದು ನಗರ ಪೂರ್ವ ಸಂಚಾರ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದರು.
ಮೇಲ್ಸೇತುವೆ ಮರೀಚಿಕೆ: ನಂತೂರು ಹಾಗೂ ಕೆಪಿಟಿ ಜಂಕ್ಷನ್‌ಗಳಲ್ಲಿ ಮೇಲ್ಸೇತುವೆ (ವೆಹಿಕ್ಯುಲಾರ್ ಓವರ್ ಪಾಸ್) ಮಂಜೂರಾಗಿದೆ ಎಂದು ಹಿಂದಿನ ಸಂಸದ ನಳಿನ್ ಕುಮಾರ ಕಟೀಲ್ ಈ ಹಿಂದೆ ತಿಳಿಸಿದ್ದರು. ಆದರೆ ಆ ಕಾಮಗಾರಿ ಇನ್ನೂ ಆರಂಭವಾಗಿಲ್ಲ.
‘ನಂತೂರು ಮತ್ತು ಕೆಪಿಟಿ ವೃತ್ತಗಳಲ್ಲಿ ಮೇಲ್ದೇತುವೆ ನಿರ್ಮಿಸುವ ಬಗ್ಗೆ ರಾಜಕಾರಣಿಗಳು ಎರಡು ದಶಕಗಳಿಂದ ಹೇಳಿಕೆ ನೀಡುತ್ತಿದ್ದಾರೆ. ಆದರೆ ಅದಿನ್ನೂ ಕಾರ್ಯಗತವಾಗಿಲ್ಲ. ಸುಸಜ್ಜಿತ ಮೇಲ್ಸೇತುವೆ ನಿರ್ಮಿಸದ ಹೊರತು ಇಲ್ಲಿ ವಾಹನ ದಟ್ಟಣೆ ನಿಯಂತ್ರಣ ಸಾಧ್ಯವಿಲ್ಲ’ ಎನ್ನುತ್ತಾರೆ ಬಿಕರ್ನಕಟ್ಟೆಯ ನಾಗರಾಜ್.
‘ಈಗಲೇ ಇಷ್ಟು ವಾಹನ ದಟ್ಟಣೆ ಉಂಟಾಗುತ್ತಿದೆ. ಇನ್ನು ಮೇಲ್ಸೇತುವೆ ಕಾಮಗಾರಿ ಶುರುವಾದರೆ ಸಮಸ್ಯೆ ಇನ್ನೆಷ್ಟು ಬಿಗಡಾಯಿಸುತ್ತದೋ ತಿಳಿಯದು’ ಎಂದು ಪೊಲೀಸ್ ಇಲಾಖೆಯ ಸಂಚಾರ ವಿಭಾಗದ ಅಧಿಕಾರಿಯೊಬ್ಬರು ಕಳವಳ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.