ಮಂಗಳೂರು ನಗರದ ಹೊರ ವಲಯದ ಕೆತ್ತಿಕಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಗುಡ್ಡ ಕುಸಿದಿದೆ.
ಮಂಗಳೂರು: ನಗರದಲ್ಲಿ ಭಾರಿ ಮಳೆ ಮುಂದುವರಿದಿದೆ. ನಗರದ ಹೊರ ವಲಯದ ಕೆತ್ತಿಕಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಗುಡ್ಡ ಜರಿದಿದ್ದು, ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.
ನಗರದಲ್ಲಿ ಶನಿವಾರ ಸುರಿದ ಭಾರಿ ಮಳೆಗೆ ಜಲಾವೃತವಾಗಿದ್ದ ಕೊಡಿಯಾಲ್ ಬೈಲ್, ಜಪ್ಪಿನಮೊಗರು ಮತ್ತಿತರ ಪ್ರದೇಶಗಳಲ್ಲಿ ನೀರಿನ ಪ್ರಮಾಣ ಇಳಿದಿದೆ. ಮನೆಯೊಳಗೆ ತುಂಬಿದ್ದ ಕೆಸರು ನೀರನ್ನು ಸ್ವಚ್ಛಗೊಳಿಸುವಲ್ಲಿ ಈ ಪ್ರದೇಶದ ನಿವಾಸಿಗಳು ನಿರತರಾಗಿದ್ದಾರೆ. ರಾತ್ರಿಯೂ ಬಿಟ್ಟು ಬಿಟ್ಟು ಮಳೆಯಾಗಿತ್ತು. ಭಾನುವಾರ ಬೆಳಿಗ್ಗೆ ಮತ್ತೆ ಮಳೆ ಶುರುವಾಗಿದೆ.
ಮಂಗಳೂರು ನಗರದ ಕಂಕನಾಡಿ ಬಳಿಯ ನಾಗುರಿ ಬಳಿ ಜನವಸತಿ ಪ್ರದೇಶದಲ್ಲಿ ಗುಡ್ಡ ಸಣ್ಣ ಪ್ರಮಾಣದಲ್ಲಿ ಕುಸಿದು ಮನೆಗಳಿಗೆ ಹಾನಿಯಾಗಿದೆ.
ಮರೋಳಿ ಸಮೀಪ ಪೊಲೀಸರ ಕುಟುಂಬಗಳು ಸೇರಿದಂತೆ ಬಾಡಿಗೆಗೆ ವಾಸಿಸುತ್ತಿರುವ 12 ಮನೆಗಳಿಗೆ ಅಪಾಯ ಸಂಭವಿಸುವ ಸಾಧ್ಯತೆ ಇರುವುದರಿಂದ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಕಂಕನಾಡಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಟಿ.ಡಿ ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.