ADVERTISEMENT

ಮಂಗಳೂರು | ಮಹಾಶಿವರಾತ್ರಿ: ಶಿವನ ನೆನೆಯುತ ಧನ್ಯರಾದ ಭಕ್ತರು

ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ವೈವಿಧ್ಯ; ಮಹಾರುದ್ರಾಭಿಷೇಕದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 2:56 IST
Last Updated 16 ಫೆಬ್ರುವರಿ 2026, 2:56 IST
<div class="paragraphs"><p>ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಶಿವಲಿಂಗಕ್ಕೆ ಭಕ್ತರು ಅಭಿಷೇಕ ಮಾಡಿದರು </p></div>

ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಶಿವಲಿಂಗಕ್ಕೆ ಭಕ್ತರು ಅಭಿಷೇಕ ಮಾಡಿದರು

   

ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್

ಮಂಗಳೂರು: ನಮ:ಶಿವಾಯ ಮಂತ್ರಗಳ ಪಠಣದೊಂದಿಗೆ ಹರನ ಸ್ಮರಣೆ ಮಾಡಿದ ಭಕ್ತರು ಭಾನುವಾರ ಶಿವರಾತ್ರಿಯನ್ನು ಭಕ್ತಿಭಾವದಿಂದ ಆಚರಿಸಿದರು. ನಗರದ ಕದ್ರಿ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನ ಮತ್ತು ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಸೇರಿದಂತೆ ನಗರ ಮತ್ತು ಜಿಲ್ಲೆಯ ಪ್ರಮುಖ ಶಿವ ದೇವಾಲಯಗಳಲ್ಲಿ ದಿನವಿಡೀ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ವೈವಿಧ್ಯ ಮುದ ನೀಡಿತು. 

ADVERTISEMENT

ಶಿವಶಿವ ಶಿವ ಶಿವ ಶಿವಾಯ ನಮ:ಓಂ; ಹರ ಹರ ಹರ ಹರ ಹರಾಯ ನಮ:ಓಂ ಎಂಬ ಭಜನೆ ಸೇರಿದಂತೆ ಭಕ್ತಿಗೀತೆಗಳು ಬಹುತೇಕ ಎಲ್ಲ ದೇವಸ್ಥಾಮಗಳಲ್ಲೂ ಮೊಳಗಿದವು. ಕೆಲವು ಕಡೆಗಳಲ್ಲಿ ಭಜನಾ ತಂಡಗಳು ಬೆಳಿಗ್ಗೆಯಿಂದಲೇ ಗಾನ ಸೇವೆಯನ್ನು ಸಲ್ಲಿಸಿದವು. ಕಾರಿಂಜ, ಕುದ್ರೋಳಿ, ಉಪ್ಪಿನಂಗಡಿ ಉಳೆಪಾಡಿ ಉಮಾಮಹೇಶ್ವರ ದೇವಸ್ಥಾನ ಮುಂತಾಗಿ ಅನೇಕ ಕಡೆಗಳಲ್ಲಿ ಜಾತ್ರೆಯೂ ಆರಂಭಗೊಂಡಿರುವುದರಿಂದ ಶಿವರಾತ್ರಿ ವೈಭವ ಹೆಚ್ಚಿತು. 

ತೋರಣಗಳಿಂದ ಸಿಂಗರಿಸಿ, ವಿದ್ಯುತ್‌ ದೀಪಗಳಿಂದ ಅಲಂಕರಿಸಿದ್ದ ದೇವಾಲಯಗಳಲ್ಲಿ ದಿನಿವಿಡೀ ಶಿವನಾಮ ಸ್ಮರಣೆ ಮೊಳಗಿತು. ಕದ್ರಿಯಲ್ಲಿ ದರ್ಶನಕ್ಕಾಗಿ ಸಾಲುಗಟ್ಟಿ ಭಕ್ತರು ನಿಂತಿದ್ದರು. ಪುಣ್ಯಸ್ನಾನ ಮತ್ತು ಅರ್ಚನೆಯ ಮೂಲಕ ಶಿವರಾತ್ರಿಯನ್ನು ಸ್ಮರಣೀಯವಾಗಿಸಿದರು. ಶಿವಲಿಂಗಕ್ಕೆ ಅಭಿಷೇಕ ಮಾಡಿದ ನಂತರ ಶಿವನಿಗೆ ಬಿಲ್ವಾರ್ಚನೆಯನ್ನೂ ಮಾಡಿದರು. ಸಂಜೆ ವೇಳೆ ದೇವಾಲಯದ ಆವರಣದಲ್ಲಿ ಜನಜಾತ್ರೆಯಾಯಿತು. ರಾತ್ರಿ 9 ಗಂಟೆಗೆ ಜಾಮ ಪೂಜೆಯ ನಂತರ ರಂಗ ಪೂಜೆ, ಬೆಳ್ಳಿರಥ ಉತ್ಸವ ನಡೆಯಿತು.

ಕುದ್ರೋಳಿಯಲ್ಲಿ ಮಹಾರುದ್ರಾಭಿಷೇಕ, ಉಮಾಮಹೇಶ್ವರ ಹೋಮ, ಸೀಯಾಳಾಭಿಷೇಕ, ಕಟ್ಟೆ ಪೂಜೆ, ರಥೋತ್ಸವ ಇತ್ಯಾದಿ ಸಂಭ್ರಮದ ಕೊನೆಯಲ್ಲಿ ಶಿವರಾತ್ರಿ ಜಾಗರಣೆಯಲ್ಲೂ ಭಕ್ತರು ಪಾಲ್ಗೊಂಡರು. ಕಾವೂರು ಶ್ರೀ ಮಹಾಲಿಂಗೇಶ್ವರ ದೇಗುಲ, ಪಾಂಡೇಶ್ವರ ಮಹಾಲಿಂಗೇಶ್ವರ ದೇಗುಲದಲ್ಲೂ ಈಶ್ವರನ ದರ್ಶನಕ್ಕೆ ಭಕ್ತರು ಮುಗಿಬಿದ್ದರು. ಅತ್ತಾವರದ ಉಮಾಮಹೇಶ್ವರ ಕ್ಷೇತ್ರ, ಮಂಗಳಾದೇವಿ ದೇವಸ್ಥಾನ, ಸೋಮೇಶ್ವರದ ಸೋಮನಾಥ ದೇವಸ್ಥಾನ, ಬಂಟ್ವಾಳ ತಾಲ್ಲೂಕಿನ ನರಹರಿ ಪರ್ವತ ಕ್ಷೇತ್ರದಲ್ಲೂ ವಿಶೇಷ ಪೂಜೆ ಮತ್ತು ಜಾಗರಣೆ ನಡೆಯಿತು. ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ನೆಟ್ಟ ದೇವಸ್ಥಾನ, ಕೇಪು ಖಂಡಿಗ ಶಿವ ಕ್ಷೇತ್ರ, ಶ್ರೀಕ್ಷೇತ್ರ ಒಡಿಯೂರಿನಲ್ಲೂ ವಿಶೇಷ ಪೂಜೆ ಇತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.