ADVERTISEMENT

ಶಾಲೆ ಆರಂಭಿಸಲು ಪೋಸ್ಟ್‌ ಕಾರ್ಡ್‌ ಅಭಿಯಾನ, ಶಿಕ್ಷಣ ಸಚಿವರಿಗೆ ಸಾವಿರಾರು ಪತ್ರ

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 13:58 IST
Last Updated 8 ಜುಲೈ 2021, 13:58 IST
ದಡ್ಡಲಕಾಡು ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಪೋಸ್ಟ್‌ ಕಾರ್ಡ್ ಅಭಿಯಾನಕ್ಕೆ ಚಾಲನೆ
ದಡ್ಡಲಕಾಡು ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಪೋಸ್ಟ್‌ ಕಾರ್ಡ್ ಅಭಿಯಾನಕ್ಕೆ ಚಾಲನೆ   

ಮಂಗಳೂರು: ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಶೀಘ್ರ ಶಾಲೆ ಆರಂಭಿಸುವಂತೆ ಆಗ್ರಹಿಸಿ ‘ಸರ್ಕಾರಿ ಶಾಲೆ ಉಳಿಸಿ ಬೆಳೆಸಿ’ ರಾಜ್ಯ ಸಮಿತಿ ಹಾಗೂ ಶ್ರೀ ದುರ್ಗಾ ಚಾರಿಟಬಲ್ ಟ್ರಸ್ಟ್ ನೇತೃತ್ವದಲ್ಲಿ ಆರಂಭಿಸಿರುವ ಪೋಸ್ಟ್‌ ಕಾರ್ಡ್ ಅಭಿಯಾನಕ್ಕೆ ಗುರುವಾರ ದಡ್ಡಲಕಾಡು ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಚಾಲನೆ ನೀಡಲಾಯಿತು.

ಅಭಿಯಾನದ ಅಂಗವಾಗಿ ಒಂದು ಸಾವಿರಕ್ಕಿಂತಲೂ ಅಧಿಕ ಮಂದಿ ಪೋಷಕರು ಸ್ವಯಂಪ್ರೇರಿತರಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಕಾರ್ಡ್ ಪೋಸ್ಟ್ ಬರೆಯುವ ಮೂಲಕ ಅಭಿಯಾನದಲ್ಲಿ ಕೈ ಜೋಡಿಸಿದರು.

‘ಸರ್ಕಾರಿ ಶಾಲೆ ಉಳಿಸಿ ಬೆಳೆಸಿ’ ರಾಜ್ಯ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್ ಮಾತನಾಡಿ, ಆನ್‌ಲೈನ್ ಹಾಗೂ ವಿದ್ಯಾಗಮ ಶಿಕ್ಷಣ ವ್ಯವಸ್ಥೆಯನ್ನು ಅವಲಂಬಿಸುವ ಬದಲು ಮುಖಾಮುಖಿ ಶಿಕ್ಷಣಕ್ಕೆ ಆದ್ಯತೆ ಕೊಟ್ಟು, ಶೀಘ್ರ ಶಾಲೆ ಆರಂಭಿಸುವಂತೆ ಪೋಷಕರಿಂದ ಒತ್ತಾಯಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಪೋಸ್ಟ್‌ ಕಾರ್ಡ್ ಅಭಿಯಾನಕ್ಕೆ ಚಾಲನೆ ನೀಡಿದ್ದೇವೆ. ಜುಲೈ 21ರ ಒಳಗಾಗಿ ಶಾಲೆ ಆರಂಭಿಸುವಂತೆ ಮುಖ್ಯಮಂತ್ರಿ, ಶಿಕ್ಷಣ ಸಚಿವರು ಸೇರಿದಂತೆ ಜನಪ್ರತಿನಿಧಿಗಳಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಮಕ್ಕಳ ಸುರಕ್ಷತೆ ಹಾಗೂ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಶಾಲೆ ಆರಂಭಿಸುವಂತೆ ಆಗ್ರಹಿಸುವ ಪೋಷಕರು, ಕಾರ್ಡ್ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದ ಅವರು, ತಮ್ಮ ಮನೆಯಿಂದಲೇ ಶಿಕ್ಷಣ ಸಚಿವರಿಗೆ ಪೋಸ್ಟ್‌ ಕಾರ್ಡ್ ಬರೆಯುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಕಾರ್ಯದರ್ಶಿ ಪುರುಷೋತ್ತಮ ಅಂಚನ್, ಸದಸ್ಯ ರಾಮಚಂದ್ರ ಪೂಜಾರಿ ಕರೆಂಕಿ, ಪೋಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.