ADVERTISEMENT

Kukke Subramanya | ಸ್ನಾನಘಟ್ಟ ಮುಳುಗಡೆ, ಜಳಕದ ಕಟ್ಟೆ ಜಲಾವೃತ

ಸುಬ್ರಹ್ಮಣ್ಯ: ತುಂಬಿ ಹರಿದ ಕುಮಾರಧಾರ

​ಪ್ರಜಾವಾಣಿ ವಾರ್ತೆ
Published 27 ಮೇ 2025, 4:07 IST
Last Updated 27 ಮೇ 2025, 4:07 IST
ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸಾನಘಟ್ಟ ಸೋಮವಾರ ಮುಳುಗಡೆಯಾಯಿತು
ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸಾನಘಟ್ಟ ಸೋಮವಾರ ಮುಳುಗಡೆಯಾಯಿತು   

ಸುಬ್ರಹ್ಮಣ್ಯ: ಕುಮಾರಪರ್ವತ ಭಾಗಗಳಲ್ಲಿ ಮೂರು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು,  ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟವು ಸೋಮವಾರ ಈ ವರ್ಷ ಮೊದಲ ಸಲ ಮುಳುಗಡೆಯಾಯಿತು. ನದಿಯ ಪ್ರವಾಹದಿಂದ ನದಿ ತಟದಲ್ಲಿರುವ ಶ್ರೀದೇವರ ಜಳಕದ ಕಟ್ಟೆಯೂ ಜಲಾವೃತಗೊಂಡಿತು. 

ಪುಣ್ಯ ನದಿ ಕುಮಾರಧಾರವು ತುಂಬಿ ಹರಿದಿದ್ದರಿಂದ ಭಕ್ತರು ನದಿಗಿಳಿಯಬಾರದು ಎಂದು ದೇವಸ್ಥಾನದ ಆಡಳಿತ ಮಂಡಳಿಯವರು ಮುನ್ನೆಚ್ಚರಿಕೆ ನೀಡಿದರು. ಭಕ್ತರು ನದಿ ನೀರನ್ನು ತಲೆಗೆ ಪ್ರೋಕ್ಷಣೆ ಮಾಡಲು ಮಾತ್ರ ಅವಕಾಶ ನೀಡಲಾಯಿತು. ನದಿ ದಡದಲ್ಲೇ ತೀರ್ಥಸ್ನಾನ ಮಾಡಿದರು. ಕೆಲವರು   ಪಾತ್ರೆಗಳ ಸಹಾಯದಿಂದ ಪುಣ್ಯಸ್ನಾನ ಪೂರೈಸಿದರು. ಇಲ್ಲಿ ದಿನದ 24 ಗಂಟೆಯೂ ಕಾವಲು ಸಿಬ್ಬಂದಿಯನ್ನು  ನಿಯೋಜನೆ ಮಾಡಲಾಗಿದೆ. ಸ್ನಾನಘಟ್ಟದ ಬಳಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಭಕ್ತರು ನದಿಗೆ ಇಳಿಯದಂತೆ ನಿರ್ಬಂಧಿಸಿದರು. 

ಪ್ರವಾಹದಿಂದ ಕುಮಾರಧಾರ ಕಿಂಡಿ ಆಣೆಕಟ್ಟು ಸಂಪೂರ್ಣ ಮುಳುಗಡೆಯಾಗಿದೆ. ನದಿ ತಟದಲ್ಲಿನ ಶೌಚಾಲಯ, ಡ್ರೆಸ್ಸಿಂಗ್ ಕೊಠಡಿಗಳು ಜಲಾವೃತಗೊಂಡಿದೆ.ಕುಮಾರಧಾರ ಉಪನದಿ ದರ್ಪಣತೀರ್ಥ ಕೂಡ ಮಳೆನೀರಿನಿಂದ ತುಂಬಿ ಹರಿಯುತಿದೆ.

ADVERTISEMENT

 ಗ್ರಾಮೀಣ ಭಾಗಳಾದ ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರು, ಬಾಳುಗೋಡು,ಗುತ್ತಿಗಾರು, ಪಂಜ, ಅಲೆಕ್ಕಾಡಿ, ನಿಂತಿಕಲ್ಲು, ನೆಟ್ಟಣ, ಬಿಳಿನೆಲೆ ಭಾಗದಲ್ಲಿ ಭಾರೀ ಮಳೆಯಾಗಿದೆ.  ಈ ಭಾಗದ ನದಿ, ತೊರೆಗಳು ತುಂಬಿ ಹರಿದಿವೆ. ಸುಬ್ರಹ್ಮಣ್ಯಕ್ಕೆ ವಿಪತ್ತು ನಿರ್ವಹಣೆ ಪಡೆ ಆಗಮಿಸಿದ್ದು, ತೆಪ್ಪ ಸೇರಿದಂತೆ ಇತರ ಪರಿಕರಗಳೊಂದಿಗೆ ಸನ್ನದ್ಧವಾಗಿದೆ ಎಂದು ತಿಳಿದು ಬಂದಿದೆ. 

ಕೃಷಿ ತೋಟಗಳಿಗೆ ನೀರು ನುಗ್ಗಿ ಫಲವಸ್ತುಗಳು ಕೊಚ್ಚಿ ಹೋಗಿವೆ. ಗಾಳಿ ಮಳೆಗೆ  ಅಡಿಕೆ, ತೆಂಗು ಬಾಳೆ ಗಿಡಗಳು ಧರಾಶಾಹಿಯಾಗಿದೆ. ಕೃಷಿಕರು ಭಾರಿ ನಷ್ಟ ಅನುಭವಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.