ರಂಜಾನ್ ಏಳನೇ ದಿನದ ಉಪವಾಸ (ರೋಜಾ) ಮುಗಿಸಿದ ಮುಸ್ಲಿಂ ಸಮುದಾಯದವರು ಮಂಗಳೂರು ಬಂದರಿನ ಕಚ್ ಮೆಮನ್ ಮಸೀದಿಯಲ್ಲಿ ಆಹಾರ ಸೇವಿಸಿದರು
ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್
ಮಂಗಳೂರು: ಪವಿತ್ರ ರಂಜಾನ್ ಮಾಸ ನಡೆಯುತ್ತಿರುವುದರಿಂದ ನಗರದಲ್ಲಿ ಅಲ್ಲಲ್ಲಿ ಖಾದ್ಯಗಳನ್ನು ಮಾರಾಟ ಮಾಡಲಾಗುತ್ತಿದೆ. ರಸ್ತೆಯಲ್ಲಿ ಸಂಚರಿಸುವವರಿಗೆ ವಿವಿಧ ಭಕ್ಷ್ಯಗಳ ಘಮ ಮೂಗಿಗೆ ಬಡಿಯುತ್ತಿದೆ.
ಅಲ್ಲಲ್ಲಿ ಇಫ್ತಾರ್ ಕೂಟಗಳನ್ನು ಆಯೋಜಿಸಲಾಗುತ್ತಿದೆ. ವಿವಿಧ ಧರ್ಮದವರು ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟ ಆಯೋಜಿಸಿ ಸೌಹಾರ್ದ ಮೆರೆಯುತ್ತಿದ್ದಾರೆ.
ಹೋಟೆಲ್ ಮುಂಭಾಗ, ಸ್ಟಾಲ್‌ಗಳು, ಅಂಗಡಿಗಳಲ್ಲಿ ಸಂಜೆ ವೇಳೆ ಮಾರಾಟದ ಭರಾಟೆ ಆರಂಭವಾಗುತ್ತದೆ. ಬಗೆ ಬಗೆಯ ಸಸ್ಯಾಹಾರ, ಮಾಂಸಾಹಾರ ಭಕ್ಷ್ಯಗಳನ್ನು ಮಾರಾಟ ಮಾಡಲಾಗುತ್ತಿದೆ. ಸಿಹಿ, ತಿಂಡಿ ತಿನಿಸು, ಹಣ್ಣು ಹಂಪಲು, ತರಕಾರಿಗೂ ಬೇಡಿಕೆ ಕುದುರಿದೆ. ಒಣಹಣ್ಣುಗಳನ್ನು ಬಳಸಿ ವಿವಿಧ ಖಾದ್ಯ ತಯಾರಿಸುವುದರಿಂದ ಅವುಗಳಿಗೂ ಅಧಿಕ ಬೇಡಿಕೆ ಇದೆ.
ಸಮೋಸ, ಕಟ್ಲೆಟ್, ಶವರ್ಮ, ಚಿಕನ್ ರೋಲ್, ಟಿಕ್ಕ, ಲಾಲಿಪಪ್, ಬಿರಿಯಾನಿ, ಪತ್ತಿರ್ (ರೊಟ್ಟಿ) ಮುಂತಾದ ಖಾದ್ಯಗಳಿಗೆ ರಂಜಾನ್ ಮಾಸದಲ್ಲಿ ಅತ್ಯಧಿಕ ಬೇಡಿಕೆ ವ್ಯಕ್ತವಾಗುತ್ತದೆ. ಅಲ್ಲದೆ ಸುಡು ಬಿಸಿಲಿನಿಂದಾಗಿ ರಾಗಿ ಜ್ಯೂಸ್, ಬೊಂಡ ಶರಬತ್‌ಗಳಿಗೂ ಭಾರಿ ಬೇಡಿಕೆಯಿದೆ.
ಚಿಕನ್ ಜೊತೆಗೆ ವಿವಿಧ ಬಗೆಯ ಫಾಲೂದಾ, ಪಾನಕ ಮೊದಲಾದ ಭಕ್ಷ್ಯಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಚಿಕನ್ ಸಮೋಸ, ಎಗ್ ಸಮೋಸ, ಕಟ್ಲೆಟ್, ಚಿಕನ್ ರೋಲ್, ಪರೋಟಗಳ ಮಾರಾಟದ ಭರಾಟೆ ಹೆಚ್ಚಿದೆ.
ಅಂಗಡಿಗಳನ್ನು ಬಣ್ಣಬಣ್ಣದ ಜಗಮಗಿಸುವ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ. ಕುಳಿತುಕೊಳ್ಳುವ ಮೇಜು, ಕುರ್ಚಿಗಳನ್ನು ಸಿಂಗರಿಸಲಾಗಿದೆ. ಆಹಾರ ಖಾದ್ಯಗಳು ಮಾತ್ರವಲ್ಲದೆ ಕೆಲವು ಅಂಗಡಿಗಳಲ್ಲಿ ಅತ್ತರು, ಸುಗಂಧ ದ್ರವ್ಯಗಳನ್ನೂ ಮಾರಾಟ ಮಾಡಲಾಗುತ್ತಿದೆ.
ಕರಾವಳಿ ಖಾದ್ಯ ವೈವಿಧ್ಯ: ಕಲ್ತಪ್ಪ, ಪತ್ತಿರ್, ಓಡುದೋಸೆ, ಮಸಾಲೆ ಪುಂಡಿ ರಂಜಾನ್‌ಗೆ ಕರಾವಳಿಯ ವಿಶೇಷ ಖಾದ್ಯಗಳು. ಇಫ್ತಾರ್ ವೇಳೆ ಶವರ್ಮ, ಖುಬ್ಬೂಸ್, ಚಿಕನ್ ಟಿಕ್ಕಾ, ಕಬಾಬ್, ಬಿರಿಯಾನಿ, ಸೀರ್ ಕುರ್ಮಾ ಮುಂತಾದ ತಿನಿಸುಗಳಿಗೆ ಬೇಡಿಕೆ ಜಾಸ್ತಿ. ಮಾವು, ಕಲ್ಲಂಗಡಿ ಹಣ್ಣು, ಮೂಸಂಬಿ, ದಾಳಿಂಬೆ ಹೀಗೆ ವಿವಿಧ ಹಣ್ಣುಗಳ ತಂಪು ಪಾನೀಯ, ಪೇಯಗಳು ಇಫ್ತಾರ್‌ಗೆ ಸಿದ್ಧಗೊಳ್ಳುತ್ತವೆ. ರಾಗಿ ಮಣ್ಣಿ, ಕಡ್ಲೆ ಬೇಳೆ ಮಣ್ಣಿ ಮತ್ತು ಪಾಯಸ, ಗಂಜಿ, ಇಸ್ಬ್ ಕೋಲು, ಗಸಗಸೆಯ ತಂಪು ಪಾನೀಯ ತಯಾರಿಸಲಾಗುತ್ತದೆ. ಆದರೆ, ಇಂದು ಇಂಥ ಆಹಾರಗಳನ್ನು ತಯಾರಿಸುವವರೇ ಇಲ್ಲ ಎಂದು ನಗರದ ಸ್ಟೇಟ್‌ಬ್ಯಾಂಕ್‌ನ ಮಾರುಕಟ್ಟೆಯಲ್ಲಿ ಗ್ರಾಹಕರೊಬ್ಬರು ತಿಳಿಸಿದರು.
ರಂಜಾನ್ ಮಾಸ– ವ್ಯಾಪಾರ ಅಧಿಕ: ‘ಪ್ರತಿದಿನ ಸಂಜೆ 4ರಿಂದ 8 ಗಂಟೆವರೆಗೂ ವ್ಯಾಪಾರ ಮಾಡುತ್ತೇನೆ. ರಂಜಾನ್ ಮಾಸದಲ್ಲಿ ವ್ಯಾಪಾರ ಹೆಚ್ಚು. ಸಂಜೆ ನಮಾಜ್ ಮುಗಿಸಿ ಮನೆಗೆ ಮರಳುವ ಅನೇಕರು ಈ ತಿನಿಸುಗಳನ್ನು ಖರೀದಿಸುತ್ತಾರೆ. ಪಾರ್ಸೆಲ್ ತೆಗೆದುಕೊಂಡು ಹೋಗುವವರ ಸಂಖ್ಯೆ ಹೆಚ್ಚು’ ಎನ್ನುತ್ತಾರೆ ವ್ಯಾಪಾರಿ ಅಬ್ದುಲ್.
‘ಪ್ರತಿ ದಿನ 150ಕ್ಕೂ ಹೆಚ್ಚು ಸಮೋಸ ಮಾರಾಟವಾಗುತ್ತವೆ. ತರಕಾರಿ, ಚಿಕನ್ ಸಮೋಸಗೆ ಇಲ್ಲಿ ಬೇಡಿಕೆ ಹೆಚ್ಚು. ಚಿಕನ್ ಟಿಕ್ಕ, ಶೀಖ್ ಕಬಾಬ್‌ಗೂ ಬೇಡಿಕೆಯಿದೆ. ತಿನಿಸುಗಳನ್ನು ಸಂಜೆ ತಯಾರಿಸಿದರೂ ಸಿದ್ಧತೆಗೆ ಸಮಯ ಹಿಡಿಯುತ್ತದೆ. ಬೆಳಿಗ್ಗೆ ನಮಾಜ್ ಮುಗಿಸಿದ ಬಳಿಕ ಕೆಲಸ ಆರಂಭಿಸುತ್ತೇವೆ’ ಎಂದು ಅವರು ತಿಳಿಸಿದರು.
ಫಳ್ನೀರ್‌ನ ಸೇಂಟ್ ಮೇರಿಸ್ ಬಾಲಕಿಯರ ಶಾಲೆ ಬಳಿ ‘ರಮದಾನ್ ಫುಡ್ ಸ್ಟ್ರೀಟ್ ಸೀಸನ್ 6‘ ಎಂಬ ಅಂಗಡಿ ತೆರೆಯಲಾಗಿದೆ. ವಿವಿಧ ಭಕ್ಷ್ಯಗಳು, ಹಣ್ಣುಗಳ ಬಗೆಬಗೆಯ ಜೂಸ್, ತಂಪು ಪಾನೀಯ, ತರಕಾರಿಯ ವಿವಿಧ ಖಾದ್ಯಗಳು ಬಾಯಲ್ಲಿ ನೀರೂರಿಸುತ್ತಿವೆ. ಘಮಘಮಿಸುವ ಭಕ್ಷ್ಯಗಳು, ಬಣ್ಣಬಣ್ಣದ ವಿದ್ಯುದ್ದೀಪ, ಸಿಂಗರಿಸಲಾದ ಮೇಜು ಕುರ್ಚಿಗಳಿಂದ ಕೂಡಿದ ‘ಆಹ್ಲಾದಕರ ವೈಬ್’ ಗ್ರಾಹಕರನ್ನು ಸೆಳೆಯುತ್ತಿದೆ.
ರಂಜಾನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.