ಪದ್ಮರಾಜ ಆರ್. ಪೂಜಾರಿ
ಮಂಗಳೂರು: 'ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವೇಷ ರಾಜಕೀಯದ ಬದಲು ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ಸಿಗಬೇಕು. ಧರ್ಮ, ಜಾತಿಗಳ ನಡುವೆ ದ್ವೇಷ ಹಚ್ಚುವ ಬದಲು ಪರಸ್ಪರ ಪ್ರೀತಿಸಲು ಕಲಿಸಬೇಕಿದೆ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ ಆರ್. ಪೂಜಾರಿ ಹೇಳಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಅಭಿವೃದ್ಧಿಗೆ ಹೇರಳ ಅವಕಾಶಗಳಿವೆ. ಇಲ್ಲಿ ಸಾಕಷ್ಟು ಮೂಲಸೌಕರ್ಯಗಳೂ ಇವೆ. ಸಾಮಾಜ ಘಾತುಕ ಶಕ್ತಿಗಳ ಅಪಪ್ರಚಾರಕ್ಕೆ ಜನ ಕಿವಿಗೊಡಬಾರದು. ಕರಾವಳಿ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್‌ಗೆ ಸಿದ್ಧತೆ ನಡೆಯುವ ಹೊತ್ತಿನಲ್ಲೇ ಜಿಲ್ಲೆಯಲ್ಲಿ ಇಂತಹ ಕುಕೃತ್ಯಗಳು ನಡೆದಿರುವುದು ಬೇಸರದ ಸಂಗತಿ’ ಎಂದರು.
‘ಎಲ್ಲ ಭಾರತೀಯರನ್ನು ಸಮಾನವಾಗಿ ನೋಡುವ ನಮ್ಮ ಸರ್ಕಾರ ಯಾವತ್ತೂ ತುಷ್ಟಿಕರಣ ನೀತಿ ಅನುಸರಿಸಿಲ್ಲ. ಕೋಮು ಹಿಂಸೆ ನಿಗ್ರಹ ಕಾರ್ಯಪಡೆಯನ್ನು ಶೀಘ್ರವಾಗಿ ರಚಿಸಿ, ಅದಕ್ಕೆ ಒಳ್ಳೆಯ ಅಧಿಕಾರಿಯನ್ನು ನಿಯೋಜಿಸಬೇಕು’ ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
‘ಕುಡುಪುವಿನಲ್ಲಿ ಗುಂಪು ಹಲ್ಲೆ ನಡೆಸಿ ವಯನಾಡಿನ ಅಶ್ರಫ್ ಎಂಬಾತನನ್ನು ಕೊಲೆ ಮಾಡಿದ್ದು ತಲೆತಗ್ಗಿಸುವ ಕೆಲಸ. ಬಜಪೆಯಲ್ಲಿ ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಹಾಗೂ ನಂತರ ನಡೆದ ಕೃತ್ಯಗಳನ್ನು ಖಂಡಿಸುತ್ತೇನೆ. ಹತ್ಯೆ ನಂತರ ಸುಹಾಸ್‌ನನ್ನು ಹಿಂದೂ ಕಾರ್ಯಕರ್ತ ಎಂದು ಬಿಂಬಿಸಲಾಯಿತು. ನಾವೆಲ್ಲರೂ ಹಿಂದೂ ಧರ್ಮವನ್ನು ಪಾಲಿಸುವವರು. ನಮ್ಮ ಧರ್ಮವು ಯಾವತ್ತೂ ಬೇರೆ ಧರ್ಮವನ್ನು ದ್ವೇಷಿಸುವಂತೆ ಹೇಳಿಕೊಟ್ಟಿಲ್ಲ. ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗುವವರು ಎಲ್ಲ ಧರ್ಮಗಳಲ್ಲೂ ಇದ್ದಾರೆ. ಸಮಾಜ ಘಾತುಕ ಕೃತ್ಯಗಳನ್ನು ಧರ್ಮದ ಆಧಾರದಲ್ಲಿ ನೋಡಬಾರದು. ಯಾರು ಮಾಡಿದರೂ ಅದು ತಪ್ಪೇ’ ಎಂದರು.
‘ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ಬಳಸುವ ಭಾಷೆ ಬೇಸರ ತರಿಸುತ್ತದೆ. ಇಲ್ಲ ಸಲ್ಲದ ಅಭಿಪ್ರಾಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವವರು ಕನಿಷ್ಠ ಪಕ್ಷ ತಮ್ಮ ತಂದೆ ತಾಯಿಯ ಗೌರವ ಉಳಿಸುವಂತೆ ವರ್ತಿಸಬೇಕು’ ಎಂದರು.
‘ರಾಜ್ಯದಲ್ಲಿ ವಿರೋಧ ಪಕ್ಷದವರಿಗೆ, ಎಲ್ಲವನ್ನೂ ರಾಜಕೀಯಗೊಳಿಸಿ ಶಾಂತಿ ಕದಡುವುದು, ಪ್ರಚೋದನೆ ನೀಡುವುದು ಚಾಳಿಯಾಗಿದೆ. ರೌಡಿ ಪಟ್ಟಿಯಲ್ಲಿ ಸುಹಾಸ್ ಶೆಟ್ಟಿ ಸ್ಥಾನ ಪಡೆಯುವಂತೆ ಮಾಡಿದ್ದು ಯಾವ ಪಕ್ಷದವರು? ಆಗಲೇ ಆತನಿಗೆ ಬುದ್ಧಿ ಹೇಳಿ ಸರಿದಾರಿಗೆ ತರಬಹುದಿತ್ತು. ಆತನ ತಂದೆ ತಾಯಿಯ ಸಂಕಷ್ಟಕ್ಕೆ ಆಗಲೇ ನೆರವಾಗಿದ್ದರೆ ಈ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲವಲ್ಲವೇ’ ಎಂದು ಪ್ರಶ್ನಿಸಿದರು.
‘ತೆಕ್ಕಾರು ಗ್ರಾಮದ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ ಆಡಿರುವ ಮಾತುಗಳನ್ನು ದೇವರು ಕೂಡಾ ಮೆಚ್ಚಲಾರ. ಬಿಜೆಪಿ ಮುಖಂಡರು ಈ ಮಾತುಗಳನ್ನು ಸಮರ್ಥಿಸಲು ಸಾಧ್ಯವೇ? ನಾಯಕರಾದವರು ತಮ್ಮ ಬೆಂಬಲಿಗರ ಪಾಲಿಗೆ ಮಾದರಿ ಆಗಿರಬೇಕು‘ ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಇಬ್ರಾಹಿಂ ಕೊಡಿಜಾಲ್, ಶಶಿಧರ್ ಹೆಗ್ಡೆ, ನವೀನ್ ಡಿಸೋಜ, ಸಂಶುದ್ದೀನ್ ಕುದ್ರೋಳಿ, ಸುಹಾನ್ ಆಳ್ವ, ಶಬ್ಬೀರ್ ಎಸ್., ದುರ್ಗಾಪ್ರಸಾದ್, ಸಂಶುದ್ದೀನ್ ಬಂದರ್, ನಜೀರ್ ಬಜಾಲ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.