ಉಳ್ಳಾಲ: ಮೃಗಗಳ ರಕ್ಷಣೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬೆಂಗಳೂರಿನ ಎಂಜಿನಿಯರಿಂಗ್ ಪದವೀಧರ ಸುಮನ್ ಅಶ್ವಿನ್ (22) ಏಳು ಪ್ರಮುಖ ರಾಜ್ಯಗಳನ್ನು ದಾಟಿ ಇದೀಗ ತಲಪಾಡಿಯ ಮೂಲಕ ಕರ್ನಾಟಕ ಪ್ರವೇಶಿಸಿದ್ದಾರೆ. ಅವರ ಜತೆಗೆ ನಾಯಿಯೂ ಇದ್ದು, ಅದನ್ನು ಗಾಲಿಕುರ್ಚಿಯಲ್ಲಿ ಕೂರಿಸಿ ಅವರು ಪಾದಯಾತ್ರೆ ನಡೆಸುತ್ತಿದ್ದಾರೆ.
ತೊಕ್ಕೊಟ್ಟುವಿನಲ್ಲಿ ಸಾಯಿ ಪರಿವಾರ್ ಟ್ರಸ್ಟ್ ವತಿಯಿಂದ ಅವರನ್ನು ಅಭಿನಂದಿಸಲಾಯಿತು.
ಸಾಮಾಜಿಕ ಮಾಧ್ಯಮಗಳಲ್ಲಿ ‘ಐ ಆ್ಯಮ್ ಇನ್ಫಿನಿಟೀ_ಸುಮಂತ್ ಅಶ್ವಿನ್ ಎಂಬ ಹೆಸರಿನಲ್ಲಿ ನಿತ್ಯದ ವಿಡಿಯೊಗಳನ್ನು ಹಾಕುತ್ತಾ ದೇಶ ಸುತ್ತುತ್ತಿದ್ದಾರೆ.
ಮೃಗಗಳು, ನೈಸರ್ಗಿಕ ಸಂಪತ್ತು, ಮತ್ತು ನೀರಿನ ಕೊರತೆ ಮತ್ತಷ್ಟು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಅವರು ಎಂಜಿನಿಯರಿಂಗ್ ಪದವಿಯನ್ನು 3ನೇ ವರ್ಷದಲ್ಲೇ ನಿಲ್ಲಿಸಿದ್ದಾರೆ. ದಾರಿಯಲ್ಲಿ ಸಿಕ್ಕ ನಾಯಿಗೆ ‘ಭೈರವ’ ಎಂದು ನಾಮಕರಣ ಮಾಡಿ ಪಾದಯಾತ್ರೆಗೆ ನಿರ್ಧರಿಸಿದ್ದಾರೆ.
ವರ್ಷದ ಹಿಂದೆ ಮಂತ್ರಾಲಯದಿಂದ ಪಾದಯಾತ್ರೆ ಆರಂಭಿಸಿದ ಅವರು, ಕೇರಳ, ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಮೂಲಕ 900 ಕಿ.ಮೀ ಸಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ.
ಪ್ರತಿದಿನ ಸರಾಸರಿ 30 ಕಿ.ಮೀ ನಡೆಯುವ ಅವರು ಅಲ್ಲಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ತೀವ್ರ ಬಿಸಿಲಿನಿಂದ ನಾಯಿ ಅಸ್ವಸ್ಥವಾಗುವ ಭೈರವನನ್ನು ಗಾಲಿಕುರ್ಚಿಯಲ್ಲಿ ಕೂರಿಸಿ ಸಾಗುತ್ತಾರೆ.
ಬೀದಿನಾಯಿಗಳ ಸಂರಕ್ಷಣಾ ಯೋಜನೆ ರೂಪಿಸಬೇಕು ಎಂಬುದು ಅವರ ಆಗ್ರಹ. ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲೇ ಸಾಗುವ ಅವರುಮ ಪೆಟ್ರೋಲ್ ಬಂಕ್‌ಗಳು, ದೇವಾಲಯಗಳ ಬಳಿ ವಿಶ್ರಾಂತಿ ಪಡೆಯುತ್ತಾರೆ.
ತಮಿಳುನಾಡು ಹಾಗೂ ಕೇರಳದಲ್ಲಿ ಕೆಲವು ಅಡಚಣೆಗಳು ಸ್ಥಳೀಯರಿಂದ ಹಾಗೂ ಪೊಲೀಸರಿಂದ ವ್ಯಕ್ತವಾದರೂ, ಸರಿಪಡಿಸಿಕೊಂಡು ಮುಂದುವರಿಯುತ್ತಿರುವೆ. ಸಾಮಾಜಿಕ ಮಾಧ್ಯಮಗಳಿಂದ ಸಂಪಾದಿಸಿದ ಹಣವನ್ನು ವ್ಯಯಿಸಿ ಮುಂದುವರಿಯುತ್ತಿರುವೆ. ಆರಂಭದ ಹಂತದಲ್ಲಿ ಭಿಕ್ಷೆ ಬೇಡಿಯೂ ಯಾತ್ರೆ ನಡೆಸಿದ್ದೇನೆ ಎಂದು ಸುಮನ್ ಅಶ್ವಿನ್ ಹೇಳಿದರು.
ಮುಂದಿನ ಎರಡು ವರ್ಷ ಪ್ರಾಣಿ ಸಂರಕ್ಷಣೆಯ ಜಾಗೃತಿಗೆ ಪಣ ತೊಟ್ಟಿದ್ದೇನೆ. ಅಭಿಮಾನಿಗಳು ದಾರಿಯುದ್ದಕ್ಕೂ ಸಹಕರಿಸುತ್ತಲೇ ಇದ್ದಾರೆ. ಆರಂಭದಲ್ಲಿ ನಾಯಿಯನ್ನು ಎತ್ತಿಕೊಂಡು ಹೋಗುವುದನ್ನು ಕಂಡ ಅಭಿಮಾನಿಯೊಬ್ಬರು ಗಾಲಿಕುರ್ಚಿ ಕೊಡಿಸಿದರು. ತಲಪಾಡಿ ತಲುಪುತ್ತಿದ್ದಂತೆ ಅಭಿಮಾನಿಗಳು ಗೌರವಿಸಿದರು. ಭವಿಷ್ಯದಲ್ಲಿ ಬೆಂಗಳೂರಿನಿಂದ ದೂರ ಉಳಿದು ದೊಡ್ಡ ಜಾಗದಲ್ಲಿ ಬೀದಿ ನಾಯಿಗಳನ್ನು ಸಲಹುವ ಉದ್ದೇಶ ಹೊಂದಿದ್ದೇನೆ ಎಂದರು.
ಕಿಶೋರ್ ಕುಂಪಲ, ಸಂತೋಷ್ ಶೆಟ್ಟಿ ಕಲ್ಲಾಪು, ಪ್ರವಿಣ್ ಕೊಲ್ಯ, ಹರೀಶ್ ಕೊಟ್ಟಾರಿ, ಪುರುಷೋತ್ತಮ್ ಕಲ್ಲಾಪು ಸುಮನ್ ಅವರನ್ನು ಗೌರವಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.