ADVERTISEMENT

ಮಂಗಳೂರು: ‘ಶಕ್ತಿ’ ಜಾರಿ ಬಳಿಕ ಕೆಎಸ್‌ಆರ್‌ಟಿಸಿಯತ್ತ ನಾರಿಯರ ಚಿತ್ತ

ಕರಾವಳಿಯಲ್ಲಿ ಪ್ರಯಾಣಿಕರ ಸಂಖ್ಯೆ ದಿನವೊಂದಕ್ಕೆ ಸರಾಸರಿ 55 ಸಾವಿರದಷ್ಟು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 11 ಜುಲೈ 2023, 5:54 IST
Last Updated 11 ಜುಲೈ 2023, 5:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ‘ಶಕ್ತಿ’ ಯೋಜನೆಯನ್ನು ಜಾರಿಗೊಳಿಸಿದ ಬಳಿಕ, ಕರಾವಳಿಯ ಕೆಎಸ್‌ಆರ್‌ಟಿಸಿಯ ಎರಡು ವಿಭಾಗಗಳ ವ್ಯಾಪ್ತಿಯಲ್ಲಿ ನಿಗಮದ ಬಸ್‌ ಬಳಸುವ ಪ್ರಯಾಣಿಕರ ದೈನಂದಿನ ಸರಾಸರಿ ಸಂಖ್ಯೆ 55 ಸಾವಿರದಷ್ಟು ಹೆಚ್ಚಳವಾಗಿದೆ.

ಮಂಗಳೂರು ವಿಭಾಗದ ಬಸ್‌ಗಳಲ್ಲಿ ದೈನಂದಿನ ಪ್ರಯಾಣಿಕರ ಸರಾಸರಿ ಸಂಖ್ಯೆಯಲ್ಲಿ 25 ಸಾವಿರದಷ್ಟು ಹಾಗೂ ಪುತ್ತೂರು ವಿಭಾಗದ ಬಸ್‌ಗಳಲ್ಲಿ 30 ಸಾವಿರದಷ್ಟು ಹೆಚ್ಚಳವಾಗಿದೆ. ಈ ಯೋಜನೆ ಜಾರಿಯಾಗಿ ಮಂಗಳವಾರಕ್ಕೆ (ಜುಲೈ 11) ಒಂದು ತಿಂಗಳು ತುಂಬಲಿದೆ.

‘ಕರಾವಳಿಯಲ್ಲಿ ಜನರು ಈ ಹಿಂದೆ ಕೆಎಸ್‌ಆರ್‌ಟಿಸಿ ಬಸ್‌ ಹತ್ತಲು ಹಿಂದೆ ಮುಂದೆ ನೋಡುತ್ತಿದ್ದುದೇ ಜಾಸ್ತಿ. ಉಡುಪಿ ಮೂಲಕ ಉತ್ತರ ಕರ್ನಾಟಕದ ಉತ್ತರ ಭಾಗಗಳಿಗೆ ಸಂಚರಿಸುತ್ತಿದ್ದ ಬಸ್‌ಗಳಲ್ಲಿ ಸೀಟುಗಳೆಲ್ಲ ಖಾಲಿ ಇರುತ್ತಿದ್ದವು. ಆದರೆ, ಶಕ್ತಿ ಯೋಜನೆ ಜಾರಿಯಾದ ಬಳಿಕ ಇಲ್ಲೂ ನಿಗಮದ ಬಸ್‌ಗಳು ಪ್ರಯಾಣಿಕರಿಂದ ತುಂಬಿರುತ್ತವೆ’ ಎಂದು ಕೆಎಸ್‌ಆರ್‌ಟಿಸಿ ಬಸ್‌ನ ನಿರ್ವಾಹಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ನಮ್ಮ ವಿಭಾಗದ ವ್ಯಾಪ್ತಿಯ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ನಿತ್ಯ ಸರಾಸರಿ 90 ಸಾವಿರದಷ್ಟು ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ಈ ಹಿಂದೆ ಮಹಿಳಾ ಪ್ರಯಾಣಿಕರ ಲೆಕ್ಕ ಇಡುತ್ತಿರಲಿಲ್ಲ. ಆದರೆ, ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿರುವುದು ನಿಜ. ಬಸ್‌ಗಳಲ್ಲಂತೂ ಈಗ ಶೇ 50ರಷ್ಟು ಆಸನಗಳು ಮಹಿಳೆಯರಿಂದಲೇ ಭರ್ತಿಯಾಗಿರುತ್ತವೆ’ ಎಂದು ಕೆಎಸ್‌ಆರ್‌ಟಿಸಿಯ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ತಿಳಿಸಿದರು.

‘ಶಕ್ತಿ ಯೋಜನೆ ಜಾರಿಯಾದ ಬಳಿಕ ನಮ್ಮ ವಿಭಾಗದಲ್ಲಿ ನಿತ್ಯ ಸರಾಸರಿ 68 ಸಾವಿರದಷ್ಟು ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ನಮ್ಮ ವಿಭಾಗದ ವ್ಯಾಪ್ತಿಯ ಬಸ್‌ಗಳಲ್ಲಿ ಈ ಹಿಂದೆ ನಿತ್ಯ ಸರಾಸರಿ 1.20 ಲಕ್ಷ ಮಂದಿ ಪ್ರಯಾಣಿಸುತ್ತಿದ್ದರು. ಶಕ್ತಿ ಯೋಜನೆ ಜಾರಿಯಾದ  ಒಂದೇ ತಿಂಗಳಲ್ಲಿ ಪ‌ರಯಾಣಿಕರ ಸರಾಸರಿ ಸಂಖ್ಯೆ 25 ಸಾವಿರದಷ್ಟು ಹೆಚ್ಚಾಗಿದೆ’ ಎಂದು ಮಂಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್‌ ಶೆಟ್ಟಿ ತಿಳಿಸಿದರು.

ಮಂಗಳೂರು ವಿಭಾಗದ 303 ಬಸ್‌ಗಳ 1,233 ಟ್ರಿಪ್‌ಗಳು ಹಾಗೂ ಪುತ್ತೂರು ವಿಭಾಗದ 341 ಬಸ್‌ಗಳ 1,978 ಟ್ರಿಪ್‌ಗಳಲ್ಲಿ ಶಕ್ತಿ ಯೋಜನೆ ಅಡಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಅವಕಾಶ ಇದೆ.

ತೀರ್ಥಕ್ಷೇತ್ರಗಳಿಗೆ ಯಾತ್ರಿಕರ ದಂಡು

ಶಕ್ತಿ ಯೋಜನೆ ಜಾರಿಯಾದ ಬಳಿಕ ಜಿಲ್ಲೆಯ ಪ್ರಮುಖ ತೀರ್ಥಕ್ಷೇತ್ರಗಳಾದ ಧರ್ಮಸ್ಥಳ ಹಾಗೂ ಸುಬ್ರಹ್ಮಣ್ಯಕ್ಕೆ ಬೆಂಗಳೂರು ಕಡೆಯಿಂದ ಬರುವ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ‘ತೀರ್ಥಕ್ಷೇತ್ರಗಳಿಗೆ ಭೇಟಿ ನೀಡುವವರ ಸಂಖ್ಯೆ ವಾರಾಂತ್ಯದಲ್ಲಿ ಜಾಸ್ತಿ. ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯಕ್ಕೆ ಭೇಟಿ ನೀಡುವ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಜಾಸ್ತಿಯಾಗಿದ್ದರಿಂದ ನಾವು ವಾರಾಂತ್ಯಗಳಲ್ಲಿ ಹೆಚ್ಚುವರಿ ಬಸ್‌ಗಳನ್ನು ವ್ಯವಸ್ಥೆಗೊಳಿಸಬೇಕಾಗುತ್ತದೆ. ಶಕ್ತಿ ಯೋಜನೆ ಜಾರಿಯಾದ ಬಳಿಕ ಜೂನ್‌ ತಿಂಗಳ ವಾರಾಂತ್ಯಗಳಲ್ಲಿ ಬೆಂಗಳೂರು– ಧರ್ಮಸ್ಥಳ ನಡುವೆ 25 ಬಸ್‌ಗಳನ್ನು ಹಾಗೂ ಬೆಂಗಳೂರು– ಸುಬ್ರಹ್ಮಣ್ಯ ನಡುವೆ ಸಂಚರಿಸಲು 20 ಹೆಚ್ಚುವರಿ ಬಸ್‌ಗಳನ್ನು ವ್ಯವಸ್ಥೆಗೊಳಿಸಬೇಕಾಯಿತು. ಕಳೆದ ವಾರ ಜಿಲ್ಲೆಯಲ್ಲಿ ಮಳೆ ಜಾಸ್ತಿ ಇದ್ದ ಕಾರಣ ಪ್ರಯಾಣಿಕರ ಸಂಖ್ಯೆ ತುಸು ಕಡಿಮೆ ಇತ್ತು’ ಎಂದು ಜಯಕರ ಶೆಟ್ಟಿ ತಿಳಿಸಿದರು.

1.62 ಲಕ್ಷ ಶಕ್ತಿ ಯೋಜನೆ ಜಾರಿಗೆ ಮುನ್ನ ಪುತ್ತೂರು ವಿಭಾಗದಲ್ಲಿ ದೈನಂದಿನ ಪ್ರಯಾಣಿಕರ ಸರಾಸರಿ ಸಂಖ್ಯೆ

1.92 ಲಕ್ಷ ಶಕ್ತಿ ಯೋಜನೆ ಜಾರಿ ಬಳಿಕ ಪುತ್ತೂರು ವಿಭಾಗದಲ್ಲಿ ದೈನಂದಿನ ಪ್ರಯಾಣಿಕರ ಸರಾಸರಿ ಸಂಖ್ಯೆ

1.20 ಲಕ್ಷ ಮಂಗಳೂರು ವಿಭಾಗದಲ್ಲಿ ಶಕ್ತಿ ಯೋಜನೆ ಜಾರಿಗೆ ಮುನ್ನ ದೈನಂದಿನ ಪ್ರಯಾಣಿಕರ ಸರಾಸರಿ ಸಂಖ್ಯೆ

1.45 ಲಕ್ಷ ಶಕ್ತಿ ಯೋಜನೆ ಜಾರಿ ಬಳಿಕ ಪುತ್ತೂರು ವಿಭಾಗದಲ್ಲಿ ದೈನಂದಿನ ಪ್ರಯಾಣಿಕರ ಸರಾಸರಿ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.