ADVERTISEMENT

ಮಂಗಳೂರು: ಯಕ್ಷಗಾನದ ಗಾನ ಗಂಧರ್ವನಿಗೆ ನುಡಿ ನಮನ

ತೆಂಕುತಿಟ್ಟಿನ ಪ್ರಸಿದ್ಧ ಭಾಗವತ ಪದ್ಯಾಣ ಗಣಪತಿ ಭಟ್‌

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2021, 7:26 IST
Last Updated 13 ಅಕ್ಟೋಬರ್ 2021, 7:26 IST
ಪದ್ಯಾಣ ಗಣಪತಿ ಭಟ್‌ (ಚಿತ್ರಗಳು: ಅಭಿಮಾನಿಗಳ ಸಂಗ್ರಹದಿಂದ)
ಪದ್ಯಾಣ ಗಣಪತಿ ಭಟ್‌ (ಚಿತ್ರಗಳು: ಅಭಿಮಾನಿಗಳ ಸಂಗ್ರಹದಿಂದ)   

ಮಂಗಳೂರು: ತೆಂಕುತಿಟ್ಟು ಯಕ್ಷಗಾನದ ಭಾಗವತ, ‘ಗಾನ ಗಂಧರ್ವ’ ಖ್ಯಾತಿಯ ಪದ್ಯಾಣ ಗಣಪತಿ ಭಟ್‌ (66) ಮಂಗಳವಾರ ಸುಳ್ಯ ತಾಲ್ಲೂಕಿನ ಕಲ್ಮಡ್ಕದ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.

ಅವರಿಗೆ ಪತ್ನಿ ಶೀಲಾಶಂಕರಿ, ಮಕ್ಕಳಾದ ಸ್ವಸ್ತಿಕ್ ಮತ್ತು ಕಾರ್ತಿಕ್‌ ಇದ್ದಾರೆ.

16ನೇ ವಯಸ್ಸಿನಲ್ಲಿ ಚೌಡೇಶ್ವರಿ ಮೇಳಕ್ಕೆ ಸಂಗೀತಗಾರರಾಗಿ ಸೇರುವ ಮೂಲಕ ತಮ್ಮ ‘ಪದಯಾನ’ ಆರಂಭಿಸಿದ್ದರು. ಐದುದಶಕಗಳ ಕಾಲತೆಂಕುತಿಟ್ಟು ಯಕ್ಷರಂಗದಲ್ಲಿ ಭಾಗವತಿಕೆ ಮಾಡಿದ್ದರು. ಚೌಡೇಶ್ವರಿ ಮೇಳದಲ್ಲಿ ಸಂಗೀತಗಾರರಾಗಿ ಸೇರಿ, ಬಳಿಕ ಕುಂಡಾವು ಮೇಳದಲ್ಲಿ ಭಾಗವತರಾಗಿದ್ದರು. ಅನಂತರ ಸುರತ್ಕಲ್, ಮಂಗಳಾದೇವಿ, ಕರ್ನಾಟಕ, ಎಡನೀರು, ರಾಮಚಂದ್ರಾಪುರ ಮೇಳಗಳಲ್ಲಿ ಪ್ರಧಾನ ಭಾಗವತರಾಗಿದ್ದರು. ಸುರತ್ಕಲ್ ಮಹಮ್ಮಾಯಿ ಮೇಳದಲ್ಲಿ ಇಪ್ಪತ್ತಾರು ವರ್ಷ ಪ್ರಧಾನ ಭಾಗವತರಾಗಿದ್ದರು. ನೂರಾರು ಶಿಷ್ಯರನ್ನೂ ಅವರು ಹೊಂದಿದ್ದರು.

ADVERTISEMENT

ಸತಿ ಶೀಲಾವತಿ, ರಾಣಿ ರತ್ನಾವಳಿ, ಕಡುಗಲಿ ಕುಮಾರರಾಮ, ಪಾಪಣ್ಣ ವಿಜಯ ಗುಣಸುಂದರಿ, ಬಪ್ಪನಾಡು ಕ್ಷೇತ್ರ ಮಹಾತ್ಮೆ... ಅನೇಕ ಪ್ರಸಂಗಗಳು ಪದ್ಯಾಣರ ಕಂಠದಲ್ಲಿ ಮನೆಮಾತಾಗಿದ್ದವು. ನಾಟಿ ಮತ್ತು ಭೈರವಿ ರಾಗಗಳಲ್ಲಿ ಅವರಿಗೆ ವಿಶಿಷ್ಟ ಹಿಡಿತವಿತ್ತು. ಸಿಂಹೇಂದ್ರ ಮಧ್ಯಮ, ಖಮಾತು, ತಿಲ್ಲಾನ, ವಾಸಂತಿ, ವೃಂದಾವನ ಷಣ್ಮುಖಪ್ರಿಯ, ಚಾರುಕೇಶಿ ಸಂಗೀತ ಪ್ರಯೋಗಗಳನ್ನು ಮಾಡಿದ್ದರು ಎಂದು ಹಿರಿಯ ಕಲಾವಿದರು ಸ್ಮರಿಸಿಕೊಳ್ಳುತ್ತಾರೆ.

–ಭಾಗವತರಾಗಿ ಪದ್ಯಾಣ ಗಣಪತಿ ಭಟ್, ಮದ್ದಳೆಗಾರರಾಗಿ ಕಡಬ ನಾರಾಯಣ ಆಚಾರ್ಯ ಮತ್ತು ಅರ್ಥಧಾರಿಯಾಗಿ ಕುಂಬಳೆ ಸುಂದರ ರಾವ್

ಕನ್ನಡ ಮತ್ತು ತುಳು ಭಾಷೆಗಳಲ್ಲಿ ಸಮರ್ಥವಾಗಿ ಭಾಗವತಿಕೆ ಮಾಡುತ್ತಿದ್ದರು. ಹೊಸ ರಾಗಸಂಯೋಜನೆಯೂ ಮಾಡಿದ್ದಾರೆ. 1,500ಕ್ಕೂ ಹೆಚ್ಚು ಧ್ವನಿಸುರುಳಿಗಳಲ್ಲಿ 200ಕ್ಕೂ ಹೆಚ್ಚು ಯಕ್ಷಗಾನದ ವಿಡಿಯೊಗಳಿಗೆ ಕಂಠ ನೀಡಿದ್ದಾರೆ. ಕರಾವಳಿ, ರಾಜ್ಯ ಮಾತ್ರವಲ್ಲದೇ, ವಿದೇಶಗಳಲ್ಲೂ ಅವರು ಭಾಗವತಿಕೆ ಮಾಡಿದ್ದಾರೆ. ಆಕಾಶವಾಣಿಯಲ್ಲೂ ಅವರ ಭಾಗವತಿಕೆ ಬಿತ್ತರವಾಗಿತ್ತು.

‘ಪದ್ಯಾಣ’ ಕುಟುಂಬದಿಂದ ಹಲವರು ಯಕ್ಷಗಾನಕ್ಕೆ ಬಂದಿದ್ದಾರೆ. ‘ಅಗರಿ ಶೈಲಿ, ‘ಬಲಿಪ ಶೈಲಿ’ಯಂತೆ ಸ್ವ-ಸಾಧನೆಯಿಂದ ‘ಪದ್ಯಾಣ ಶೈಲಿ’ಯ ಹುಟ್ಟಿಗೆ ಗಣಪತಿ ಭಟ್‌ ಕಾರಣರಾಗಿದ್ದಾರೆ. ಈ ಕುಟುಂಬವು ಮನೆತನದ ಹಿರಿಯರಾದಪುಟ್ಟು ನಾರಾಯಣ ಭಾಗವತರ ನೆನಪಿನಲ್ಲಿ ‘ಪದ್ಯಾಣ ಪ್ರಶಸ್ತಿ’ ನೀಡಿ ಕಲಾವಿದರನ್ನು ಪ್ರೋತ್ಸಾಹಿಸುತ್ತಿದೆ.2016ರಲ್ಲಿ ಮಂಗಳೂರಿನಲ್ಲಿ ಅಭಿನಂದನಾ ಸಮಾರಂಭ ನಡೆದಿತ್ತು. ‘ಪದ್ಯಾಣ ಪದಯಾನ’ ಸಮರ್ಪಿಸಲಾಗಿತ್ತು.

‘ಸ್ವತಃ ವೃತ್ತಿ ಭಾಗವತರಾಗಿದ್ದು ಮತ್ತೊಬ್ಬ ಭಾಗವತರ ಗುಣಗಳನ್ನು ಕೊಂಡಾಡುವುದು, ಒಳ್ಳೆಯತನವನ್ನು ಒಪ್ಪಿಕೊಳ್ಳುವುದು, ತನಗೆ ಅವರಿಂದ ದೊರೆದ ಅನುಭವಗಳನ್ನು ಮುಕ್ತ ಕಂಠದಿಂದ ಪ್ರಶಂಸಿಸುವ ಮಾನವೀಯ ಗುಣಗಳಿಂದ ಕಂಠದ ಜೊತೆ ಹೃದಯ ಸಿರಿಯಿಂದ ಜನಮಾನಸದಲ್ಲಿ ಇನ್ನಷ್ಟು ಗಟ್ಟಿಯಾಗಿದ್ದಾರೆ. ನೂರಾರು ಶಿಷ್ಯರನ್ನೂ ಅವರು ಹೊಂದಿದ್ದಾರೆ’ ಎಂದು ಯಕ್ಷತಜ್ಞರು ನುಡಿನಮನ ಸಲ್ಲಿಸಿದ್ದಾರೆ.

**
ಯಕ್ಷ ಪ್ರಜ್ಞೆ ಮುಂದುವರಿಯಲಿ’
ಪದ್ಯಾಣ ಗಣಪತಿ ಭಟ್ಟರ ನಿಧನ ಯಕ್ಷಗಾನಕ್ಕೆ ನಷ್ಟ ಮತ್ತು ನನಗೆ ವೈಯಕ್ತಿಕವಾಗಿ ನಷ್ಟ. ನಾವು ಕುಟುಂಬ ಮಿತ್ರರು. ಪದ್ಯಾಣ ಮನೆಯೇ ಒಂದು ಕಲಾಮಯ ಪ್ರಪಂಚ. ಅವರು 15ನೇ ವಯಸ್ಸಿನಲ್ಲಿ ಮಾಡಿದ ಭಾಗವತಿಕೆ ಈಗಲೂ ಕಿವಿಯಲ್ಲಿ ಅನುರಣಿಸುತ್ತಿದೆ. ಐದು ದಶಕಗಳ ಒಡನಾಡಿ ಅವರು. ಸ್ನೇಹಶೀಲ, ಮುಗ್ಧ ಹಾಗೂ ಸಜ್ಜನ ವ್ಯಕ್ತಿ. ರಂಗಸ್ಥಳದಲ್ಲಿ ಸಮನ್ವಯ ಸಾಧಿಸುವ ಗುಣ ಅವರಲ್ಲಿತ್ತು. ಮನೆತನದ ಹಿರಿಯರಿಂದ ಬಳುವಳಿಯಾಗಿ ಬಂದ ಪಾರಂಪರಿಕವಾದ ತೆಂಕುತಿಟ್ಟಿನ ಶೈಲಿಯ ಹಿಡಿತ ಇತ್ತು. ಸಮಕಾಲೀನ ಯಕ್ಷಗಾನದ ಪ್ರಮುಖ ಭಾಗವತರಲ್ಲಿ ಅವರು ಒಬ್ಬರಾಗಿದ್ದರು. ಬದಲಾದ ಸಾಮಾಜಿಕ ಸಂದರ್ಭದಲ್ಲಿ ಪದ್ಯಾಣದಂತಹ ಮನೆಗಳು ಆದರ್ಶವಾಗಿ ಕಾಣುತ್ತವೆ. ಪದ್ಯಾಣ ಪರಂಪರೆ, ಪದ್ಯಾಣ ಯಕ್ಷಗಾನ ಪ್ರಜ್ಞೆ ಮುಂದುವರಿಯಲಿ. ಗಣಪತಿ ಭಟ್ಟರ ಹೆಸರನ್ನು ಸದಾ ನೆನಪಿಸಿಕೊಳ್ಳುವಂತಾಗಲಿ.
-ಡಾ. ಎಂ.ಪ್ರಭಾಕರ ಜೋಷಿ, ತಾಳಮದ್ದಳೆ ಅರ್ಥಧಾರಿ

**
‘ಸ್ವರ ಸಂಚಾರ ಅದ್ಭುತ’
ಪದ್ಯಾಣರಿಗೆ ತೆಂಕುತಿಟ್ಟಿನ ಪರಂಪರೆಯ ಭಾಗವತಿಕೆ ಹಾಗೂ ಸಂಗೀತ ಅಳವಡಿಸಿಕೊಂಡು ಹಾಡುವ ಆಧುನಿಕ ಶೈಲಿ ತಿಳಿದಿತ್ತು. ಚೆಂಡೆ– ಮದ್ದಳೆ ವಾದನದ ಜ್ಞಾನವೂ ಅವರಲ್ಲಿತ್ತು. ಯಾವ ಪ್ರಸಂಗವನ್ನೂ ಆಡಿಸುವ ಸಾಮರ್ಥ್ಯ ಇದ್ದವರಾಗಿದ್ದರು. ಸ್ವರ ಸಂಚಾರ ಅದ್ಭುತವಾಗಿತ್ತು. ಷಡ್ಜದಲ್ಲಿ ಮೇಲಿನ ಸ್ಥಾಯಿಗೆ ಒಯ್ಯುವ ಕಂಠ ಅವರಿಗಿತ್ತು.
-ಕುರಿಯ ಗಣಪತಿ ಶಾಸ್ತ್ರಿ, ಹಿರಿಯ ಭಾಗವತ

**
‘ಹಲವಾರು ಕಲಾವಿದರಿಗೆ ಪ್ರೇರಣೆ’
ತೆಂಕುತಿಟ್ಟಿನ ಯಕ್ಷಗಾನ ಬಹಳ ಎತ್ತರಕ್ಕೆ ಕೊಂಡೊಯ್ದ ಭಾಗವತರು ಪದ್ಯಾಣ ಗಣಪತಿ ಭಟ್. ತಮ್ಮದೇ ಶೈಲಿಯಲ್ಲಿ ಭಾಗವತಿಕೆಗೆ ಸಂಗೀತವನ್ನು ಅಳವಡಿಸಿಕೊಂಡು, ಕನ್ನಡ ಹಾಗೂ ತುಳು ಪ್ರಸಂಗಗಳಲ್ಲಿ ಮಿಂಚಿದವರು. ಹಲವಾರು ಕಲಾವಿದರಿಗೆ ಪ್ರೇರಣೆಯಾದವರು. ಅವರ ಇಡೀ ಮನೆತನ ಯಕ್ಷಗಾನಕ್ಕೆ ಕೊಡುಗೆ ನೀಡಿದೆ. ಭಾಗವತರಾಗಿ ಮಾತ್ರವಲ್ಲ, ಹೃದಯವಂತ ಮನುಷ್ಯ. ಉತ್ತಮ ಕಾರ್ಯಗಳಿಗೆ ಸಹಕಾರ ನೀಡಿ, ಪ್ರೋತ್ಸಾಹಿಸುತ್ತಿದ್ದರು.
-ಸತೀಶ ಶೆಟ್ಟಿ ಪಟ್ಲ, ಪಾವಂಜೆ ಮೇಳದ ಪ್ರಧಾನ ಭಾಗವತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.