
ಶಿರಾಡಿ (ಉಪ್ಪಿನಂಗಡಿ): ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಫಥ ರಸ್ತೆ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ ಹೆದ್ದಾರಿ ಬದಿಯಲ್ಲಿ ಅನಧಿಕೃತ ಅಂಗಡಿ, ಹೋಟೆಲ್ ನಿರ್ಮಾಣವಾಗುತ್ತಿದೆ. ಶಿರಾಡಿ ಗ್ರಾಮದ ಉದನೆ ಎಂಬಲ್ಲಿ ಹೆದ್ದಾರಿಗೆ ತಾಗಿಕೊಂಡು ಅಂಗಡಿ ನಿರ್ಮಾಣ ಆಗಿದ್ದು, ಅವಘಡಗಳು ಸಂಭವಿಸುವ ಸಾಧ್ಯತೆ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ.
ಉದನೆ ಜಂಕ್ಷನ್ ಬಳಿ, ರಾಷ್ಟ್ರೀಯ ಹೆದ್ದಾರಿ ಮತ್ತು ಶಿಶಿಲ, ಶಿಬಾಜೆ ಸಂಪರ್ಕದ ರಾಜ್ಯ ಹೆದ್ದಾರಿ ಸೇರುವ ಜಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗೆ ತಾಗಿಕೊಂಡು ಅಂಗಡಿ ನಿರ್ಮಾಣವಾಗಿದೆ. ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಅಥವಾ ಹೆದ್ದಾರಿಯಿಂದ ರಾಜ್ಯ ಹೆದ್ದಾರಿಗೆ ಪ್ರವೇಶಿಸುವಾಗ ವಾಹನಗಳು ಅಂಗಡಿಯ ಒಳಗೆ ನುಗ್ಗುವ ಸಾಧ್ಯತೆಯೂ ಇದೆ. ಅಧಿಕಾರಿಗಳು ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಅನಧಿಕೃತವಾಗಿ ಅಂಗಡಿ ತೆರೆಯಲಾಗಿದೆ. ಕಾಂಕ್ರೀಟ್ ಕಟ್ಟಡವೂ ನಿರ್ಮಾಣ ಆಗುತ್ತಿದ್ದು, ಅಪಾಯಕಾರಿಯಾಗಿದೆ. ಅಪಘಾತ ಸಂಭವಿಸುವ ಮೊದಲು ರಾಷ್ಟ್ರೀಯ ಹೆದ್ದಾರಿ ಇಲಾಖೆ, ಕಂದಾಯ ಇಲಾಖೆ, ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆಯವರು ಅನಧಿಕೃತ ಅಂಗಡಿ ತೆರವು ಮಾಡಬೇಕು. ಇಲ್ಲದೆ ಇದ್ದರೆ ಕಾನೂನು ಹೋರಾಟ ಮಾಡಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ಅಶೋಕ್ ಆಚಾರ್ಯ ತಿಳಿಸಿದ್ದಾರೆ.
ಸಾರ್ವಜನಿಕ ದೂರಿಗೆ ಸಂಬಂಧಿಸಿ ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡ ತೆರವು ಮಾಡುವಂತೆ ಶ್ರೀಧರ ಗೌಡ ಎಂಬುವರಿಗೆ 2 ಬಾರಿ ನೋಟಿಸು ನೀಡಿದ್ದೇವೆ. ಆದರೂ ಅವರು ಸ್ಪಂದಿಸಿಲ್ಲ. ಮುಂದೆ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಾಡಿ ಪಿಡಿಒಯಶವಂತ ಬೆಳ್ಚಡ ತಿಳಿಸಿದ್ದಾರೆ.