ADVERTISEMENT

ಅಮೆರಿಕಕ್ಕೆ ಬೈ; ಭಾರತೀಯ ಸೇನೆಗೆ ಜೈ

ವಿದೇಶಿ ಕಂಪೆನಿಯಲ್ಲಿ ಉದ್ಯೋಗ ತೊರೆದು ಬಂದ ಎಂಜಿನಿಯರಿಂಗ್ ಪದವೀಧರ

ವಿಕ್ರಂ ಕಾಂತಿಕೆರೆ
Published 13 ಜೂನ್ 2022, 4:21 IST
Last Updated 13 ಜೂನ್ 2022, 4:21 IST
ತಾಯಿ ವಸಂತಿ ಮತ್ತು ತಂದೆ ಗಣಪತಿ ಭಟ್‌ ಜೊತೆ ಸಾತ್ವಿಕ ಕುಳಮರ್ವ
ತಾಯಿ ವಸಂತಿ ಮತ್ತು ತಂದೆ ಗಣಪತಿ ಭಟ್‌ ಜೊತೆ ಸಾತ್ವಿಕ ಕುಳಮರ್ವ   

ಮಂಗಳೂರು: ‘ಮಗ ಅಮೆರಿಕಕ್ಕೆ ಹೋದಾಗ, ಮೂವರು ಮಕ್ಕಳ ಪೈಕಿ ಒಬ್ಬನನ್ನು ಕಳೆದುಕೊಂಡೆ ಎಂದು ಹತ್ತಿರದವರು ಹೇಳಿದ್ದರು. ಆದರೆ ಆತ ವಾಪಸ್ ಬರುತ್ತಾನೆ, ಇಲ್ಲೇ ತಾಯ್ನಾಡಿನಲ್ಲೇ ಇರುತ್ತಾನೆ ಎಂದು ನಾನು ಅವರಿಗೆ ಉತ್ತರಿಸಿದ್ದೆ. ಶಿಕ್ಷಣ ಮುಗಿಸಿ ಆತ ಅಮೆರಿಕದಲ್ಲಿ ಉದ್ಯೋಗಕ್ಕೆ ಸೇರಿದಾಗ ಆತಂಕವಾಗಿತ್ತು. ಈಗ ನಾವೆಲ್ಲರೂ ನಿರಾಳವಾಗಿದ್ದೇವೆ. ಮಗನ ಬಗ್ಗೆ ಹೆಮ್ಮೆ ಮೂಡಿದೆ...’

ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡಿರುವ ಬೆಳ್ತಂಗಡಿಯ ಸಾತ್ವಿಕ ಕುಳಮರ್ವ ಅವರ ತಂದೆ ಗಣಪತಿ ಭಟ್ ಕುಳಮರ್ವ ಅವರ ಮಾತು ಇದು.

ಅಮೆರಿಕದ ಅರಿಜೋನಾ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಅಲ್ಲಿನ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ ಸಾತ್ವಿಕ ಭಾರತೀಯ ಸೇನೆಯನ್ನು ಸೇರುವ ಉತ್ಕಟ ಆಸೆಯಿಂದ ಎರಡೂವರೆ ವರ್ಷಗಳ ಹಿಂದೆ ವಾಪಸಾಗಿದ್ದರು. ಮನೆಯಲ್ಲೇ ಅಭ್ಯಾಸ ಮಾಡಿ ಪರೀಕ್ಷೆಗೆ ಹಾಜರಾದ ಅವರು ಎರಡನೇ ಪ್ರಯತ್ನದಲ್ಲಿ ಸೇನೆಗೆ ಆಯ್ಕೆಯಾಗಿದ್ದರು.

ADVERTISEMENT

ತರಬೇತಿ ಪೂರ್ತಿಯಾದ ಹಿನ್ನೆಲೆಯಲ್ಲಿ ಶನಿವಾರ ಡೆಹ್ರಾಡೂನ್‌ನಲ್ಲಿ ನಿರ್ಗಮನ ಪಥಸಂಚಲನ ನಡೆದಿದ್ದು ಜಮ್ಮುವಿನ ಸಿಗ್ನಲ್ ರೆಜಿಮೆಂಟ್‌ನಲ್ಲಿ ಸಾತ್ವಿಕ ಅವರಿಗೆ ನೇಮಕಾತಿ ಆಗಿದೆ. ಜಬಲ್‌ಪುರದಲ್ಲಿ ಎರಡು ವಾರಗಳ ಓರಿಯೆಂಟೇಷನ್ ಕಾರ್ಯಕ್ರಮ ಮುಗಿಸಿದ ನಂತರ ಅವರು ಸೇವೆಗೆ ಹಾಜರಾಗಲಿದ್ದಾರೆ.

ಬೆಳ್ತಂಗಡಿ ಚರ್ಚ್‌ ಶಾಲೆಯಲ್ಲಿ ಮತ್ತು ಸೇಂಟ್ ತೆರೆಸಾ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ಸಾತ್ವಿಕ, ಎಸ್‌ಡಿಎಂ ಕಾಲೇಜಿನಲ್ಲಿ ಪಿಯುಸಿ ಮತ್ತು ಬೆಂಗಳೂರಿನಲ್ಲಿ ಪದವಿ ಮುಗಿಸಿದ್ದರು. ನಂತರ ಅಮೆರಿಕಕ್ಕೆ ತೆರಳಿದ್ದರು.

‘ಸೇನೆ ಸೇರಬೇಕೆಂದು ಸಣ್ಣ ವಯಸ್ಸಿನಲ್ಲೇ ಆಸೆ ಇತ್ತು. ಶಿಕ್ಷಣಕ್ಕೆ ಬ್ಯಾಂಕ್‌ ಸಾಲ ತೆಗೆದುಕೊಂಡಿದ್ದ ಕಾರಣ ಅಮೆರಿಕದಲ್ಲಿ ಉದ್ಯೋಗ ಮಾಡಬೇಕಾದುದು ಅನಿವಾರ್ಯವಾಗಿತ್ತು’ ಸಾಲ ಮುಗಿದ ಕೂಡಲೇ ವಾಪಸ್ ಬಂದು ಪರೀಕ್ಷೆಗೆ ತಯಾರಾದೆ. ದೈಹಿಕ ಫಿಟ್‌ನೆಸ್ ತರಬೇತಿಯನ್ನು ಮನೆಯ ಸುತ್ತಮುತ್ತಲ ವಠಾರದಲ್ಲೇ ಮಾಡಿದ್ದೆ. ಟೆಕ್ನಿಕಲ್ ಗ್ರಾಜುಯೇಷನ್ ಕೋರ್ಸ್‌ 133 ಕಾರ್ಯಕ್ರಮದಲ್ಲಿ ಆಯ್ಕೆಯಾಗಿದ್ದೇನೆ’ ಎಂದು ಡೆಹ್ರಾಡೂನ್‌ನಲ್ಲಿರುವ ಸಾತ್ವಿಕ್ ‘ಪ್ರಜಾವಾಣಿ’ಗೆ ತಿಳಿಸಿದರು.

* ದಕ್ಷಿಣ ಭಾರತದಲ್ಲಿ ಬಹುತೇಕರಿಗೆ ಸೇನೆಯ ಬಗ್ಗೆ ಆಸಕ್ತಿ ಇದೆ. ಆದರೆ ಅದರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಪ್ರಯತ್ನಿಸುವುದಿಲ್ಲ. ಈ ಸ್ಥಿತಿ ಬದಲಾಗಬೇಕು.

-ಸಾತ್ವಿಕ ಕುಳಮರ್ವ, ಭಾರತೀಯ ಸೇನೆಯ ಲೆಫ್ಟಿನೆಂಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.