ADVERTISEMENT

ಧರ್ಮಸ್ಥಳ ಪ್ರಕರಣ | ತಿಮರೋಡಿ ಮನೆಯಲ್ಲಿ ಮಹಜರು

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2025, 0:48 IST
Last Updated 27 ಆಗಸ್ಟ್ 2025, 0:48 IST
<div class="paragraphs"><p>ತಿಮರೋಡಿ</p></div>

ತಿಮರೋಡಿ

   

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡ (ಎಸ್ಐಟಿ), ಉಜಿರೆ ಬಳಿಯ, ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಯಲ್ಲಿ ಮಂಗಳವಾರ ಮಹಜರು ನಡೆಸಿತು.

ವಿಧಿ ವಿಜ್ಞಾನ ತಜ್ಞರು ಹಾಗೂ ಸಾಕ್ಷಿದೂರುದಾರ ಸಹ ಎಸ್ಐಟಿ ಅಧಿಕಾರಿಗಳ ಜೊತೆಗೆ ತಿಮರೋಡಿ ಅವರ ಮನೆಗೆ ಬೆಳಿಗ್ಗೆ 9 ಗಂಟೆ ಸುಮಾರಿಗೆ ತೆರಳಿದರು. ಅಲ್ಲಿ ಸಾಕ್ಷಿದೂರುದಾರನನ್ನು ತಡರಾತ್ರಿಯ ವರೆಗೂ ವಿಚಾರಣೆಗೆ ಒಳಪಡಿಸಿದರು.

ADVERTISEMENT

‘ಮಹೇಶ್‌ ಶೆಟ್ಟಿ ಮನೆಯಲ್ಲಿ ಸಾಕ್ಷಿ ದೂರುದಾರ ಕೆಲ ಸಮಯ ಉಳಿದುಕೊಂಡಿದ್ದರು. ಆ ಸಂದರ್ಭದಲ್ಲಿ ನಡೆದ ಕೆಲ ವಿದ್ಯಮಾನಗಳ ಬಗ್ಗೆ ಅಧಿಕಾರಿಗಳು ಮಂಗಳವಾರ ಅವರಿಂದ ಮಾಹಿತಿ ಕಲೆಹಾಕಿದರು. ಈ ಬಗ್ಗೆ ಹೇಳಿಕೆ ದಾಖಲಿಸಿಕೊಂಡರು’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. 

ಮೃತದೇಹ ಹೂಳುವುದಕ್ಕೆ ಸಂಬಂಧಿಸಿ ಸಾಕ್ಷಿ ದೂರುದಾರ ವಿಚಾರಣೆ ವೇಳೆ ಹಲವರ ಹೆಸರು ತಿಳಿಸಿದ್ದು, ಪುರಾವೆ ಲಭ್ಯವಾದರೆ ಅವರನ್ನು ವಿಚಾರಣೆಗೆ ಒಳಪಡಿಸಲು ಎಸ್ಐಟಿ ಮುಂದಾಗಿದೆ ಎಂದು ಗೊತ್ತಾಗಿದೆ.

ಅಧಿಕಾರಿಗಳು ಮನೆಗೆ ಭೇಟಿ ನೀಡಿದಾಗ ಮನೆಯಲ್ಲಿ ಮಹೇಶ್‌ ಶೆಟ್ಟಿ ಇರಲಿಲ್ಲ. ಆ ಮನೆಯ ಇತರ ಸದಸ್ಯರಿಂದ ಅಧಿಕಾರಿಗಳು ಹೇಳಿಕೆ ಪಡೆದುಕೊಂಡರು ಎಂದು ಮೂಲಗಳು ತಿಳಿಸಿವೆ. ಮನೆಯ ಪ್ರದೇಶದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿತ್ತು. ಮನೆಯಿಂದ 500 ಮೀಟರ್ ದೂರದಲ್ಲೇ ಮಾಧ್ಯಮದವರನ್ನು ಪೊಲೀಸರು ತಡೆದಿದ್ದರು.

‘ಧರ್ಮಸ್ಥಳ ಠಾಣೆಗೆ ದೂರು ನೀಡಿ, ಅದರ ತನಿಖೆಗೆ ಎಸ್‌ಐಟಿ ರಚನೆ ಆಗುವ ನಡುವಿನ ಅವಧಿಯಲ್ಲಿ ಸಾಕ್ಷಿ ದೂರುದಾರ ಕೆಲವು ಯೂಟ್ಯೂಬ್‌ ಚಾನೆಲ್‌ಗಳಿಗೆ ಸಂದರ್ಶನ ನೀಡಿದ್ದರು. ಸಾಕ್ಷಿ ದೂರುದಾರನ ಬಂಧನದ ಬಳಿಕ ಕೆಲ ಯೂಟ್ಯೂಬ್ ಚಾನೆಲ್‌ಗಳು ಅವರ ಸಂದರ್ಶನ ಪ್ರಸಾರ ಮಾಡಿದ್ದವು. ಧರ್ಮಸ್ಥಳ ಗ್ರಾಮದಲ್ಲಿ 1994ರಿಂದ 2014ರವರೆಗೆ ವಾಸವಿದ್ದ ಅವಧಿಯಲ್ಲಿ ತನ್ನಿಂದ ಏನೆಲ್ಲ ಕೆಲಸ ಮಾಡಿಸಲಾಗಿತ್ತು, ಗ್ರಾಮದ ಯಾವ ಪ್ರದೇಶಗಳಲ್ಲೆಲ್ಲ ಮೃತದೇಹಗಳನ್ನು ಹೂಳಲಾಗಿತ್ತು ಎಂಬ ವಿವರಗಳನ್ನು ಅವರು ಸಂದರ್ಶನದಲ್ಲಿ ತಿಳಿಸಿದ್ದರು. ಅನಾಥ ಮೃತದೇಹವನ್ನು ಹೂಳಲು ಸೂಚನೆ ನೀಡುತ್ತಿದ್ದವರು ಯಾರು ಎಂಬುದನ್ನೂ ಬಹಿರಂಗಪಡಿಸಿದ್ದರು. ಧರ್ಮಸ್ಥಳ ಗ್ರಾಮವನ್ನು ತೊರೆಯಲು ಕಾರಣವಾದ ಅಂಶಗಳ ಬಗ್ಗೆಯೂ ಮಾಹಿತಿ ನೀಡಿದ್ದರು’ ಎಂದು ಮೂಲಗಳು ತಿಳಿಸಿವೆ.

ಜೈನ ಧರ್ಮದ ಅವಹೇಳನ ದೂರು: ಗಿರೀಶ ಮಟ್ಟೆಣ್ಣವರ ‘ಕುಡ್ಲ ರಾಂಪೇಜ್‌’  ಯೂಟ್ಯೂಬ್ ಚಾನೆಲ್‌ಗೆ 2025ರ ಏಪ್ರಿಲ್‌ನಲ್ಲಿ ನೀಡಿದ್ದ ಸಂದರ್ಶನದಲ್ಲಿ  ಜೈನ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಜೈನ ಧರ್ಮೀಯರ ಭಾವನೆಗಳಿಗೆ  ಧಕ್ಕೆ ಉಂಟು ಮಾಡಿದ್ದ ಪ್ರಕರಣ ಸಂಬಂಧ ದೂರುದಾರರು ಬೆಳ್ತಂಗಡಿ ಪೊಲೀಸ್‌ ಠಾಣೆಗೆ ತೆರಳಿ ಹೇಳಿಕೆ ದಾಖಲಿಸಿದರು.

ಜೈನ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಬಗ್ಗೆ ಗಿರೀಶ ಮಟ್ಟೆಣ್ಣವರ ವಿರುದ್ಧ ಧಾರವಾಡ ಗ್ರಾಮಾಂತರ ಠಾಣೆಗೆ ವರ್ತಕ ಮಂಜುನಾಥ ಜಕ್ಕಣ್ಣವರ ಆ. 15ರಂದು ದೂರು ನೀಡಿದ್ದರು. ಈ ದೂರನ್ನು ಬೆಳ್ತಂಗಡಿ ಠಾಣೆಗೆ ವರ್ಗಾಯಿಸಲಾಗಿತ್ತು. 

ಸುಜಾತಾ ಭಟ್‌ ಎಸ್‌ಐಟಿ ಎದುರು ಹಾಜರು

‘ಮಗಳು ಅನನ್ಯಾ ಭಟ್ ಧರ್ಮಸ್ಥಳಕ್ಕೆ ತೆರಳಿದ್ದ ವೇಳೆ ನಾಪತ್ತೆ ಆಗಿದ್ದಾಳೆ’ ಎಂದು ದೂರು ನೀಡಿದ್ದ ಸುಜಾತಾ ಭಟ್‌ ವಿಶೇಷ ತನಿಖಾ ತಂಡದ ಎದುರು ವಿಚಾರಣೆಗೆ ಹಾಜರಾದರು. ಬೆಳಿಗ್ಗೆಯಿಂದ ರಾತ್ರಿವರೆಗೆ ಎಸ್‌ಐಟಿ ಕಚೇರಿಯಲ್ಲೇ ಇದ್ದರು. ‘ಮಗಳು ನಾಪತ್ತೆಯಾದ ಬಗ್ಗೆ ಸುಜಾತಾ ಭಟ್‌ ನೀಡಿದ್ದ ದೂರಿನ
ಕುರಿತು ಆಕೆಯಿಂದ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.