ಉಳ್ಳಾಲ: ಕೋಲ್ಕತ್ತದ ಆರ್.ಜಿ.ಕಾರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ನಡೆದ ಹಿಂಸಾಚಾರ ಹಾಗೂ ಎಂಡಿಎಸ್ ವಿದ್ಯಾರ್ಥಿನಿಯ ಹತ್ಯೆ ಪ್ರಕರಣ ಖಂಡಿಸಿ ದೇರಳಕಟ್ಟೆ ಭಾಗದಲ್ಲಿರುವ ನಾಲ್ಕು ವೈದ್ಯಕೀಯ ಕಾಲೇಜುಗಳ ಹೊರರೋಗಿ ವಿಭಾಗಗಳು ಕಾರ್ಯನಿರ್ವಹಿಸಲಿಲ್ಲ.
ದೇರಳಕಟ್ಟೆಯಲ್ಲಿರುವ ಯೆನೆಪೋಯ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜು, ನರಿಂಗಾನದ ಯೆನೆಪೋಯ ಆಯುರ್ವೇದ ಕಾಲೇಜು, ಕೆ.ಎಸ್.ಹೆಗ್ಡೆ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜು, ಫಾದರ್ ಮುಲ್ಲರ್ ಹೋಮಿಯೋಪತಿ ಆಸ್ಪತ್ರೆ ಹಾಗೂ ಕಣಚೂರು ಆರೋಗ್ಯ ವಿಜ್ಞಾನಗಳ ಸಂಸ್ಥೆಯ ಹೊರರೋಗಿ ವಿಭಾಗ ಶನಿವಾರ ಬೆಳಿಗ್ಗೆಯಿಂದ ಸಂಜೆವರೆಗೂ ಕಾರ್ಯನಿರ್ವಹಿಸಲಿಲ್ಲ. ನಾಲ್ಕು ಆಸ್ಪತ್ರೆಗಳ ಸುಮಾರು 1 ಸಾವಿರ ವೈದ್ಯರು, ವೈದ್ಯ ವಿದ್ಯಾರ್ಥಿಗಳು ಮಂಗಳೂರಿನ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಒ) ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದರು.
ರೋಗಿಗಳ ಪರದಾಟ: ವಿವಿಧೆಡೆಯಿಂದ ಬೆಳಿಗ್ಗೆಯೇ ಬಂದಿದ್ದ ರೋಗಿಗಳು ಪರದಾಡಿದರು.
ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯಕೀಯ, ದಂತ ವೈದ್ಯಕೀಯ, ಪ್ಯಾರಾಮೆಡಿಕಲ್, ನರ್ಸಿಂಗ್ ವಿಭಾಗದ ಸುಮಾರು 500 ವಿದ್ಯಾರ್ಥಿಗಳು, ವೈದ್ಯರು ಆಸ್ಪತ್ರೆ ಆವರಣದಲ್ಲಿ ಮೌನ ಪ್ರತಿಭಟನೆ ಹಮ್ಮಿಕೊಂಡರು. ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಒತ್ತಾಯಿಸಿದರು.
ವೈದ್ಯಕೀಯ ಕಾಲೇಜುಗಳ ಡೀನ್ ಡಾ.ಜಯಪ್ರಕಾಶ್ ಶೆಟ್ಟಿ, ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಫೊರೆನ್ಸಿಕ್ ವಿಭಾಗ ಮುಖ್ಯಸ್ಥ ಡಾ.ಮಹಾಬಲೇಶ್ ಶೆಟ್ಟಿ, ವೈದ್ಯಕೀಯ ಅಧೀಕ್ಷಕಿ ಡಾ.ಸುಮಲತಾ ಆರ್.ಶೆಟ್ಟಿ, ಪ್ರೊ.ಸೂರಜ್ ಶೆಟ್ಟಿ, ಪಿಆರ್‌ಒ ಹೇಮಂತ್ ಶೆಟ್ಟಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.