
ನೆಲ್ಯಾಡಿ (ಉಪ್ಪಿನಂಗಡಿ): ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ತನಗೆ ಲಭಿಸುವ ತಿಂಗಳ ಗೌರವಧನ, ಸಭಾ ಭತ್ಯೆಯನ್ನು ತನ್ನ ವಾರ್ಡಿನ ವ್ಯಾಪ್ತಿಯಲ್ಲಿರುವ ಬಡ ಮಕ್ಕಳ ಶಿಕ್ಷಣಕ್ಕೆ ನೀಡುವ ಮೂಲಕ ಗಮನಸೆಳೆದಿದ್ದಾರೆ.
ನೆಲ್ಯಾಡಿ ಗ್ರಾಮ ಪಂಚಾಯಿತಿ ಸದಸ್ಯ ಮಹಮ್ಮದ್ ಇಕ್ಬಾಲ್ ಸದಸ್ಯನಾಗಿ ಆಯ್ಕೆಯಾಗಿ ನಾಲ್ಕೂವರೇ ವರ್ಷ ಪೂರ್ಣಗೊಂಡಿದ್ದು, ಗ್ರಾಮ ಪಂಚಾಯಿತಿಯಿಂದ ತನಗೆ ಸಿಗುವ ಗೌರವಧನ, ಸಭಾಭತ್ಯೆಯಲ್ಲಿ ಈ ತನಕ ಒಂದು ರೂಪಾಯಿಯನ್ನು ಸ್ವಂತಕ್ಕೆ ಉಪಯೋಗಿಸದೆ ಅದಕ್ಕೆ ಒಂದಿಷ್ಟು ಸೇರಿಸಿ ತನ್ನ ವಾರ್ಡಿನ ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗ ಮಾಡಿದ್ದಾರೆ.
ಆರ್ಥಿಕವಾಗಿ ಬಲಷ್ಠವಲ್ಲದ, ಶ್ರಮ ಜೀವಿಯಾಗಿರುವ ಮಹಮ್ಮದ್ ಇಕ್ಬಾಲ್ 2021ರ ಫೆಬ್ರುವರಿಯಿಂದ ಗ್ರಾಮ ಪಂಚಾಯಿತಿ ಸದಸ್ಯನಾಗಿ ಆಯ್ಕೆಯಾಗಿದ್ದಾರೆ. ಆರಂಭದಲ್ಲಿ ತಿಂಗಳಿಗೆ ₹1 ಸಾವಿರ ಗೌರವಧನ ಹಾಗೂ ₹ 100 ಸಭಾಭತ್ಯೆ ಸಿಗುತಿತ್ತು. ಎರಡು ವರ್ಷದ ನಂತರ ಗೌರವಧನ ಹಾಗೂ ಸಭಾಭತ್ಯೆ ಏರಿಕೆ ಮಾಡಲಾಗಿದ್ದು, ಈದೀಗ ₹2 ಸಾವಿರ ಗೌರವಧನ ಹಾಗೂ ₹ 300 ರೂಪಾಯಿ ಸಭಾ ಭತ್ಯೆ ಸಿಗುತ್ತಿದೆ. ನಾಲ್ಕೂವರೆ ವರ್ಷದಿಂದ ಸುಮಾರು ₹ 90 ಸಾವಿರವನ್ನು ಬಡ ಮಕ್ಕಳ ಶಿಕ್ಷಣಕ್ಕೆ ನೀಡಿದ್ದಾರೆ.
ಆರಂಭದ ದಿನಗಳಲ್ಲಿ ಗೌರವಧನ ಚೆಕ್ ಮೂಲಕ ದೊರೆಯುತ್ತಿತ್ತು. ಅದನ್ನು ವಾರ್ಡಿನ ಯಾವುದಾದರೊಂದು ಅಂಗನವಾಡಿ, ಶಾಲೆ, ಹೈಸ್ಕೂಲ್, ಕಾಲೇಜುಗಳಿಗೆ ನೀಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಚೆಕ್‌ನ ಬದಲು ಸದಸ್ಯರ ಖಾತೆಗೆ ಜಮೆ ಮಾಡಲಾಗುತ್ತಿದೆ. ಅದನ್ನು ಈಗ ಶಾಲೆ, ಅಂಗನವಾಡಿಗೆ ನೀಡುತ್ತಿದ್ದಾರೆ. ಬಡ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುತ್ತಿರುವ ಮಹಮ್ಮದ್ ಇಕ್ಬಾಲ್ ಅವರ ಸೇವೆಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ನಾನೇನು ಶ್ರಮದಿಂದ ಇಲ್ಲವೇ ಪರೀಕ್ಷೆ ಬರೆದು ಈ ಸ್ಥಾನ ಗಿಟ್ಟಿಸಿಕೊಂಡಿಲ್ಲ. ನನ್ನನ್ನು ಆಯ್ಕೆ ಮಾಡಿರುವ ವಾರ್ಡಿನ ಸದಸ್ಯರ ಋಣ ನನ್ನ ಮೇಲಿದೆ. ಅದಕ್ಕಾಗಿ ನನ್ನ ಗೌರವ ಧನವನ್ನು ವಾರ್ಡಿನ ಬಡ ಮಕ್ಕಳ ಶಿಕ್ಷಣಕ್ಕೆ ನೀಡುತ್ತಿದ್ದೇನೆ. ಇದು ನನಗೆ ಸಂತಸ ತಂದಿದೆ.ಮಹಮ್ಮದ್ ಇಕ್ಬಾಲ್ ಗ್ರಾಮ ಪಂಚಾಯಿತಿ ಸದಸ್ಯ ನೆಲ್ಯಾಡಿ
ಮಹಮ್ಮದ್ ಇಕ್ಬಾಲ್ ಅವರು ಸ್ವಯಂಪ್ರೇರಿತವಾಗಿ ತಮ್ಮ ಗೌರವಧನವನ್ನು ಕಳೆದ ನಾಲ್ಕು ವರ್ಷಗಳಿಂದ ನಮ್ಮ ಶಾಲೆಗೆ ನೀಡಿ ಅರ್ಹ ಮಕ್ಕಳ ಶಿಕ್ಷಣಕ್ಕೆ ಬಳಸುವಂತೆ ಹೇಳಿದ್ದಾರೆ. ಅದರಂತೆ ಸಂಸ್ಥೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶುಲ್ಕ ಪಾವತಿ ಸಹಿತ ವಿದ್ಯಾಭ್ಯಾಸಕ್ಕೆ ಬಳಕೆ ಮಾಡುತ್ತಿದ್ದೇವೆ.ಎಂ.ಐ.ಥೋಮಸ್ ಮುಖ್ಯಶಿಕ್ಷಕ ಸೇಂಟ್ ಜಾರ್ಜ್ ಪ್ರೌಢಶಾಲೆ ನೆಲ್ಯಾಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.