ADVERTISEMENT

ಹೊರ ಜಿಲ್ಲೆಯ ನಾಯಕರು ಶಾಂತಿ ಕದಡುವ ಹೇಳಿಕೆ‌ ನೀಡಬೇಡಿ: ಖಾದರ್ 

​ಪ್ರಜಾವಾಣಿ ವಾರ್ತೆ
Published 29 ಜುಲೈ 2022, 7:56 IST
Last Updated 29 ಜುಲೈ 2022, 7:56 IST
   

ಮಂಗಳೂರು: ಹೊರ ಜಿಲ್ಲೆಗಳ ನಾಯಕರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಕಾಪಾಡುವಂತಹ ಹೇಳಿಕೆಗಳನ್ನು ನೀಡಿ. ಪ್ರಚೋದಿಸುವ ಹೇಳಿಕೆಗಳನ್ನು ನೀಡಿ ಇಲ್ಲಿನ ಶಾಂತಿ ಕದಡಬೇಡಿ ಎಂದು ವಿಧಾನ ಸಭೆ ವಿರೋಧ ಪಕ್ಷದ ಉಪ ನಾಯಕ ಯು.ಟಿ. ಖಾದರ್ ಹೇಳಿದರು‌.

ಶುಕ್ರವಾರ ಇಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು,
ನಾಯಕರು ಧರ್ಮದ ಬಗ್ಗೆ ದ್ವೇಷ ಉಂಟಾಗುವ ಹೇಳಿಕೆ ನೀಡಬೇಡಿ, ಆಲೋಚನೆ ಮಾಡಿ ಮಾತನಾಡಿ ಎಂದರು.

ಕಳೆದ ಹತ್ತು ದಿನಗಳಿಂದ ನಮ್ಮ ಜಿಲ್ಲೆಯಲ್ಲಿ ನಡೆದ ವಿವಿಧ ಘಟನೆಯಲ್ಲಿ ಮೂರು ಯುವಕರ ಹತ್ಯೆ ನಡೆದಿದೆ. ಸರಣಿ ಕೊಲೆಗಳಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಕೆಟ್ಟ ಹೆಸರು ಬರುತ್ತದೆ. ಸರ್ಕಾರ ಹಾಗೂ ಪೊಲೀಸ್ ಇಲಾಖೆ ಈ ಮೂರು ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ವಿಶೇಷ ತನಿಖೆ ನಡೆಸಬೇಕು. ನೈಜ ಆರೋಪಿಗಳು ಯಾರೇ ಇರಲಿ, ಸಂಘಟನೆ ಇರಲಿ ಪೊಲೀಸ್ ಇಲಾಖೆ ಮಟ್ಟ ಹಾಕಬೇಕು ಎಂದು ಆಗ್ರಹಿಸಿದರು.

ADVERTISEMENT

ಸಮಾಜ ಶಾಂತಿ ನೆಲೆಸಲು ಎಲ್ಲರೂ ಸಹಕಾರ ನೀಡಬೇಕು. ರಾಜ್ಯದ ಮುಖ್ಯಮಂತ್ರಿ ಯಾಗಿ ಈ ರೀತಿಯ ಘಟನೆ ಆದಾಗ ಒಂದು ಕಡೆ ಹೋಗಿ ಒಬ್ಬರಿಗೆ ಪರಿಹಾರ ಕೊಟ್ಟು ಇನ್ನೊಬ್ಬರನ್ನು ನಿರ್ಲಕ್ಷಿಸಿದ್ದು ನಾಚಿಕೆಯ ಸಂಗತಿಯಾಗಿದೆ. ಧರ್ಮ ಯಾವುದೇ ಇರಲಿ, ಮಗನನ್ನು ಕಳೆದುಕೊಂಡ ಪ್ರತಿ ತಾಯಿಯ ನೋವು ಕೂಡ ಒಂದೇ ಆಗಿರುತ್ತದೆ. ರಾಜ್ಯದ ಮುಖ್ಯಮಂತ್ರಿ ಯಾಗಿ ಪರಿಹಾರ ಘೋಷಿಸುವಾಗ ಹೇಗೆ ತಾರತಮ್ಯ ಮಾಡಲು ಸಾಧ್ಯ ? ಪ್ರಜಾಪ್ರಭುತ್ವದ ಸರ್ವರನ್ನೂ ಸಮಾನವಾಗಿ ನೋಡಬೇಕು. ಪರಿಹಾರದ ಹಣವನ್ನು ಸಿಎಂ ಕಿಸೆಯಿಂದ ಕೊಡುವುದಿಲ್ಲ. ಜನರ ತೆರಿಗೆಯಿಂದ ಬರುವ ಹಣವನ್ನು ನೀಡುವಾಗ ಪಕ್ಷಪಾತ ಮಾಡಬಾರದು ಎಂದು ಹೇಳಿದರು.

ಇವುಗಳನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.