ಮಂಗಳೂರು: ದಸರಾ, ನವರಾತ್ರಿ, ಮಾರ್ನಮಿ ಮುಂತಾದ ಹೆಸರುಗಳಿಂದ ಕರೆಯಲಾಗುವ ರಂಗುರಂಗಿನ ಹಬ್ಬವಿದೋ ಮತ್ತೆ ಬಂದಿದೆ. ದೇವಾಲಯಗಳಲ್ಲೂ ದೈವಸ್ಥಾನಗಳಲ್ಲೂ ಬೀದಿಯಲ್ಲೂ ಹಾದಿಯಲ್ಲೂ ಮಾಲ್‌ಗಳಲ್ಲೂ ಮಹಲ್‌ಗಳಲ್ಲೂ ಮಳಿಗೆಗಳಲ್ಲೂ ಮನೆಗಳಲ್ಲೂ ಹುಲಿಕುಣಿತದ ಜೊತೆಯಲ್ಲಿ ಮೈ–ಮನ ಕುಣಿಯಲು ಭೂಮಿಕೆ ಸಜ್ಜಾಗಿದೆ. ಚಂಡೆ, ತಾಸೆಗಳ ಮೊರೆತ, ಉಲ್ಲಾಸ–ಉತ್ಸಾಹದ ಚಿಗುರು ಮೂಡಿ ಸಂಭ್ರಮದ ಅಲೆ ಏಳುವ ಕಾಲವಿದು.
ಮನುಷ್ಯನೇ ಹುಲಿ ವೇಷ ಧರಿಸಿ ನರ್ತಿಸುವ, ನವದುರ್ಗೆಯರ ಅಲಂಕಾರದಲ್ಲಿ ಭಕ್ತಿಯ ಅನುಸಂಧಾನವಾಗುವ, ನಾಟ್ಯ–ನಾಟಕ ವೇದಿಕೆಗೆ ಸಜ್ಜಾಗುವವರು ಪ್ರಸಾದನದಲ್ಲಿ ಬೆಳಗುವ, ವಿದ್ಯುತ್ ದೀಪಗಳ ಜಗಮಗದಲ್ಲಿ ರಂಗು ಚೆಲ್ಲುವ ದಸರೆ ಪ್ರತಿ ಬಾರಿಯೂ ನವನವೀನ. ಮಂಗಳಾದೇವಿಯಲ್ಲಿ ನಡೆಯುವ ಪೂಜಾ ಕೈಂಕರ್ಯ ಮತ್ತು ಸಾಂಸ್ಕೃತಿಕ ವೈಭವ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ನವದುರ್ಗೆಯರಲ್ಲಿ ಮೂಡುವ ಭಕ್ತಿಭಾವ ಮತ್ತು ದೇವಾಲಯದ ಆವರಣದಲ್ಲಿ ಸೃಷ್ಟಿಯಾಗುವ ಭಾವುಕ ಕಲಾಲೋಕ, ರಥಬೀದಿಯ ಶ್ರೀವೆಂಕಟರಮಣ ದೇವಸ್ಥಾನದ ಆಚಾರ್ಯ ಮಠದ ಶಾರದೆಯ ವಿಜೃಂಭಣೆ, ನೆಹರು ಮೈದಾನದಲ್ಲಿ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಪಿಲಿ ಪರ್ಬದ ವಿಸ್ಮಯ, ‘ಪಿಲಿ ನಲಿಕೆ ಪ್ರತಿಷ್ಠಾನ’ದ 10ನೇ ‘ಪಂಥ’ ...ಮಂಗಳೂರಿನಲ್ಲಿ ನಡೆಯುವ ದಸರೆಯ ವೈವಿಧ್ಯದ ಸವಿಯುಣ್ಣಲು ಮಾರ್ಗಗಳು ಒಂದಲ್ಲ, ಎರಡಲ್ಲ, ನೂರೆಂಟು.
ಕುಡ್ಲಕ್ಕೆ ಮಂಗಳೂರು ಎಂಬ ಹೆಸರು ಬರಲು ಕಾರಣವೇ ಮಂಗಳಾದೇವಿ ದೇವಸ್ಥಾನ ಎಂಬ ಪ್ರತೀತಿ ಇದೆ. ಇಲ್ಲಿ ಹಿಂದಿನಿಂದಲೇ ಸಾಂಪ್ರದಾಯಿಕ ದಸರಾ ಆಚರಿಸಲಾಗುತ್ತಿತ್ತು ಎನ್ನಲಾಗುತ್ತದೆ. ಇದು ದೇವಿಯ ಆರಾಧನೆಯೊಂದಿಗೆ ನಡೆಯುತ್ತಿದ್ದ ಕಡಲ ನಗರದ ದಸರೆ. ಇಂಥ ಹಬ್ಬ ಕುದ್ರೋಳಿ ಕ್ಷೇತ್ರದಲ್ಲಿ ಉತ್ಸವದ ರೂಪ ಪಡೆಯುವುದರೊಂದಿಗೆ ‘ಮಂಗಳೂರು ದಸರಾ’ ಆಗಿ ಹರವು ವಿಶಾಲವಾಯಿತು ಎಂದು ಹೇಳಲಾಗುತ್ತದೆ. ವೆಂಕಟರಮಣ ದೇವಸ್ಥಾನದಲ್ಲಿ ಶಾರದೆಯ ಪ್ರತಿಷ್ಠಾಪನೆಯೂ ಮುನ್ನೆಲೆಗೆ ಬಂತು. ಈ ಮೂರೂ ಕ್ಷೇತ್ರಗಳು ಈಗಲೂ ನವರಾತ್ರಿ ವೇಳೆ ಭಕ್ತರು ಮತ್ತು ಕಲಾಸ್ವಾದಕರನ್ನು ಸೆಳೆಯುತ್ತವೆ.
ಕುದ್ರೋಳಿ ಕ್ಷೇತ್ರದಲ್ಲಿ ಪ್ರತಿ ವರ್ಷ ನಡೆಯುವ ಕಾರ್ಯಕ್ರಮಗಳ ಜೊತೆಯಲ್ಲಿ ಈ ಬಾರಿ ಕಿನ್ನಿಪಿಲಿಗಳು ಹೆಜ್ಜೆ ಹಾಕಲಿವೆ. ಸಾಹಿತ್ಯ ಚಟುವಟಿಕೆಗೆ ಆದ್ಯತೆ ನೀಡಿರುವ ಈ ವರ್ಷ ‘ಅಸಾಮಾನ್ಯ ಸ್ತ್ರೀ’ಯರಿಗೆ ಸನ್ಮಾನವೂ ಇದೆ. ಹಾಫ್ ಮ್ಯಾರಥಾನ್, 10ಕೆ, 5ಕೆ ಮತ್ತು ಫನ್ ರನ್‌ಗೆ ಈ ಬಾರಿ ಸಾರಿ ರನ್ ಮೆರುಗು ತುಂಬಲಿದ್ದು ದೇಹದಾರ್ಢ್ಯ ಸ್ಪರ್ಧೆಯೂ ಹೊಸದಾಗಿ ಸೇರ್ಪಡೆಗೊಂಡಿದೆ. ಒಂದು ದಿನವನ್ನಿಡೀ ಮಕ್ಕಳ ಕಲರವಕ್ಕೆ ಮೀಸಲಿಟ್ಟಿರುವುದರಿಂದ ಚಿನ್ನರ ಚಿಲಿಪಿಲಿ ಮುದ ನೀಡಲಿದೆ. ಮುದ್ದು ಶಾರದೆಯರ ಪುಟ್ಟ ಪುಟ್ಟ ಹೆಜ್ಜೆಯ ಸೊಬಗು ಕಂಡವರು ರುದ್ರತಾಂಡವ ನೃತ್ಯದ ಬೆರಗು ಅನುಭವಿಸುವುದಕ್ಕೂ ಸಜ್ಜಾಗಬಹುದಾಗಿದೆ. ನಾಟ್ಯ–ರೂಪಕ, ಗಾಯನ, ಕಾವ್ಯ ವಾಚನ–ವಾದ್ಯ ವಾದನ, ಯಕ್ಷಗಾನ ಒಳಗೊಂಡ ಸಾಂಸ್ಕೃತಿಕ ವೈಭವ ಕಳೆಗಟ್ಟಲಿದೆ. ಮಂಗಳೂರು ದಸರಾದ ಪ್ರಮುಖ ಆಕರ್ಷಣೆಯಾದ ಶೋಭಾಯಾತ್ರೆಗೆ ಟ್ಯಾಬ್ಲೊ ಮತ್ತಿತರ ಸಿದ್ಧತೆಗಳು ಈಗಲೇ ಆರಂಭಗೊಂಡಿದೆ.
ಬಲಿ ಉತ್ಸವ, ರಥಾರೋಹಣ, ರಥೋತ್ಸವ, ಸಣ್ಣ ರಥೋತ್ಸವ, ಅವಭೃತ ಸ್ನಾನ ಮುಂತಾದ ದೈವೀ ಕಾರ್ಯಗಳ ಜೊತೆಯಲ್ಲಿ ಕಲಾರಂಗು ಮೂಡುವ ಮಂಗಳಾದೇವಿ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಆಚರಣೆಗಳ ಪಟ್ಟಿ ಸಿದ್ಧವಾಗಿದೆ. ಹುಲಿ ಕುಣಿತಕ್ಕೆ ಆಧುನಿಕ ತಂತ್ರಜ್ಞಾನವನ್ನು ಬಳಸಿ ಹೆಸರು ಮಾಡಿರುವ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ನೆಹರೂ ಮೈದಾನದಲ್ಲಿ ಆಯೋಜಿಸುವ ‘ಕುಡ್ಲದ ಪಿಲಿ ಪರ್ಬ’ವು ಜನರ ಮನತಣಿಸಲು ಮತ್ತೊಮ್ಮೆ ಸಿದ್ಧಗೊಂಡಿದೆ.
ಶತಮಾನ ದಾಟಿರುವ ರಥಬೀದಿಯ ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠದ ಉತ್ಸವದಲ್ಲಿ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠಾಪನೆ ಆಯಿತೆಂದರೆ ಖುಷಿಯ ಅಲೆಗಳೇಳುತ್ತವೆ. ಇಲ್ಲಿ ಈ ಬಾರಿಯೂ ಇದೆ, ಭಜನೆ, ಹಾಡು ಮುಂತಾದವುಗಳನ್ನು ಒಳಗೊಂಡ ವೈವಿಧ್ಯಮಯ ಕಾರ್ಯಕ್ರಮಗಳ ಹೂರಣ.
ಸುವರ್ಣ ಮಹೋತ್ಸವ ಸಂಭ್ರಮವನ್ನು ಆಚರಿಸಿರುವ ಮತ್ತು ಮಕ್ಕಳೇ ಆರಂಭಿಸಿದ ಶಾರಾದೋತ್ಸವ ಎಂದು ಹೆಸರಾಗಿರುವ ಕೊಡಿಯಾಲ್‌ಬೈಲ್‌ನ ಅರ್ಕ ಮಹಾಗಣಪತಿ ದೇವಸ್ಥಾನದ ಉತ್ಸವವೂ ಗಮನ ಸೆಳೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.