
ಬಂಧಿತ ಆರೋಪಿಗಳು
ಮಂಗಳೂರು: ನೇಪಾಳದಲ್ಲಿದ್ದುಕೊಂಡು ಆನ್‌ಲೈನ್ ಹೂಡಿಕೆ ನೆಪದಲ್ಲಿ ಭಾರತೀಯರನ್ನು ಗುರಿಯಾಗಿಸಿ ವಂಚನೆ ನಡೆಸಿರುವ ತಂಡವನ್ನು ಭೇದಿಸಿರುವ ಇಲ್ಲಿನ ಸೆನ್ ಕ್ರೈಂ ಠಾಣೆಯ ಪೊಲೀಸರು ಈ ಸಂಬಂಧ 11 ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಒಂದು ಲ್ಯಾಪ್ ಟಾಪ್, ವಿವಿಧ ಕಂಪನಿಗಳ 21 ಮೊಬೈಲ್ ಪೋನ್‌ಗಳು, ವಿವಿಧ ಕಂಪನಿಗಳ 20 ಸಿಮ್ ಕಾರ್ಡ್‌ಗಳು, ಬೇರೆ ಬೇರೆ ಬ್ಯಾಂಕ್‌ಗಳ 20 ಡೆಬಿಟ್ ಕ್ರೆಡಿಟ್ ಕಾರ್ಡ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಸುದ್ದಿಗಾರರಿಗೆ ಇಲ್ಲಿ ಗುರುವಾರ ಮಾಹಿತಿ ನೀಡಿದ ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ‘ಒಟ್ಟು 16 ಭಾರತೀಯರು ಹಾಗೂ ಒಬ್ಬ ಚೀನಾ ಪ್ರಜೆ ಸೇರಿ 17 ಮಂದಿ ಸೇರಿಕೊಂಡು ಆನ್‌ಲೈನ್ ಹೂಡಿಕೆ ನೆಪದಲ್ಲಿ ದೇಶದ ವಿವಿಧ ಭಾಗಗಳ ಜನರನ್ನು ವಂಚಿಸುತ್ತಿದ್ದರು. 11 ಆರೋಪಿಗಳನ್ನು ಇಲ್ಲಿನ ಸೆನ್ ಕ್ರೈ ಠಾಣೆಯ ಪೊಲೀಸರು ಬಂಧಿಸಿದ್ದು, ಇನ್ನುಳಿದ ಐವರು ಭಾರತೀಯ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಕಾರ್ಯ ಮುಂದುವರಿದಿದೆ. ಚೀನಾದ ಆರೋಪಿಯನ್ನು ನೇಪಾಳದ ಪೊಲೀಸರು ಬಂಧಿಸಿದ್ದಾರೆ’ ಎಂದು ತಿಳಿಸಿದರು.
‘ಗುಜರಾತಿನ ಭಾವನಗರ ಜಿಲ್ಲೆಯ ಮಕವನ್ ವಿಕ್ರಂ (25), ಪಶ್ಚಿಮ ಬಂಗಾಳದ ಕೋಲ್ಕತ್ತದ ಸೌಮ್ಯಾಧಿತ್ಯ ಚಟ್ಟೋಪಾಧ್ಯಾಯ (21), ಜಾರ್ಖಾಂಡ್‌ನ ಸಿಂಗಬುಮ್ ಜಿಲ್ಲೆ ಪುಪ್ಲ ಶಿವ ಕುಮಾರ್ ರಾವ್ (32), ಮಿಥುನ್ ಕುಮಾರ್ ಮಂಗರಾಜ್ (38), ಡಿಯೋಗರ್ ಜಿಲ್ಲೆಯ ರಾಜೇಶ್ ಮಂಡನ್ (30), ಉತ್ತರ ಪ್ರದೇಶದ ಮಾವೋ ಜಿಲ್ಲೆಯ ಗೌರವ್ ಪಾಂಡೆ (24), ಸುಲ್ತಾನ್ ಪುರ್ ಜಿಲ್ಲೆಯ ಹರ್ಷ್ ಮಿಸ್ರಾ (22), ಲಖನೌ ಜಿಲ್ಲೆಯ ಮೊಹಮ್ಮದ್ ಆಕೀಬ್ ಅಲಿ (27) , ಝಾನ್ಸಿ ಜಿಲ್ಲೆಯ ನೌಶಾದ್ ಅಲಿ (34), ಬಿಹಾರದ ನಳಂದ ಜಿಲ್ಲೆಯ ರಾಜೀವ್ ರಂಜನ್ ಕುಮಾರ್ (30), ರಾಜಾಸ್ಥಾನದ ಜೈಪುರದ ಓಂ ಪ್ರಕಾಶ್ ಯಾದವ್ (37) ಬಂಧಿತರು’ ಎಂದು ತಿಳಿಸಿದರು.
‘ಆರೋಪಿಗಳ ಮೊಬೈಲ್ ಹಾಗೂ ಲ್ಯಾಪ್‌ಟಾಪ್ ಪರಿಶೀಲಿಸಿದಾಗ, ವಂಚನೆಗೆ ಬಳಲಾದ ಒಟ್ಟು 624 ಬ್ಯಾಂಕ್ ಖಾತೆಗಳ ವಿವರ ಸಿಕ್ಕಿವೆ. ರಾಷ್ಟ್ರೀಯ ಸೈಬರ್ ಅಪರಾಧಗಳನ್ನು ವರದಿ ಮಾಡುವ ಪೋರ್ಟಲ್‌ನಲ್ಲಿ (ಎನ್‌ಸಿಆರ್‌ಪಿ) ಆ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದಂತೆ 4,580 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 1 ಬ್ಯಾಂಕ್ ಖಾತೆಯನ್ನು ₹ 167 ಕೋಟಿ ಹಣ ವರ್ಗಾವಣೆಗೆ ಬಳಸಲಾಗಿದೆ. ಈ ಬ್ಯಾಂಕ್ ಖಾತೆಗಳಲ್ಲಿ 10 ಖಾತೆಗಳನ್ನು ಇಲ್ಲಿನ ಸೆನ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳಲ್ಲಿ ವಂಚಕರು ದುರ್ಬಳಕೆ ಮಾಡಿಕೊಂಡಿದ್ದು, ಸುಮಾರು ₹ 30.70 ಕೋಟಿ ಹಣವನ್ನೂ ಈ ಖಾತೆಗಳ ಮೂಲಕ ವರ್ಗಾವಣೆ ಮಾಡಿದ್ದಾರೆ. ಇನ್ನುಳಿದ 623 ಬ್ಯಾಂಕ್ ಖಾತೆಗಳ ಮೂಲಕ ನಡೆಸಿದ ಹಣ ವರ್ಗಾವಣೆಗೆ ಸಂಬಂಧ ಇನ್ನಷ್ಟೇ ವಿವರ ಕಲೆಹಾಕಬೇಕಿದೆ’ ಎಂದರು.
ಪ್ರಕರಣದ ವಿವರ: ‘ಆನ್‌ಲೈನ್ ಹೂಡಿಕೆಯಿಂದ ಹೆಚ್ಚು ಲಾಭ ಒದಗಿಸುವ ಭರವಸೆ ನೀಡಿ ಸಂತ್ರಸ್ತ ವ್ಯಕ್ತಿಯೊಬ್ಬರಿಂದ ₹ 1.38 ಕೋಟಿ ಹಣವನ್ನು ಹತ್ತು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿದ ಬಗ್ಗೆ ಇಲ್ಲಿನ ಸೆನ್ ಕ್ರೈಂ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ವಂಚಕರು ನೇಪಾಳದಲ್ಲಿದ್ದುಕೊಂಡು ಈ ಕೃತ್ಯ ಎಸಗಿದ್ದು ತನಿಖೆಯ ತಾಂತ್ರಿಕ ವಿಶ್ಲೇಷಣೆಯ ವೇಳೆ ಗೊತ್ತಾಗಿತ್ತು. ವಂಚಕರ ತಂಡ ಸಾಮಾಜಿಕ ಜಾಲತಾಣದ ಮೂಲಕ ಖಾತೆದಾರರನ್ನು ಮತ್ತು ಏಜೆಂಟ್‌ಗಳನ್ನು ನೇಮಿಸಿಕೊಂಡು, ವಂಚನೆ ನಡೆಸುತ್ತಿತ್ತು. ಸಂತ್ರಸ್ತರ ಹಣವನ್ನು ಅಮೆರಿಕದ ಡಾಲರ್‌ಗೆ ಪರಿವರ್ತಿಸಿ ವಿದೇಶಕ್ಕೆ ಕಳುಹಿಸುತ್ತಿತ್ತು’ ಎಂದು ಕಮಿಷನರ್ ವಿವರಿಸಿದರು.
‘ವಂಚಕರ ಇನ್ನೊಂದು ತಂಡವು ಕಾಂಬೋಡಿಯಾ ಮತ್ತಿತರ ದೇಶಗಳಲ್ಲಿದ್ದುಕೊಂಡು ಹೂಡಿಕೆದಾರರನ್ನು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸುತ್ತಿತ್ತು. ಕೆಲಸ ಅರಸಿ ವಿದೇಶಗಳಿಗೆ ಹೋಗಿರುವ ಭಾರತೀಯರನ್ನು ಕೂಡಿ ಹಾಕಿ, ಅವರ ಮೂಲಕ ಸ್ಥಳೀಯ ಭಾಷೆಯಲ್ಲಿ ಇಲ್ಲಿನ ಸಂತ್ರಸ್ತರಿಗೆ ಹೆಚ್ಚು ಹಣ ಗಳಿಸುವ ಆಮಿಷ ಒಡ್ದಲಾಗುತ್ತಿತ್ತು. ಈ ರೀತಿ ಬೇರೆ ಬೇರೆ ಬ್ಯಾಂಕ್ ಖಾತೆಗಳನ್ನು ತಲುಪುತ್ತಿದ್ದ ಹಣದ ವಹಿವಾಟುಗಳನ್ನು ನೇಪಾಳದಲ್ಲಿರುವ ತಂಡವು ನಿಯಂತ್ರಣ ಮಾಡುತ್ತಿತ್ತು’ ಎಂದು ಅವರು ವಿವರಿಸಿದರು.
‘ಸೆನ್ ಕ್ರೈ ಠಾಣೆಗೆ ದೂರು ನೀಡಿದ್ದ ವ್ಯಕ್ತಿಗೆ ವಂಚಿಸಲು ಬಳಸಿದ 10 ಬ್ಯಾಂಕ್ ಖಾತೆಗಳನ್ನು ಒಟ್ಟು 128 ವಂಚನೆ ಪ್ರಕರಣಗಳಲ್ಲಿ ಬಳಸಲಾಗಿದೆ. ಈ ಸಂಬಂಧ 36 ಎಫ್‌ಐಆರ್‌ಗಳು ದಾಖಲಾಗಿವೆ’ ಎಂದು ಅವರು ತಿಳಿಸಿದರು.
‘ವಂಚಕರು ಬೇರೆ ಬೇರೆ ಕಂಪನಿ ಹೆಸರಿನಲ್ಲಿ ವಂಚನೆ ನಡೆಸಿದ್ದಾರೆ. ಇನ್‌ಸ್ಟಾಗ್ರಾಂ ಹಾಗೂ ಟೆಲಿಗ್ರಾಂ ಖಾತೆಗಳ ಮೂಲಕ ತಮ್ಮ ನಿಜವಾದ ಹೆಸರುಗಳನ್ನು ಮರೆಮಾಚಿ ಜಾಹೀರಾತು ನೀಡುತ್ತಾರೆ. ಕಾರ್ಪೋರೇಟ್ ಖಾತೆಗಳಿಗೆ, ಕರೆಂಟ್ ಖಾತೆಗಳಿಗೆ, ಯುಎಸ್‌ಡಿಟಿ ಟು ಐಎನ್‌ಆರ್ ಎಕ್ಸಚೇಂಜ್ ಮ್ಯಾನೇಜ್‌ಮೆಂಟ್ ಆಪರೇಟರ್ ಹಾಗೂ ಒಟಿಪಿ ವರ್ಕರ್‌ಗಳು ಬೇಕಾಗಿದ್ದಾರೆ ಎಂದು ಬ್ಯಾಂಕ್ ಖಾತೆದಾರರನ್ನು ಸಂಪರ್ಕಿಸುತ್ತಾರೆ. ಈ ಕೆಲಸಕ್ಕೆ ಶೇ 5ರಿಂದ ಶೇ 10ರಷ್ಟು ಕಮಿಷನ್ ಕೊಡುವುದಾಗಿ ಆಮಿಷ ಒಡ್ಡುತ್ತಾರೆ. ಉಚಿತವಾಗಿ ವಿಮಾನದ ಟಿಕೆಟ್, ಕ್ಯಾಬ್ ಬುಂಕಿಂಗ್, ಹೋಟೇಲ್, ಲಾಡ್ಜ್ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿ ದುಬೈ, ನೇಪಾಳ ಮುಂತಾದ ಕಡೆಗೆ ಕರೆಸಿಕೊಳ್ಳುತ್ತಾರೆ. ಒಂದು ನಿರ್ದಿಷ್ಟವಾದ ಸ್ಥಳದಲ್ಲಿ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿರುತ್ತಾರೆ. ವಂಚಕರು ವಿವಿಧ ಕಂಪನಿಗಳ ಮೊಬೈಲ್ ಫೋನ್‌ಗಳಿಗೆ ಖಾತೆದಾರರ ಸಿಮ್‌ಗಳನ್ನು ಹಾಕಿಕೊಂಡು, ನೆಟ್ ಬ್ಯಾಂಕಿಂಗ್ ಮುಖಾಂತರ ವಂಚನೆಯ ಹಣವನ್ನು ತಮಗೆ ಬೇಕಾದ ರೀತಿಯಲ್ಲಿ ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡುತ್ತಾರೆ. ಆ ಹಣದಿಂದ ಯುಎಸ್‌ಡಿಟಿಗಳನ್ನು ಬೇರೆ ಬೇರೆ ಕಡೆಯಿಂದ ಖರೀದಿ ಮಾಡಿ, ಪ್ರತಿದಿನ ವಿದೇಶದಲ್ಲಿರುವ ಆರೋಪಿಗಳಿಗೆ ಕಳುಹಿಸುತ್ತಾರೆ’ ಎಂದು ಅವರು ವಿವರಿಸಿದರು.
‘ಕಾಂಬೋಡಿಯಾ ಅಥವಾ ದುಬೈನಂತಹ ದೇಶಗಳಲ್ಲಿದ್ದುಕೊಂಡು ಮುಖ್ಯ ವಂಚಕರು ವಾಟ್ಸ್ ಆ್ಯಪ್, ಇನ್‌ಸ್ಟಾಗ್ರಾಂ, ಟೆಲಿಗ್ರಾಂ, ಫೇಸ್ ಬುಕ್‌ಗಳ ಮುಖಾಂತರ ಭಾರತೀಯರನ್ನು ಸಂಪರ್ಕಿಸಿ ಹೆಚ್ಚಿನ ಲಾಭಂಶ ನೀಡುವ ಆಮಿಷವೊಡ್ಡಿ ಹೂಡಿಕೆ ಆರ್ಕಷಿಸುತ್ತಾರೆ. ಹೂಡಿಕೆ ಮಾಡಿದ ಹಣಕ್ಕೆ ಹೆಚ್ಚಿನ ಲಾಭಂಶ ಬಂದಿದೆ ಎಂದು ನಕಲಿ ಆ್ಯಪ್‌ನಲ್ಲಿ ತೋರಿಸುತ್ತಾರೆ. ಪ್ರಾರಂಭದಲ್ಲಿ ಸ್ವಲ್ಪ ಪ್ರಮಾಣದ ಲಾಭಂಶದ ಹಣವನ್ನು ಮರಳಿಸಿ ವಿಶ್ವಾಸ ಗಳಿಸುತ್ತಾರೆ. ನಂತರ ಉಳಿದ ಹಣನ್ನು ಡ್ರಾ ಮಾಡಬೇಕಾದರೆ, ಹೆಚ್ಚಿನ ಹಣ ಹೂಡಿಕೆ ಮಾಡಬೇಕೆಂದು ಪುಸಲಾಯಿಸಿ, ಭಾರಿ ಮೊತ್ತವನ್ನು ಹೂಡಿಕೆ ಮಾಡಿಸುತ್ತಾರೆ. ಈ ರೀತಿ ಪ್ರತಿದಿನ ಈ ತಂಡವು ಭಾರತೀಯರನ್ನು ವಂಚಿಸಿ ₹ 60 ಲಕ್ಷದಿಂದ ₹ 1 ಕೋಟಿಯವರೆಗೂ ಹೂಡಿಕೆವಂಚನೆಗೆ ಒಳಪಡಿಸಿದ ಉದಾಹರಣೆಗಳಿವೆ’ ಎಂದು ಅವರು ವಿವರಿಸಿದರು.
ಆರೋಪಿಗಳ ಬಳಿ ವಶಪಡಿಸಿಕೊಂಡಿರುವ ವಸ್ತುಗಳು
ವಿದೇಶಗಳಲ್ಲಿ ಉದ್ಯೋಗ ಹುಡುಕುವ ಯುವಜನರನ್ನು ಸುಳ್ಳು ಜಾಹಿರಾತುಗಳನ್ನು ನೀಡಿ ನಕಲಿ ಏಜೆಂಟರ ಮೂಲಕ ನಂಬಿಸಿ, ಪುಸಲಾಯಿಸಿ, ಪ್ರವಾಸಿ (ಟೂರಿಸ್ಟ್) ವೀಸಾದಲ್ಲಿ ಮಧ್ಯ ಪ್ರಾಚ್ಯ ರಾಷ್ಟ್ರಗಳಿಗೆ ಕರೆದೊಯ್ಯಲಾಗುತ್ತಿದೆ. ಅಲ್ಲಿಗೆ ತೆರಳಿದ ಬಳಿಕ ಅವರಿಂದ ಪಾಸ್‌ಪೋರ್ಟ್ ಮತ್ತಿತರ ದಾಖಲೆಗಳನ್ನು ಕಿತ್ತುಕೊಂಡು ಅವರನ್ನು ಅಜ್ಞಾತ ಸ್ಥಳದಲ್ಲಿ ಬಂಧಿಸುತ್ತಾರೆ. ಅವರಿಂದ ಒತ್ತಾಯ ಪೂರಕವಾಗಿ ಮುಗ್ದ ಹೂಡಿಕೆದಾರರಿಗೆ ಕರೆ ಮಾಡಿಸಿ, ಅವರಿಗ ಅರ್ಥವಾಗುವ ಭಾಷೆಯಲ್ಲೇ ಮಾತನಾಡಿಸಿ ಪುಸಲಾಯಿಸಿ ಹಣ ವರ್ಗಾಯಿಸುವಂತೆ ಮಾಡಿಸುತ್ತಾರೆ. ಅವರಿಗೆ ಸರಿಯಾಗಿ ಊಟ ಉಪಹಾರ ನೀಡುವುದಿಲ್ಲ. ಕುಟುಂಬದವರನ್ನು ಸಂಪರ್ಕಿಸಲೂ ಕೊಡದೇ ಕೂಡಿ ಹಾಕಿ ಭಾರತದ ನಾಗರೀಕರಿಗೆ ವಂಚನೆ ಮಾಡಲು ಭಾರತೀಯರನ್ನೇ ಬಳಸುತ್ತಿದ್ದು, ಈ ಬಗ್ಗೆ ಯುವಕರು ಎಚ್ಚರಿಕೆ ವಹಿಸಬೇಕು’ ಎಂದು ಪೊಲೀಸ್ ಕಮಿಷನರ್ ತಿಳಿಸಿದರು.
ಉದ್ಯೋಗದ ಸಲುವಾಗಿ ಏಜೆನ್ಸಿ ಮೂಲಕ ವಿದೇಶಗಳಿಗೆ ಹೋಗುವ ಯುವಜನರು ಪ್ರೊಟೆಕ್ಟರ್ ಆಫ್ ಇಮಿಗ್ರೇಷನ್ಸ್ ಬಳಿ ನೊಂದಣಿ ಆಗಿರುವ ಏಜೆನ್ಸಿಗಳನ್ನೇ ಆಯ್ಕೆ ಮಾಡಬೇಕು. ಇದು ಹೆಚ್ಚು ಸುರಕ್ಷಿತ.
ವಿದೇಶದಲ್ಲಿ ಉತ್ತಮ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಆರು ಮಂದಿಯನ್ನು ಸೈಬರ್ ಗುಲಾಮಗಿರಿಗೆ ತಳ್ಳಲಾಗಿತ್ತು. ಅವರನ್ನು ರಕ್ಷಿಸಲಾಗಿದ್ದು, ಅವರು ನೀಡಿದ ದೂರಿನನ್ವಯ ಪ್ರಕರಣವನ್ನೂ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದರು.
ಬಂಧಿತ ಆರೋಪಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.