ADVERTISEMENT

ಮಂಗಳೂರು | ಮಾದಕ ಪದಾರ್ಥ ಅಕ್ರಮ ಸಾಗಣೆ: ಐವರಿಗೆ ಕಠಿಣ ಸಜೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 14:03 IST
Last Updated 6 ಡಿಸೆಂಬರ್ 2025, 14:03 IST
   

ಮಂಗಳೂರು: ನಿಷೇಧಿತ ಮಾದಕ ಪದಾರ್ಥವನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು ಅಕ್ರಮವಾಗಿ ಸಾಗಣೆ ಮಾಡಿದ ಹಾಗೂ ಮಾದಕ ಪದಾರ್ಥ ಸೇವಿಸಿದ ಪ್ರಕರಣ ಸಂಬಂಧ ಐವರು ಅಪರಾಧಿಗಳಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಕಠಿಣ ಸಜೆ ಮತ್ತು ದಂಡ ವಿಧಿಸಿದೆ.

ಕೇರಳದ ಕಾಸರಗೋಡು ಜಿಲ್ಲೆಯ ಉಪ್ಪಳದ ಮಹಮ್ಮದ್‌ ರಮೀಜ್‌ಗೆ 14 ವರ್ಷ ಕಠಿಣ ಸಜೆ ಮತ್ತು₹ 1.45 ಲಕ್ಷ ದಂಡ, ದಂಡ ಪಾವತಿಸಲು ತಪ್ಪಿದ್ದಲ್ಲಿ 6 ತಿ೦ಗಳ ಕಠಿಣ ಸಜೆ, ಉಪ್ಪಳದ ಅಬ್ದುಲ್‌ ರವೂಫ್‌ ಅಲಿಯಾಸ್‌ ಟಫ್‌ ರವೂಫ್‌ಗೆ 13

ವರ್ಷ ಕಠಿಣ ಸಜೆ ಮತ್ತು ₹1.35 ಲಕ್ಷ ದಂಡ, ದ೦ಡ ಪಾವತಿಸಲು ತಪ್ಪಿದ್ದಲ್ಲಿ 5 ತಿ೦ಗಳ ಕಠಿಣ ಸಜೆ, ಹಾಗೂ ದಕ್ಷಿಣ ಸೂಡಾನ್ ದೇಶದ (ಬೆಂಗಳೂರಿನ ವರ್ತೂರು ಗುಂಜೂರು ‍ಪಾಳ್ಯದಲ್ಲಿ ನಿವಾಸಿ) ಲೂಯಲ್‌ ಡೇನಿಯಲ್‌ ಜಸ್ಟಿಸ್‌ ಬೌಲೊ ಅಲಿಯಾಸ್ ಡ್ಯಾನಿ (25), ಕಾಸರಗೋಡು ಉಪ್ಪಳದ ಮೊಹಿಯುದ್ದೀನ್‌ ರಶೀದ್‌ (24) ಮತ್ತು ತಮಿಳುನಾಡಿನ ಊಟಿ ಕಟ್ಟೇರಿಯ (ಬೆಂಗಳೂರಿನ ಮಡಿವಾಳದಲ್ಲಿ ವಾಸ) ಸಬಿತಾ ಅಲಿಯಾಸ್‌ ಚಿ೦ಚು (25) ಅವರಿಗೆ ತಲಾ 12 ವರ್ಷ ಕಠಿಣ ಸಜೆ ಮತ್ತು ತಲಾ ₹ 1.25 ಲಕ್ಷ ದಂಡ ಹಾಗೂ ದ೦ಡ ಪಾವತಿಸಲು ತಪ್ಪಿದಲ್ಲಿ 4 ತಿ೦ಗಳ ಕಠಿಣ ಸಜೆಯನ್ನು ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ಬಸವರಾಜ್ ಆದೇಶ ಮಾಡಿದ್ದಾರೆ.

ADVERTISEMENT

ಈ ಐವರೂ ಮಾದಕ ಪದಾರ್ಥ ಸೇವಿಸಿದ್ದು ಸಾಬೀತಾಗಿದ್ದು, ಈ ಸಂಬಂಧ ಎಲ್ಲರಿಗೂ ಹೆಚ್ಚುವರಿಯಾಗಿ 6 ತಿಂಗಳ ಕಠಿಣ ಸಜೆ ಹಾಗೂ ತಲಾ ₹ 10 ಸಾವಿರ ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ತಪ್ಪಿದಲ್ಲಿ ಮತ್ತೆ 1 ತಿಂಗಳ ಕಠಿಣ ಸಜೆ ಅನುಭವಿಸಬೇಕು ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.

ಸಿಸಿಬಿಯ ಇನ್‌ಸ್ಪೆಕ್ಟರ್‌ ಮಹೇಶ್ ಪ್ರಸಾದ್‌ ಅವರಿಗೆ ಬಂದ ಮಾಹಿತಿ ಆಧಾರದಲ್ಲಿ 2022ರ ಜೂನ್ 14ರಂದು ನಸುಕಿನಲ್ಲಿ ನಗರದ ಹೊರವಲಯದ ಪಡೀಲ್‌ನಲ್ಲಿ ರಿಟ್ಜ್‌ ಕಾರು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ 40 ಗ್ರಾಂ ಎಂಡಿಎಂಎ ಮಾದರಿಯ ವಸ್ತು, ತಾಮ್ರದ ತಂತಿ ಸುತ್ತಿದ್ದ ಗಾಜಿನ ಕೊಳವೆ ಮತ್ತು ಡಿಜಿಟಲ್ ಮಾಪಕ ಸಿಕ್ಕಿತ್ತು. ಎಸಿಪಿ ದಿನಕರ್‌ ಶೆಟ್ಟಿ ಸಮ್ಮುಖದಲ್ಲಿ ತಪಾಸಣೆ ನಡೆಸಿದಾಗ ಮಹಮ್ಮದ್‌ ರಮೀಜ್‌ ಬಳಿ ಮತ್ತೆ 25 ಗ್ರಾಂ ಹಾಗೂ ಮೊಹಮ್ಮದ್ ರಶೀದ್ ಬಳಿ 20 ಗ್ರಾಂ ಎಂಡಿಎಂಎ ಮಾದರಿಯ ವಸ್ತು, ರಮೀಜ್‌ ಉಪ್ಪಳದ ಮನೆಯಲ್ಲಿ 2022ರ ಜೂನ್‌ 17 ತಪಾಸಣೆ ನಡೆಸಿದಾಗ ಅಲ್ಲಿ 10.21 ಗ್ರಾಂ ಎಂಡಿಎಂಎ ಮಾದರಿಯ ವಸ್ತು ಸಿಕ್ಕಿತ್ತು. ಅದನ್ನು ತಪಾಸಣೆಗೆ ಒಳಪಡಿಸಿದಾಗ ಅದು ಮೆಟಾ ಎಂಫಟಮೈನ್‌ ಎಂದು ಖಚಿತವಾಗಿತ್ತು. ಲೂಯಲ್‌ ಡೇನಿಯಲ್‌ ಜಸ್ಟಿಸ್‌ ಬೌಲೊ ಅದನ್ನು ಮಾರಾಟ ಮಾಡಿರುವುದು ಸಾಕ್ಷ್ಯಾಧಾರಗಳಿಂದ ಸಾಬೀತಾಗಿತ್ತು. ಈ ಬಗ್ಗೆ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್‌ಸ್ಪೆಕ್ಟರ್ ಸತೀಶ್ ಎಂ.ಪಿ. ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣದಲ್ಲಿ ಒಟ್ಟು 172 ದಾಖಲೆಗಳನ್ನು ಗುರುತಿಸಲಾಗಿದೆ. 24ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಸರ್ಕಾರದ ಪರವಾಗಿ ವಾದಿಸಿದ್ದ ವಕೀಲರಾದ ಜುಡಿತ್‌ ಓಲ್ಗ ಮಾರ್ಗರೆಟ್ ಕ್ರಾಸ್ತಾ ‘ಪ್ರಜಾವಾಣಿ‘ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.