ADVERTISEMENT

ಧರ್ಮಸ್ಥಳ ಪ್ರಕರಣ: ಕಾಡಿನಲ್ಲಿ ಮತ್ತೆ ಶೋಧ ನಡೆಸಲು ಸಿದ್ಧತೆ

ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ SIT ಸಮಾಲೋಚನೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 23:14 IST
Last Updated 15 ಸೆಪ್ಟೆಂಬರ್ 2025, 23:14 IST
<div class="paragraphs"><p>ಧರ್ಮಸ್ಥಳ ಪ್ರಕರಣ</p></div>

ಧರ್ಮಸ್ಥಳ ಪ್ರಕರಣ

   

ಮಂಗಳೂರು: ಧರ್ಮಸ್ಥಳ ಬೆಳವಣಿಗೆ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ನೇತ್ರಾವತಿ ಸ್ನಾನಘಟ್ಟದ ಪಕ್ಕದ ಕಾಡಿನಲ್ಲಿ ‘ನೆಲದ ಮೇಲೆಯೇ ಮೃತದೇಹಗಳ ಅವಶೇಷ ಸಿಕ್ಕಿವೆ’ ಎನ್ನಲಾದ ಪ್ರದೇಶದಲ್ಲಿ ವ್ಯಾಪಕ ಶೋಧ ನಡೆಸಲು ಸಿದ್ಧತೆ ನಡೆಸಿದೆ.

ಸಾಕ್ಷಿ ದೂರುದಾರ ಪೊಲೀಸರಿಗೆ ತಂದೊಪ್ಪಿಸಿದ್ದ ತಲೆಬುರುಡೆಯನ್ನು ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಪಕ್ಕ ಬಂಗ್ಲೆಗುಡ್ಡೆಯ ಕಾಡಿನಿಂದ ಹೊರತೆಗೆಯಲಾಗಿತ್ತು.

ADVERTISEMENT

ತಲೆಬುರುಡೆ ಇದ್ದ ಆ ಜಾಗವನ್ನು ತೋರಿಸಿದ್ದ ಧರ್ಮಸ್ಥಳ ಗ್ರಾಮದ ಪಾಂಗಾಳದ ವಿಠಲ ಗೌಡ ಅವರನ್ನು ಎಸ್‌ಐಟಿ ಅಧಿಕಾರಿಗಳು ಈಚೆಗೆ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಿದ್ದರು. ಆ ಜಾಗವು ಅರಣ್ಯ ಇಲಾಖೆಯ ಬೆಳ್ತಂಗಡಿ ವಲಯದ ವ್ಯಾಪ್ತಿಯಲ್ಲಿದೆ. ಆ ಸ್ಥಳದ ಮಹಜರು ನಡೆದ ಬಳಿಕ ವಿಠಲ ಗೌಡ ಅವರು ಮಾತನಾಡಿದ್ದ ದೃಶ್ಯಗಳಿದ್ದ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.

‘ಬುರುಡೆ ಸಿಕ್ಕಿದ್ದ ಸ್ಥಳದ ಮಹಜರಿಗೆ ತೆರಳಿದ್ದಾಗ ಕಾಡಿನಲ್ಲಿ ಒಂದು ಕಡೆ ಮೂರು ಮೃತದೇಹಗಳ ಹಾಗೂ ಇನ್ನೊಂದು ಕಡೆ ಎಂಟು ಮೃತದೇಹಗಳಿಗೆ ಸಂಬಂಧಿಸಿದ ಅವಶೇಷಗಳು ಕಾಣಿಸಿದ್ದವು. ಮಹಜರಿನ ಸಂದರ್ಭದಲ್ಲಿ ಎಸ್‌ಐಟಿ ಅಧಿಕಾರಿಗಳೂ ಅವುಗಳನ್ನು ನೋಡಿದ್ದಾರೆ’ ಎಂದು ಆ ವಿಡಿಯೊದಲ್ಲಿ ಅವರು ತಿಳಿಸಿದ್ದರು.

ಎಸ್‌ಐಟಿ ಅಧಿಕಾರಿಗಳು ಅರಣ್ಯ ಇಲಾಖೆಯ ಬೆಳ್ತಂಗಡಿ ವಲಯದ ಕೆಲ ಅಧಿಕಾರಿಗಳನ್ನು ಬೆಳ್ತಂಗಡಿ ಕಚೇರಿಗೆ ಸೋಮವಾರ ಕರೆಸಿಕೊಂಡು ಚರ್ಚಿಸಿದ್ದಾರೆ. 

‘ಸಾಕ್ಷಿ ದೂರುದಾರ ತಂದೊಪ್ಪಿಸಿರುವ ತಲೆಬುರುಡೆಯನ್ನು ಹೊರತೆಗೆದ ಕಾಡಿನಲ್ಲಿ ಮತ್ತಷ್ಟು ಶೋಧ ನಡೆಸಬೇಕಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದೇವೆ’ ಎಂದು ಎಸ್‌ಐಟಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.