ADVERTISEMENT

ಮಂಗಳೂರು: ಅಗತ್ಯ ವಸ್ತುಗಳ ಖರೀದಿಗೆ ಮುಗಿ ಬಿದ್ದ ಜನ

ವಾರಾಂತ್ಯ ಕರ್ಫ್ಯೂ ಮುಗಿದ ಬೆನ್ನಲ್ಲೇ ಮತ್ತೆ 14 ದಿನ ಕಠಿಣ ನಿಯಮ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2021, 3:41 IST
Last Updated 27 ಏಪ್ರಿಲ್ 2021, 3:41 IST
ಮಂಗಳೂರಿನ ಬಾರ್ ಎದುರು ಮದ್ಯ ಖರೀದಿಗೆ ಸರದಿಯಲ್ಲಿ ನಿಂತಿರುವ ಜನ.
ಮಂಗಳೂರಿನ ಬಾರ್ ಎದುರು ಮದ್ಯ ಖರೀದಿಗೆ ಸರದಿಯಲ್ಲಿ ನಿಂತಿರುವ ಜನ.   

ಮಂಗಳೂರು: ವಾರಾಂತ್ಯದ ಕರ್ಫ್ಯೂ ಮುಗಿದ ಬೆನ್ನಲ್ಲೇ ಮತ್ತೆ ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತರುವುದಾಗಿ ಹೇಳಿದ್ದು, ಸೋಮವಾರ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿತ್ತು. ಎರಡು ದಿನ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರ ಖರೀದಿಗೆ ಅವಕಾಶ ನೀಡಲಾಗಿತ್ತು. ಸೋಮವಾರ ಎಂದಿನಂತೆ ಬಸ್‌ ಸಂಚಾರ, ಅಂಗಡಿಗಳು ತೆರೆದಿದ್ದವು.

ಎರಡು ದಿನಗಳ ವಾರಾಂತ್ಯದ ಕರ್ಫ್ಯೂನಿಂದ ಸ್ತಬ್ಧವಾಗಿದ್ದ ನಗರದಲ್ಲಿ ಸೋಮವಾರ ಮತ್ತೆ ಅಗತ್ಯ ಸೇವೆಗಳೊಂದಿಗೆ ಕಾರ್ಯ ಚಟುವಟಿಕೆ ಆರಂಭಗೊಂಡವು. ಖಾಸಗಿ ಬಸ್ ಸೇರಿದಂತೆ ವಾಹನ ಸಂಚಾರ ಆರಂಭಗೊಂಡಿತ್ತು. ರಾತ್ರಿ ಕರ್ಫ್ಯೂ ಆರಂಭಗೊಳ್ಳುವವರೆಗೆ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು.

ಇದೀಗ ಮತ್ತೊಮ್ಮೆ 14 ದಿನಗಳ ಕಠಿಣ ನಿಯಮಗಳ ಜಾರಿಗೆ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಬಹುತೇಕ ಜನರು ತರಕಾರಿ, ದಿನಸಿ ಖರೀದಿಗೆ ಮುಗಿ ಬಿದ್ದಿದ್ದರು. ಪೆಟ್ರೋಲ್‌, ಡೀಸೆಲ್‌ ಬಂಕ್‌ಗಳಲ್ಲೂ ವಾಹನಗಳು ಸರದಿಯಲ್ಲಿ ನಿಂತಿದ್ದವು.

ADVERTISEMENT

ಬೆಲೆ ಏರಿಕೆ ಬಿಸಿ: ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿ ಬೀಳುತ್ತಿದ್ದಂತೆಯೇ ತರಕಾರಿ, ದಿನಸಿ ವಸ್ತುಗಳ ಬೆಲೆಯೂ ಏರಿಕೆಯಾಗಿತ್ತು. ತರಕಾರಿ ಹಾಗೂ ಹಣ್ಣುಗಳ ಬೆಲೆ ವಿಪರೀತ ಹೆಚ್ಚಾಗಿತ್ತು. ಆದರೂ ಜನರು ಖರೀದಿಸುತ್ತಿರುವ ದೃಶ್ಯಗಳು ಕಂಡು ಬಂದವು.

‘ಮಂಗಳವಾರ ಒಂದು ದಿನ ಅವಕಾಶವಿದೆ. ಮತ್ತೆ ಖರೀದಿ ಮಾಡಬಹುದು. ಆದರೂ ಸೋಮವಾರವೇ ಖರೀದಿಸುವುದು ಒಳ್ಳೆಯದು ಎಂದು ಬಂದಿದ್ದೇನೆ. ದರ ಸ್ವಲ್ಪ ಹೆಚ್ಚಾಗಿದೆ. ಅದು ಸಾಮಾನ್ಯವೂ ಹೌದು. ಒಟ್ಟಿನಲ್ಲಿ ತರಕಾರಿ, ದಿನಸಿಗೆ ಕೊರತೆ ಆಗಬಾರದು ಎಂಬುದಷ್ಟೆ ನಮ್ಮ ಆದ್ಯತೆ’ ಎಂದು ನಗರದ ಮಲ್ಲಿಕಟ್ಟೆ ಮಾರುಕಟ್ಟೆಗೆ ಬಂದಿದ್ದ ಗೃಹಿಣಿ ನಳಿನಿ ತಿಳಿಸಿದರು.

‘ತರಕಾರಿಗಳು, ಸೊಪ್ಪು ಬೇರೆ ಜಿಲ್ಲೆಯಿಂದ ಬರಬೇಕು. ಮಲೆನಾಡು ಭಾಗದಿಂದಲೇ ಹೆಚ್ಚಿನ ತರಕಾರಿ ಬರುತ್ತದೆ. ಇನ್ನು ಎರಡು ದಿನ ಎಪಿಎಂಸಿ ಬಂದ್‌ ಆಗಿತ್ತು. ಹೀಗಾಗಿ ನೇರವಾಗಿ ಸಗಟು ವ್ಯಾಪಾರಿಗಳಿಂದ ಖರೀದಿಸಬೇಕಾಗಿದೆ. ನಮಗೂ ಖರೀದಿ ದರ ಹೆಚ್ಚಾಗಿದೆ’ ಎಂದು ಎಸ್‌.ಕೆ. ಟ್ರೇಡರ್ಸ್‌ನ ವಿಠಲ್‌ ಹೇಳಿದರು.

ಬೋಟ್‌ನಲ್ಲೇ ಉಳಿದ ಮೀನು: ವಾರಾಂತ್ಯ ಕರ್ಪ್ಯೂ ಜಾರಿಯಲ್ಲಿದ್ದ ಕಾರಣ ಮೀನುಗಾರಿಕೆ ನಡೆಸಿ, ಬಂದರಿಗೆ ಹಿಂತಿರುಗಿದ ಮೀನುಗಾರರು ಮೀನು ಅನ್‌ಲೋಡ್ ಮಾಡಲಾಗದೆ ಬೋಟ್‌ನಲ್ಲಿ ಉಳಿದುಕೊಳ್ಳಬೇಕಾಯಿತು.

10 ದಿನಗಳ ಮೊದಲೇ ಮಂಗಳೂರಿಂದ ಮೀನುಗಾರಿಕೆಗೆ ತೆರಳಿದ ಬೋಟ್‌ಗಳು ಶನಿವಾರ, ಭಾನುವಾರ ಹಿಂತಿರುಗಿ ಬಂದಿದ್ದವು. ಆದರೆ ಅಷ್ಟರಲ್ಲಿ ವಾರಾಂತ್ಯದ ಕರ್ಪ್ಯೂ ಜಾರಿಯಾಗಿತ್ತು. ಇನ್ನೊಂದೆಡೆ ಮೀನು ಇಳಿಸಲು ಕಾರ್ಮಿಕರು ಬಂದರಿನಲ್ಲಿ ಇರಲಿಲ್ಲ. ಹೀಗಾಗಿ 60ಕ್ಕೂ ಹೆಚ್ಚು ಬೋಟ್‌ಗಳಲ್ಲಿ ಮೀನು ಹಾಗೂ ಮೀನುಗಾರರು ಬಂದರಿನಲ್ಲಿ ಉಳಿಯಬೇಕಾಯಿತು.

ವಾಹನ ಸಂಚಾರಕ್ಕೆ ಅವಕಾಶ ಇಲ್ಲದಿದ್ದರಿಂದ ಮತ್ತು ಅಂಗಡಿಗಳು ತೆರೆಯದ ಕಾರಣ ಮೀನುಗಾರರ ಬೋಟ್‌ಗಳಲ್ಲಿಯೇ ಉಳಿದರು. ಊಟ, ತಿಂಡಿಗೆ ವ್ಯವಸ್ಥೆ ಇರುವುದರಿಂದ ಯಾವುದೇ ಸಮಸ್ಯೆ ಆಗಿರಲಿಲ್ಲ. ಮುಂದಿನ ದಿನಗಳಲ್ಲಿ ಮೀನುಗಾರಿಕೆಗೆ ತೆರಳುವಾಗ ವಾರಾಂತ್ಯ ಕರ್ಪ್ಯೂ ಹೊರತುಪಡಿಸಿ, ಇತರ ದಿನಗಳಲ್ಲಿ ಬಂದರಿಗೆ ಬರುವಂತೆ ಸಮಯ ಹೊಂದಿಸಿಕೊಳ್ಳಬೇಕು ಎಂದು ಮೀನುಗಾರರ ಮುಖಂಡರಿಗೆ ಬೋಟ್‌ ಮಾಲೀಕರಿಗೆ ಸೂಚಿಸಿದ್ದಾರೆ.

ಮದ್ಯಕ್ಕೆ ಮುಗಿ ಬಿದ್ದ ಜನ
ಕಳೆದ ಬಾರಿ ಲಾಕ್‌ಡೌನ್ ಸಂದರ್ಭದಲ್ಲಿ ಮದ್ಯ ಸಿಗದೆ ಒದ್ದಾಡಿದ್ದ ಮದ್ಯಪ್ರಿಯರು, ಈ ಬಾರಿಯೂ ಅಂತಹ ಪರಿಸ್ಥಿತಿ ಉದ್ಭವಿಸುವ ಆತಂಕದಿಂದ ಸೋಮವಾರವೇ ಮದ್ಯದಂಗಡಿಗಳಿಗೆ ಮುಗಿ ಬಿದ್ದಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅತ್ತಕಡೆ ಲಾಕ್‌ಡೌನ್ ಘೋಷಣೆ ಮಾಡುತ್ತಿದ್ದಂತೆ, ಇತ್ತ ಮದ್ಯದಂಗಡಿಗಳಿಗೆ ಪಾನಪ್ರಿಯರು ದಾಂಗುಡಿ ಇಡುತ್ತಿದ್ದಾರೆ. ನಗರದ ಬಿಜೈ ಬಳಿಯ ವೈನ್ ಗೇಟ್ ಹಾಗೂ ಇತರ ಕಡೆಗಳಲ್ಲಿ ಒಮ್ಮೆಲೆ ವೈನ್‌ ಶಾಪ್‌ಗಳಿಗೆ ಜನರು ಮುಗಿಬಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಮದ್ಯ ಪಾರ್ಸೆಲ್‌ ತೆಗೆದುಕೊಂಡು ಹೋಗಲು ಅವಕಾಶ ನೀಡಿದೆ. ನಗರ ಹೊರತಾಗಿ ಜಿಲ್ಲೆಯ ಬೇರೆಡೆ ಈ ಪಾರ್ಸೆಲ್‌ ಸೇವೆ ಇಲ್ಲದ ಕಾರಣ ಕೆಲವು ಕಡೆಗಳಲ್ಲಿ ಪಾನಪ್ರಿಯರು ಮದ್ಯದ ಅಂಗಡಿ ಮುಂದೆ ಸಾಲುಗಟ್ಟಿ ನಿಂತಿದ್ದರು.

‘ಕಳೆದ ಬಾರಿ ಏಕಾಏಕಿ ಲಾಕ್‌ಡೌನ್‌ ಜಾರಿ ಮಾಡಿದ್ದು, ಮದ್ಯದಂಗಡಿಗಳು ತೆರೆಯದೇ ಇರುವುದರಿಂದ ತೊಂದರೆ ಅನುಭವಿಸುವಂತಾಯಿತು. ಈ ಬಾರಿ ಅಂತಹ ಪರಿಸ್ಥಿತಿ ಉದ್ಭವಿಸದಿರಲಿ ಎಂದು ಮೊದಲೇ ಮದ್ಯ ಖರೀದಿ ಮಾಡುತ್ತಿರುವುದಾಗಿ’ ಸರದಿಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.