ADVERTISEMENT

ಸಂಚಾರ ನಿರ್ಬಂಧಿಸಿ ತೊಂದರೆ ಕೊಡಬೇಡಿ: ಯು.ಟಿ.ಖಾದರ್

ಅಧಿಕಾರಿಗಳಿಗೆ ಸೂಚನೆ ನೀಡಿರುವ ಸ್ಪೀಕರ್ ಯು.ಟಿ. ಖಾದರ್

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 6:09 IST
Last Updated 30 ಜುಲೈ 2024, 6:09 IST
ಯು.ಟಿ.ಖಾದರ್
ಯು.ಟಿ.ಖಾದರ್   

ಮಂಗಳೂರು: ಮಳೆಗಾಲದಲ್ಲಿ ಅಲ್ಲಲ್ಲಿ ಮಣ್ಣು ಕುಸಿಯುವುದು ಸಾಮಾನ್ಯ. ಇದೇ ಕಾರಣಕ್ಕೆ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಿ ಜನರಿಗೆ ತೊಂದರೆ ನೀಡಬಾರದು. ನಿರಂತರ ನಿಗಾವಹಿಸುವ ಮೂಲಕ ಸಮಸ್ಯೆ ನಿವಾರಣೆಗೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಿರಾಡಿ, ಚಾರ್ಮಾಡಿ ಘಾಟ್‌ಗಳಲ್ಲಿ ಕೆಲವೆಡೆ ಮಣ್ಣು ಕುಸಿತ ಆಗುತ್ತಿದೆ. ಸಣ್ಣ ಪ್ರಮಾಣದಲ್ಲಿ ಮಣ್ಣು ಜರಿದರೆ ರಸ್ತೆ ಬಂದ್ ಮಾಡುವುದು ಸರಿಯಲ್ಲ. ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಿ ನಿರಂತರ ನಿಗಾವಹಿಸಿ, ವಾಹನ ಸಂಚಾರಕ್ಕೆ ತೊಂದರೆ ಆಗದಂತೆ ಎಚ್ಚರ ವಹಿಸಬೇಕು. ತೀರಾ ಅಪಾಯಕಾರಿ ಸನ್ನಿವೇಶ ಇದ್ದರೆ, ಪರಿಸ್ಥಿತಿ ಅವಲೋಕಿಸಿ, ರಸ್ತೆಯಲ್ಲಿ ಸಂಚಾರ್ ಸ್ಥಗಿತಗೊಳಿಸುವ ನಿರ್ಧಾರ ಮಾಡಬಹುದು. ದಕ್ಷಿಣ ಕನ್ನಡ, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಚರ್ಚಿಸಿ, ಒಮ್ಮತದ ತೀರ್ಮಾನ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಜನರಿಗೆ ತೊಂದರೆ ಆಗಬಾರದು. ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್ ಅವರೊಂದಿಗೂ ಚರ್ಚಿಸಿದ್ದೇನೆ’ ಎಂದರು.

‘ಮಂಗಳೂರಿನ ಕೆತ್ತಿಕಲ್‌ನಲ್ಲೂ ಮಣ್ಣು ಕುಸಿತ ಆಗುವ ಅಪಾಯ ಇದೆ. ಇಲ್ಲಿ ಮೇಲ್ಭಾಗದಲ್ಲಿ ನಿರಂತರ ನೀರು ಸಂಗ್ರಹಗೊಂಡು ಮಣ್ಣು ಸಡಿಲ ಆಗಿರಬಹುದು. ಇಂತಹ ಪ್ರದೇಶದಲ್ಲಿ ಮೇಲಿನಿಂದ ನೀರು ಸರಾಗವಾಗಿ ಹರಿದು ಹೋಗುವ ರಚನೆ ಮಾಡಿದರೆ ಸಮಸ್ಯೆ ಪರಿಹಾರ ಆಗಬಹುದು. ಶಿರಾಡಿ ಘಾಟ್‌ನಲ್ಲಿ ಸುರಂಗ ರಚನೆ ಸುಲಭವಲ್ಲ. ಹಾಲಿ ಇರುವ ಹೆದ್ದಾರಿಯನ್ನು ಸುಸ್ಥಿತಿಯಲ್ಲಿ ಇಡುವ ಬಗ್ಗೆ ಯೋಚಿಸಬೇಕು. ಮಾರನಬೈಲ್– ಸಕಲೇಶಪುರ ನಡುವಿನ ಹೆದ್ದಾರಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಕಾಮಗಾರಿ ನಡೆಸುವ ವೇಳೆ ಎತ್ತರದ ಪ್ರದೇಶದಿಂದ ನೀರು ಹರಿದು ಹೋಗುವ ರಚನೆ ನಿರ್ಮಿಸಬೇಕು. ಈ ಎಲ್ಲ ಸಮಸ್ಯೆಗಳ ಬಗ್ಗೆ ಕೂಲಂಕಷ ಪರಿಶೀಲಿಸುವಂತೆ ಎಸ್. ಸೆಲ್ವಕುಮಾರ್ ಅವರಿಗೆ ತಿಳಿಸಿದ್ದೇನೆ’ ಎಂದರು.

ADVERTISEMENT

ಈಶಾನ್ಯ ಭಾರತ ಮಾದರಿ ಬೇಕು: ಕರಾವಳಿ ಭಾಗಕ್ಕೆ ಉತ್ತರ ಕರ್ನಾಟಕ ಭಾಗದಂತೆ ಹೆದ್ದಾರಿ ಕಾಮಗಾರಿಗೆ ಅನುದಾನ ನೀಡುವುದು ಸರಿಯಲ್ಲ. ಈ ಭಾಗದಲ್ಲಿ ಹೆದ್ದಾರಿ ಕಾಮಗಾರಿ ಜೊತೆಗೆ ತಡೆಗೋಡೆ ನಿರ್ಮಾಣಕ್ಕೂ ಅನುದಾನ ಅಗತ್ಯವಿದೆ. ಈಶಾನ್ಯ ಭಾರತದಲ್ಲಿ ಈ ಮಾದರಿ ಅನುಸರಿಸಲಾಗುತ್ತಿದ್ದು, ಇಲ್ಲಿಯೂ ಈ ಪದ್ಧತಿ ಜಾರಿಯಾಗಬೇಕಾಗಿದೆ ಎಂದು ಖಾದರ್ ಹೇಳಿದರು. 

ಪೀಠಕ್ಕೆ ಅಗೌರವದ ಪ್ರಶ್ನೆ ಇಲ್ಲ’ ವಿಧಾನಸಭೆ ಅಧ್ಯಕ್ಷರ ಪೀಠದ ಪಕ್ಕದಲ್ಲಿ ನಿಂತು ಮಂಗಳೂರು ಮಹಾನಗರ ಪಾಲಿಕೆ ಸದಸ್ಯರೊಬ್ಬರು ಹಾಗೂ ಮಾಜಿ ಮೇಯರ್ ಒಬ್ಬರು ಫೋಟೊ ತೆಗೆಸಿಕೊಂಡ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಖಾದರ್ ಅಧಿವೇಶನ ಶುರುವಾಗುವ ನಾಲ್ಕು ದಿನ ಮೊದಲು ರಾತ್ರಿ ವೇಳೆ ಸಿದ್ಧತೆ ನೋಡಲು ಹೋದಾಗ ಅವರೂ ಬಂದಿದ್ದು ಫೋಟೊ ತೆಗೆಸಿಕೊಂಡಿದ್ದಾರೆ. ಅಧಿವೇಶನ ಇಲ್ಲದಾಗ ಹೀಗೆ ಫೋಟೊ ತೆಗೆದಿಕೊಂಡಿದ್ದರಿಂದ ಸ್ಪೀಕರ್‌ ಪೀಠಕ್ಕೆ ಅಗೌರವ ಉಂಟಾಗುವ ಪ್ರಶ್ನೆ ಇಲ್ಲ. ಬೇರೆ ಬೇರೆ ನಿಯೋಗಗಳು ಭೇಟಿ ನೀಡಿದಾಗ ಹೀಗೆ ಚಿತ್ರ ಕ್ಲಿಕ್ಕಿಸಿದ್ದು ಇದೆ ಎಂದು ಸಮರ್ಥಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.