ADVERTISEMENT

ಪೊಲೀಸ್ ಅನುಮತಿ ಪಡೆಯದ ಸಿಎಫ್ಐ: 'ಹುಡುಗಿಯರ ಮೆರವಣಿಗೆ' ರದ್ದು

​ಪ್ರಜಾವಾಣಿ ವಾರ್ತೆ
Published 16 ಜುಲೈ 2022, 8:25 IST
Last Updated 16 ಜುಲೈ 2022, 8:25 IST
ಮಂಗಳೂರಿನ ಹಂಪನಕಟ್ಟೆ ಬಳಿಯಿಂದ ಮೆರವಣಿಗೆಯಲ್ಲಿ ಸಾಗಲು ಸಜ್ಜಾಗಿದ್ದ ಸಿಎಫ್ಐ ಕಾರ್ಯಕರ್ತರು
ಮಂಗಳೂರಿನ ಹಂಪನಕಟ್ಟೆ ಬಳಿಯಿಂದ ಮೆರವಣಿಗೆಯಲ್ಲಿ ಸಾಗಲು ಸಜ್ಜಾಗಿದ್ದ ಸಿಎಫ್ಐ ಕಾರ್ಯಕರ್ತರು   

ಮಂಗಳೂರು: ಪ್ರಜಾಸತ್ತಾತ್ಮಕ ಮೌಲ್ಯ ಎತ್ತಿ ಹಿಡಿಯುವ ಉದ್ದೇಶದಿಂದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಮೆರವಣಿಗೆಯನ್ನು ರದ್ದುಪಡಿಸಲಾಯಿತು.

ಅಂಬೇಡ್ಕರ್ ವೃತ್ತದಿಂದ ಪುರಭವನದವರೆಗೆ ಮೆರವಣಿಗೆ ಹಮ್ಮಿಕೊಳ್ಳಲು ನಂತರ ಪುರಭವನದಲ್ಲಿ ಸಮಾವೇಶ ನಡೆಸಲು ಸಿಎಫ್ಐ ಉದ್ದೇಶಿಸಿತ್ತು. 'ಸಮಾವೇಶಕ್ಕೆ ಮಾತ್ರ ಅನುಮತಿ ನೀಡಿದ್ದೇವೆ. ಮೆರವಣಿಗೆಗೆ ಅನುನತಿ ನೀಡಿಲ್ಲ. ಹಾಗಾಗಿ ಮೆರವಣಿಗೆಯಲ್ಲಿ ಸಾಗಲು ಬಿಡುವುದಿಲ್ಲ' ಎಂದು ನಗರ ಪೊಲೀಸರು ತಿಳಿಸಿದರು.

ಇದಕ್ಕೊಪ್ಪದ ಸಿಎಫ್ಐ ಮುಖಂಡರು, ಹಂಪನಕಟ್ಟೆಯ ಮಿಲಾಗ್ರಿಸ್ ಚರ್ಚ್ ಬಳಿಯ ಮಸ್ಜಿದ್ನೂರುನ್ನುಲ್‌ ಬಳಿಯಿಂದ ಮೆರವಣಿಗೆ ನಡೆಸಲು ಸಿದ್ಧತೆ ನಡೆಸಿದರು. ಮಸೀದಿ ಬಳಿ ಸಾವಿರಾರು ಮಹಿಳಾ ಕಾರ್ಯಕರ್ತರು ಸೇರಿದ್ದರು. ಇದಕ್ಕೂ ಪೊಲೀಸರು ಅವಕಾಶ ನೀಡಲಿಲ್ಲ.

ADVERTISEMENT

ಸ್ಥಳಕ್ಕೆ ಬಂದ‌ ನಗರ ಪೊಲೀಸ್ ಕಮಿಷನರ್ ಶಶಿಕುಮಾರ್, ಸಿಎಫ್ಐ ಮುಖಂಡರನ್ನು ಕರೆದು ಮಾತನಾಡಿಸಿದರು. 'ನಗರದಲ್ಲಿ ಮೆರವಣಿಗೆ ನಡೆಸುವುದಕ್ಕೆ ಯಾವ ಸಂಘಟನೆಗೂ ಅವಕಾಶ ನೀಡುತ್ತಿಲ್ಲ. ನಿಮಗೆ ಪುರಭವನದಲ್ಲಿ ಸಮಾವೇಶ ನಡೆಸಲಷ್ಟೇ ಅನುಮತಿ ನೀಡಲಾಗಿದೆ. ಯಾವುದೇ ಕಾರಣಕ್ಕೂ ಮೆರವಣಿಗೆ ನಡೆಸಲು ಅವಕಾಶ ನೀಡಲು ಸಾಧ್ಯವಿಲ್ಲ' ಎಂದು ಸ್ಪಷ್ಟಪಡಿಸಿದರು.

ಬಳಿಕ ಸಿಎಫ್ಐ ಮುಖಂಡರು ಕಾರ್ಯಕರ್ತರನ್ನು ಬಸ್‌ಗಳಲ್ಲಿ ಪುರಭವನಕ್ಕೆ ಕಳುಹಿಸಿಕೊಟ್ಟರು. ಪುರಭವನದ ಎದುರು ಸಮಾವೇಶಗೊಂಡ ಕಾರ್ಯಕರ್ತರು ಘೋಷಣೆ ಕೂಗಿದರು.ಪ್ರಜಾಪ್ರಭುತ್ವ ರಕ್ಷಣೆಗೆ ನಾವು ಯಾವತ್ತು ಬದ್ಧ. ಹಿಜಾಬ್ ಮಹಿಳೆಯರ ಸ್ವಾಭಿಮಾನ. ನಮ್ಮ ಸ್ವಾತಂತ್ರ್ಯವನ್ನು ಪಡೆದೇ ತೀರುತ್ತೇವೆ. ಮನುವಾದಿಗಳ ಕುತಂತ್ರ ಯಶಸ್ವಿಯಾಗಲು ಬಿಡುವುದಿಲ್ಲ ಎಂದು ಘೋಷಣೆ ಕೂಗಿದರು.

ಮಕ್ಕಳು ವಶಕ್ಕೆ: ಮೆರವಣಿಗೆಯಲ್ಲಿ ಭಾಗವಹಿಸಲು ಮೂವರು ಬಾಲಕರು ಸ್ಕೇಟಿ‌ಂಗ್ ಪರಿಕರಗಳನ್ನು ಧರಿಸಿ, ಸಿಎಫ್ಐ ಬಾವುಟ ಹೊದ್ದುಕೊಂಡು ಸಜ್ಜಾಗಿದ್ದರು. ಇದನ್ನು ಗಮನಿಸಿದ ಪೊಲೀಸ್‌ಕಮಿಷನರ್, ಮಕ್ಕಳನ್ನು ಮೆರವಣಿಗೆಗೆ ಕರೆತಂದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ ಮಕ್ಕಳನ್ನುಒಪ್ಪಿಸುವಂತೆ ಸೂಚಿಸಿದರು. ಮಕ್ಕಳನ್ನು ವಶಕ್ಕೆ ಪಡೆದ ಪೊಲೀಸರು, ಮೆರವಣಿಗೆ ರದ್ದಾದ ಬಳಿಕ ಅವರನ್ನು ಬಿಟ್ಟು ಕಳುಹಿಸಿದರು.

ಕ್ಯಾಮೆರಾ ವಶಕ್ಕೆ ಪಡೆದ ಪೊಲೀಸರು: ಸಂಘಟಕರು ಕಾರ್ಯಕ್ರಮದ ವಿಡಿಯೊ ಮಾಡಲು ಕರೆಸಿದ್ದ ಛಾಯಾಚಿತ್ರಗ್ರಾಹಕರ ಕ್ಯಾಮೆರಾಗಳನ್ನು ಪೊಲೀಸ್ ಕಮಿಷನರ್ ಸೂಚನೆ ಮೇರೆಗೆ ಪೊಲೀಸರು ವಶಕ್ಕೆ ಪಡೆದರು. ಮೆರವಣಿಗೆ ರದ್ದುಪಡಿಸಿದ ಬಳಿಕ ಕ್ಯಾಮೆರಾಗಳನ್ನು ಮರಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.