ಕಾಸರಗೋಡು: ಕುಂಬಳೆ ಕಣ್ಣೂರು ಜುಮ್ಮಾ ಮಸೀದಿ ಅಧೀನದಲ್ಲಿರುವ ಸೀದಿ ವಲಿಯಲ್ಲಾಹಿ ದರ್ಗಾ ಶರೀಫ್‌ಗೆ ಭಕ್ತರು ರೊಟ್ಟಿ ಸಹಿತ ಬಂದಿದ್ದರು. ಕೋಟಿಕುಳಂ ಅಕ್ಕರ ಕುಟುಂಬದ ಪ್ರತಿನಿಧಿಗಳು ರೊಟ್ಟಿ ಹಂಚಿದರು.
600 ವರ್ಷಗಳ ಹಿಂದೆ, ಅಕ್ಕರ ಕುಟುಂಬದಲ್ಲಿ ಹೆಣ್ಣು ಮಗು ಹುಟ್ಟದ ಹಿನ್ನೆಲೆಯಲ್ಲಿ ಉಣ್ಣಿಯಪ್ಪದೊಂದಿಗೆ (ಪುಟಾಣಿ ಅಪ್ಪ- ಒಂದು ಖಾದ್ಯ ಪದಾರ್ಥ) ಈ ದರ್ಗಾಕ್ಕೆ ಭೇಟಿ ನೀಡುವುದಾಗಿ ಹರಕೆ ಹೇಳಿಕೊಳ್ಳಲಾಗಿತ್ತು. ಬಳಿಕ ಕುಟುಂಬದವರು 800 ಉಣ್ಣಿಯಪ್ಪಗಳೊಂದಿಗೆ ಕಣ್ಣೂರು ದರ್ಗಾಕ್ಕೆ ಬಂದು ಹರಕೆ ಪೂರೈಸಿದ್ದರು. ಈ ಪರಿಪಾಟ ನಿರಂತರವಾಗಿ ನಡೆದುಬಂದಿತ್ತು.
ಕೋವಿಡ್ ಬಿಕ್ಕಟ್ಟಿನಿಂದ ಎರಡು ವರ್ಷಗಳಿಂದ ದರ್ಗಾಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಈ ಬಾರಿ 8,000 ಅಪ್ಪಗಳೊಂದಿಗೆ ಅಕ್ಕರ ಕುಟುಂಬದವರು ಬಂದಿದ್ದರು. ಈ ದರ್ಗಾದಲ್ಲಿ ಹರಕೆ ಹೊತ್ತರೆ ಕುಟುಂಬದಲ್ಲಿ ಹೆಣ್ಣುಮಗು ಹುಟ್ಟುತ್ತದೆ ಎಂಬ ನಂಬಿಕೆ ಇದೆ ಎಂದು ಕೋಟಿಕುಳಂ ಅಕ್ಕರ ಕುಟುಂಬದವರು ತಿಳಿಸಿದರು.
ಎ. ಎಂ. ಇಬ್ರಾಹಿಂ, ಮುಹಮ್ಮದ್ ಕುಂಞ್ಞಿ, ಶಾನವಾಝ್, ಅಕ್ಕರ ಅಜೀಜ್, ಸಿದ್ದೀಕ್ ಮಿಲ್, ನಾಝಿ ತಿರುವಕೊಲ್ಲಿ, ಅಝೀಝ್, ಟಿ.ಕೆ. ಅಬ್ದುಲ್ಲಾ ಹಾಜಿ, ಎನ್.ಬಿ. ಅಶ್ರಫ್, ಅಬ್ಬಾಸ್ ಹಾಜಿ, ಅಸೈನಾರ್ ಮಿಸ್ಬಾಹಿ, ಲತೀಫ್ ಫೈಝಿ, ಟಿ. ಶರೀಫ್ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.