ಮಂಗಳೂರು: ‘ಮಕ್ಕಳಲ್ಲಿ ಹೆಚ್ಚುತ್ತಿರುವ ಅತಿಯಾದ ಮೊಬೈಲ್ ಅತಿಬಳಕೆಯ ವ್ಯಸನ ಬಾಲ್ಯದ ಸ್ವಾರಸ್ಯವನ್ನು ಕಿತ್ತುಕೊಳ್ಳುತ್ತಿದೆ. ಇದರಿಂದ ಅವರನ್ನು ಹೊರತರಲು ಸಾಹಿತ್ಯ ಕೃತಿಗಳನ್ನು ಓದುವಂತೆ ಪ್ರೇರೇಪಿಸಬೇಕು’ ಎಂದು ಹಳೆಯಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಅನಿಲ್ ವಿ. ಚೆರಿಯನ್ ಎಂದು ಹೇಳಿದರು.
ಡಿವೈಎಫ್ಐನ ಬಜಾಲ್–ಪಕ್ಕಲಡ್ಕ ಘಟಕ ಹಾಗೂ ಪಕ್ಕಲಡ್ಕ ಯುವಕ ಮಂಡಲದ ಆಶ್ರಯದಲ್ಲಿ ಒಂದು ವಾರ ನಡೆದ ‘ಆಟ ಪಾಠ’ ಮಕ್ಕಳ ಸಂತಸ ಕಲಿಕಾ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.
ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಮಾರ್ ಬಜಾಲ್, ‘ವಿಜೃಂಭಿಸುತ್ತಿರುವ ಹಿಂಸೆ, ದ್ವೇಷ ಭಾಷಣ, ಮತೀಯ ರಾಜಕಾರಣ ವಿದ್ಯಾರ್ಥಿಗಳನ್ನೂ ವಿಭಜಿಸಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಖಾಸಗೀಕರಣವು ಜನರ ದುಡಿಮೆಯ ಬಹುಪಾಲನ್ನು ಕಸಿಯುತ್ತಿದೆ. ಯುವಜನರಿಗೆ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಮರೀಚಿಕೆಯಾಗಿದೆ’ ಎಂದರು.
ಉದ್ಯಮಿ ಸತೀಶ್ ಕುಮಾರ್ ಬಜಾಲ್, ಶಿಕ್ಷಕಿ ಚಂಚಲಾಕ್ಷಿ, ಡಿವೈಎಫ್ಐ ನಗರ ಘಟಕದ ಅಧ್ಯಕ್ಷ ಜಗದೀಶ್ ಬಜಾಲ್, ಪಕ್ಕಲಡ್ಕ ಯುವಕ ಮಂಡಲದ ಕಾರ್ಯದರ್ಶಿ ಪ್ರೀತೇಶ್ ಬಜಾಲ್, ಡಿವೈಎಫ್ಐ ಮುಖಂಡ ಪ್ರಕಾಶ್ ಶೆಟ್ಟಿ, ಶಿಬಿರದ ಸಂಚಾಲಕರಾದ ಪ್ರವೀಣ್ ವಿಸ್ಮಯ, ಶಿಬಿರದ ನಾಯಕ ಪಹಲ್ ಭಾಗವಹಿಸಿದ್ದರು.
ರಂಗಕರ್ಮಿ ರಾಜ್ ಮುಕೇಶ್ ಸುಳ್ಯ ನಿರ್ದೇಶನದ ‘ಮೂರ್ಖ ರಾಜ ಜಾಣ ಕೋಳಿ’ ಹಾಗೂ ಮೈಟಿ ಬೆವಿನ್ ಗಿಬ್ಸನ್ ಅವರ ‘ಇನ್ಕ್ರೆಡಿಬಲ್ ಆಫ್ ಮುಲ್ಲ ನಸ್ರುದ್ದಿನ್’ ನಾಟಕಗಳನ್ನು ಶಿಬಿರಾರ್ಥಿಗಳು ಪ್ರದರ್ಶಿಸಿದರು. ನೃತ್ಯ, ತಾಲೀಮು ಸಹಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಬಜಾಲ್‌ನಲ್ಲಿ 1997ರಲ್ಲಿ ಮೊದಲ ಶಿಬಿರ ಪ್ರಾರಂಭಿಸಿದ ಜಯಪ್ರಕಾಶ್ ಜಲ್ಲಿಗುಡ್ಡೆ ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.