
ಡಿಜಿಟಲ್ ಅರೆಸ್ಟ್
ಐಸ್ಟಾಕ್ ಚಿತ್ರ
ಮೂಲ್ಕಿ (ದಕ್ಷಿಣ ಕನ್ನಡ): ಕಿನ್ನಿಗೋಳಿ ಸಮೀಪದ ದಾಮಸ್ ಕಟ್ಟೆ ಬಳಿಯ ವೃದ್ಧ ದಂಪತಿಯನ್ನು ಮುಂಬೈನ ವಂಚನಾ ಜಾಲವೊಂದು ಡಿಜಿಟಲ್ ಅರೆಸ್ಟ್ ಮೂಲಕ ಬೆದರಿಸಿ ಸುಮಾರು ₹ 84 ಲಕ್ಷ ವಂಚಿಸಲು ಯತ್ನಿಸಿದ್ದು, ಬ್ಯಾಂಕ್ ವ್ಯವಸ್ಥಾಪಕರ ಸಮಯಪ್ರಜ್ಞೆ ಹಾಗೂ ಮೂಲ್ಕಿ ಪೊಲೀಸರ ಮಧ್ಯಪ್ರವೇಶದಿಂದಾಗಿ ಅದು ವಿಫಲಗೊಂಡಿದೆ ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
‘ದಾಮಸ್ ಕಟ್ಟೆ ಕೊಬ್ಬೆಟ್ಟಿನ ಬೆನೆಡಿಕ್ಟ್ ಫರ್ನಾಂಡಿಸ್ (86)– ಲಿಲ್ಲಿ ಫರ್ನಾಂಡಿಸ್ (71) ದಂಪತಿಗೆ ವಿಡಿಯೊ ಕರೆ ಮಾಡಿದ್ದ ವಂಚಕರು, ತಮ್ಮನ್ನು ಮುಂಬೈ ಪೊಲೀಸರು ಎಂದು ಪರಿಚಯಿಸಿಕೊಂಡಿದ್ದರು. ‘ಮುಂಬೈನಲ್ಲಿ ಬ್ಯಾಂಕ್ ಖಾತೆಯಿಂದ ನೀವು ₹ 6 ಕೋಟಿ ಹಣ ಪಡೆದಿದ್ದೀರಿ’ ಎಂದು ಹೇಳಿ ವೃದ್ಧ ದಂಪತಿಯ ನಕಲಿ ಆಧಾರ್ ಕಾರ್ಡ್ ತೋರಿಸಿದ್ದರು. ‘ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಲಾಗಿದ್ದು, ಮನೆಯಿಂದ ಹೊರ ಹೋಗುವಂತಿಲ್ಲ. ನಮ್ಮ ಸಿಬ್ಬಂದಿ ನಿಮ್ಮನ್ನು ಶೂಟ್ ಮಾಡುತ್ತಾರೆ. ಕೆನರಾ ಬ್ಯಾಂಕಿನ ಕಿನ್ನಿಗೋಳಿಯ ಶಾಖೆಯಲ್ಲಿ ನಿಮ್ಮ ಖಾತೆಯಲ್ಲಿರುವ ₹ 84 ಲಕ್ಷವನ್ನು ನಾವು ಸೂಚಿಸುವ ಖಾತೆಗೆ ವರ್ಗಾಯಿಸಬೇಕು ಎಂದು ಬೆದರಿಕೆ ಹಾಕಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
‘ಬೆದರಿಕೆಗೆ ಮಣಿದ ದಂಪತಿ ಕೆನರಾ ಬ್ಯಾಂಕಿನ ಕಿನ್ನಿಗೋಳಿ ಶಾಖೆಯ ವ್ಯವಸ್ಥಾಪಕ ರಾಯಿಸ್ಟನ್ ಅವರನ್ನು ಮಂಗಳವಾರ ಸಂಪರ್ಕಿಸಿ, ‘ತುರ್ತಾಗಿ ಹಣ ಬೇಕು. ನಮ್ಮ ಅವಧಿ ಠೇವಣಿ ಖಾತೆಯಲ್ಲಿದ್ದ ₹ 84 ಲಕ್ಷವನ್ನು ಉಳಿತಾಯ ಖಾತೆಗೆ ವರ್ಗಾಯಿಸಿ’ ಎಂದು ಕೋರಿದ್ದರು.
ಇದರಿಂದ ಸಂಶಯಗೊಂಡ ವ್ಯವಸ್ಥಾಪಕ, ಹಣದ ಅಗತ್ಯದ ಬಗ್ಗೆ ವಿಚಾರಿಸಿದ್ದರು. ಆಗ ದಂಪತಿ ‘ಬೆಂಗಳೂರಿನಲ್ಲಿ ನಿವೇಶನ ಖರೀದಿಗೆ ಹಣ ಬೇಕಿದೆ’ ಎಂದು ತಿಳಿಸಿದ್ದರು. ವೃದ್ಧ ದಂಪತಿ ಬ್ಯಾಂಕಿನ ವ್ಯವಸ್ಥಾಪಕರಿಗೆ ಬುಧವಾರ ಬೆಳಿಗ್ಗೆ ಮತ್ತಷ್ಟು ಒತ್ತಡ ಹೇರಿ, ‘ಅವರ ಖಾತೆಯಿಂದ ಸುಮಾರು ₹ 84 ಲಕ್ಷವನ್ನು ಆರೋಪಿಗಳು ಸೂಚಿಸಿದ ಖಾತೆಗೆ ವರ್ಗಾಯಿಸಿದ್ದರು. ವೃದ್ಧ ದಂಪತಿಯ ನಡೆಯಿಂದ ಸಂಶಯವು ಮತ್ತಷ್ಟು ಬಲಗೊಂಡಿದ್ದರಿಂದ ವ್ಯವಸ್ಥಾಪಕ ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು’ ಎಂದು ಮಾಹಿತಿ ನೀಡಿದ್ದಾರೆ.
‘ಮೂಲ್ಕಿ ಪೊಲೀಸ್ ಇನ್‌ಸ್ಪೆಕ್ಟರ್ ಮಂಜುನಾಥ್ ಬಿ.ಎಸ್ ಸೂಚನೆಯಂತೆ ಪೊಲೀಸ್ ಸಿಬ್ಬಂದಿ, ವೃದ್ಧ ದಂಪತಿಯ ಮನೆಗೆ ತೆರಳಿ ವಿಚಾರಿಸಿದಾಗ ಡಿಜಿಟಲ್ ಅರೆಸ್ಟ್ ಕೃತ್ಯ ಬಯಲಾಗಿದೆ. ಕೂಡಲೇ ಪೊಲೀಸರು ಈ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕರಿಗೆ ಮಾಹಿತಿ ನೀಡಿದ್ದರು. ವಂಚಕರು ಸೂಚಿಸಿದ ಖಾತೆಗೆ ವರ್ಗಾವಣೆಗೊಂಡ ₹ 84 ಲಕ್ಷವನ್ನು ಬ್ಯಾಂಕಿನವರು ತಡೆಹಿಡಿದಿದ್ದರು’ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.