ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೃತದೇಹಗಳನ್ನು ಹೂತುಹಾಕಿಲಾಗಿದೆ ಎನ್ನಲಾದ ಪ್ರಕರಣದ ಸಾಕ್ಷಿ ದೂರುದಾರ ನೇತ್ರಾವತಿ ಸ್ನಾನಘಟ್ಟದ ಬಳಿ ಗುರುತಿಸಿದ್ದ ಸ್ಥಳ ಅಗೆಯಲು ಎಸ್ಐಟಿ ಅಧಿಕಾರಿಗಳು ಮಂಗಳವಾರ ಯಂತ್ರ ಬಳಸಿದರು
ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್
ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿದೆ ಎಂದು ಆರೋಪಿಸಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಹೂತು ಹಾಕಲಾಗಿದೆ ಎನ್ನಲಾದ ಮೃತದೇಹಗಳ ಕುರುಹು ಪತ್ತೆಗೆ ನೆಲ ಅಗೆಯುವ ಕಾರ್ಯ ಮಂಗಳವಾರ ಆರಂಭವಾಯಿತು.
ಈ ಪ್ರಕರಣದ (ಸಂಖ್ಯೆ 39/2025) ಸಾಕ್ಷಿ ದೂರುದಾರ, ಶವಗಳನ್ನು ಹೂಳಲಾಗಿದೆ ಎಂದು 13 ಜಾಗಗಳನ್ನು ತೋರಿಸಿದ್ದರು. ಧರ್ಮಸ್ಥಳ ಸ್ನಾನಘಟ್ಟ ಬಳಿಯ ಕಾಡಿನ ಪಕ್ಕದಲ್ಲಿ ಆತ ತೋರಿಸಿದ್ದ ಮೊದಲ ಜಾಗದಲ್ಲಿ ಸುಮಾರು 15 ಅಡಿ ಸುತ್ತಳತೆಯ ಜಾಗದಲ್ಲಿ ಸುಮಾರು 8 ಅಡಿ ಆಳಕ್ಕೆ ಅಗೆಯಲಾಯಿತು. ಮಧ್ಯಾಹ್ನ 12ರಿಂದ ಸಂಜೆ 6 ಗಂಟೆವರೆಗೆ ಅಗೆದರೂ ಮೃತದೇಹದ ಯಾವುದೇ ಕುರುಹು ಪತ್ತೆಯಾಗಲಿಲ್ಲ ಎಂದು ವಿಶೇಷ ತನಿಖಾ ತಂಡದ ಮೂಲಗಳು ‘ಪ್ರಜಾವಾಣಿ‘ಗೆ ತಿಳಿಸಿವೆ.
ಸುಮಾರು 10 ಕಾರ್ಮಿಕರನ್ನು ಒಳಗೊಂಡ ತಂಡವು ಹಾರೆ, ಪಿಕಾಸಿ ಬಳಸಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಗೆಯುವ ಕಾರ್ಯ ಆರಂಭಿಸಿತು. ನೇತ್ರಾವತಿ ನದಿಯಿಂದ 10 ಮೀಟರ್ ದೂರದಲ್ಲಿರುವ ಈ ಜಾಗವನ್ನು ಅಗೆದಂತೆ ನೀರು ಜಿನುಗಲಾರಂಭಿಸಿತು. ಜೊತೆಗೆ ಬಿಟ್ಟು ಬಿಟ್ಟು ಧಾರಾಕಾರ ಮಳೆಯೂ ಸುರಿಯುತ್ತಿತ್ತು, ಇದರಿಂದ ಅಗೆಯುವಿಕೆಗೆ ಅಡಚಣೆಯುಂಟಾಯಿತು. ಎಸ್‌ಐಟಿ ಅಧಿಕಾರಿಗಳು ಸಣ್ಣ ಜೆಸಿಬಿ ಯಂತ್ರವನ್ನು ಸ್ಥಳಕ್ಕೆ ತರಿಸಿಕೊಂಡು ಅಗೆಯಿಸಿದರು. ಕೊನೆಗೆ ಶ್ವಾನದಳ ಕರೆತಂದು ಪರಿಶೀಲನೆ ನಡೆಸಿದರು. ಆದರೂ, ಯಾವುದೇ ಕುರುಹು ಪತ್ತೆಯಾಗದ ಕಾರಣ ಮೊದಲ ದಿನದ ಅಗೆಯುವ ಕಾರ್ಯವನ್ನು ಸಂಜೆ 6ರ ವೇಳೆಗೆ ಸ್ಥಗಿತಗೊಳಿಸಲಾಯಿತು.
ಅಗೆದ ಗುಂಡಿಯನ್ನು ಮುಚ್ಚಲಾಯಿತು. ಇದಕ್ಕೂ ಮುನ್ನ ಸಾಕ್ಷಿ ದೂರುದಾರನ ಜೊತೆಗೆ ಸ್ಥಳಕ್ಕೆ ಬಂದಿದ್ದ ವಕೀಲರ ತಂಡವನ್ನೂ ಸ್ಥಳಕ್ಕೆ ಕರೆಸಿಕೊಂಡು ಅಗೆಯುವ ಕಾರ್ಯ ಸ್ಥಗಿತಗೊಳಿಸುವುದಕ್ಕೆ ಅವರ ಸಮ್ಮತಿಯನ್ನು ಪಡೆದುಕೊಳ್ಳಲಾಯಿತು. ಜಾಗಗಳನ್ನು ಅಗೆಯುವ ದೃಶ್ಯವನ್ನು ಎಸ್‌ಐಟಿಯ ಸಿಬ್ಬಂದಿ ವಿಡಿಯೊ ಚಿತ್ರೀಕರಣ ಮಾಡಿಕೊಂಡರು ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
‘ಗಿಡ ಗಂಟಿಗಳಿಂದ ತುಂಬಿರುವ ಜಾಗವನ್ನು ಸುರಿಯುವ ಮಳೆಯ ನಡುವೆಯೇ ಅಗೆಯುವುದು ನಿಜಕ್ಕೂ ಸವಾಲಿನ ಕೆಲಸ. ನೇತ್ರಾವತಿ ನದಿಯ ಸಮೀಪದಲ್ಲೇ ಇರುವ ಈ ಜಾಗದಲ್ಲಿ ಮರಳು ಮಿಶ್ರಿತ ಮಣ್ಣೇ ಜಾಸ್ತಿ ಇತ್ತು. ನಡು ನಡುವೆ ಕೆಲವು ಬಟ್ಟೆ ಬರೆಗಳು ಸಿಕ್ಕವು’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ನೆಲ ಅಗೆಯುವ ಕಾರ್ಯ ನಡೆಯುವಾಗ ಸಾಕ್ಷಿ ದೂರುದಾರ ಮುಸುಕು ಧರಿಸಿ ಸ್ಥಳದಲ್ಲಿ ಹಾಜರಿದ್ದರು. ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಎಸ್ಐಟಿಯ ಡಿಐಜಿ ಎಂ.ಎನ್.ಅನುಚೇತ್, ಎಸ್.ಪಿಗಳಾದ ಜಿತೇಂದ್ರ ಕುಮಾರ್ ದಯಾಮ ಹಾಗೂ ಸಿ.ಎ.ಸೈಮನ್ ಸ್ಥಳದಲ್ಲಿದ್ದು ಮಾರ್ಗದರ್ಶನ ಮಾಡಿದರು. ವಿಧಿವಿಜ್ಞಾನ ತಂಡದ ಅಧಿಕಾರಿಗಳು, ಕೆಎಂಸಿಯ ತಜ್ಞ ವೈದ್ಯರು ಸ್ಥಳದಲ್ಲಿದ್ದರು.
ಅಗೆಯುವ ಕಾರ್ಯ ಆರಂಭಿಸುವ ಮುನ್ನ ಬೆಳ್ತಂಗಡಿ ಎಸ್ಐಟಿ ಕಚೇರಿಯಲ್ಲಿ ಡಿಐಜಿ ಎಂ.ಎನ್. ಅನುಚೇತ್ ನೇತೃತ್ವದಲ್ಲಿ ಸಭೆ ನಡೆಸಿದ ಅಧಿಕಾರಿಗಳು ಮುಂದಿನ ತನಿಖೆ ಬಗ್ಗೆ ಚರ್ಚಿಸಿದರು.
ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೃತದೇಹಗಳನ್ನು ಹೂತುಹಾಕಿಲಾಗಿದೆ ಎನ್ನಲಾದ ಪ್ರಕರಣ ಸಂಬಂಧ ನೇತ್ರಾವತಿ ಸ್ನಾನಘಟ್ಟದ ಬಳಿ ಮಂಗಳವಾರ ಭೂಮಿ ಅಗೆಯುವಾಗ ಸಾಕ್ಷಿ ದೂರುದಾರ ಹಾಗೂ ಎಸ್ ಐ ಟಿ ಅಧಿಕಾರಿಗಳು ಹಾಜರಿದ್ದರು
ಸಾಕ್ಷಿ ದೂರುದಾರ ತೋರಿಸಿದ್ದ 13 ಜಾಗಗಳ ಜಿಪಿಎಸ್ ಗುರುತುಗಳನ್ನು ದಾಖಲಿಸಿಕೊಂಡ ಎಸ್‌ಐಟಿ ಅಧಿಕಾರಿಗಳು ಅಲ್ಲಿ ಕೆಂಪು ರಿಬ್ಬನ್ ಕಟ್ಟಿ, ಅಲ್ಲಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿದ್ದಾರೆ. ಪ್ರತಿ ಜಾಗವನ್ನೂ ನಿರ್ದಿಷ್ಟ ಸಂಖ್ಯೆ ಮೂಲಕ ಗುರುತಿಸಿದ್ದಾರೆ. ಅಲ್ಲಿ ಪೊಲೀಸ್ ಕಾವಲು ಹಾಕಲಾಗಿದೆ.
ಬಿಗಿ ಭದ್ರತೆ: ಗರುಡ ಪಡೆ ಹಾಗೂ ವಿಶೇಷ ಕಾರ್ಯಪಡೆಯ ತರಬೇತಾದ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ತನಿಖಾ ಕಾರ್ಯಕ್ಕೆ ಭದ್ರತೆ ಒದಗಿಸಿದ್ದಾರೆ. ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಒಂದು ತುಕಡಿ ಭದ್ರತೆಗಾಗಿ ಸ್ಥಳದಲ್ಲಿ ಬೀಡುಬಿಟ್ಟಿದೆ.
ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಬಳಿ ಮಂಗಳವಾರ ನಡೆದ ಭೂಮಿ ಅಗೆಯುವ ಕಾರ್ಯವನ್ನು ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು
‘ಸಾಕ್ಷಿ ದೂರುದಾರ ತೋರಿಸಿದ ಒಂದು ಜಾಗವನ್ನಷ್ಟೇ ಇಂದು ಅಗೆದಿದ್ದೇವೆ. ಆತ ತೋರಿಸಿದ ಇನ್ನೊಂದು ಜಾಗವನ್ನು ಬುಧವಾರ ಅಗೆಯುತ್ತೇವೆ. ಈ ಪ್ರಕ್ರಿಯೆ ಮುಂದುವರಿಯಲಿದೆ ' ಎಂದು ಎಸ್‌ಐಟಿಯ ಅಧಿಕಾರಿಯೊಬ್ಬರು ಹೇಳಿದರು.
ಮೃತದೇಹ ಹೂಳಲಾಗಿದೆ ಎನ್ನಲಾದ ಜಾಗಗಳ ಪತ್ತೆಗೆ ಸೋಮವಾರ ಕಾಡಿನಲ್ಲಿ ಅಲೆದಾಡಿದ್ದ ಸಿಬ್ಬಂದಿ ಮಂಗಳವಾರ ಅಗೆಯುವ ಕಾರ್ಯದ ಬಳಿಕ ಸುಸ್ತಾದಂತೆ ಕಂಡು ಬಂದರು. ಮಧ್ಯಾಹ್ನದ ಊಟಕ್ಕೆ ಸ್ನಾನಘಟ್ಟದಲ್ಲೇ ವ್ಯವಸ್ಥೆ ಮಾಡಲಾಗಿತ್ತು. ನಡುವೆ ಊಟಕ್ಕಾಗಿ ಒಂದು ಗಂಟೆ ವಿಶ್ರಾಂತಿ ಪಡೆದರು. ಮಳೆಯಲ್ಲೇ ನಿಂತುಕೊಂಡೇ ಇದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೈರಾಣಾಗಿ ಹೋದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.