
ಸಾಂದರ್ಭಿಕ ಚಿತ್ರ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಿಂದ ದುಬೈಗೆ ಪ್ರವಾಸಕ್ಕೆ ತೆರಳಿದ್ದ 8 ಮಂದಿ ಕೊಲ್ಲಿ ಯುದ್ಧದ ಕಾರಣಕ್ಕೆ ವಿಮಾನ ಹಾರಾಟ ರದ್ದಾದ ಕಾರಣದಿಂದಾಗಿ ದುಬೈನಲ್ಲಿ ಸಿಲುಕಿಕೊಂಡಿದ್ದಾರೆ.
‘ದುಬೈನಲ್ಲಿ ಸಿಲುಕಿಕೊಂಡಿರುವ ಕೆಲವು ಕುಟುಂಬಗಳು ಸಂಪರ್ಕಿಸಿವೆ. ಮಂಗಳೂರಿನ ಶ್ರೀನಾಥ್ ಪಿ.ಶೆಟ್ಟಿ, ಸಾಧಿಕಾ ಶೆಟ್ಟಿ ಹಾಗೂ ಅವರ ಪುತ್ರಿ ಶ್ರಿಯಾ, ಸುರತ್ಕಲ್‌ನ ಕಸ್ತೂರಿ ಸದಾಶಿವ ಪೈ, ಕಸ್ತೂರಿ ಸಂಧ್ಯಾಪೈ, ಕಸ್ತೂರಿ ಸುಬ್ರಹ್ಮಣ್ಯ ಪೈ, ಮಂಗಳೂರಿನ ಕೆ ಪ್ರತಿಭಾ ನಾಯಕ್ ಮತ್ತು ಶಶಾಂಕ್ ಶಶಿಧರ ನಾಯಕ್ ದುಬೈನಲ್ಲಿ ಸಿಲುಕಿರುವ ಮಾಹಿತಿ ಸಿಕ್ಕಿದೆ. ಊರಿಗೆ ಮರಳಲು ನೆರವಾಗುವಂತೆ ಅವರು ಕೋರಿದ್ದಾರೆ’ ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
‘ಪ್ರವಾಸದ ಸಲುವಾಗಿ ದುಬೈಗೆ ಗುರುವಾರ ದುಬೈಗೆ ಕುಟುಂಬ ಸಮೇತ ಬಂದಿದ್ದೆವು. ಭಾನುವಾರ ಮರಳಬೇಕಿತ್ತು. ಮುಂದೆ ಏನಾಗುತ್ತದೋ ಗೊತ್ತಿಲ್ಲ’ ಎಂದು ಶ್ರೀನಾಥ್ ಶೆಟ್ಟಿ ಅವರು ದೂರವಾಣಿ ಮೂಲಕ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ದುಬೈನಲ್ಲಿ ನಿನ್ನೆ ಅನೇಕ ಸಲ ಬಾಂಬ್ ದಾಳಿ ನಡೆದಿತ್ತು. ಇವತ್ತು ಕಡಿಮೆ ಆಗಿದೆ. ತೀರಾ ಕಳವಳ ಪಡುವ ವಾತಾವರಣ ಇಲ್ಲ’ ಎಂದರು.
ಸುರತ್ಕಲ್‌ನ ಕಸ್ತೂರಿ ಸದಾಶಿವ ಪೈ ಕುಟುಂಬ, ಪ್ರತಿಭಾ ನಾಯಕ್ ಮತ್ತು ಶಶಾಂಕ್ ನಾಯಕ್ ಇದೇ 5ರಂದು ಊರಿಗೆ ಮರಳಬೇಕಿತ್ತು.
‘ಒಮನ್ ಹೊರತಾಗಿ ಬೇರೆ ಕೊಲ್ಲಿ ರಾಷ್ಟ್ರಗಳ ಮೇಲೆ ಹೆಚ್ಚಿನ ದಾಳಿ ನಡೆಯು ತ್ತಿದೆ.ಇಲ್ಲಿನ ಬಂದರೊಂದಕ್ಕೆ ಡ್ರೋನ್ ದಾಳಿ ಆಗಿದ್ದು, ಬಿಟ್ಟರೆ ಇಲ್ಲಿ ಹೆಚ್ಚಿನ ದಾಳಿ ಆಗಿಲ್ಲ. ಸದ್ಯಕ್ಕೆ ಆತಂಕ ಪಡುವಂತಹ ಸ್ಥಿತಿ ಏನೂ ಇಲ್ಲಿ ಇಲ್ಲ’ ಎಂದು ಒಮನ್ ನಲ್ಲಿ ಉದ್ಯೋಗದಲ್ಲಿರುವ ಮೂಡುಬಿದಿರೆಯ ಶೇಖರ ಪೂಜಾರಿ ತಿಳಿಸಿದರು.
‘ಕತಾರ್‌ನ ದೋಹಾದಲ್ಲಿ ಸೋಮವಾರ ಎರಡು ಸಲ ದಾಳಿ ನಡೆದಿದೆ. ಆದರೆ ಯಾವುದೇ ಹಾನಿ ಆಗಿಲ್ಲ. ದಾಳಿಯ ಸುಳಿವು ಸಿಗುತ್ತಿದ್ದಂತೆಯೇ ಇಲ್ಲಿನ ಸರ್ಕಾರವು ಸಮೀಪದಲ್ಲಿರುವ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಮೊಬೈಲ್‌ಗೆ ಮುನ್ಸೂಚನೆಯ ಸಂದೇಶ ಕಳುಹಿಸುತ್ತಿದೆ. ಇಂದು ಎರಡು ಬಾರಿ ಅಂತಹ ಸಂದೇಶಗಳು ಬಂದಿವೆ. ತೀರಾ ಆತಂಕ ಪಡುವ ಸ್ಥಿತಿ ಇಲ್ಲ ಎಂದು ಕತಾರ್‌ನ ದೋಹಾ ಬಳಿಯ ವುಕೈರ್ ಎಝ್ದಾನ್‌ನಲ್ಲಿ ನೆಲೆಸಿರುವ ಉಜಿರೆಯ ಯಾಹ್ಯಾ ಅಬ್ಬಾಸ್ ತಿಳಿಸಿದರು.
ಇಲ್ಲಿನ ಬಜಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ ಮಸ್ಕತ್‌ಗೆ ಇದ್ದ ನೇರ ವಿಮಾನಯಾನ ಸೌಕರ್ಯ ಕೆಲ ವರ್ಷಗಳ ಹಿಂದೆ ರದ್ದಾಗಿತ್ತು. ಈ ವಿಮಾನ ಯಾನ ಸೇವೆಯನ್ನು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪುನರಾರಂಭಿಸಿದೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳು ಮಂಗಳೂರು ಮತ್ತು ಮಸ್ಕತ್ ನಡುವೆ ನಿಗದಿಯಂತೆ ಹಾರಾಟ ನಡೆಸಲಿವೆ. ಇದೇ 3ರಂದು ಮಂಗಳವಾರ ಮಂಗಳೂರು ವಿಮಾನ ನಿಲ್ದಾಣದಿಂದ (ಐಎಕ್ಸ್ಇ–ಎಂಸಿಟಿ ಎಸ್‌ಟಿಡಿ) ಮಸ್ಕತ್‌ಗೆ 9.20ಕ್ಕೆ ವಿಮಾನ ಹೊರಡಲಿದೆ. ಮಸ್ಕತ್‌ನಿಂದ (ಎಂಸಿಟಿ–ಐಎಕ್ಸ್ಇ ಎಸ್‌ಟಿಎ) ಮಂಗಳೂರಿಗೆ ವಿಮಾನವು ಸಂಜೆ 5.30ಕ್ಕೆ ಹೊರಡಲಿದೆ ಎಂದು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಇದೇ 3ರಂದು ಮಂಗಳೂರಿನಿಂದ ದೋಹಾ, ದುಬೈ, ಕುವೈತ್, ದಮಾಮ್ ಹಾಗೂ ಅಬುಧಾಬಿಗೆ ತೆರಳಬೇಕಿದ್ದ ಹಾಗೂ ಆ ನಗರಗಳಿಂದ ಮಂಗಳೂರಿಗೆ ಬರಬೇಕಿದ್ದ ವಿಮಾನಗಳ ಹಾರಾಟ ರದ್ದಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.