ADVERTISEMENT

ಮಂಗಳೂರು | ಒಂದು ದೂರು– 4500 ವಂಚನೆ ಬಯಲಿಗೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 2:37 IST
Last Updated 6 ಫೆಬ್ರುವರಿ 2026, 2:37 IST
ಮಕವನ್ ವಿಕ್ರಂ
ಮಕವನ್ ವಿಕ್ರಂ   

ಮಂಗಳೂರು: ಆನ್‌ಲೈನ್ ಹೂಡಿಕೆಯಿಂದ ಹೆಚ್ಚು ಲಾಭ ಒದಗಿಸುವ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಂದ ₹ 1.38 ಕೋಟಿ ಹಣವನ್ನು ಹತ್ತು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿದ ಬಗ್ಗೆ ಇಲ್ಲಿನ ಸೆನ್ ಕ್ರೈಂ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಈ ದೂರಿನ ತನಿಖೆ 4,580 ಪ್ರಕರಣಗಳ ಹಿಂದಿನ ಜಾಲವನ್ನು ಭೇದಿಸಲು ನೆರವಾಗಿದೆ.

ಈ ದೂರಿನ ಬೆನ್ನತ್ತಿದ ಸೆನ್ ಕ್ರೈಂ ಠಾಣೆಯ ಪೊಲೀಸರು ನೇಪಾಳ ಕೇಂದ್ರಿತವಾಗಿ ನಡೆಯುತ್ತಿದ್ದ ಭಾರಿ ವಂಚನೆ ಜಾಲವನ್ನು ಭೇದಿಸಿದ್ದಾರೆ. ಈ ವಂಚನೆ ಜಾಲದಲ್ಲಿ ಸಕ್ರಿಯರಾಗಿದ್ದ 11 ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಕುರಿತು ಸುದ್ದಿಗಾರರಿಗೆ ಇಲ್ಲಿ ಗುರುವಾರ ಮಾಹಿತಿ ನೀಡಿದ ನಗರ ಪೊಲೀಸ್ ಕಮಿಷನರ್‌ ಸುಧೀರ್ ಕುಮಾರ್ ರೆಡ್ಡಿ, ‘ವಂಚಕರು ನೇಪಾಳದಲ್ಲಿದ್ದುಕೊಂಡು ಈ ಕೃತ್ಯ ಎಸಗಿದ್ದು ತನಿಖೆಯ ತಾಂತ್ರಿಕ ವಿಶ್ಲೇಷಣೆಯ ವೇಳೆ ಗೊತ್ತಾಗಿತ್ತು. ದೂರು ನೀಡಿದ್ದ ವ್ಯಕ್ತಿಗೆ ವಂಚಿಸಲು ಬಳಸಿದ 10 ಬ್ಯಾಂಕ್‌ ಖಾತೆಗಳನ್ನು ಒಟ್ಟು 128 ವಂಚನೆ ಪ್ರಕರಣಗಳಲ್ಲಿ ಬಳಸಲಾಗಿದೆ. ಈ ಸಂಬಂಧ 36 ಎಫ್‌ಐಆರ್‌ಗಳು  ದಾಖಲಾಗಿವೆ’ ಎಂದರು.  

ADVERTISEMENT

‘ವಂಚಕರ ತಂಡ  ಏಜೆಂಟ್‌ಗಳನ್ನು ನೇಮಿಸಿಕೊಂಡು, ವಂಚನೆ ನಡೆಸುತ್ತಿತ್ತು. ಸಂತ್ರಸ್ತರ ಹಣವನ್ನು ಅಮೆರಿಕದ ಡಾಲರ್‌ಗೆ ಪರಿವರ್ತಿಸಿ ವಿದೇಶಕ್ಕೆ ಕಳುಹಿಸುತ್ತಿತ್ತು. ವಂಚಕರ ಇನ್ನೊಂದು ತಂಡವು ಕಾಂಬೋಡಿಯಾ ಮತ್ತಿತರ ದೇಶಗಳಲ್ಲಿದ್ದುಕೊಂಡು ಹೂಡಿಕೆದಾರರನ್ನು ಸಂಪರ್ಕಿಸುತ್ತಿತ್ತು. ಕೆಲಸ ಅರಸಿ ವಿದೇಶಗಳಿಗೆ ಹೋಗಿರುವ ಭಾರತೀಯರನ್ನು ಕೂಡಿ ಹಾಕಿ, ಅವರ ಮೂಲಕ ಸ್ಥಳೀಯ ಭಾಷೆಯಲ್ಲಿ ಭಾರತೀಯರಿಗೆ ಕರೆ ಮಾಡಿಸಿ, ಹೆಚ್ಚು ಹಣ ಗಳಿಸುವ ಆಮಿಷ ಒಡ್ಡುತ್ತಿತ್ತು.  ಹಣದ ವಹಿವಾಟುಗಳನ್ನು ನೇಪಾಳದ ತಂಡ ನಿಯಂತ್ರಿಸುತ್ತಿತ್ತು’ ಎಂದು ಕಮಿಷನರ್ ವಿವರಿಸಿದರು.

‘ವಂಚಕರು ಇನ್‌ಸ್ಟಾಗ್ರಾಂ ಹಾಗೂ ಟೆಲಿಗ್ರಾಂ ಖಾತೆಗಳ ಮೂಲಕ  ನಿಜ ಹೆಸರು ಮರೆಮಾಚಿ ಯುಎಸ್‌ಡಿಟಿ ಟು ಐಎನ್‌ಆರ್‌ ಎಕ್ಸಚೇಂಜ್‌ ಮ್ಯಾನೇಜ್‌ಮೆಂಟ್ ಆಪರೇಟರ್‌ ಹಾಗೂ ಒಟಿಪಿ ವರ್ಕರ್‌ಗಳು ಬೇಕಾಗಿದ್ದಾರೆ ಎಂದು ಜಾಹೀರಾತು ನೀಡುತ್ತಾರೆ.  ಈ ಕೆಲಸಕ್ಕೆ ಶೇ 5ರಿಂದ  ಶೇ 10ರಷ್ಟು ಕಮಿಷನ್ ಆಮಿಷ ಒಡ್ಡುತ್ತಾರೆ. ಉಚಿತವಾಗಿ ವಿಮಾನದ ಟಿಕೆಟ್, ಕ್ಯಾಬ್ ಬುಂಕಿಂಗ್, ಹೋಟೆಲ್,  ವ್ಯವಸ್ಥೆಯ ಭರವಸೆ ನೀಡಿ ದುಬೈ, ನೇಪಾಳ ಮುಂತಾದ ಕಡೆಗೆ ಕರೆಸಿಕೊಳ್ಳುತ್ತಾರೆ.  ವಿವಿಧ ಕಂಪನಿಗಳ ಮೊಬೈಲ್ ಫೋನ್‌ಗಳಿಗೆ  ಸಿಮ್‌ ಹಾಕಿಸಿ ಕರೆ ಮಾಡಿಸುತ್ತಾರೆ.  ನೆಟ್‌ ಬ್ಯಾಂಕಿಂಗ್‌ ಮುಖಾಂತರ ವಂಚನೆಯ ಹಣವನ್ನು ತಮಗೆ ಬೇಕಾದೆಡೆಗೆ ವರ್ಗಾಯಿಸುತ್ತಾರೆ’ ಎಂದು ಅವರು ವಿವರಿಸಿದರು.

‘ಕಾಂಬೋಡಿಯಾ ಅಥವಾ ದುಬೈನಂತಹ ದೇಶಗಳಲ್ಲಿದ್ದುಕೊಂಡು ಮುಖ್ಯವಂಚಕರು ವಾಟ್ಸ್‌ ಆ್ಯಪ್,  ಇನ್‌ಸ್ಟಾಗ್ರಾಂ, ಟೆಲಿಗ್ರಾಂ, ಫೇಸ್ ಬುಕ್‌ಗಳ ಮುಖಾಂತರ ಭಾರತೀಯರನ್ನು  ಸಂಪರ್ಕಿಸಿ ಹೆಚ್ಚಿನ ಲಾಭಂಶ ನೀಡುವ ಆಮಿಷವೊಡ್ಡಿ ಹೂಡಿಕೆ ಆರ್ಕಷಿಸುತ್ತಾರೆ. ಹೂಡಿಕೆ ಮಾಡಿದ ಹಣಕ್ಕೆ ಹೆಚ್ಚಿನ ಲಾಭಂಶ ಬಂದಿದೆ ಎಂದು ನಕಲಿ ಆ್ಯಪ್‌ನಲ್ಲಿ ತೋರಿಸುತ್ತಾರೆ. ಪ್ರಾರಂಭದಲ್ಲಿ ಸ್ವಲ್ಪ ಪ್ರಮಾಣದ ಲಾಭಂಶದ ಹಣವನ್ನು ಮರಳಿಸಿ ವಿಶ್ವಾಸ ಗಳಿಸುತ್ತಾರೆ.  ಹಣನ್ನು ಡ್ರಾ ಮಾಡಬೇಕಾದರೆ, ಹೆಚ್ಚಿನ ಹಣ ಹೂಡಿಕೆ ಮಾಡಬೇಕೆಂದು ಪುಸಲಾಯಿಸುತ್ತಾರೆ. ಈ ರೀತಿ ಪ್ರತಿದಿನ ಈ ತಂಡವು ಭಾರತೀಯರನ್ನು ವಂಚಿಸಿ ₹ 60 ಲಕ್ಷದಿಂದ  ₹ 1 ಕೋಟಿಯವರೆಗೂ ಹೂಡಿಕೆವಂಚನೆಗೆ ಒಳಪಡಿಸಿದ ಉದಾಹರಣೆಗಳಿವೆ’ ಎಂದು ಅವರು ವಿವರಿಸಿದರು. 

ಸೌಮ್ಯಾದಿತ್ಯ ಚಟ್ಟೋಪಾಧ್ಯಾಯ
ಪುಪ್ಲ ಶಿವಕುಮಾರ್‌ ರಾವ್‌
ಗೌರವ್‌ ಪಾಂಡೆ
ಹರ್ಷ್‌ ಮಿಸ್ರಾ
ರಾಜೇಶ್‌ ಮೆಂಡನ್
ಮೊಹಮ್ಮದ್ ಅಕೀಬ್ ಅಲಿ
ರಾಜೀವ್‌ ರಂಜನ್ ಕುಮಾರ್ 
ಮಿಥುನ್ ಕುಮಾರ್‌
ನೌಷಾದ್ ಅಲಿ
ಓಂಪ್ರಕಾಶ್ ಯಾದವ್‌

ಸೈಬರ್ ವಂಚನೆ ತಡೆಯುವುದೆಂತು?

ವಂಚನೆಯಾದ 1 ಗಂಟೆಯೊಒಳಗೆ 1930ಕ್ಕೆ ಕರೆ ಮಾಡಿ ದೂರು ಕೊಡಿ 

ಆನ್‌ಲೈನ್ ಗೇಮ್, ಲೋನ್ ಆ್ಯಪ್, ಪಾರ್ಟ್‌ಟೈಮ್ ಜಾಬ್ – ಎಚ್ಚರವಿರಲಿ 

ಎಪಿಕೆ ಫೈಲ್ ಮತ್ತು ಕೊಂಡಿಗಳ ಬಗ್ಗೆ ಎಚ್ಚರವಹಿಸಿ

ಸಾಮಾಜಿಕ ಮಾಧ್ಯಮಗಳ ಜಾಹೀರಾತು, ಹೂಡಿಕೆ ಬಗ್ಗೆ ಇರಲಿ ಎಚ್ಚರ

‘ಡಿಜಿಟಲ್ ಗುಲಾಮಗಿರಿ– ಎಚ್ಚರ ವಹಿಸಿರಿ’: ವಿದೇಶಗಳಲ್ಲಿ ಉದ್ಯೋಗ ಹುಡುಕುವ ಯುವಜನರನ್ನು ಸುಳ್ಳು ಜಾಹಿರಾತುಗಳನ್ನು ನೀಡಿ ನಕಲಿ ಏಜೆಂಟರ ಮೂಲಕ ನಂಬಿಸಿ ಪುಸಲಾಯಿಸಿ ಪ್ರವಾಸಿ (ಟೂರಿಸ್ಟ್) ವೀಸಾದಲ್ಲಿ ಮಧ್ಯ ಪ್ರಾಚ್ಯ ರಾಷ್ಟ್ರಗಳಿಗೆ ಕರೆದೊಯ್ಯಲಾಗುತ್ತಿದೆ. ಅಲ್ಲಿಗೆ ತೆರಳಿದ ಬಳಿಕ  ಅವರಿಂದ ಪಾಸ್‌ಪೋರ್ಟ್‌ ಮತ್ತಿತರ ದಾಖಲೆಗಳನ್ನು ಕಿತ್ತುಕೊಂಡು ಅವರನ್ನು ಅಜ್ಞಾತ ಸ್ಥಳದಲ್ಲಿ ಬಂಧಿಸಿಡುತ್ತಾರೆ. ಅವರಿಂದ ಒತ್ತಾಯ ಪೂರಕವಾಗಿ ಮುಗ್ದ ಹೂಡಿಕೆದಾರರಿಗೆ ಕರೆ ಮಾಡಿಸಿ ಅವರಿಗೆ ಅರ್ಥವಾಗುವ  ಭಾಷೆಯಲ್ಲೇ ಮಾತನಾಡಿಸಿ ಪುಸಲಾಯಿಸಿ ಹಣ ವರ್ಗಾಯಿಸುವಂತೆ ಮಾಡಿಸುತ್ತಾರೆ. ಅವರಿಗೆ ಸರಿಯಾಗಿ ಊಟ ಉಪಹಾರ ನೀಡುವುದಿಲ್ಲ.  ಕುಟುಂಬದವರನ್ನು ಸಂಪರ್ಕಿಸಲೂ ಕೊಡದೇ ಕೂಡಿ ಹಾಕಿ ಭಾರತದ ನಾಗರೀಕರಿಗೆ ವಂಚನೆ ಮಾಡಲು ಭಾರತೀಯರನ್ನೇ ಬಳಸುತ್ತಿದ್ದು ಈ ಬಗ್ಗೆ ಯುವಕರು ಎಚ್ಚರಿಕೆ ವಹಿಸಬೇಕು’ ಎಂದು ಪೊಲೀಸ್ ಕಮಿಷನರ್ ತಿಳಿಸಿದರು.   ಉದ್ಯೋಗಕ್ಕಾಗಿ  ವಿದೇಶಗಳಿಗೆ ಹೋಗುವವರು ಪ್ರೊಟೆಕ್ಟರ್ ಆಫ್ ಇಮಿಗ್ರೇಷನ್ಸ್‌ ಬಳಿ ನೊಂದಣಿ ಆಗಿರುವ ಏಜೆನ್ಸಿಗಳನ್ನೇ ಆಯ್ಕೆ ಮಾಡಬೇಕು. ವಿದೇಶಿ  ಉದ್ಯೋಗದ  ಭರವಸೆ ನೀಡಿ  ಜಿಲ್ಲೆಯ ಆರು ಮಂದಿಯನ್ನು ಸೈಬರ್ ಗುಲಾಮಗಿರಿಗೆ ತಳ್ಳಲಾಗಿತ್ತು. ಅವರನ್ನು  ರಕ್ಷಿಸಲಾಗಿದ್ದು ಅವರು ನೀಡಿದ ದೂರಿನನ್ವಯ ಪ್ರಕರಣವನ್ನೂ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.