ADVERTISEMENT

ಮಂಗಳೂರು: ಮದ್ಯ ಮಾರಾಟ ಇಂದಿನಿಂದ

41 ದಿನಗಳ ನಿಷೇಧ ಅಂತ್ಯ: ಜಿಲ್ಲೆಯ 174 ಮಳಿಗೆಗಳಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 3 ಮೇ 2020, 16:53 IST
Last Updated 3 ಮೇ 2020, 16:53 IST
ಮಂಗಳೂರಿನಲ್ಲಿ ಮದ್ಯದಂಗಡಿ ಮುಂದೆ ಸಿದ್ಧತೆ ಮಾಡಿಕೊಳ್ಳುತ್ತಿರುವುದು                        –ಪ್ರಜಾವಾಣಿ ಚಿತ್ರ
ಮಂಗಳೂರಿನಲ್ಲಿ ಮದ್ಯದಂಗಡಿ ಮುಂದೆ ಸಿದ್ಧತೆ ಮಾಡಿಕೊಳ್ಳುತ್ತಿರುವುದು                        –ಪ್ರಜಾವಾಣಿ ಚಿತ್ರ   

ಮಂಗಳೂರು: ಮದ್ಯ ಮಾರಾಟಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಷರತ್ತು ಬದ್ಧ ಅವಕಾಶ ನೀಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ 152 ಸಿಎಲ್‌–2( ಚಿಲ್ಲರೆ ಮದ್ಯದಂಗಡಿಗಳು– ವೈನ್‌ಶಾಪ್‌ ಹಾಗೂ ಎಂ.ಆರ್.ಪಿ ಮದ್ಯದಂಗಡಿ) ಮತ್ತು 22 ಸಿಎಲ್‌–11ಸಿ (ಎಂಎಸ್ಐಎಲ್) ಸೇರಿದಂತೆ ಒಟ್ಟು 174 ಮದ್ಯದಂಗಡಿಯಲ್ಲಿ ಇಂದಿನಿಂದ ಮದ್ಯ ದೊರೆಯಲಿದೆ.

ಜಿಲ್ಲೆಯ ಏಳು ನಿರ್ಬಂಧಿತ (ಕಂಟೈನ್‌ಮೆಂಟ್) ವಲಯ ಹೊರತುಪಡಿಸಿ ಉಳಿದೆಡೆ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಈಗಾಗಲೇ ಮದ್ಯದಂಗಡಿಗಳ ಮುಂದೆ ಬ್ಯಾರಿಕೇಡ್ ಅಳವಡಿಕೆ, ಆರು ಅಡಿ ಅಂತರಕ್ಕೆ ಮಾರ್ಕಿಂಗ್ ಪ್ರಕ್ರಿಯೆಗಳು ನಡೆಯುತ್ತಿವೆ.

‘ಮದ್ಯದಂಗಡಿಗಳು ಕರ್ನಾಟಕ ಪಾನೀಯ ನಿಗಮ (ಕೆಎಸ್‌ಬಿಸಿಎಲ್)ದ ಮೂಲಕ ಮದ್ಯ ಖರೀದಿ ಮಾಡುತ್ತಿದ್ದು, ಜಿಲ್ಲೆಯಲ್ಲಿ ಅಂದಾಜು ಆರು ಸಾವಿರ ಬಾಕ್ಸ್‌ ಮಾರಾಟವಿದ್ದರೆ, ವಾರಂತ್ಯದಲ್ಲಿ ಸುಮಾರು 14 ಸಾವಿರ ಬಾಕ್ಸ್ ಮಾರಾಟವಾಗುತ್ತಿತ್ತು’ ಎಂದು ಅಬಕಾರಿ ಇಲಾಖೆಯ ಉಪ ಆಯುಕ್ತೆ ಶೈಲಜಾ ಕೋಟೆ ತಿಳಿಸಿದರು.

ADVERTISEMENT

41 ದಿನಗಳಿಂದ ಮದ್ಯ ಮಾರಾಟ ಬಂದ್ ಆಗಿದ್ದು, ಮದ್ಯಪ್ರಿಯರಲ್ಲಿ ನಿರೀಕ್ಷೆ ಹೆಚ್ಚಿದೆ. ಮೊದಲ ಎರಡು ದಿನ ಬೇಡಿಕೆ ಇದ್ದು, ಆ ಬಳಿಕ ಕುಸಿಯಬಹುದು ಎಂದು ಅಂದಾಜಿಸಲಾಗಿದೆ. ಬಜೆಟ್‌ನಲ್ಲಿ ಮದ್ಯದ ದರ ಶೇಕಡ 6ರಷ್ಟು ಹೆಚ್ಚಳ ಮಾಡಲಾಗಿದ್ದು, ಸೋಮವಾರದಿಂದಲೇ ಜಾರಿಯಾಗಲಿದೆ.

ಬಿಯರ್ ಬೇಡಿಕೆ

ಕರಾವಳಿಯಲ್ಲಿ ಫೆಬ್ರುವರಿಯಿಂದ ಮೇ ತನಕ ಬಿಯರ್‌ಗೆ ಹೆಚ್ಚಿನ ಬೇಡಿಕೆ ಇದ್ದು, ಬಿಸಿಲ ಝಳಕ್ಕಾಗಿ ಬಿಯರ್ ಸೇವಿಸುವವರ ಸಂಖ್ಯೆ ಹೆಚ್ಚಿದೆ. ಜನವರಿಯಲ್ಲಿ ತಯಾರಾದ ಬಿಯರ್‌ಗಳು ಜೂನ್ ತಿಂಗಳೊಳಗೆ ಮಾರಾಟಗೊಳ್ಳಬೇಕು. ಹೀಗಾಗಿ, ಮಾರಾಟಕ್ಕೆ ಅವಕಾಶ ನೀಡಿರುವುದು ಮದ್ಯ ವ್ಯಾಪಾರಿಗಳು ನಿಟ್ಟುಸಿರು ಬಿಡುವಂತೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.