
ಡೊಮಿನಿಕ್ ಚರ್ಚ್ ಮುಂದೆ ರಸ್ತೆಯಲ್ಲಿ ಕಸ ಎಸೆದಿರುವುದು
ಮಂಗಳೂರು: ಅಶೋಕ ನಗರ, ಕೋಡಿಕಲ್, ಉರ್ವ ಸ್ಟೋರ್, ಕೊಟ್ಟಾರ ಚೌಕಿ ಮುಂತಾದ ಪ್ರಮುಖ ಸ್ಥಳಗಳಿಂದ ಸುತ್ತುವರಿದಿರುವ, ಅಪಾರ್ಟ್‌ಮೆಂಟ್‌ಗಳ ಭರಾಟೆಯ ನಡುವೆಯೂ ನಿತ್ಯದ ಕೂಳಿಗಾಗಿ ಕೂಲಿ ಮಾಡುವ ಕಾರ್ಮಿಕ ವರ್ಗದವರು ಸಾಕಷ್ಟು ಕಾಣಸಿಗುವ, ನಗರ ಮಧ್ಯದಲ್ಲೂ ಗ್ರಾಮೀಣ ಸೊಗಡಿನ ಮನೆ, ಗಲ್ಲಿಗಳಲ್ಲಿ ವಾಸಿಸುವ ಜನರಿರುವ ವಾರ್ಡ್ ದೇರೆಬೈಲ್ ಪಶ್ಚಿಮ.
ಕೂಳೂರು–ಫೆರಿ ಮುಖ್ಯರಸ್ತೆಯಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇಯ ಎದುರಿನ ರಸ್ತೆಯಲ್ಲಿ ಮೇಲೇರಿದರೆ, ಕೋಡಿಕಲ್‌ನಿಂದ ಒಳಗೆ ಹೋಗುವ ಅಥವಾ ಜೆ.ಬಿ ಲೋಬೊ ರೋಡ್ ಇಲ್ಲವೇ ಅಶೋಕನಗರ ಮುಖ್ಯರಸ್ತೆಯ ವೃತ್ತದಿಂದ ತಿರುವು ಪಡೆದುಕೊಂಡರೆ ವಿಸ್ತಾರಕ್ಕೆ ಹಬ್ಬಿಕೊಂಡಿರುವ ಈ ವಾರ್ಡ್‌ನಲ್ಲಿ ಅಭಿವೃದ್ಧಿ ಕಾಮಗಾರಿಗಳು ಸಾಕಷ್ಟು ಆಗಿದ್ದರೂ ಇನ್ನಷ್ಟು ಉಳಿದಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು. ಸಮಸ್ಯೆಗಳಿಂದ ಕೂಡಿದ್ದ ವಾರ್ಡ್‌ನಲ್ಲಿ ಹೋರಾಟ, ಮನವಿ ಸಲ್ಲಿಕೆ ಮತ್ತು ಜಾಗೃತಿ ಮೂಲಕ ಒಂದಿಷ್ಟು ಸುಧಾರಣೆ ಆಗಿದ್ದರೂ ಕಸ ಎಸೆಯುವಂಥ ಅನಾಗರಿಕತೆಗೆ ತಡೆ ಹಾಕಲು ಸಾಧ್ಯವಾಗಲಿಲ್ಲ ಎನ್ನುತ್ತಾರೆ ಅವರು.
ಕೂಳೂರು ಫೆರಿ ರಸ್ತೆಯಿಂದ ಒಳಗೆ ನುಗ್ಗುವುದೇ ವಾರ್ಡ್‌ನ ಪ್ರಮುಖ ರಸ್ತೆಯ ಮೂಲಕ. ಇದು ಡೊಮಿನಿಕ್ ಚರ್ಚ್ ದಾಟಿ ಮುಂದೆ ಹೋಗಿ ತಿರುವುಗಳನ್ನು ಪಡೆದುಕೊಂಡು ಕೋಡಿಕಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಸೇರುತ್ತದೆ. ಈ ರಸ್ತೆಯ ಸುತ್ತಲೂ ಸಿಟಿ ಬಸ್ ಸೌಲಭ್ಯ ಇದೆ. ಆದರೆ ಇಲ್ಲಿನವರಿಗೆ ಮಾತ್ರ ಬಸ್‌ನಲ್ಲಿ ಹೋಗುವ ಭಾಗ್ಯ ಇಲ್ಲ ಎಂಬುದು ಜನರ ಪ್ರಮುಖ ದೂರು. ಫುಟ್‌ಪಾತ್, ಚರಂಡಿ, ಸಂಜೆಯ ನಂತರ ಕಿಡಿಗೇಡಿಗಳ ಆಟಾಟೋಪ ಮುಂತಾದ ಸಮಸ್ಯೆಗಳೂ ಇವೆ. ಉರ್ವ ಸ್ಟೋರ್‌ನಿಂದ ಕೋಡಿಕಲ್ ಕಡೆಗೆ ಹೋಗುವ ರಸ್ತೆಯ ಅಭಿವೃದ್ಧಿ ಆಗಬೇಕು ಎಂಬದು ಇಲ್ಲಿನವರ ಪ್ರಮುಖ ಬೇಡಿಕೆಗಳಲ್ಲಿ ಒಂದು.
ಇದು ದೊಡ್ಡ ವಸತಿ ಪ್ರದೇಶ. ಮನೆಗಳು ಹೆಚ್ಚು ಇದ್ದರೂ ವಾತಾವಣರ ಚೆನ್ನಾಗಿಯೇ ಇದೆ. ಈಚೆಗೆ ವಾಹನಗಳ ಸಂಖ್ಯೆ ಹೆಚ್ಚಾದ ಕಾರಣ ಓಡಾಟ ಕಷ್ಟಕರವಾಗಿದೆ. ವಾರ್ಡ್ ಅಭಿವೃದ್ಧಿ ಕಾಣಲು ತೊಡಗಿದ್ದು ಇತ್ತೀಚೆಗಷ್ಟೆ.ರಾಘವೇಂದ್ರ ಉಡುಪ, ಅಂಗಡಿ ಮಾಲೀಕ
‘ಇದು ಪ್ರಮುಖ ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಪ್ರದೇಶ. ಮಾರಿಗುಡಿ, ಕೋರ್ದಬ್ಬು ದೈವಸ್ಥಾನಕ್ಕೆ ಇಲ್ಲಿಂದಲೇ ಹೋಗಬೇಕು. ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾದರೆ ಹೆಚ್ಚಿನವರು ಈ ದಾರಿ ಹಿಡಿಯುತ್ತಾರೆ. ಆದರೆ ಡಾಂಬರು ಕಾಣದ್ದರಿಂದ ಇಲ್ಲಿ ಓಡಾಟ ಕಷ್ಟ. ಅಕ್ಕಪಕ್ಕದ ಮನೆ ಮತ್ತು ಅಂಗಡಿಯವರಿಗೆ ನಿತ್ಯವೂ ದೂಳಿನ ಅಭಿಷೇಕ ಆಗುತ್ತಿದೆ’ ಎಂದು ಹೇಳಿದರು ಗುಡ್ಡೆ ಶಾಲೆಯ ಪಕ್ಕದಲ್ಲಿ ನಿಂತಿದ್ದ ಲೀಲಾಧರ ಎಂ.
‘ಡೊಮಿನಿಕ್ ಚರ್ಚ್ ಮುಂಭಾಗದ ಕವಲು ದಾರಿಯಲ್ಲಿ ಕಸದ ರಾಶಿಯೇ ಬಿದ್ದಿರುತ್ತದೆ. ದುರ್ವಾಸನೆ ಸಹಿಸಲಾಗದೆ ಇಲ್ಲಿ ಮೂಗು ಮುಚ್ಚಿಕೊಂಡು ಹೋಗುವವರೇ ಅಧಿಕ. ಕಸ ಎಸೆಯುವವರನ್ನು ಹಿಡಿದು ದಂಡಿಸಲು ಯಾರೂ ಮುಂದಾಗುತ್ತಿಲ್ಲ. ಸಿಸಿಟಿವಿಗಳಿದ್ದರೂ ಪರಿಶೀಲಿಸಲು ಯಾರೂ ಹೋಗುತ್ತಿಲ್ಲ. ನಾನು ಆ ರಸ್ತೆಯಲ್ಲಿ ಓಡಾಡುವುದನ್ನೇ ಬಿಟ್ಟಿದ್ದೇನೆ’ ಎಂದರು ಲೀಲಾಧರ.
ವಾರ್ಡ್‌ನ ಅಭಿವೃದ್ಧಿಗಾಗಿ ವರ್ಷಗಳ ಹಿಂದೆ ತಂಡವನ್ನು ಕಟ್ಟಿಕೊಂಡು ಹೋರಾಡಿದ ಅಂಗಡಿ ಮಾಲೀಕ ರಾಘವೇಂದ್ರ ಉಡುಪ ಅವರು ಕೋಡಿಕಲ್ ರಸ್ತೆಯಲ್ಲಿ ಬಸ್ ಸೌಲಭ್ಯ ಇಲ್ಲದ್ದಕ್ಕೆ ಬೇಸರ ವ್ಯಕ್ತಪಡಿಸಿದರು. ಕೋಡಿಕಲ್ ಕಟ್ಟೆ ಮೂಲಕ ಬಸ್ ಸಾಗುತ್ತದೆ. ರಸ್ತೆ ಅಗಲ ಮಾಡಿ, ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಸಂಬಂಧಪಟ್ಟವರಿಗೆ ಹಲವು ಬಾರಿ ಕೋರಲಾಗಿತ್ತು. ಆದರೆ ಫಲ ಸಿಗಲಿಲ್ಲ. ಕಸ ಎಸೆಯುವುದನ್ನು ತಡೆಯಲು ಭಾರಿ ಹೋರಾಟವೇ ಆಗಿತ್ತು. ಮಹಾನಗರ ಪಾಲಿಕೆಗೆ ಮನವಿ ಪತ್ರ ಕೊಡುವುದಕ್ಕಾಗಿ ಸಹಿ ಸಂಗ್ರಹ ಮಾಡಲಾಗಿತ್ತು. ವಾಹನಗಳನ್ನು ನಿಲ್ಲಿಸಿ ಕೆಲವರಿಂದ ಸಹಿ ಪಡೆದುಕೊಂಡಿದ್ದೇವೆ. ಅಷ್ಟೆಲ್ಲ ಆದ ನಂತರ ಕೆಲವು ಕಡೆಗಳಲ್ಲಿ ಕಸ ಎಸೆಯುವುದು ನಿಂತಿದೆ. ಆದರೆ ಒಂದೆರಡು ಕಡೆಗಳಲ್ಲಿ ಇದನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.
‘ಸಂಜೆ ಮೇಲೆ ಇಲ್ಲಿ ಪೊಲೀಸ್ ಬೀಟ್ ಬೇಕು. ಇಲ್ಲಿ ಅಪರಾಧ ಪ್ರಕರಣಗಳು ಕಡಿಮೆ. ಆದರೆ ಕೆಲವರು ಮಿತಿಮೀರಿ ವರ್ತಿಸುತ್ತಾರೆ’ ಎಂದು ಹೇಳಿದ ಅವರು ‘ಚರಂಡಿಗಳನ್ನು ಸುಸ್ಥಿತಿಯಲ್ಲಿಡಲು ಅಧಿಕಾರಿಗಳು ಗಮನಿಸಬೇಕು, ಮುಡಾ ಎದುರಿನ ಮುಖ್ಯರಸ್ತೆಯಲ್ಲಿ ಫುಟ್‌ಪಾತ್‌ಗಳೇ ಇಲ್ಲದಾಗಿದ್ದು ರಸ್ತೆ ಅತಿಕ್ರಮಣವನ್ನು ತಡೆದು ಸುಂದರ ಫುಟ್‌ಪಾತ್ ನಿರ್ಮಿಸಬೇಕು’ ಎಂದರು.
ಬಹಳಷ್ಟು ಅಭಿವೃದ್ಧಿ ಕಾರ್ಯ ಆಗಿದೆ
ಕೊಟ್ಟಾರ ಚೌಕಿ, ಅಶೋಕನಗರ, ಸುಂಕದಕಟ್ಟೆ, ಕೋಡಿಕಲ್, ಕೋಟೆ ಬಬ್ಬು ದೈವಸ್ಥಾನ ಇತ್ಯಾದಿಗಳು ಇರುವ ವಾರ್ಡ್ ಇದು. ಮಹಿಳಾ ಮಂಡಳಿಗಳಿಗೆ ಅಂಗನವಾಡಿ ಮಂಜೂರು ಮಾಡಲಾಗಿದೆ. ನಮ್ಮ ಕ್ಲಿನಿಕ್ ಇದೆ. ಅಬ್ಬಕ್ಕ ನಗರ ರಸ್ತೆಯ ಪೂರ್ತಿ ಕಾಂಕ್ರಿಟೀಕರಣ ಆಗಿದೆ. ಇನ್ನೂ ಕೆಲವು ಕೆಲಸ ಉಳಿದುಕೊಂಡಿವೆ ಎಂದು ಮಹಾನಗರ ಪಾಲಿಕೆಯ ನಿಕಟಪೂರ್ವ ಸದಸ್ಯೆ ಜಯಲಕ್ಷ್ಮಿ ವಿ.ಶೆಟ್ಟಿ ತಿಳಿಸಿದರು.
ತಂತ್ರಿ ಲೇನ್ ಮತ್ತು ಕೃಷ್ಣ ಮಂದಿರದ ದ್ವಾರದಿಂದ ಒಳಗೆ ಹೋಗುವ ದಾರಿಯಲ್ಲಿ ಮೂರು ದಶಕಗಳಿಂದ ಒಳಚರಂಡಿ ವ್ಯವಸ್ಥೆ ಇರಲಿಲ್ಲ. ಆ ಕಸನು ಈಗ ನನಸಾಗಿದೆ. ಉರ್ವಸ್ಟೋರ್‌ನಿಂದ ಕೊಟ್ಟಾರ ಚೌಕಿ ವರೆಗಿನ ರಸ್ತೆಗೆ ಫುಟ್‌ಪಾತ್ ನಿರ್ಮಿಸಿಕೊಡಲು ಮುಡಾಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.
ವಾರ್ಡ್ ವಿಶೇಷ
ಪ್ರಮುಖ ಬಡಾವಣಗಳಿಗೆ ಹೋಗುವ ದಾರಿ ಇರುವ ಪ್ರದೇಶ; ಮಹಿಳಾ ಮಂಡಳಿಗಳು ಸಕ್ರಿಯ; ಎಲ್ಲೆಲ್ಲೂ ಅಪಾರ್ಟ್‌ಮೆಂಟ್‌ಗಳು; ದುಡಿಯುವ ವರ್ಗದ ಜನರು ವಾಸಿಸುವ ಗಲ್ಲಿಗಳು; ಚರ್ಚ್, ದೈವಸ್ಥಾನಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.