ADVERTISEMENT

ಉದ್ಯೋಗ ವೀಸಾ, ಭಾರಿ ಮೋಸ: ದ.ಕ ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಮಂದಿಗೆ ವಂಚನೆ

ಪ್ರವೀಣ್‌ ಕುಮಾರ್‌ ಪಿ.ವಿ
Published 27 ಅಕ್ಟೋಬರ್ 2025, 6:01 IST
Last Updated 27 ಅಕ್ಟೋಬರ್ 2025, 6:01 IST
 ಸುಧೀರ್ ಕುಮಾರ್ ರೆಡ್ಡಿ
 ಸುಧೀರ್ ಕುಮಾರ್ ರೆಡ್ಡಿ   

ಮಂಗಳೂರು: ರಸಾಯನ ವಿಜ್ಞಾನದಲ್ಲಿ ಎಂ.ಎಸ್‌ಸಿ ಪದವಿಧರೆಯಾಗಿದ್ದ ನರಿಕೊಂಬುವಿನ  ಯುವತಿಯೊಬ್ಬಳಿಗೆ ವಿದೇಶದಲ್ಲಿ ಉದ್ಯೋಗ ಕೊಡಿಸುವ ಆಸೆಯಿಂದ ಆಕೆಯ ತಂದೆಯು  ಚಿನ್ನಾಭರಣ ಅಡವಿಟ್ಟು ಸಾಲ ಪಡೆದು  ಏಜೆನ್ಸಿಯೊಂದಕ್ಕೆ ₹ 6 ಲಕ್ಷ ನೀಡಿದ್ದರು. ಆಕೆಗೆ  ವಿದೇಶದಲ್ಲಿ ಉದ್ಯೋಗ ಸಿಗಲಿಲ್ಲ.  ಆಕೆಯ ಮದುವೆಗಾಗಿ ತಂದೆ ಮಾಡಿಸಿದ್ದ ಚಿನ್ನಾಭರಣಗಳೂ ಸಾಲಗಾರರ ಪಾಲಾದವು.... 

‘ಧರ್ಮಗುರುವೊಬ್ಬ ನನ್ನ ಮಗಳಿಗೆ ವಿದೇಶದಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ₹ 3 ಲಕ್ಷ ಪಡೆದು ನಕಲಿ ವೀಸಾ ನೀಡಿ ವಂಚಿಸಿದ್ದಾನೆ. ನನ್ನ ಬಂಧುಗಳು, ಗೆಳೆಯರು ಸೇರಿದಂತೆ  30ಕ್ಕೂ ಹೆಚ್ಚು ಮಂದಿಯನ್ನು ಆತನಿಗೆ ಪರಿಚಯ ಮಾಡಿಸಿಕೊಟ್ಟಿದ್ದೆ. ಅವರಿಗೂ ಆತ ವಂಚಿಸಿದ್ದಾನೆ. ನನ್ನ ಪರಿಚಯದಿಂದ ಆತನಿಗೆ ಹಣ ನೀಡಿದವರ ಬೈಗುಳದಿಂದಾಗಿ  ಅದೆಷ್ಟೋ ರಾತ್ರಿಗಳನ್ನು ನಿದ್ದೆ ಇಲ್ಲದೇ ಕಳೆದಿದ್ದೇನೆ’ ಎಂದು ಕ್ರೈಸ್ತ ಮಹಿಳೆಯೊಬ್ಬರು ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡಿದ್ದರು. 

ವಿದೇಶದಲ್ಲಿ ಉದ್ಯೋಗ ಗಿಟ್ಟಿಸಿ, ಕೈ ತುಂಬಾ ಸಂಬಳ ಪಡೆಯುವ ಆಸೆಯಿಂದ, ನಕಲಿ ಏಜೆನ್ಸಿಯವರಿಗೆ ಹಣ ನೀಡಿ ನೂರಾರು ಮಂದಿ ವಂಚನೆಗೆ ಒಳಗಾಗಿದ್ದಾರೆ. ಎರಡು ಮೂರು ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ 400ಕ್ಕೂ ಹೆಚ್ಚು ಮಂದಿ ಈ ರೀತಿ  ಮೋಸ ಹೋಗಿದ್ದಾರೆ. ಆದರೆ ಪ್ರಕರಣ ದಾಖಲಾಗಿದ್ದು ಬೆರಳೆಣಿಕೆಯಷ್ಟು ಮಾತ್ರ. ಆರೋಪಿಗಳಿಗೆ  ಶಿಕ್ಷೆಯಾಗಿದ್ದು ಇಲ್ಲವೇ ಇಲ್ಲ ಎಂಬಷ್ಟು ಕಡಿಮೆ. 

ADVERTISEMENT

‘ಈ ಭಾಗದ ಸಾವಿರಾರು ಮಂದಿ ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿದ್ದಾರೆ. ಅವರನ್ನು ನೋಡಿ ಇತರರೂ ವಿದೇಶಿ ಉದ್ಯೋಗದ ಕನಸು ಕಾಣುತ್ತಾರೆ. ಅದಕ್ಕಾಗಿ ಕೇಂದ್ರ ಸರ್ಕಾರದ ವಲಸೆ ವಿಭಾಗದಿಂದ ಮಾನ್ಯತೆ ಪಡೆದ ಏಜೆನ್ಸಿಗಳ ಮೊರೆ ಹೋದರೆ ಸಮಸ್ಯೆ ಇಲ್ಲ. ಆದರೆ,  ಅಡ್ಡದಾರಿಯಲ್ಲಿ ವೀಸಾ ಪಡೆಯಲೆತ್ನಿಸಿ  ಮೋಸ ಹೋಗುತ್ತಿದ್ದಾರೆ’ ಎನ್ನುತ್ತಾರೆ ನಗರ ಪೊಲೀಸ್‌ ಕಮಿಷನರ್ ಸುಧೀರ್‌ ಕುಮಾರ್ ರೆಡ್ಡಿ ಸಿ.ಎಚ್‌. 

‘ಹಣ ನೀಡಿದವರು ಇವತ್ತಲ್ಲ ನಾಳೆ ವೀಸಾ ಸಿಗಬಹುದು ಎಂದು ತಿಂಗಳಾನುಗಟ್ಟಲೆ ಕಾಯುತ್ತಾರೆ. ಹಾಗಾಗಿ ಇಂತಹ ವಂಚನೆ ಬಗ್ಗೆ ದೂರು ದಾಖಲಾಗುವಾಗ ತುಂಬಾ ತಡವಾಗಿರುತ್ತದೆ. ಅಷ್ಟರಲ್ಲಿ ಆರೋಪಿಗಳು ನೂರಾರು ಮಂದಿಗೆ ವಂಚಿಸಿ ತಲೆಮರೆಸಿಕೊಂಡಿರುತ್ತಾರೆ’ ಎಂದು ಅವರು ವಿವರಿಸಿದರು. 

‘ಸಾಕಷ್ಟು ಮಂದಿಗೆ ವಂಚಿಸಿರುವ ಆರೋಪಿಗಳು ಕೂಡಾ ಯಾರಾದರೂ ತಮ್ಮ ವಿರುದ್ಧ ಎಫ್‌ಐಆರ್‌ ದಾಖಲಾಗುವುದನ್ನು ಕಾಯುತ್ತಿರುತ್ತಾರೆ. ಇಂತಹ ವಂಚನೆ ಪ್ರಕರಣಗಳಲ್ಲಿ ಆರೋಪಿಗೆ ಏಳು ವರ್ಷಕ್ಕಿಂತಲೂ ಕಡಿಮೆ ಜೈಲು ಶಿಕ್ಷೆ ಇದ್ದು, ಸುಲಭವಾಗಿ ಜಾಮೀನು ಸಿಗುತ್ತದೆ. ಕೆಲ ವರ್ಷ ಜೈಲು ಶಿಕ್ಷೆ ಅನುಭವಿಸಿ ಹೊರ ಬಂದರೂ, ಅಡ್ಡದಾರಿಯಲ್ಲಿ ಗಳಿಸಿದ ನೂರಾರು ಕೋಟಿ ಹಣಕ್ಕೇನೂ ಆಗದು ಎಂಬ ದುರಾಲೋಚನೆ ಅವರದು’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.  

‘ವಿದೇಶದಲ್ಲಿ ಉದ್ಯೋಗ ಕೊಡಿಸಲು ಹಣ ಪಡೆದು ವಂಚಿಸುವವರನ್ನು ಮಟ್ಟ ಹಾಕಲು ಅವರ ಹಿಂದಿನ ಅಪರಾಧ ಚಟುವಟಿಕೆಗಳ ಮಾಹಿತಿ ಕಲೆಹಾಕಿ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆಯಡಿ (ಕೋಕಾ) ಪ್ರಕರಣ ದಾಖಲಿಸಿಕೊಳ್ಳುತ್ತಿದ್ದೇವೆ’ ಎಂದು ಅಪರಾಧ ವಿಭಾಗದ ಡಿಸಿಪಿ ಕೆ.ರವಿಶಂಕರ್‌ ತಿಳಿಸಿದರು. 

‘ ಎಸಿಪಿ ಅಥವಾ ಇನ್‌ಸ್ಪೆಕ್ಟರ್‌ ತಮ್ಮ ವ್ಯಾಪ್ತಿಯಲ್ಲಿರುವ ವಿದೇಶದಲ್ಲಿ ಉದ್ಯೋಗ ಕೊಡಿಸುವ ಎಜೆನ್ಸಿಗಳ ಕಚೇರಿಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಾರೆ.  ಪೊಲೀಸ್‌ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ವಲಸೆ ನಿಯಮಗಳ ಬಗ್ಗೆ ವಲಸೆ ವಿಭಾಗದ (ಇಮಿಗ್ರೆಷನ್) ಅಧಿಕಾರಿಗಳಿಂದ ತರಬೇತಿ  ಕೊಡಿಸಿದ್ದೇವೆ. ಕಾಲೇಜು ವಿದ್ಯಾರ್ಥಿಗಳಿಗೆ  ಅರಿವು ಮೂಡಿಸಲಾಗಿದೆ. ಇಂತಹ ವಂಚನೆ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.

ಕಂಪನಿಯಿಂದ 289 ಮಂದಿಗೆ ವೀಸಾ ಮೋಸ 

‘ಆರೋಪಿಗಳಾದ ದಿಲ್ ಶಾದ್ ಸತ್ತಾರ್ ಖಾನ್ ಮತ್ತು ಸಾಹುಕಾರಿ ಕಿಶೋರ್ ಕುಮಾರ್  ಎಂಬುವರು ಮಸಿವುಲ್ಲಾ ಖಾನ್ ಎಂಬಾತನನ್ನು ತಮ್ಮ ಸಂಸ್ಥೆಗೆ ಸೇರಿಸಿಕೊಂಡು ಆತನ ಹೆಸರಿನಲ್ಲಿ ಬೆಂದೂರುವೆಲ್‌ನ ‘ಎಸ್ಸೆಲ್ ವಿಲ್ಕಾನ್’ ಕಟ್ಟಡದಲ್ಲಿ ಹೈರ್ ಗ್ಲೊ ಎಲೆಗಂಟ್‌ ಓವರ್‌ ಸೀಸ್‌ ಇಂಟರ್‌ನ್ಯಾಷನಲ್‌ (ಒಪಿಸಿ) ಪ್ರೈ ಲಿ. ಕಂಪನಿಯನ್ನು ಪ್ರಾರಂಭಿಸಿದ್ದರು. ‘ಮರೈನ್ ಆಫ್‌ ಶೋರ್‌’ ಕಂಪನಿಯಿಂದ ಉದ್ಯೋಗಕ್ಕೆ ವೀಸಾ ಕೊಡಿಸುವ ಜಾಹಿರಾತು ನೀಡಿ 289 ಅಭ್ಯರ್ಥಿಗಳಿಂದ ಒಟ್ಟು ₹ 4.5 ಕೋಟಿಯಷ್ಟು ಹಣ ಪಡೆದು ವಂಚಿಸಿದ್ದರು. ಈ ಬಗ್ಗೆ ನಗರ ಪೂರ್ವ ಠಾಣೆಯಲ್ಲಿ ಮೇ ತಿಂಗಳಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ವಿರುದ್ದ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಮಾಹಿತಿ ನೀಡಿದರು. 

ವಂಚಿಸಿದ್ದ ಆರೋಪಿ ಬಂಧನ

ಉದ್ಯೋಗದ ವೀಸಾ ಕೂಡಿಸುವುದಾಗಿ ನಂಬಿಸಿ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಹಣವನ್ನು ಪಡೆದು 30 ಕ್ಕೂ ಅಧಿಕ ಮಂದಿಯನ್ನು ವಂಚಿಸಿದ ಆರೋಪಿ ಸುಧೀರ್ ರಾವ್ ವಿ.ಆರ್ (42)ಎಂಬಾತನನ್ನು ಸಿಸಿಬಿ ಪೊಲೀಸರು2023ರ ಏಪ್ರಿಲ್‌ನಲ್ಲಿ ಗುರುವಾರ ಬಂಧಿಸಿದ್ದರು.  ಆತನ ವಿರುದ್ಧ ಸುರತ್ಕಲ್‌ ಮಂಗಳೂರು ಪೂರ್ವ ಮಂಗಳೂರು ದಕ್ಷಿಣ ಕಂಕನಾಡಿ ನಗರ ಮೂಡುಬಿದಿರೆ ಬಂಟ್ವಾಳ ಠಾಣೆಗಳಲ್ಲಿ ಎಫ್‌ಐಆರ್‌ಗಳು ದಾಖಲಾಗಿದ್ದವು. 

‘ಅನಧಿಕೃತ ಏಜೆನ್ಸಿ ನಡೆಸುವುದು ಅಪರಾಧ’

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ಪ್ರಮಾಣಪತ್ರ ಪಡೆಯದೇ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ವಿದೇಶದಲ್ಲಿ ಉದ್ಯೋಗ ಒದಗಿಸುವ ವ್ಯವಹಾರದಲ್ಲಿ ತೊಡಗುವುದು 1983ರ ವಲಸೆ ಕಾಯ್ದೆಯ ಸೆಕ್ಷನ್‌ 10ರ ಅಡಿ ಅಪರಾಧ. ಈ ಕಾಯ್ದೆಯ ಸೆಕ್ಷನ್ 24ರ ಅಡಿ ಅವರನ್ನು ಶಿಕ್ಷೆಗೆ ಗುರಿಪಡಿಸಬಹುದು ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ವಲಸಿಗರ ರಕ್ಷಣ ವಿಭಾಗದ ಅಧಿಕಾರಿ ಅವನೀಶ್‌ ಶುಕ್ಲ ತಿಳಿಸಿದರು. ‌ ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡುವ ಸಲುವಾಗಿ ಈಚೆಗೆ ನಗರಕ್ಕೆ ಭೇಟಿ ನೀಡಿದ್ದ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದರು.   ‘ಉದ್ಯೋಗದ ಸಲುವಾಗಿ ವಿದೇಶಕ್ಕೆ ತೆರಳುವವರು ಏಜೆನ್ಸಿಗಳ ಸಹಾಯ ಪಡೆಯುವಾಗ ಅವು ಅಧಿಕೃತ ಹೌದೋ ಅಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಕೇಂದ್ರ ಸರ್ಕಾರದ ವೆಬ್‌ಸೈಟ್‌ (www.emigrate.gov.in) ಅಥವಾ ವಲಸಿಗರ ರಕ್ಷಣಾ ವಿಭಾಗಕ್ಕೆ (ಪಿಒಇ)  ಇಮೇಲ್‌ ( poebengaluru@mea.gov.in) ಕಳುಹಿಸುವ ಮೂಲಕ ಅದನ್ನು ಖಾತರಿಪಡಿಸಿಕೊಳ್ಳಬಹುದು ಎಂದು ಅವರು ಸಲಹೆ ನೀಡಿದರು. ವಿದೇಶದಲ್ಲಿ ಉದ್ಯೋಗ ಪಡೆಯಲು ನೆರವಾಗುವ ಏಜೆನ್ಸಿಗಳು 1983ರ ವಲಸೆ ಕಾಯ್ದೆಯಡಿ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯ. ಇದಕ್ಕಾಗಿ ಏಜೆನ್ಸಿಗಳು ಪಿಒಇ ಸಹಾಯವಾಣಿಯನ್ನು (1800-11-3090) ಸಂಪರ್ಕಿಸಬಹುದು ಎಂದರು.  

ದಾಖಲಾದ ಪ್ರಮುಖ ಪ್ರಕರಣಗಳು (2023ರ ಬಳಿಕ) 

  • ಕಂಕನಾಡಿಯಲ್ಲಿ ಕಚೇರಿ ಹೊಂದಿರುವ ‘ದಿ ಲೆಜಂಡ್ಸ್‌ ಐಇಎಲ್‌ಟಿಎಸ್’ ಸಂಸ್ಥೆ ಹೆಸರಿನಲ್ಲಿ ಜಾಹೀರಾತು ನೀಡಿ ಜಿಲ್ಲೆಯ ನೂರಾರು ಮಂದಿಗೆ ವಂಚಿಸಿದ ಬಗ್ಗೆ ಆಲ್ವಿನ್ ಡಿಮೆಲ್ಲೊ ಎಂಬಾತನ ವಿರುದ್ಧ ವಿವಿಧ ಠಾಣೆಗಳಿಗೆ ದೂರು 

  • ಸಿಂಗಪುರದಲ್ಲಿ  ಉದ್ಯೋಗ ಕೊಡಿಸುವ ಆಮಿಷವೊಡ್ಡಿ ₹ 4.70 ಲಕ್ಷ ಪಡೆದು ಮಹಿಳೆಗೆ ವಂಚಿಸಿದ ಬಗ್ಗೆ ಸುರತ್ಕಲ್‌ ಠಾಣೆಯಲ್ಲಿ 2024ರ ಆಗಸ್ಟ್‌ನಲ್ಲಿ ಎಫ್‌ಐಆರ್‌ ದಾಖಲು.

  • ಉದ್ಯೋಗ ವೀಸಾ  ಕೊಡಿಸುವುದಾಗಿ ನಂಬಿಸಿ ₹1.97 ಲಕ್ಷ ಪಡೆದು ವಂಚಿಸಿದ ಬಗ್ಗೆ ಕದ್ರಿ ಶಿವಭಾಗ್‌ನ ಮರಿಯ ಜೋಸೆಫ್ (54) ಮತ್ತು ಜೋಸೆಫ್ (59) ವಿರುದ್ಧ 2024ರ ಆಗಸ್ಟ್‌ನಲ್ಲಿ ಬಜಪೆ ಠಾಣೆಯಲ್ಲಿ  ಎಫ್‌ಐಆರ್‌ ದಾಖಲು 

  • ಇಸ್ರೇಲ್‌ನಲ್ಲಿ ಉದ್ಯೋಗದ ವೀಸಾ ಕೊಡಿಸುವುದಾಗಿ ನಂಬಿಸಿ ₹ 7.5 ಲಕ್ಷ ಹಣ ಪಡೆದು ಮಹಿಳೆಗೆ ವಂಚಿಸಿದ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ 2025ರ ಜನವರಿಯಲ್ಲಿ  ಎಫ್‌ಐಆರ್ ದಾಖಲು 

  • ಉದ್ಯೋಗದ ಸಲುವಾಗಿ ವೀಸಾ ಕೊಡಿಸುವುದಾಗಿ ನಂಬಿಸಿ ₹19.20 ಲಕ್ಷ ವಂಚಿಸಿರುವ ಸಂಬಂಧ ಆರೋಪಿ ಮೊಹಮ್ಮದ್ ಅಜ್ಮಾನ್ ಮತ್ತು ತೌಸೀಫ್  ವಿರುದ್ಧ ಕಂಕನಾಡಿ ಠಾಣೆಯಲ್ಲಿ 2025ರ ಆ.28ರಲ್ಲಿ ಎಫ್‌ಐಆರ್‌ ದಾಖಲು   

ವಿದೇಶದಲ್ಲಿ ಉದ್ಯೋಗ ಒದಗಿಸುವ ಏಜೆನ್ಸಿ ಅಧಿಕೃತವೇ ಎಂಬುದನ್ನು ಪರಿಶೀಲಿಸದೇ ಅವರ ಜೊತೆ ವ್ಯವಹಾರ ಮಾಡಬಾರದು. ಇದರಿಂದ ಕೈಸುಟ್ಟುಕೊಳ್ಳಬೇಕಾದೀತು
ಸುಧೀರ್ ಕುಮಾರ್‌ ರೆಡ್ಡಿ ಸಿ.ಎಚ್‌., ಮಂಗಳೂರು ಪೊಲೀಸ್ ಕಮಿಷನರ್‌
ವಿದೇಶದಲ್ಲಿ ಉದ್ಯೋಗ ಒದಗಿಸುವುದಾಗಿ ನಂಬಿಸಿ ಹಣ ಪಡೆಯುವವರ ಬಗ್ಗೆ ಜನ ಎಚ್ಚರದಿಂದ ಇರಬೇಕು. ಯುವ ವಿದ್ಯಾರ್ಥಿಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ
ಕೆ.ರವಿಶಂಕರ್‌, ಡಿಸಿಪಿ, ಅಪರಾಧ ತಡೆ ವಿಭಾಗ