ಮಂಗಳೂರು: ದೇಶದ ನಗರಗಳ ಅಭಿವೃದ್ಧಿಗೆ ಹೊಸ ದಿಸೆಯನ್ನು ನೀಡಲು ಆರಂಭಿಸಲಾದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ‘ಸ್ಮಾರ್ಟ್ ಸಿಟಿ’ಯೂ ಒಂದು. ಈ ಯೋಜನೆಯಡಿ ‘ಮಂಗಳೂರು’ ನಗರದಲ್ಲೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ₹ 1 ಸಾವಿರ ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆ ಬಳಿಕ ನಗರವು ಹಿಂದಿಗಿಂತ ಎಷ್ಟು ಸ್ಮಾರ್ಟ್ ಆಗಿದೆ ಎಂಬುದು ಪ್ರಶ್ನೆ.
ಕೇಂದ್ರ ಸರ್ಕಾರವು ಈ ಯೋಜನೆಗೆ ಆಯ್ಕೆಯಾದ ನಗರಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದಾಗ ಅದರಲ್ಲಿ ಮಂಗಳೂರಿನ ಹೆಸರು ಇರಲಿಲ್ಲ. 2016ರಲ್ಲಿ ಈ ಯೋಜನೆಗೆ ಈ ನಗರವೂ ಆಯ್ಕೆಯಾಗಿತ್ತು. ಐದು ವರ್ಷಗಳಲ್ಲಿ ಅನುಷ್ಠಾನಗೊಳ್ಳಬೇಕಾದ ಯೋಜನೆ ಇದು. ಕಾಮಗಾರಿಗಳು ಶುರುವಾದ ಬಳಿಕ ನಾಲ್ಕು ಸರ್ಕಾರಗಳು ಬದಲಾಗಿವೆ. ಪ್ರತಿ ಸಲ ಸರ್ಕಾರಗಳು ಬದಲಾದಂತೆ ಕಾಮಗಾರಿಗಳ ಪಟ್ಟಿ, ಅವುಗಳ ಉದ್ದೇಶ, ಆಶಯಗಳಲ್ಲೂ ಮಾರ್ಪಾಡುಗಳಾಗಿವೆ. ಈ ನಡುವೆ ಎರಡು ವರ್ಷ ಕೋವಿಡ್ ಕೂಡಾ ಕಾಮಗಾರಿಗಳನ್ನು ಕಾಡಿದೆ. ಗಡುವು ಪದೇ ಪದೇ ವಿಸ್ತರಣೆಗೊಳ್ಳುತ್ತಾ ಬಂದಿದೆ. 2025ರ ಮಾರ್ಚ್ 31ಕ್ಕೆ ಮುಗಿದ ಗಡುವನ್ನು ಕೇಂದ್ರ ಸರ್ಕಾರ ಇನ್ನೂ ವಿಸ್ತರಿಸಿಲ್ಲ.
ಈ ಯೋಜನೆಯಡಿ ನಗರದಲ್ಲಿ 105 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಅವುಗಳಲ್ಲಿ 93 ಪೂರ್ಣಗೊಂಡಿವೆ. ಸ್ಮಾರ್ಟ್ ಸಿಟಿ ಯೋಜನೆ ಕೈಗೆತ್ತಿಕೊಂಡು ಒಂಬತ್ತು ವರ್ಷಗಳು ಉರುಳಿದ ಬಳಿಕವೂ 8 ಕಾಮಗಾರಿಗಳು ( ಒಟ್ಟು ₹260.17 ಕೋಟಿ) ಇನ್ನೂ ಪೂರ್ಣಗೊಂಡಿಲ್ಲ. ನೇತ್ರಾವತಿ ನದಿಯ ಜಲಾಭಿಮುಖ ಪ್ರದೇಶ (ವಾಟರ್ ಫ್ರಂಟ್) ಅಭಿವೃದ್ಧಿಯ ಐದು ಪ್ಯಾಕೇಜ್‌ಗಳು, ಮಹಾಕಾಳಿಪಡ್ಪು – ಮೋರ್ಗನ್ಸ್ ಗೇಟ್ ರಸ್ತೆ ಅಭಿವೃದ್ಧಿ, ಪ್ಯಾಕೇಜ್ 5ರಲ್ಲಿ ಕೈಗೆತ್ತಿಕೊಂಡ ಪಡೀಲ್– ಪಂಪ್‌ವೆಲ್ ರಸ್ತೆ ಅಭಿವೃದ್ಧಿ, ಸುಲ್ತಾನ್ ಬತ್ತೇರಿ– ಬೆಂಗರೆ ನಡುವೆ ಸೇತುವೆ ನಿರ್ಮಾಣ ಇವುಗಳಲ್ಲಿ ಪ್ರಮುಖವಾದವುಗಳು.
ಮಹಾಕಾಳಿಪಡ್ಪು – ಮೋರ್ಗನ್ಸ್ ಗೇಟ್ ರಸ್ತೆ ಅಭಿವೃದ್ಧಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆಯಾದರೂ, ಇಲ್ಲಿ ರೈಲ್ವೆ ಕೆಳಸೇತುವೆ ಕಾಮಗಾರಿ ಮೂರು ವರ್ಷಗಳಿಂದ ಕುಂಟುತ್ತಾ ಸಾಗಿದೆ. ಏಪ್ರಿಲ್ ಅಂತ್ಯದಲ್ಲಿ ಈ ಕಾಮಗಾರಿಯೂ ಪೂರ್ಣಗೊಳ್ಳಲಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಆದರೆ, ಅಷ್ಟರೊಳಗೆ ಕೆಲಸ ಮುಗಿಯುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ. ಮಹಾಕಾಳಿಪಡ್ಪು–ಮೋರ್ಗನ್ಸಗೇಟ್ ರಸ್ತೆ ಬಳಕೆಗಾಗಿ ಮೂರು ವರ್ಷಗಳಿಂದ ಸಾರ್ವಜನಿಕರು ಕಾಯುತ್ತಿದ್ದಾರೆ.
ನೇತ್ರಾವತಿ ಜಲಾಭಿಮುಖ ಪ್ರದೇಶ ಅಭಿವೃದ್ಧಿ ಯೋಜನೆಯ ಕಾಮಗಾರಿಗೂ ಪರಿಸರ ಕಾನೂನುಗಳಿಗೂ ಸಂಬಂಧವೇ ಇಲ್ಲ ಎಂಬಂತೆ ಅಧಿಕಾರಿಗಳು ನಡೆದುಕೊಂಡಿದ್ದರು. ನದಿಗೆ ಬೇಕಾಬಿಟ್ಟಿ ಮಣ್ಣು ಸುರಿದುದಲ್ಲದೇ, ಕಾಂಡ್ಲಾ ವನಗಳನ್ನೂ ನಾಶಪಡಿಸಿದ್ದರು. ಹಾಗಾಗಿ ಇಲ್ಲಿನ ಪರಿಸರ ಕಾರ್ಯಕರ್ತರು ಅನಿವಾರ್ಯವಾಗಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಮೊರೆ ಹೋಗಿದ್ದರು. ಈ ನಡುವೆ ಸರ್ಕಾರ ಬದಲಾಗಿದ್ದು, ಹೊಸ ನಗರಾಭಿವೃದ್ಧಿ ಸಚಿವರೂ ಈ ಕಾಮಗಾರಿ ಬಗ್ಗೆ ತಗಾದೆ ತೆಗೆದಿದ್ದರು. ಇಲ್ಲಿ 2.1 ಕಿ.ಮೀ ಕಾಮಗಾರಿಗೆ ₹ 70 ಕೋಟಿ ವಿನಿಯೋಗಿಸುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ್ದರು. ಈ ಎಲ್ಲ ಕಾರಣಗಳಿಂದ ಕಾಮಗಾರಿ ಅನುಷ್ಠಾನ ವಿಳಂಬವಾಗಿದೆ.
ಎನ್‌ಜಿಟಿಯು ಕಿವಿ ಹಿಂಡಿದ ಬಳಿಕ ಕಾಮಗಾರಿ ಅನುಷ್ಠಾನದಲ್ಲಿ ಅಧಿಕಾರಿಗಳು ಎಚ್ಚರ ವಹಿಸುತ್ತಿದ್ದಾರೆ. ‘ನದಿಯನ್ನು ನೇರವಾಗಿ ಸಂಪರ್ಕಿಸುವ ಕಡೆ ಬಿಟ್ಟು ಇತರ ಕಡೆ ಮಾತ್ರ ಜಲಾಭಿಮುಖ ಪ್ರದೇಶ ಅಭಿವೃದ್ಧಿ ಕಾಮಗಾರಿ ನಡೆಸುತ್ತಿದ್ದೇವೆ. 2025ರ ಸೆಪ್ಟೆಂಬರ್‌ನಲ್ಲಿ ಇದನ್ನು ಪೂರ್ಣಗೊಳಿಸುತ್ತೇವೆ’ ಎನ್ನುತ್ತಾರೆ ಅಧಿಕಾರಿಗಳು. ಆದರೆ ಆ ಲಕ್ಷಣಗಳು ಕಾಣಿಸುತ್ತಿಲ್ಲ.
ಸುಲ್ತಾನ್ ಬತ್ತೇರಿ– ಬೆಂಗರೆ ನಡುವೆ ಸೇತುವೆ ನಿರ್ಮಿಸಬೇಕೋ, ತೂಗುಸೇತುವೆ ನಿರ್ಮಿಸಬೇಕೋ ಎಂಬ ಜಿಜ್ಞಾಸೆ ಇತ್ತು. ಈ ಬಗ್ಗೆ ಜನಪ್ರತಿನಿಧಿಗಳು ಸರಿಯಾದ ಸಮಯದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳದ ಕಾರಣ ಈ ಕಾಮಗಾರಿ ವಿಳಂಬವಾಗಿದೆ. ಟೆಂಡರ ಪ್ರಕ್ರಿಯೆ ಮುಗಿದು, ಮೂರು ತಿಂಗಳ ಹಿಂದಷ್ಟೇ ಸೇತುವೆಯ ಕೆಲಸ ಶುರುವಾಗಿದೆ. ಫಲ್ಗುಣಿ ನದಿಗೆ ಮಣ್ಣು ತುಂಬಿ ಪಿಲ್ಲರ್ ಕಾಮಗಾರಿ ನಡೆಸಲಾಗುತ್ತಿದೆ. ಮಳೆಗಾಲದಲ್ಲಿ ಇಲ್ಲಿ ಕಾಮಗಾರಿ ನಡೆಸುವುದು ಕಷ್ಟ. ಹಾಗಾಗಿ ಈ ಕಾಮಗಾರಿ ಪೂರ್ಣಗೊಳ್ಳಲು ಎರಡು ವರ್ಷಗಳಾದರೂ ಬೇಕಾಗಬಹುದು ಎನ್ನುತ್ತಾರೆ ಅಧಿಕಾರಿಗಳು.
ಉರ್ವದಲ್ಲಿ ಒಳಾಂಗಣ ಕ್ರೀಡಾಂಗಣ, ನಗರ ಕೇಂದ್ರ ಮಾರುಕಟ್ಟೆ ಪುನರ್ವಸತಿ, ಫುಟ್ಬಾಲ್ ಕ್ರೀಡಾಂಗಣ ಉನ್ನತೀಕರಣ ಕಾಮಗಾರಿಗಳು ಇನ್ನಷ್ಟೇ ಪೂರ್ಣಗೊಳ್ಳಬೇಕಿದೆ. ಅವುಗಳು ಇನ್ನೊಂದು ತಿಂಗಳಲ್ಲಿ ಮುಗಿಯಲಿವೆ. ಪಡೀಲ್ ಪಂಪ್‌ವೆಲ್ ರಸ್ತೆ ಅಭಿವೃದ್ಧಿ ಕೆಲಸ ಬಹುತೇಕ ಆಗಿದೆ. ಇನ್ನೆರಡು ತಿಂಗಳಲ್ಲಿ ಅದರ ಅಂತಿಮ ಹಂತದ ಕೆಲಸಗಳೂ ಪೂರ್ಣಗೊಳ್ಳಲಿವೆ ಎಂದು ಸ್ಮಾರ್ಟ್‌ಸಿಟಿ ಯೋಜನೆಯ ಅಧಿಕಾರಿಗಳು ತಿಳಿಸಿದರು.
ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಸಂಸ್ಥೆಯು ಪಡೀಲ್‌ನಲ್ಲಿ ಜಿಲ್ಲಾಧಿಕಾರಿ ಕಚೇರಿಯ ಹೊಸ ಸಂಕೀರ್ಣದ ಬಾಕಿ ಕಾಮಗಾರಿ, ಮಹಾಕಾಳಿ ಪಡ್ಪು ರೈಲ್ವೆ ಕೆಳಸೇತುವೆ ನಿರ್ಮಾಣವೂ ಸೇರಿದಂತೆ 9 ಕಾಮಗಾರಿಗಳಿಗೆ ₹ 220 ಕೋಟಿ ಮೊತ್ತವನ್ನು ಒದಗಿಸಿದ್ದು, ಇವುಗಳನ್ನು ಬೇರೆ ಏಜೆನ್ಸಿಗಳು ಅನುಷ್ಠಾನಗೊಳಿಸಿವೆ. ಕೆಲವು ಕಾಮಗಾರಿಗಳು ಇನ್ನೂ ಬಾಕಿ ಇವೆ.
ಸಂಸ್ಥೆಯು ನಾಲ್ಕು ಕಾಮಗಾರಿಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಂಡಿದೆ. ಹಂಪನಕಟ್ಟೆಯಲ್ಲಿ ಬಹುಮಹಡಿ ವಾಣಿಜ್ಯ ಸಂಕೀರ್ಣ ಮತ್ತು ವಾಹನ ನಿಲುಗಡೆ ಸಂಕೀರ್ಣ (₹79.05 ಕೋಟಿ), ನಗರದಲ್ಲಿ ಈಗಿರುವ ವಿದ್ಯುತ್ ಬೀದಿದೀಪಗಳ ಬದಲು ಎಲ್‌ಇಡಿ ದೀಪಗಳನ್ನಾಗಿ ಅಳವಡಿಕೆ (₹62.63 ಕೋಟಿ), ಕೇಂದ್ರ ಮಾರುಕಟ್ಟೆ ಮತ್ತು ಮೀನು ಮಾರುಕಟ್ಟೆ ನಿರ್ಮಾಣ (₹114.03 ಕೋಟಿ) ಇವುಗಳಲ್ಲಿ ಸೇರಿದೆ. ಈ ಕಾಮಗಾರಿಗಳೂ ಆಮೆಗತಿಯಲ್ಲಿ ಸಾಗಿವೆ. ಸರ್ಕಾರಿ ಕಟ್ಟಡಗಳಲ್ಲಿ ಸೌರ ಪ್ಯಾನೆಲ್ ಅಳವಡಿಕೆ ಪೂರ್ಣಗೊಂಡಿದೆ.
ರಸ್ತೆಗಳ ಒಳಚರಂಡಿ ಪ್ಯಾಕೇಜ್, ವೆನ್ಲಾಕ್ ಆಸ್ಪತ್ರೆಯ ಸರ್ಜಿಕಲ್ ಬ್ಲಾಕ್ (₹53 ಕೋಟಿ) ಕಟ್ಟಡ ನಿರ್ಮಾಣ, ಸೂಪರ್ಸ್ಪೆಷಾಲಿಟಿ ಆಸ್ಪತ್ರೆಗೆ ಐಸಿಯು ಘಟಕ, ಲೇಡಿಗೋಷನ್ ಆಸ್ಪತ್ರೆಯ ಕಟ್ಟಡದಲ್ಲಿ ಹಚ್ಚುವರಿ ಮಹಡಿ ನಿರ್ಮಾಣ, ಎಮ್ಮೆಕೆರೆಯಲ್ಲಿ ಅಂತರರಾಷ್ಟ್ರೀಯ ಈಜುಕೊಳ ನಿರ್ಮಾಣ, ಮಂಗಳಾ ಕ್ರೀಡಾಂಗಣದ ನವೀಕರಣದಂತಹ ಪ್ರಮುಖ ಕಾಮಗಾರಿಗಳು ಈ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದದು, ಅವೆಲ್ಲವೂ ಪೂರ್ಣಗೊಂಡಿವೆ.
ಈ ಯೋಜನೆ ಜಾರಿಯಾದ ಬಳಿಕ ನಗರದ ಮೂಲಸೌಕರ್ಯದಲ್ಲಿ ಭಾರಿ ಬದಲಾವಣೆ ಆಗಿವೆ ಎಂಬುದನ್ನು ಸಾರ್ವಜನಿಕರೂ ಒಪ್ಪುತ್ತಾರೆ. ಆದರೆ, ಅನೇಕ ಕಾಮಗಾರಿಗಳಿಗೆ ದುಂದು ವೆಚ್ಚಮಾಡಲಾಗಿದೆ. ಕಾಮಗಾರಿಗಳ ಅನುಷ್ಠಾನ ‘ಸ್ಮಾರ್ಟ್’ ಆಗಿ ಆಗಿಲ್ಲ. ಸ್ಮಾರ್ಟ್ ಸಿಟಿ ಎಂಬ ಕಿರೀಟ ಬಂದ ಬಳಿಕವೂ ಇಲ್ಲಿನ ಒಳಚರಂಡಿ ವ್ಯವಸ್ಥೆ ಸುಧಾರಣೆಯಾಗಿಲ್ಲ ಎಂಬ ದೂರುಗಳೂ ಇವೆ.
‘ಸ್ಮಾರ್ಟ್ ಸಿಟಿಯ ಕಾಮಗಾರಿಗಳ ಗಡುವನ್ನು ಸರ್ಕಾರ ವಿಸ್ತರಿಸಿಲ್ಲ. ಈ ಬಗ್ಗೆ ಸರ್ಕಾರದ ಸೂಚನೆಗೆ ಕಾಯುತ್ತೇವೆ. ಗಡುವು ವಿಸ್ತರಣೆ ಆಗದಿದ್ದರೆ ಪಾಲಿಕೆಗೆ ಅಥವಾ ಸಂಬಂಧಪಟ್ಟ ಇಲಾಖೆ ಕಾಮಗಾರಿಗಳ ಅನುಷ್ಠಾನ ಕಾರ್ಯವನ್ನು ಒಪ್ಪಿಸುತ್ತೇವೆ. ಜಲಾಭಿಮುಖ ಯೋಜನೆಹಾಗೂ ಸುಲ್ತಾನ್ ಬತ್ತೇರಿಯ ಸೇತುವೆಗಳು ಹೊರತುಪಡಿಸಿದರೆ ಉಳಿದೆಲ್ಲ ಕಾಮಗಾರಿಗಳು ಇನ್ನು ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿವೆ’ ಎಂದು ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜು ಕೆ. ’ಪ್ರಜಾವಾಣಿ‘ಗೆ ತಿಳಿಸಿದರು.
ಯಾವುದೇ ಕಾಮಗಾರಿಗಳನ್ನು ಅನುಷ್ಠಾನ ಮಾಡಿದರೂ ಟೀಕೆ ಟಿಪ್ಪಣಿ ಸಹಜ. ಆದರೆ ನಮ್ಮ ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೆತ್ತಿಕೊಂಡ ಕಾಮಗಾರಿಗಳು ಗುಣಮಟ್ಟದಿಂದ ಕೂಡಿವೆ. ಈ ಕಾಮಗಾರಿಗಳ ವೀಕ್ಷಣೆಗೆ ಬಂದ ತಂಡಗಳೂ ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿವೆ. ಕಾಂಕ್ರೀಟೀಕೃತ ರಸ್ತೆಗಳು ವೆನ್ಲಾಕ್‌ನ ಸೂಪರ್ ಸ್ಪೆಷಾಲಿಟಿ ಘಟಕ ಎಮ್ಮೆಕೆರೆಯ ಈಜುಕೊಳ ಮೊದಲಾದ ಸೌಕರ್ಯಗಳು ನಗರದ ಚಹರೆಯನ್ನೇ ಬದಲಿಸಿವೆ. ರಾಜು ವ್ಯವಸ್ಥಾಪಕ ನಿರ್ದೇಶಕ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ –0– ‘ಸ್ಮಾರ್ಟ್ ಸಿಟಿಯ ಉದ್ದೇಶ ಈಡೇರಿದೆಯೇ’ ಸ್ಮಾರ್ಟ್‌ಸಿಟಿ ಯೋಜನೆಯ ಪ್ರಕಾರ ನಗರದಲ್ಲಿ ಕಾಮಗಾರಿಗಳು ನಡೆದಿವೆಯೇ ಎಂಬ ಸಂದೇಹವಿದೆ. ಕಾಂಕ್ರೀಟಕರಣಗೊಂಡ ಅನೇಕ ರಸ್ತೆಗಳ ಪಕ್ಕ ಮಳೆನೀರು ಹರಿಯು ಚರಂಡಿ ವ್ಯವಸ್ಥ ಸರಿಯಾಗಿಲ್ಲ. ಎಮ್ಮೆಕರೆಯ ಈಜುಕೊಳ ಉತ್ತಮ ಸೌಕರ್ಯ. ಆದರೆ ಅದರಿಂದ ಜನಸಾಮಾನ್ಯರಿಗೆ ಪ್ರಯೋಜನೆ ಸಿಗುತ್ತಿದೆಯೇ.ಈ ಯೋಜನೆಯಡಿ ನಿರ್ಮಿಸಿರುವ ಸೌಕರ್ಯಗಳ ನಿರ್ವಹಣೆ ಹೇಗೆ ನಡೆಯುತ್ತದೆ ಎಂಬ ಸಂದೇಹವೂ ಇದೆ ಕೆ.ಸುರೇಶ್ ನಾಯಕ್ ‘ವೀ ದ ಪೀಪಲ್’ ಸಂಘಟನೆಯ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.