ADVERTISEMENT

ಬಂಟ್ವಾಳದಲ್ಲಿ ಕೆಸರುಮಯ ರಸ್ತೆ: ಎಚ್ಚರ ತಪ್ಪಿದರೆ ಹೊಂಡಕ್ಕೆ, ವಾಹನ ಸವಾರರ ಪರದಾಟ

ಮೋಹನ್ ಕೆ.ಶ್ರೀಯಾನ್
Published 2 ಜೂನ್ 2022, 5:28 IST
Last Updated 2 ಜೂನ್ 2022, 5:28 IST
ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು-–ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಮಳೆಯಿಂದ ರಸ್ತೆ ಕೆಸರುಮಯಗೊಂಡಿರುವುದು
ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು-–ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಮಳೆಯಿಂದ ರಸ್ತೆ ಕೆಸರುಮಯಗೊಂಡಿರುವುದು   

ಬಂಟ್ವಾಳ: ಇಲ್ಲಿನ ಪಾಣೆಮಂಗಳೂರು- ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಮಳೆಯಿಂದ ರಸ್ತೆ ಕೆಸರುಮಯಗೊಂಡು ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರು ಹೊಂಡಕ್ಕೆ ಬೀಳುವ ಆತಂಕ ಎದುರಿಸುತ್ತಿದ್ದಾರೆ.

‘ಪಾಣೆಮಂಗಳೂರು- ಮೆಲ್ಕಾರ್ ನಡುವೆ ಇರುವ ವಾಹನ ಮಳಿಗೆ, ಟೈರ್ ಮಳಿಗೆ, ವಿವಿಧ ಹೋಟೆಲ್ ಮತ್ತು ಕಿರು ಕೈಗಾರಿಕೆಗಳಿಗೆ ತೆರಳಲು ಜನರು ಹರಸಾಹಸ ಪಡಬೇಕಿದೆ. ಈಗಾಗಲೇ ಹಲವು ಬಾರಿ ಕಲ್ಲು ಮತ್ತು ಜೆಲ್ಲಿ ಹುಡಿ ತಂದು ಕೃತಕ ರಸ್ತೆ ನಿರ್ಮಿಸಿದರೂ ಹೆದ್ದಾರಿ ಕಾಮಗಾರಿ ಕಾರ್ಮಿಕರು ಹಿಟಾಚಿ ಮೂಲಕ ತೆರವುಗೊಳಿಸುತ್ತಿದ್ದಾರೆ’ ಎಂದು ಸ್ಥಳೀಯ ಉದ್ಯಮಿ ನವೀನ್ ಕೋಟ್ಯಾನ್ ಆರೋಪಿಸಿದ್ದಾರೆ.

ಇನ್ನೊಂದೆಡೆ ಕಲ್ಲಡ್ಕ- ಸೂರಿಕುಮೇರು ನಡುವೆ ಮನೆಗೆ ತೆರಳಲು ಕೂಡಾ ಕಾಲು ದಾರಿ ಇಲ್ಲದಂತಾಗಿದೆ. ‘ನಮಗೆ ದಾರಿ ತೋರಿಸಿ ಕೊಡಿ’ ಎಂದು ಮುಖ್ಯಮಂತ್ರಿಗೆ ಪತ್ರ ಬರೆದಿರುವುದಾಗಿ ಸ್ಥಳೀಯ ನಿವಾಸಿ ಗೋಪಾಲ ಶಾಸ್ತ್ರಿ ತಿಳಿಸಿದ್ದಾರೆ.

ADVERTISEMENT

ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಮತ್ತು ಚರಂಡಿ ವ್ಯವಸ್ಥೆಯೂ ಇಲ್ಲದೆ ಅಕಾಲಿಕ ಮಳೆಗೆ ಅಡಿಕೆ ತೋಟದಲ್ಲಿ ಕೆಸರುಸಹಿತ ಮಳೆ ನೀರು ನಿಂತು ಅಡಿಕೆ ಫಸಲು ನೆಲಕಚ್ಚುವ ಭೀತಿ ಎದುರಾಗಿದೆ. ಕೆಲವೆಡೆ ರಸ್ತೆಗಿಂತಲೂ ಎತ್ತರಕ್ಕೆ ಒಳಚರಂಡಿ ನಿರ್ಮಿಸಲಾಗಿದ್ದು, ರಸ್ತೆಯ ಕೆಳಭಾಗದಲ್ಲಿ ರೈತರಿಗೆ ಭೀತಿ ಎದುರಾಗಿದೆ. ಈ ನಡುವೆ ಕಾಮಗಾರಿ ಪೂರ್ಣಗೊಳ್ಳದ ಪರಿಣಾಮ ಮಳೆಗಾಲದಲ್ಲಿ ಅಡಿಕೆ, ತೆಂಗು, ಬಾಳೆ, ಕರಿಮೆಣಸು ಕೃಷಿ ಹಾನಿಗೀಡಾಗುವ ಸಾಧ್ಯತೆಯೂ ಇದೆ ಎಂದು ಸ್ಥಳೀಯ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.