ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧಗಳಲ್ಲಿನ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಪಕ್ಕದ ಬಂಗ್ಲೆಗುಡ್ಡೆಯ ಕಾಡಿನಲ್ಲಿ ಬುಧವಾರ ಶೋಧ ಕಾರ್ಯವನ್ನು ಮತ್ತೊಮ್ಮೆ ಆರಂಭಿಸಿದೆ.
ಕಾಡಿನಲ್ಲಿ ಬುಧವಾರ ನಡೆದ ಶೋಧ ಕಾರ್ಯದಲ್ಲಿ ಒಂಬತ್ತು ಕಡೆ ಮೃತದೇಹಗಳ ಅವಶೇಷಗಳು ಸಿಕ್ಕಿವೆ. ಆರು ತಲೆಬುರುಡೆಗಳು ಸಿಕ್ಕಿವೆ ಎಂಬ ಮಾಹಿತಿ ಇದೆ. ಆದರೆ ಇದನ್ನು ಎಸ್‌ಐಟಿ ಖಚಿತಪಡಿಸಿಲ್ಲ.
‘ಶೋಧ ಕಾರ್ಯದ ವೇಳೆ ಮೃತದೇಹಗಳ ಅವಶೇಷಗಳು ಸಿಕ್ಕಿರುವುದು ನಿಜ. ಆದರೆ, ಇನ್ನೂ ಶೋಧ ಕಾರ್ಯ ಪೂರ್ಣಗೊಂಡಿಲ್ಲ. ಹಾಗಾಗಿ ಈ ಹಂತದಲ್ಲಿ ಯಾವುದೇ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ’ ಎಂದು ಎಸ್‌ಐಟಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಮೃತದೇಹಗಳ ಅವಶೇಷ ಸಿಕ್ಕಿರುವ ಐದು ಸ್ಥಳಗಳ ಮಹಜರು ಪೂರ್ಣ ಗೊಳಿಸಿರುವ ಎಸ್‌ಐಟಿ, ಅಲ್ಲಿ ಸಿಕ್ಕ ಮೂಳೆಗಳು ಹಾಗೂ ತಲೆ ಬುರುಡೆಗಳನ್ನು ವಶಕ್ಕೆ ಪಡೆದಿದೆ. ಇನ್ನುಳಿದ ಕಡೆ ಮಹಜರು ಕಾರ್ಯ ಗುರುವಾರವೂ ಮುಂದುವರಿಯಲಿದೆ ಎಂದು ಗೊತ್ತಾಗಿದೆ.
ಎಸ್ಐಟಿಯ ಎಸ್.ಪಿ.ಗಳಾದ ಜಿತೇಂದ್ರ ಕುಮಾರ್ ದಯಾಮ ಹಾಗೂ ಸಿ.ಎ.ಸೈಮನ್ ಮತ್ತಿತರ ಅಧಿಕಾರಿಗಳು ಶೋಧ ಕಾರ್ಯದ ನೇತೃತ್ವ ವಹಿಸಿದ್ದರು.
ಎಸ್‌ಐಟಿ ಅಧಿಕಾರಿಗಳು, ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು, ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನು ಒಳಗೊಂಡು 40ಕ್ಕೂ ಹೆಚ್ಚು ಮಂದಿ ಇದ್ದ ತಂಡವು ಶೋಧ ಕಾರ್ಯದಲ್ಲಿ ಭಾಗವಹಿಸಿತ್ತು. ಬೆಳಿಗ್ಗೆ 11.30ರ ಸುಮಾರಿಗೆ ತಂಡವು ಕಾಡಿನೊಳಗೆ ತೆರಳಿತು. ಮಧ್ಯಾಹ್ನದ 2.30ರ ಸುಮಾರಿಗೆ ಊಟದ ವಿರಾಮಕ್ಕಾಗಿ ಕಾಡಿನಿಂದ ಹೊರ ಬಂದ ತಂಡವು ಒಂದು ತಾಸಿನ ಬಳಿಕ ಮತ್ತೆ ಕಾಡಿನೊಳಗೆ ತೆರಳಿತು. ತಂಡವು ಕಾಡಿನಿಂದ ಹೊರ ಬರುವಾಗ ಸಂಜೆ 7 ಗಂಟೆ ದಾಟಿ, ಕತ್ತಲಾವರಿಸಿತ್ತು.
ಮೃತದೇಹಗಳ ಅವಶೇಷಗಳನ್ನು ಎಸ್‌ಐಟಿ ಸಿಬ್ಬಂದಿ ಏಳೆಂಟು ಬಕೆಟ್‌ಗಳಲ್ಲಿ ಹಾಗೂ ಗೋಣಿಚೀಲ ಗಳಲ್ಲಿ ತುಂಬಿಕೊಂಡು ಒಯ್ದದ್ದು ಕಂಡು ಬಂತು.
ಈ ಪ್ರಕರಣದ ಸಾಕ್ಷಿ ದೂರುದಾರ ಪೊಲೀಸರಿಗೆ ತಲೆಬುರುಡೆಯನ್ನು ಒಪ್ಪಿಸಿದ್ದ. ಆದರೆ, ಅದನ್ನು ಹೊರತೆಗೆದದ್ದು ‘ನಾನಲ್ಲ’ ಎಂದು ಎಸ್ಐಟಿ ಮುಂದೆ ಹೇಳಿಕೆ ನೀಡಿದ್ದ. ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಪಕ್ಕದ ಬಂಗ್ಲೆಗುಡ್ಡೆಯ ಕಾಡಿನಿಂದ ಹೊರತೆಗೆಯಲಾಗಿತ್ತು. ಆ ತಲೆಬುರುಡೆ ಇದ್ದ ಆ ಜಾಗವನ್ನು ಧರ್ಮಸ್ಥಳ ಗ್ರಾಮದ ಪಾಂಗಾಳದ ವಿಠಲ ಗೌಡ ತೋರಿಸಿದ್ದರು ಎಂಬುದು ತನಿಖೆಯಲ್ಲಿ ಗೊತ್ತಾಗಿತ್ತು. ಎಸ್‌ಐಟಿ ಅಧಿಕಾರಿಗಳು ವಿಠಲ ಗೌಡ ಅವರನ್ನು ಕೆಲ ದಿನಗಳ ಹಿಂದೆ ಕಾಡಿನ ಒಳಗೆ ಕರೆದೊಯ್ದು ಮಹಜರು ನಡೆಸಿದ್ದರು. ಈ ವೇಳೆ ನೆಲದ ಮೇಲೆಯೇ ಕೆಲವೆಡೆ ಮೃತದೇಹಗಳ ಅವಶೇಷ ಕಂಡು ಬಂದಿತ್ತು ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
‘ಕಾಡಿನಲ್ಲಿ ಬುರುಡೆ ಸಿಕ್ಕಿದ್ದ ಸ್ಥಳದ ಮಹಜರಿಗೆ ತೆರಳಿದ್ದಾಗ ಮತ್ತಷ್ಟು ಮೃತದೇಹಗಳಿಗೆ ಸಂಬಂಧಿಸಿದ ಅವಶೇಷಗಳು ಕಾಣಿಸಿದ್ದು, ಎಸ್‌ಐಟಿ ಅಧಿಕಾರಿಗಳೂ ಅವುಗಳನ್ನು ನೋಡಿದ್ದಾರೆ’ ಎಂದು ವಿಠಲ ಗೌಡ ಅವರು ವಿಡಿಯೊ ಹೇಳಿಕೆಯೊಂದರಲ್ಲಿ ತಿಳಿಸಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಈ ನಡುವೆ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಸಮಾಲೋಚಿಸಿದ್ದ ಎಸ್‌ಐಟಿ ಅಧಿಕಾರಿಗಳು ಆ ಕಾಡಿನಲ್ಲಿ ಶೋಧ ಕಾರ್ಯ ನಡೆಸಲು ತೀರ್ಮಾನಿಸಿದ್ದರು.
ತನಿಖೆ ಯಾರಿಂದ?: ಕಾಡಿನಲ್ಲಿ ಮೃತದೇಹಗಳು ಸಿಕ್ಕರೂ ಈ ಬಗ್ಗೆ ಎಸ್ಐಟಿಯೇ ಆಳವಾಗಿ ತನಿಖೆ ನಡೆಸಲಿದೆಯೇ ಅಥವಾ ಅದರ ತನಿಖೆಯನ್ನು ಸ್ಥಳೀಯ ಪೊಲೀಸರು ನಡೆಸಲಿದ್ದಾರೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
‘ಧರ್ಮಸ್ಥಳದ ಸ್ನಾನಘಟ್ಟದ ಪಕ್ಕದ ಕಾಡಿನಲ್ಲಿ ಸಿಕ್ಕ ಮೃತದೇಹಗಳ ಅವಶೇಷಗಳನ್ನು ಎಸ್‌ಐಟಿ ಈಗಾಗಲೇ ತನಿಖೆ ನಡೆಸುತ್ತಿರುವ ಪ್ರಕರಣದ ಭಾಗ ಎಂದು ಪರಿಗಣಿಸಿದರೆ, ಅವರೇ ತನಿಖೆ ನಡೆಸಬಹುದು. ಅದು, ಅವರ ತನಿಖೆಯ ವ್ಯಾಪ್ತಿಯಲ್ಲಿ ಇಲ್ಲ ಎಂದು ಪರಿಗಣಿಸಿದರೆ, ಅಲ್ಲಿ ಸಿಕ್ಕ ಅವಶೇಷಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರಿಗೆ ಹಸ್ತಾಂತರಿಸಬಹುದು. ಆಗ ನಾವೇ ಅದರ ತನಿಖೆ ನಡೆಸಬೇಕಾಗಬಹುದು. ಈ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ತಿಮರೋಡಿ ವಿರುದ್ಧ ಮತ್ತೆ ಎಫ್‌ಐಆರ್
ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಮಹಜರು ನಡೆಸಿದ ಸಂದರ್ಭ ದಲ್ಲಿ ಕಬ್ಬಿಣದ ಎರಡು ತಲವಾರು ಹಾಗೂ ಒಂದು ಬಂದೂಕು ಸಿಕ್ಕಿರುವ ಬಗ್ಗೆ ಪ್ರಕರಣದ ತನಿಖಾಧಿಕಾರಿ ಯಾಗಿರುವ ಎಸ್‌ಪಿ ಸಿ.ಎ.ಸೈಮನ್ ನೀಡಿದ ದೂರಿನ ಅನ್ವಯ ಬೆಳ್ತಂಗಡಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಪ್ರಕರಣದ ಸಾಕ್ಷಿ ದೂರುದಾರ ತಾನು ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದ ಬಗ್ಗೆ ಎಸ್‌ಐಟಿ ಅಧಿಕಾರಿಗಳ ಮುಂದೆ ಸ್ವ ಇಚ್ಛಾ ಹೇಳಿಕೆ ನೀಡಿದ್ದ.
ಈ ಬಗ್ಗೆ ಎಸ್‌ಐಟಿ ಅಧಿಕಾರಿಗಳು ನ್ಯಾಯಾಲಯದಿಂದ ಶೋಧನಾ ವಾರಂಟ್ ಪಡೆದು ತಿಮರೋಡಿ ಮನೆಯಲ್ಲಿ ಆ.26ರಂದು ಶೋಧ ಕಾರ್ಯ ನಡೆಸಿದ್ದರು. ಈ ವೇಳೆ 2 ತಲವಾರು 1 ಬಂದೂಕು ಸೇರಿದಂತೆ ಒಟ್ಟು 44 ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದರು. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ 1959ರ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25(1)(1-ಎ) (ಮಾರಕಾಸ್ತ್ರ ಸಂಗ್ರಹ) ಹಾಗೂ ಸೆಕ್ಷನ್ 25(1)(1-ಬಿ) (ಎ) ಅಡಿ (ಅಕ್ರಮವಾಗಿ ಮಾರಕಾಸ್ತ್ರ ಹೊಂದಿರುವುದು) ಎಫ್‌ಐಆರ್ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.