
ಮಂಗಳೂರು: ತುಳು ಭಾಷೆಯಲ್ಲಿ ಒಂದು ಅತ್ಯುತ್ತಮ ಸಿನಿಮಾ ನಿರ್ಮಾಣ ಮಾಡುವ ಯೋಚನೆ ಇದೆ ಎಂದು ಚಿತ್ರನಟ ರಾಜ್ ಬಿ. ಶೆಟ್ಟಿ ತಮ್ಮ ಮನದ ಇಂಗಿತ ತೆರೆದಿಟ್ಟರು.
ಕರಾವಳಿ ಉತ್ಸವದ ಭಾಗವಾಗಿ ಜಿಲ್ಲಾಡಳಿತವು ತುಳು ಚಲನಚಿತ್ರ ನಿರ್ಮಾಪಕರ ಸಂಘದ ಸಹಕಾರದೊಂದಿಗೆ ಇಲ್ಲಿನ ಭಾರತ್ ಸಿನಿಮಾಸ್‌ನಲ್ಲಿ ಸೋಮವಾರದಿಂದ ಮೂರು ದಿನಗಳ ಕಾಲ ಆಯೋಜಿಸಿರುವ ‘ಕರಾವಳಿ ಫಿಲಂ ಫೆಸ್ಟಿವಲ್’ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ತುಳುವಿನಲ್ಲಿ ಸಿನಿಮಾ ನಿರ್ಮಾಣ ಮಾಡುವ ಹಂಬಲವಿದೆ, ಅದು ಹತ್ತರ ಜೊತೆ ಹನ್ನೊಂದನೆಯದು ಆಗಬಾರದು, ಅನೇಕರಿಗೆ ಸ್ಫೂರ್ತಿಯಾಗಬೇಕು ಎಂಬ ಕಳಕಳಿಯೂ ಇದೆ. ಆದರೆ, ಸಣ್ಣ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಬೇಕು, ತೊಡಗಿಸಿದ ಹಣ ವಾಪಸ್ ಬರಬೇಕು ಇಂತಹ ಸವಾಲುಗಳೂ ಇವೆ’ ಎಂದರು.
ಕರಾವಳಿಯ ನೆಲ ಯಕ್ಷಗಾನ, ಹುಲಿವೇಷ, ಸಿನಿಮಾ ಹೀಗೆ ಎಲ್ಲ ಕಲಾ ಪ್ರಕಾರಗಳ ಆಗರ. ಸಿನಿಮಾ ನೋಡುವ ಅಭಿರುಚಿ ಇರುವಲ್ಲಿ ಒಳ್ಳೆಯ ಕಥೆಗಳು, ಉತ್ತಮ ಸಿನಿಮಾಗಳು ಹುಟ್ಟುವ ಸಾಧ್ಯತೆಗಳು ಹೆಚ್ಚು. ಕರಾವಳಿಯಲ್ಲಿ ಪ್ರವಾಸೋದ್ಯಮ ಬೆಳವಣಿಗೆ ಕಾಣುತ್ತಿದ್ದು, ಇದಕ್ಕೆ ಇಲ್ಲಿನ ಚಲನಚಿತ್ರ ಕ್ಷೇತ್ರದ ಕೊಡುಗೆಯೂ ಇದೆ. ಹೀಗಾಗಿ, ಕರಾವಳಿಯಲ್ಲಿ ಸಿನಿಮಾ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ಸುಸಜ್ಜಿತ ಸ್ಟುಡಿಯೊ ನಿರ್ಮಾಣದಂತಹ ಯೋಜನೆ ಜಾರಿಗೆ ಸರ್ಕಾರ, ಆಡಳಿತ ಯೋಚಿಸಬೇಕಾಗಿದೆ. ಇದು ಹೆಸರಿಗಷ್ಟೇ ದೊಡ್ಡ ಯೋಜನೆ ಆಗಿರದೆ, ಸ್ಥಳೀಯರಿಗೆ ಉದ್ಯೋಗ, ಆದಾಯ ನೀಡುವ ವೇದಿಕೆಯಾಗಬೇಕು ಎಂದು ಅವರು ಒತ್ತಾಯಿಸಿದರು.
ಚಿತ್ರ ನಿರ್ಮಾಪಕ ರಿಚರ್ಡ್ ಕ್ಯಾಸ್ತಲಿನೊ ಮಾತನಾಡಿ, ‘ಕರಾವಳಿಯಲ್ಲಿ ಪ್ರತಿವರ್ಷ ಪ್ರಾದೇಶಿಕ ಭಾಷೆಯ ಫಿಲ್ಮ್ ಫೆಸ್ಟಿವಲ್ ನಡೆಯಬೇಕು. ಇದರಿಂದ ಜನರಿಗೆ ಹಲವು ಭಾಷೆಗಳ ಚಿತ್ರಗಳನ್ನು ಒಂದೇ ಸೂರಿನಡಿ ನೋಡುವ ಅವಕಾಶ ಲಭ್ಯವಾಗುತ್ತದೆ. ಗುಣಮಟ್ಟದ ಪ್ರಾದೇಶಿಕ ಭಾಷೆಯ ಸಿನಿಮಾಗಳು ಬರುತ್ತಿದ್ದು, ಇವುಗಳಿಗೆ ಉತ್ತಮ ಭವಿಷ್ಯ ಇದೆ. ಪ್ರಾದೇಶಿಕ ಭಾಷೆ ಸಿನಿಮಾಗಳಿಗೆ ಒಂದೆರಡು ವರ್ಷಗಳಿಂದ ಸಹಾಯಧನ ಸಿಗುತ್ತಿಲ್ಲ. ಹೀಗಾದಾಗ, ಸಿನಿಮಾ ನಿರ್ಮಾಣಕ್ಕೆ ಕೈ ಹಾಕಲು ಹಿಂದೇಟು ಹಾಕುವಂತಾಗುತ್ತದೆ. ಸರ್ಕಾರ ಸಹಾಯಧನ ನೀಡಬೇಕು’ ಎಂದರು.
ಮಂಗಳೂರು ಸ್ಮಾರ್ಟ್ ಸಿಟಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್, ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್. ಧನರಾಜ್, ರಂಗಕರ್ಮಿ ವಿಜಯಕುಮಾರ್ ಕೊಡಿಯಾಲ್‌ಬೈಲ್, ಪ್ರಮುಖರಾದ ಯತೀಶ್ ಬೈಕಂಪಾಡಿ, ರವಿ ಕಳಸ, ಬಾಲಕೃಷ್ಣ ಶೆಟ್ಟಿ, ಶ್ರೀನಿವಾಸ, ಪ್ರಕಾಶ ಪಾಂಡೇಶ್ವರ, ಸಚಿನ್ ಉಪ್ಪಿನಂಗಡಿ ಉಪಸ್ಥಿತರಿದ್ದರು.
ಮೂರು ದಿನಗಳಲ್ಲಿ 18 ಸಿನಿಮಾಗಳ ಪ್ರದರ್ಶನ 11 ತುಳು, 4 ಕನ್ನಡ, 2 ಕೊಂಕಣಿ, 1 ಬ್ಯಾರಿ ಚಲನಚಿತ್ರ ಪ್ರತಿದಿನ ಆರು ಚಿತ್ರಗಳ ಪ್ರದರ್ಶನ; ಉಚಿತ ಪ್ರವೇಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.