ADVERTISEMENT

ಹಬ್ಬದ ರೀತಿ ವಿಜೃಂಭಿಸಿದ ತಾಯ್ನುಡಿಯ ಪ್ರೀತಿ

ಕೇಶವ ಸ್ಮೃತಿ ಸಂವರ್ಧನ ಸಮಿತಿಯಿಂದ ಕನ್ನಡ ಶಾಲೆ ಮಕ್ಕಳ ಹಬ್ಬ; ವಸ್ತು ಪ್ರದರ್ಶನ, ಸಾಂಸ್ಕೃತಿಯ ವೈಭವ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2022, 14:23 IST
Last Updated 20 ನವೆಂಬರ್ 2022, 14:23 IST
ಕನ್ನಡ ಶಾಲಾ ಮಕ್ಕಳ ಹಬ್ಬದ ಪ್ರದರ್ಶನ ಮಳಿಗೆಯಲ್ಲಿ ಮಕ್ಕಳು ತಾಳೆಗರಿಗಳನ್ನು ವೀಕ್ಷಿಸಿದರು –ಪ್ರಜಾವಾಣಿ ಚಿತ್ರ
ಕನ್ನಡ ಶಾಲಾ ಮಕ್ಕಳ ಹಬ್ಬದ ಪ್ರದರ್ಶನ ಮಳಿಗೆಯಲ್ಲಿ ಮಕ್ಕಳು ತಾಳೆಗರಿಗಳನ್ನು ವೀಕ್ಷಿಸಿದರು –ಪ್ರಜಾವಾಣಿ ಚಿತ್ರ   

ಮಂಗಳೂರು: ನಾಡಿನ ಸಾಹಿತಿಗಳ ಪರಿಚಯ, ಲಿಪಿಯ ಬೆಳವಣಿಗೆ ಕುರಿತು ಮಾಹಿತಿ, ಕನ್ನಡದಲ್ಲಿ ವೈಜ್ಞಾನಿಕ ಬೆಳವಣಿಗೆಗಳ ಕುರಿತ ವಿವರಗಳನ್ನು ಒಳಗೊಂಡ ವಸ್ತುಪ್ರದರ್ಶನ, ಸಾಂಸ್ಕೃತಿಕ ವೈಭವ ಕಣ್ತುಂಬಿಕೊಂಡ ಮಕ್ಕಳುಭರವಸೆ ತುಂಬುವ ಹಿತನುಡಿಗಳನ್ನು ಕೇಳಿ ಸಂವಾದದಲ್ಲಿ ಪಾಲ್ಗೊಂಡು ಖುಷಿಪಟ್ಟರು.

ಕನ್ನಡ ಶಾಲೆಗಳ ವಿದ್ಯಾರ್ಥಿಗಳಲ್ಲಿ ಭರವಸೆ ತುಂಬುವುದಕ್ಕಾಗಿ ಕೇಶವ ಸ್ಮೃತಿ ಸಂವರ್ಧನ ಸಮಿತಿನಗರದ ಸಂಘ ನಿಕೇತನದಲ್ಲಿ ಶನಿವಾರದಿಂದ ಎರಡು ದಿನ ಆಯೋಜಿಸಿರುವ ಕನ್ನಡ ಶಾಲಾ ಮಕ್ಕಳ ಹಬ್ಬದಲ್ಲಿ ತಾಯ್ನುಡಿನ ಬಗ್ಗೆ ಮಕ್ಕಳ ಪ್ರೀತಿ ಹಬ್ಬದ ರೀತಿಯಲ್ಲಿ ವಿಜೃಂಭಿಸಿತು. ಅವರ ಖುಷಿಯಲ್ಲಿ ಶಿಕ್ಷಕರು ಕೂಡ ಪಾಲ್ಗೊಂಡರು.

ಕೊಠಡಿ, ಶಿಕ್ಷಕರ ಕೊರತೆ ನೀಗಿಸಲು ಯತ್ನ: ಕಾರ್ಯಕ್ರಮ ಉದ್ಘಾಟಿಸಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಶಿಕ್ಷಕರ ಮತ್ತು ಕಟ್ಟಡಗಳ ಕೊರತೆ ಕನ್ನಡ ಶಾಲೆಗಳ ದೊಡ್ಡ ಸಮಸ್ಯೆಯಾಗಿದ್ದು ಅದನ್ನು ನೀಗಿಸಲು ಪ್ರಯತ್ನ ಆಗುತ್ತಿದೆ. 13,363 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆದಿದ್ದು 7061 ವಿವೇಕ ಕೊಠಡಿಗಳ ನಿರ್ಮಾಣಕ್ಕೆ ಚಾಲನೆ ಸಿಕ್ಕಿದೆ ಎಂದು ತಿಳಿಸಿದರು.

ADVERTISEMENT

ಕನ್ನಡದಲ್ಲಿ ಕಲಿಯಲು ಮಕ್ಕಳಿಗೂ ಕಲಿಸಲು ಪೋಷಕರಿಗೂ ತಕರಾರು ಇಲ್ಲ. ಆದರೆ ಕನ್ನಡ ಮತ್ತು ಕನ್ನಡ ಶಾಲೆಗಳ ಕುರಿತ ಸಮಾಜದ ಮಾನಸಿಕತೆ ತೊಲಗಬೇಕಿದೆ. ಆ ಪ್ರಯತ್ನ ಈಗ ನಡೆಯುತ್ತಿದೆ. ಸೋಲಿನ ಇತಿಹಾಸವನ್ನು ಕಲಿಸುವ ಶಿಕ್ಷಣದಲ್ಲಿ ಪರಿವರ್ತನೆ ತರಲು ಪ್ರಯತ್ನ ನಡೆಯುತ್ತಿದ್ದು ಮಾದರಿ ಶಾಲೆಗಳ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಮೆಕಾಲೆಯ ಶಿಕ್ಷಣ ಪದ್ಧತಿ ತೊಲಗಿ ಮಾತೃಭಾಷೆಯಲ್ಲಿ ಶಿಕ್ಷಣ ಕೊಡಲು ಪ್ರಧಾನಿ ನರೇಂದ್ರ ಮೋದಿಯವರು ಕನಸು ಕಂಡಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದರು.

ಸ್ಪರ್ಧಾತ್ಮಕ ಪರೀಕ್ಷೆಗೆ ಭಾಷೆ, ಪ್ರದೇಶ ಅಡ್ಡಿಯಾಗುವುದಿಲ್ಲ. ಪೋಷಕರು ಮತ್ತು ಶಿಕ್ಷಕರು ಇಂಗ್ಲಿಷ್ ಶೈಲಿಗೆ ಮಾರುಹೋಗದೆ ಕನ್ನಡದ ಸತ್ವ ತಿಳಿಸಲು ಮುಂದಾಗಬೇಕು ಎಂದು ಐಎಎಸ್ ಅಧಿಕಾರಿ ನಂದಿನಿ ಕೆ.ಆರ್ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಜೇಶ್ ಜೋಶಿ, ಕೇಶವ ಸ್ಮೃತಿ ಸಂವರ್ಧನ ಸಮಿತಿ ಅಧ್ಯಕ್ಷ ವಾಮನ ಶೆಣೈ ಹಾಗೂ ಕನ್ನಡ ಶಾಲಾ ಮಕ್ಕಳ ಹಬ್ಬದ ಸ್ವಾಗತ ಸಮಿತಿ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಶಕ್ತಿ ಶಿಕ್ಷಣ ಸಂಸ್ಥೆಯ ಕೆ.ಸಿ.ನಾಯಕ್ ಇದ್ದರು. ಮಂಗಳೂರು ವಿವಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಧನಂಜಯ ಕುಂಬ್ಳೆ ಆಶಯ ಭಾಷಣ ಮಾಡಿದರು.

ಖಾಸಗಿಯಲ್ಲಿ ಕನ್ನಡದ ಚಿಂತನೆ ಮೂಡಲಿ: ಮೋಹನ ಆಳ್ವ

ಕನ್ನಡ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸುವ ವಿಷಯದಲ್ಲಿ ಸಮಾಜ ಸೋತಿದೆ. ಈ ಹಿನ್ನೆಲೆಯಲ್ಲಿ ಖಾಸಗಿಯವರು ಕನ್ನಡ ಶಾಲೆ ಆರಂಭಿಸುವ ಚಿಂತನೆ ಮಾಡಬೇಕಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಮೋಹನ ಆಳ್ವ ಸಲಹೆ ನೀಡಿದರು.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಕನ್ನಡ ಉಳಿಸಲು ಕೇವಲ ಸರ್ಕಾರದ ಮೇಲೆ ಭಾರ ಹಾಕುವುದು ಸರಿಯಲ್ಲ ಎಂದರು.

ಆಂಗ್ಲರು ಅನೇಕ ದೇಶಗಳ ಮೇಲೆ ಆಕ್ರಮಣ ಮಾಡಿದ್ದಾರೆ. ಆದರೆ ಭಾರತದಲ್ಲಿ ಇನ್ನೂ ಇಂಗ್ಲಿಷ್ ಪ್ರಭಾವ ಉಳಿದುಕೊಂಡಿದೆ. ಜಪಾನ್‌ನಲ್ಲಿ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣವನ್ನು ಸ್ಥಳೀಯ ಭಾಷೆಯಲ್ಲಿ‌ ಕೊಡಲಾಗುತ್ತಿದೆ. ನಮ್ಮಲ್ಲಿ ಕನ್ನಡ ಸೋತಿದ್ದರೆ ಅದು ಶ್ರೀಸಾಮಾನ್ಯನ, ಹಳ್ಳಿ ಮತ್ತು ಸಂಸ್ಕೃತಿಯ ಸೋಲು. ಅದನ್ನು ಮೀರಿ ನಿಲ್ಲಲು ಪ್ರಯತ್ನಿಸಬೇಕು ಎಂದು ಆಳ್ವರು ಹೇಳಿದರು.

ಸರ್ಕಾರ ಬಯಸಿದರೆ ಆಳ್ವಾಸ್ ಸಂಸ್ಥೆಯ ಕನ್ನಡ ಶಾಲೆಯಲ್ಲಿ ಸರ್ಕಾರವು ಕಳುಹಿಸುವ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಸಿದ್ಧ ಎಂದರು.

ಜೀವನವೇ ಶಿಕ್ಷಣ; ಪರೀಕ್ಷೆಯೊಂದು ಹಬ್ಬ

ಮಂಗಳೂರು: ಜೀವನಕ್ಕಾಗಿ ಶಿಕ್ಷಣವನ್ನು ಪಡೆದುಕೊಳ್ಳಬೇಕು ಅಥವಾ ಶಿಕ್ಷಣವನ್ನೇ ಜೀವನವನ್ನಾಗಿ ಮಾಡಿಕೊಳ್ಳಬೇಕು. ಪರೀಕ್ಷೆಗೆ ಹೆದರಬಾರದು. ಅದು ಶಿಕ್ಷಣದ ಹಾದಿಯಲ್ಲಿ ಸಿಗುವ ಹಬ್ಬವಷ್ಟೆ ಎಂದು ತಿಳಿದುಕೊಳ್ಳಬೇಕು...

ಕನ್ನಡ ಮಾಧ್ಯಮದಲ್ಲಿ ಓದಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ ಮೊದಲ ರ‍್ಯಾಂಕ್‌ ಪಡೆದು ಐಎಎಸ್ ಅಧಿಕಾರಿಯಾಗಿರುವ ನಂದಿನಿ ಅವರು ಆಡಿದ ಮಾತು ಇದು.

ಕನ್ನಡ ಶಾಲಾ ಮಕ್ಕಳ ಹಬ್ಬದ ಅಂಗವಾಗಿ ನಡೆದ ಸಂವಾದದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದ ಅವರು ಹಿಡಿದ ಕೆಲಸ ಮುಗಿಯುವ ವರೆಗೆ ಹಠ ಬಿಡಬಾರದು, ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ಮೂಲಕ ಒತ್ತಡ ನಿವಾರಣೆಗೆ ಮುಂದಾಗಬೇಕು ಎಂದರು.

ಯುಪಿಎಸ್‌ಸಿಯಂಥ ಪರೀಕ್ಷೆಗೆ ಮಾನಸಿಕ ತಯಾರಿ ಮುಖ್ಯ. ಯುಪಿಎಸ್‌ಸಿ ಜೊತೆಯಲ್ಲಿ, ಮತ್ತೊಂದು ವಿಷಯ ಕೂಡ ಗಮನದಲ್ಲಿ ಇರಿಸಿಕೊಳ್ಳಬೇಕು. ಯುಪಿಎಸ್‌ಸಿ ಪ್ಲ್ಯಾನ್ ‘ಎ’ ಆಗಿದ್ದರೆ ಪ್ಲ್ಯಾನ್ ‘ಬಿ’ಗೆ ಮತ್ತೊಂದು ವಿಷಯದ ಆಯ್ಕೆ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಪಾಲಕರ ಜೊತೆ ಸಂವಾದ ನಡೆಸಿದ ಪಠ್ಯಪುಸ್ತಕ ಪುನಾರಚನೆ ಸಮಿತಿಯ ಮಾಜಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಬಂಧಿಸಿ ಪದವಿ ವಿಭಾಗದಲ್ಲಿ ಸ್ವಲ್ಪ ಗೊಂದಲ ಇದೆ. ಅದರ ದೂರಗಾಮಿ ಫಲದ ಬಗ್ಗೆ ಅಧ್ಯಯನ ನಡೆಯಬೇಕು ಎಂದರು.

ಶಿಕ್ಷಕರ ಜೊತೆ ಸಂವಾದ ನಡೆಸಿದ ಸಚಿವ ಬಿ.ಸಿ.ನಾಗೇಶ್ ಕರ್ನಾಟಕ ಪಬ್ಲಿಕ್ ಶಾಲೆಗಳಿಂದ ಕನ್ನಡ ಶಾಲೆಗಳಿಗೆ ಕುತ್ತು ಬರುವುದಿಲ್ಲ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.