ADVERTISEMENT

ಅಸಮಾಧಾನಕ್ಕೆ ಕಾರಣವಾಗುವ ‘ಅನುದಾನ’: ಮಕ್ಕಳ ಸಂಖ್ಯೆ ಆಧರಿಸಿ ನಿಗದಿಗೆ ಆಗ್ರಹ

ಸಂಧ್ಯಾ ಹೆಗಡೆ
Published 16 ಆಗಸ್ಟ್ 2025, 23:20 IST
Last Updated 16 ಆಗಸ್ಟ್ 2025, 23:20 IST
   

ಮಂಗಳೂರು: ಸರ್ಕಾರಿ ಶಾಲೆಗಳ ವಾರ್ಷಿಕ ನಿರ್ವಹಣೆಗೆ ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರ ಕಚೇರಿಯಿಂದ ಬಿಡುಗಡೆಯಾಗುವ ಶಾಲಾನುದಾನ ಹಾಗೂ ಕ್ರೀಡಾ ಅನುದಾನದ ಹಂಚಿಕೆಯ ಮಾನದಂಡ ಶಿಕ್ಷಕರ ನಡುವೆ ಅಸಮಾಧಾನಕ್ಕೆ ಕಾರಣವಾಗುತ್ತಿದೆ.

ಪ್ರೌಢಶಿಕ್ಷಣ ಇರುವ ಶಾಲೆಗಳು, ಪ್ರೌಢಶಾಲಾ ವಿಭಾಗ ಹಾಗೂ ಪದವಿಪೂರ್ವ ಶಿಕ್ಷಣ ಹೊಂದಿರುವ ಸಂಯುಕ್ತ ಪದವಿ ಪೂರ್ವ ಕಾಲೇಜುಗಳಿಗೆ ಏಕರೂಪದ ಅನುದಾನ ಹಂಚಿಕೆ ಆಗುತ್ತಿರುವುದು ಇದಕ್ಕೆ ಕಾರಣ ಎಂಬುದು ಶಿಕ್ಷಕರ ಅಭಿಪ್ರಾಯ. 

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ (ಆರ್‌ಎಂಎಸ್‌ಎ) ಇರುವ ಶಾಲೆಗಳಲ್ಲಿ 1ರಿಂದ 10ನೇ ತರಗತಿಗಳು ಇರುತ್ತವೆ. ಅದೇ ರೀತಿ ಸಂಯುಕ್ತ ಪದವಿಪೂರ್ವ ಕಾಲೇಜುಗಳಲ್ಲಿ ಪ್ರೌಢಶಾಲಾ ವಿಭಾಗ ಮತ್ತು ಪದವಿಪೂರ್ವ ಕಾಲೇಜುಗಳು ಇರುತ್ತವೆ. ಆದರೆ, ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ (8ರಿಂದ 10ನೇ ತರಗತಿ) ಇರುವ ಶಾಲೆಗಳಿಗೆ ದೊರೆತಷ್ಟೇ ಮೊತ್ತದ ಅನುದಾನ ಆರ್‌ಎಂಎಸ್‌ಎ ಮತ್ತು ಸಂಯುಕ್ತ ಪದವಿ ಪೂರ್ವ ಕಾಲೇಜುಗಳಿಗೆ ದೊರೆಯುತ್ತದೆ ಎನ್ನುತ್ತಾರೆ ಶಿಕ್ಷಕರೊಬ್ಬರು.

ADVERTISEMENT

‘ಶಾಲಾ ಅನುದಾನವನ್ನು ಪೀಠೋಪಕರಣ ದುರಸ್ತಿ, ಶೌಚಾಲಯ ನಿರ್ವಹಣೆ, ಕಚೇರಿ ನಿರ್ವಹಣೆ ಸೇರಿದಂತೆ ನಿಗದಿತ 10 ಅಂಶಗಳಿಗೆ ವ್ಯಯಿಸಲು ಅವಕಾಶ ಇದೆ. ಶಾಲೆಯಲ್ಲಿ 30 ಮಕ್ಕಳ ಒಳಗೆ ಇದ್ದರೆ ವರ್ಷಕ್ಕೆ ಗರಿಷ್ಠ ₹20 ಸಾವಿರ, 31ರಿಂದ 100 ಮಕ್ಕಳಿದ್ದರೆ ವರ್ಷಕ್ಕೆ ₹50 ಸಾವಿರ, 101ರಿಂದ 250 ಇದ್ದರೆ ₹1 ಲಕ್ಷದವರೆಗೆ, 251ರಿಂದ 1,000 ಇದ್ದರೆ ₹1.5 ಲಕ್ಷದವರೆಗೆ ಅನುದಾನ ಸಿಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಪೂರ್ಣ ಪ್ರಮಾಣದ ಅನುದಾನ ಸಿಗುವುದಿಲ್ಲ. ಇವುಗಳನ್ನು ನಾವು ಹಂಚಿಕೊಂಡು ಬಳಸಬೇಕಾಗುತ್ತದೆ’ ಎನ್ನುತ್ತಾರೆ ಅವರು.

‘ಸಂಯುಕ್ತ ಪದವಿಪೂರ್ವ ಕಾಲೇಜುಗಳಲ್ಲಿ ಸಾಮಾನ್ಯವಾಗಿ ಪ್ರೌಢಶಾಲಾ ವಿಭಾಗಗಳಿಗೆ ಸೇರಿದ ಶೌಚಾಲಯಗಳು ಇರುತ್ತವೆ. ಅವುಗಳ ಸ್ವಚ್ಛತೆ,  ಕಟ್ಟಡ ದುರಸ್ತಿ ಕಾರ್ಯಗಳನ್ನು ಪ್ರೌಢಶಾಲಾ ವಿಭಾಗದವರೇ ನಿರ್ವಹಿಸುತ್ತಾರೆ. ಆದರೆ,ಹಂಚಿಕೆಯಾಗುವ ಅನುದಾನದಲ್ಲಿ ಪದವಿಪೂರ್ವ ವಿಭಾಗಕ್ಕೆ ಅರ್ಧ ಪಾಲು ನೀಡಬೇಕಾಗುತ್ತದೆ. ಇದರಿಂದ ಶಿಕ್ಷಕರ ನಡುವೆ ಗೊಂದಲ ಸೃಷ್ಟಿಯಾಗುತ್ತಿವೆ’ ಎನ್ನುತ್ತಾರೆ ಶಿಕ್ಷಕರ ಸಂಘದ ಪದಾಧಿಕಾರಿಯೊಬ್ಬರು.

ಇದೇ ರೀತಿ ಕ್ರೀಡಾ ಅನುದಾನದ ಹಂಚಿಕೆಯಲ್ಲೂ ಅಸಮಾನತೆ ಇದೆ. ಮೂರು ವರ್ಷಗಳ ಪ್ರೌಢಶಿಕ್ಷಣ ಇರುವ ಶಾಲೆಗಳ ಮಕ್ಕಳಿಗೆ ಹೆಚ್ಚು ಕ್ರೀಡಾ ಸೌಲಭ್ಯಗಳು ದೊರೆಯುತ್ತವೆ. ಹೀಗಾಗಿ, ಮಕ್ಕಳ ಸಂಖ್ಯೆ ಆಧರಿಸಿ ಅನುದಾನ ನಿಗದಿಪಡಿಸಬೇಕು ಅಥವಾ ಪ್ರೌಢಶಾಲೆ ಮತ್ತು ಪದವಿಪೂರ್ವ ವಿಭಾಗಗಳಿಗೆ ಪ್ರತ್ಯೇಕ ಅನುದಾನ ನೀಡಬೇಕು ಎಂಬುದು ಅವರ ಆಗ್ರಹ.

ಅನುದಾನ ಹಂಚಿಕೆಯಲ್ಲಿ ಅಸಮತೋಲನ ಆಗುತ್ತಿದೆ ಎಂದು ಕೆಲವು ಶಿಕ್ಷಕರು ಸಮಸ್ಯೆ ಹೇಳಿಕೊಂಡಿದ್ದಾರೆ. ಹಿರಿಯ ಅಧಿಕಾರಿಗಳ ಗಮನಕ್ಕೆ ತರುವೆ
ಜಿ.ಎಸ್.ಶಶಿಧರಉಪ ನಿರ್ದೇಶಕ, ಶಿಕ್ಷಣ ಇಲಾಖೆ
ಶಾಲೆ ನಿರ್ವಹಣೆ, ಕ್ರೀಡಾನುದಾನ
ಪಿಎಂಶ್ರೀ ಯೋಜನೆಯಡಿ ಅನುಮೋದಿತ ಶಾಲೆಗಳು, ಶೂನ್ಯ ದಾಖಲಾತಿ ಶಾಲೆಗಳನ್ನು ಹೊರತುಪಡಿಸಿ, ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ ಸರ್ಕಾರಿ ಪ್ರೌಢಶಾಲೆ, ಹೈಯರ್ ಸೆಕೆಂಡರಿ ಶಾಲೆಗಳು ಸೇರಿ 5,352 ಶಾಲೆಗಳಿಗೆ 2024–25ನೇ ಸಾಲಿನಲ್ಲಿ ಬಾಕಿ ಇದ್ದ ಎರಡನೇ ಹಂತದ ಒಟ್ಟು ₹11.52 ಕೋಟಿ ಶಾಲಾನುದಾನ ಬಿಡುಗಡೆಯಾಗಿದೆ. ಕ್ರೀಡೆ, ದೈಹಿಕ ಶಿಕ್ಷಣ ಕಾರ್ಯಕ್ರಮಗಳಿಗೆ ಇದೇ ಮೊದಲಿಗೆ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಸಂಯುಕ್ತ ಪಿಯು ಕಾಲೇಜುಗಳು ಸೇರಿ 29,004 ಶಾಲೆಗಳಿಗೆ 2025–26ನೇ ಸಾಲಿಗೆ ಒಟ್ಟು ₹30.11 ಕೋಟಿ ಅನುದಾನ ಬಿಡುಗಡೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 14 ಕಿರಿಯ ಪ್ರಾಥಮಿಕ ಶಾಲೆಗಳು, 641 ಹಿರಿಯ ಪ್ರಾಥಮಿಕ ಶಾಲೆಗಳು, 114 ಪ್ರೌಢಶಾಲೆಗಳು, 55 ಸಂಯುಕ್ತ ಪದವಿಪೂರ್ವ ಕಾಲೇಜುಗಳು ಒಟ್ಟು ₹90.15 ಲಕ್ಷ ಕ್ರೀಡಾ ಅನುದಾನ ಪಡೆದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.