ಬಂಧನ
(ಪ್ರಾತಿನಿಧಿಕ ಚಿತ್ರ)
ಪುತ್ತೂರು (ದಕ್ಷಿಣ ಕನ್ನಡ): ಗೇಮಿಂಗ್ ಕಂಪನಿಯಲ್ಲಿ ಉದ್ಯೋಗಕ್ಕಾಗಿ ಥಾಯ್ಲೆಂಡ್‌ಗೆ ತೆರಳಿದ್ದ ಉಳ್ಳಾಲ ತಾಲ್ಲೂಕು ಸೋಮೇಶ್ವರ ಗ್ರಾಮದ ಉಚ್ಚಿಲದ ಯುವಕನನ್ನು, ಅಲ್ಲಿನ ಕೆಲವರು ಮಾನವ ಕಳ್ಳಸಾಗಣೆ ಮೂಲಕ ಮ್ಯಾನ್ಮಾರ್‌ಗೆ ಕರೆದೊಯ್ದಿದ್ದಾರೆ. ಮ್ಯಾನ್ಮಾರ್ ಸೇನೆಯು ಯುವಕನನ್ನು ಬಂಧಿಸಿದ್ದು, ಆತನನ್ನು ವಿದೇಶಕ್ಕೆ ಕಳುಹಿಸಿದ್ದ ಏಜೆನ್ಸಿ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಉಚ್ಚಿಲದ ಜುಬೇದಾ– ಹುಸೇನ್ ದಂಪತಿ ಪುತ್ರ ಹೇಮದ್ ರಜಾಕ್ ಮ್ಯಾನ್ಮಾರ್‌ನಲ್ಲಿ ಬಂಧನಕ್ಕೊಳಗಾದ ಯುವಕ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
‘ಪಿಯುಸಿ ವಿದ್ಯಾಭ್ಯಾಸ ಪೂರೈಸಿದ್ದ ಹೇಮದ್ ರಜಾಕ್ ಉದ್ಯೋಗ ಹುಡುಕುತ್ತಿದ್ದ. ಆತನಿಗೆ ಪುತ್ತೂರಿನ ಗೋಲ್ಡನ್ ಟ್ರಾವೆಲ್ಸ್ ಮಾಲೀಕ ಇಲ್ಯಾಸ್ ಮತ್ತು ಆತನ ಸಹವರ್ತಿ ಯಶ್ ಪರಿಚಯವಾಗಿತ್ತು. ಥಾಯ್ಲೆಂಡ್‌ನಲ್ಲಿ ಗೇಮಿಂಗ್ ಕಂಪನಿಯಲ್ಲಿ ಉದ್ಯೋಗವನ್ನು ಕೊಡಿಸುತ್ತೇವೆ ಎಂದು ಅವರಿಬ್ಬರು ರಜಾಕ್‌ಗೆ ಭರವಸೆ ನೀಡಿದ್ದರು. ಉದ್ಯೋಗ ವೀಸಾ ಮಾಡಿಸಿಕೊಡುವುದಾಗಿ ಹೇಳಿ ₹ 1.5 ಲಕ್ಷ ಪಡೆದಿದ್ದರು. ಯುವಕ 2025ರ ಅ.17ರಂದು ಥಾಯ್ಲೆಂಡ್‌ಗೆ ತೆರಳಲು ವಿಮಾನದ ಟಿಕೆಟ್‌ಗೆ ಇಲ್ಯಾಸ್ ವ್ಯವಸ್ಥೆ ಮಾಡಿದ್ದ. ‘ಥಾಯ್ಲೆಂಡ್ ತಲುಪಿದ ಬಳಿಕ ನನ್ನ ಪರಿಚಯದವರು ನಿನ್ನನ್ನು ಕಾರಿನಲ್ಲಿ ಗೇಮಿಂಗ್ ಕೆಲಸದ ಸ್ಥಳಕ್ಕೆ ಕರೆದೊಯ್ಯುತ್ತಾರೆ’ ಎಂದು ಭರವಸೆ ನೀಡಿದ್ದ. ರಜಾಕ್‌ನನ್ನು ಮಂಗಳೂರಿನಿಂದ ನವದೆಹಲಿಗೆ ಅಲ್ಲಿಂದ ಬ್ಯಾಂಕಾಕ್‌ಗೆ ವಿಮಾನದಲ್ಲಿ ಕಳುಹಿಸಿದ್ದ.’
‘ತಾಯಿ ಜುಬೇದಾ ಅವರಿಗೆ ಅ.18ರಂದು ರಾತ್ರಿ ಕರೆ ಮಾಡಿದ್ದ ರಜಾಕ್, ‘ನಾನು ಥಾಯ್ಲೆಂಡ್ ವಿಮಾನನಿಲ್ದಾಣದಲ್ಲಿ ಬಂದಿಳಿದ ಬಳಿಕ ಕೆಲವು ವ್ಯಕ್ತಿಗಳು ಕಾರಿನಲ್ಲಿ ನನ್ನನ್ನು ಬೇರೆ ಬೇರೆ ಕಡೆಗಳಿಗೆ ಕರೆದೊಯ್ದರು. ಈ ಬಗ್ಗೆ ವಿಚಾರಿಸಿದಾಗ ಸರಿಯಾಗಿ ಉತ್ತರಿಸಲಿಲ್ಲ. ಸರಿಯಾಗಿ ಆಹಾರ, ನೀರು ಕೂಡಾ ನೀಡಿರಲಿಲ್ಲ. ಕಾಡಿನಲ್ಲಿ ಸುತ್ತಾಡಿಸಿ ಯಾವುದೋ ಒಂದು ಪ್ರದೇಶಕ್ಕೆ ಕರೆತಂದರು. ನನಗೆ ಇಲ್ಲಿ ತೊಂದರೆಯಾಗುತ್ತಿದೆ’ ಎಂದು ತಿಳಿಸಿದ್ದ. ಕೆಲ ಸಮಯದ ನಂತರ ಬೇರೆ ಮೊಬೈಲ್ ನಂಬರ್‌ನಿಂದ ತಾಯಿಗೆ ಫೋನ್ ಕರೆ ಮಾಡಿದ್ದ ರಜಾಕ್, ‘ಥಾಯ್ಲೆಂಡ್‌ನಲ್ಲಿ ಕೆಲಸ ಕೊಡಿಸುವ ಬದಲು ನನ್ನನ್ನು ಮ್ಯಾನ್ಮಾರ್‌ಗೆ ಕಳುಹಿಸಿದ್ದಾರೆ. ಇಲ್ಲಿನ ಸೇನೆಯು ನನ್ನನ್ನು ಹಾಗೂ ಇತರ ಕೆಲವರನ್ನು ಬಂಧಿಸಿದೆ. ನನ್ನಲ್ಲಿದ್ದ ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಇಲ್ಯಾಸ್ ನನಗೆ ಮೋಸ ಮಾಡಿ ಇಲ್ಲಿಗೆ ಕಳುಹಿಸಿಕೊಟ್ಟಿದ್ದಾನೆ’ ಎಂದು ತಿಳಿಸಿದ್ದ.’
‘ಈ ಬಗ್ಗೆ ಜುಬೇದಾ ಅವರು ಪುತ್ತೂರಿನ ಇಲ್ಯಾಸ್‌ಗೆ ಅ. 29ರಂದು ಕರೆ ಮಾಡಿ ವಿಚಾರಿಸಿದಾಗ, ಆತ ಬೇಜವಾಬ್ದಾರಿಯಿಂದ ಉತ್ತರಿಸಿದ್ದ. ಪ್ರಕರಣಕ್ಕೂ ತನಗೂ ಸಂಬಂಧ ಇಲ್ಲ ಎಂದು ಕರೆಯನ್ನು ಕಡಿತಗೊಳಿಸಿದ್ದ. ಬಳಿಕ ಜುಬೇದಾ, ‘ಇಲ್ಯಾಸ್ ನಮ್ಮಿಂದ ₹ 1.50 ಲಕ್ಷ ಪಡೆದು ವಂಚಿಸಿದ್ದು, ನನ್ನ ಮಗ ಅಪಾಯಕ್ಕೆ ಸಿಲುಕುವಂತೆ ಮಾಡಿದ್ದಾನೆ ಎಂದು ದೂರು ನೀಡಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.