ADVERTISEMENT

MRPL ತೈಲ ಸಂಸ್ಕರಣೆ ಮೇಲೆ ಕೊಲ್ಲಿ ಯುದ್ಧದ ಕರಿಛಾಯೆ

ಬೇಡಿಕೆಯ ಶೇ 80ರಷ್ಟು ಕಚ್ಛಾತೈಲ ಕೊಲ್ಲಿ ದೇಶಗಳಿಂದಲೇ ಆಮದು

ಪ್ರವೀಣ್‌ ಕುಮಾರ್‌ ಪಿ.ವಿ
Published 3 ಮಾರ್ಚ್ 2026, 22:52 IST
Last Updated 3 ಮಾರ್ಚ್ 2026, 22:52 IST
<div class="paragraphs"><p>ಮಂಗಳೂರಿನ ಎಂಆರ್‌ಪಿಎಲ್‌ನ ನೋಟ</p></div>

ಮಂಗಳೂರಿನ ಎಂಆರ್‌ಪಿಎಲ್‌ನ ನೋಟ

   

ಮಂಗಳೂರು: ಇಲ್ಲಿನ ‘ಮಂಗಳೂರು ರಿಫೈನರಿ ಮತ್ತು ಪೆಟ್ರೊಕೆಮಿಕಲ್ಸ್‌ ಲಿಮಿಟೆಡ್‌’ನ (ಎಂಆರ್‌ಪಿಎಲ್‌) ಸಂಸ್ಥೆಯ ತೈಲ ಸಂಸ್ಕರಣೆಯ ಮೇಲೂ ಕೊಲ್ಲಿ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಕರಿಛಾಯೆ ಬಿದ್ದಿದೆ. ಯುದ್ಧ ಇನ್ನೆರಡು ವಾರ ಮುಂದುವರಿದರೆ ಸಂಸ್ಥೆಯು ಕಚ್ಚಾ ತೈಲದ ಕೊರತೆ ಎದುರಿಸುವ ಸಾಧ್ಯತೆ ಇದೆ. 

ವರ್ಷದಲ್ಲಿ ಸುಮಾರು 1.80 ಕೋಟಿ ಟನ್‌ ಕಚ್ಚಾತೈಲವನ್ನು ಎಂಆರ್‌ಪಿಎಲ್ ಆಮದು ಮಾಡಿಕೊಳ್ಳುತ್ತದೆ. ಅದನ್ನು ಸಂಸ್ಕರಿಸಿ ವಿವಿಧ ಪೆಟ್ರೋಲಿಯಂ ಉತ್ಪನ್ನಗಳನ್ನು ತಯಾರಿಸುತ್ತದೆ. ದೇಶೀಯ ಬೇಡಿಕೆ ಪೂರೈಕೆ ಜೊತೆಗೆ ವಿದೇಶಗಳಿಗೂ ಈ ಉತ್ಪನ್ನಗಳು ರಫ್ತಾಗುತ್ತವೆ ಎನ್ನುತ್ತವೆ ಸಂಸ್ಥೆಯ ಮೂಲಗಳು. 

ADVERTISEMENT

‘ಈಚಿನ ದಿನಗಳಲ್ಲಿ ಎಂಆರ್‌ಪಿಎಲ್‌ನ ಒಟ್ಟು ಬೇಡಿಕೆಯ ಶೇ 80ರಷ್ಟು ಕಚ್ಛಾತೈಲ ಸೌದಿ ಅರೇಬಿಯಾ, ಕತಾರ್‌, ಕುವೈತ್‌, ದುಬೈ, ಇರಾಕ್‌, ಇರಾನ್, ಮೊದಲಾದ ದೇಶಗಳಿಂದಲೇ ಪೂರೈಕೆಯಾಗುತ್ತಿದೆ. ಈ ಯುದ್ಧದಿಂದಾಗಿ ತೈಲ ಸಾಗಣೆ ಹಡಗುಗಳ ಸಂಚಾರ ಈಗಾಗಲೇ ವ್ಯತ್ಯಯವಾಗಿದ್ದು, ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ’ ಎಂದು ಎಂಆರ್‌ಪಿಎಲ್‌ನ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಎಂಆರ್‌ಪಿಎಲ್‌ಗೆ ಮಾಸಿಕ ಸರಾಸರಿ 15 ಲಕ್ಷ ಟನ್‌ ಕಚ್ಛಾತೈಲ ಬೇಕಾಗುತ್ತದೆ. ತಿಂಗಳ ಬೇಡಿಕೆಯಲ್ಲಿ ಶೇ 50ರಷ್ಟು ತೈಲ ರಷ್ಯಾದಿಂದ ಪೂರೈಕೆಯಾಗಿದ್ದೂ ಇದೆ. ಪ್ರಸ್ತುತ ಒಟ್ಟು ಬೇಡಿಕೆಯ ಶೇ 80ರಷ್ಟು ಕಚ್ಛಾತೈಲ ಕೊಲ್ಲಿ ದೇಶಗಳಿಂದ ಆಮದಾಗುತ್ತಿದೆ. ಗರಿಷ್ಠ 12 ದಿನಗಳಿಗೆ ಬೇಕಾಗುವಷ್ಟು ಕಚ್ಛಾತೈಲ ಸಂಗ್ರಹಿಸುವ ವ್ಯವಸ್ಥೆ ನಮ್ಮಲ್ಲಿದೆ. ಹಾಗಾಗಿ ಕೊಲ್ಲಿಯಲ್ಲಿ ನಡೆಯುತ್ತಿರುವ ಯುದ್ಧ ಇನ್ನೂ ಒಂದೆರಡು ವಾರ ಮುಂದುವರಿದರೂ ನಮ್ಮ ತೈಲ ಸಂಸ್ಕರಣ ಘಟಕಗಳ ಕಾರ್ಯಾಚರಣೆ ಏರುಪೇರಾಗುವ ಸಾಧ್ಯತೆ ಇದೆ’ ಎಂದರು.

‘ಕೊಲ್ಲಿದೇಶಗಳ ಹೊರತಾಗಿ ಅಮೆರಿಕ, ವೆನೆಜುವೆಲಾ, ಆಸ್ಟ್ರೇಲಿಯಾ, ಕೆನಡಾ, ನೈಜೀರಿಯಾ, ಅಂಗೋಲಾ ಮೊದಲಾದ ದೇಶಗಳಿಂದ ಕಚ್ಛಾತೈಲ ಆಮದು ಮಾಡಿಕೊಳ್ಳುವ ಅವಕಾಶವೂ ಇದೆ. ಆದರೆ, ದಿಢೀರ್‌ ಆಮದು ಪ್ರಾಯೋಗಿಕವಾಗಿ ಕಾರ್ಯಸಾಧುವಲ್ಲ. ಯುದ್ಧದ ಕಾರಣ ಆ ದೇಶಗಳು ಕಚ್ಛಾತೈಲಕ್ಕೆ ದುಬಾರಿ ದರ ವಿಧಿಸುತ್ತವೆ. ಸಾಗಾಟಕ್ಕೆ ಹಡಗು ಕಂಪನಿಗಳು ಹೆಚ್ಚು ದರ ಕೇಳುತ್ತವೆ’ ಎಂದು ಅವರು ವಿವರಿಸಿದರು.

  • ಎಂಆರ್‌ಪಿಎಲ್‌ಗೆ ಪ್ರತಿ ತಿಂಗಳು ಬೇಕು 15 ಲಕ್ಷ ಟನ್ ಕಚ್ಚಾ ತೈಲ

  • ಗರಿಷ್ಠ 12 ದಿನಗಳಿಗೆ ಬೇಕಾಗುವಷ್ಟು ಕಚ್ಚಾ ತೈಲ ಮಾತ್ರ ಸಂಗ್ರಹವಿದೆ

‘ಭೂಗತ ಸಂಗ್ರಹಾಗಾರದಲ್ಲಿದೆ 7.5 ಲಕ್ಷ ಟನ್‌’
‘ಇಂಡಿಯನ್ ಸ್ಟ್ರಾಟೆಜಿಕ್‌ ಪೆಟ್ರೋಲಿಯಂ ರಿಸರ್ವ್‌ ಲಿಮಿಟೆಡ್‌ (ಐಎಸ್‌ಪಿಆರ್‌ಎಲ್‌) ಮಂಗಳೂರಿನ ಹೊರವಲಯದಲ್ಲಿ ಎರಡು ಭೂಗತ ಸಂಗ್ರಹಾಗಾರಗಳಲ್ಲಿ ಕಚ್ಚಾ ತೈಲಗಳನ್ನು ಸಂಗ್ರಹಿಸುವ ವ್ಯವಸ್ಥೆಯನ್ನು ಹೊಂದಿದೆ. ಅದರಲ್ಲಿ ಒಂದು ಸಂಗ್ರಹಾಗಾರವನ್ನು ಎಂಆರ್‌ಪಿಎಲ್ ಕಚ್ಚಾ ತೈಲ ಸಂಗ್ರಹಕ್ಕೆ ಬಳಸಲಾಗುತ್ತಿದೆ. ಅದರಲ್ಲಿ ಗರಿಷ್ಠ 7.5 ಲಕ್ಷ ಟನ್‌ ಕಚ್ಚಾ ತೈಲವನ್ನು ಸಂಗ್ರಹಿಸಬಹುದಾಗಿದೆ’ ಎಂದು ಮೂಲಗಳು ತಿಳಿಸಿವೆ.