ಮಂಗಳೂರು: ಕರ್ಣಾಟಕ ಬ್ಯಾಂಕ್ 2024–25ನೇ ಸಾಲಿನ ಪೂರ್ಣ ಆರ್ಥಿಕ ವರ್ಷದಲ್ಲಿ ಒಟ್ಟು ₹1,272.37 ಕೋಟಿ ನಿವ್ವಳ ಲಾಭ ಗಳಿಸಿದೆ.
ಈ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ₹1,82,766.21 ಕೋಟಿ ವ್ಯವಹಾರ ನಡೆಸಿದ್ದು, ಸಾರ್ವಕಾಲಿಕ ಗರಿಷ್ಠವಾಗಿದೆ.
ಬುಧವಾರ ಇಲ್ಲಿ ನಡೆದ ನಿರ್ದೇಶಕರ ಮಂಡಳಿ ಸಭೆಯಲ್ಲಿ ಹಣಕಾಸು ವರದಿಗೆ ಅನುಮೋದಿಸಲಾಯಿತು. ಪ್ರತಿ ಷೇರಿಗೆ ₹5 ಲಾಭಾಂಶ ವಿತರಿಸಲು ಒಪ್ಪಿಗೆ ನೀಡಲಾಯಿತು.
2024–25ನೇ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಬ್ಯಾಂಕ್ ₹252.37 ಕೋಟಿ ನಿವ್ವಳ ಲಾಭ ಗಳಿಸಿದೆ. 2023–24ನೇ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹274.24 ಕೋಟಿ ಲಾಭ ಗಳಿಸಿತ್ತು.
ಪೂರ್ಣ ಆರ್ಥಿಕ ವರ್ಷದಲ್ಲಿ ₹1,272.37 ಕೋಟಿ ಲಾಭ ಗಳಿಸಿದೆ. 2023–24ರಲ್ಲಿ ₹1,306.28 ಕೋಟಿ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಶೇ 2.60ರಷ್ಟು ಇಳಿಕೆಯಾಗಿದೆ.
2024ರ ಏಪ್ರಿಲ್‌ನಿಂದ ಆರ್‌ಬಿಐ ನಿರ್ದೇಶನದ ಪ್ರಕಾರ ಹೂಡಿಕೆಯ ಲೆಕ್ಕಪತ್ರ ನೀತಿಯಲ್ಲಿ ಬದಲಾವಣೆ ಆಗಿರುವ ಕಾರಣಕ್ಕೆ ಹಿಂದಿನ ಅಂಕಿ–ಅಂಶಗಳನ್ನು ಹೋಲಿಕೆ ಮಾಡಲಾಗದು. ಹಿಂದಿನ ನೀತಿಯಂತೆ ಲೆಕ್ಕ ಹಾಕಿದರೆ ಬ್ಯಾಂಕ್‌ನ ಲಾಭ ₹147.51 ಕೋಟಿ ಹೆಚ್ಚಳವಾಗುತ್ತಿತ್ತು ಎಂದು ಬ್ಯಾಂಕ್ ಹೇಳಿದೆ.
ಬ್ಯಾಂಕ್‌ನ ಒಟ್ಟು ಠೇವಣಿ ₹1,04,807.49 ಕೋಟಿ. ಒಟ್ಟು ಮುಂಗಡ ₹77,958.72 ಕೋಟಿ ಆಗಿದೆ. ಶೇ 6.79ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ತಿಳಿಸಿದೆ.
ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶ್ರೀಕೃಷ್ಣನ್ ಎಚ್. ಮಾತನಾಡಿ, ‘ ಬ್ಯಾಂಕ್ ಚಿಲ್ಲರೆ ವ್ಯಾಪಾರ, ನೇರ ಕಾರ್ಪೊರೇಟ್ ಸಾಲ ವ್ಯವಹಾರ ಅಭಿವೃದ್ಧಿಗೆ ಗಮನ ಕೇಂದ್ರೀಕರಿಸಿದೆ. ಫ್ರಾಂಚೈಸಿ ಹೊಣೆಗಾರಿಕೆ, ಡಿಜಿಟಲ್ ವ್ಯವಹಾರದಲ್ಲಿ ಉತ್ತಮ ಸ್ಥಾನದಲ್ಲಿದೆ’ ಎಂದರು.
‘ಚಿಲ್ಲರೆ ವ್ಯವಹಾರವು ಬ್ಯಾಂಕ್ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ’ ಎಂದು ಕಾರ್ಯ ನಿರ್ವಾಹಕ ನಿರ್ದೇಶಕ ಶೇಖರ್ ರಾವ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.