ADVERTISEMENT

ಗಾಂಜಾ ಪತ್ತೆ: ವಿದ್ಯಾರ್ಥಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2021, 4:42 IST
Last Updated 14 ಡಿಸೆಂಬರ್ 2021, 4:42 IST

ಮಂಗಳೂರು: ತೊಕ್ಕೊಟ್ಟು ಸಮೀಪದ ಬಗಂಬಿಲ ಎಂಬಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಉಳ್ಳಾಲ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಕೇರಳ ತ್ರಿಶ್ಶೂರ್‌ನ ಆದರ್ಶ್ ಜ್ಯೋತಿ (22), ಕೋಟ್ಟಯಂನ ಯೋಯಲ್ ಜೋಯ್ಸ್ (22) ಬಂಧಿತರು. ಆದರ್ಶ್ ಬಿಡಿಎಸ್ ವಿದ್ಯಾರ್ಥಿಯಾಗಿದ್ದು, ಯೋಯಲ್ ನರ್ಸಿಂಗ್ ಓದುತ್ತಿರುವ ವಿದ್ಯಾರ್ಥಿ. ಬಗಂಬಿಲ ಪರಿಸರದಲ್ಲಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ಪೊಲೀಸರು ತಪಾಸಣೆ ನಡೆಸಿದಾಗ, ಇವರ ಬಳಿ 220 ಗ್ರಾಂನಷ್ಟು ಗಾಂಜಾ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಧಿಕಾರಿಗೆ ಶಿಕ್ಷೆ: ನ್ಯಾಯಾಲಯ ಆದೇಶ
ಮಂಗಳೂರು:
ಆದಾಯಕ್ಕಿಂತ ಅಧಿಕ ಸಂಪತ್ತು ಹೊಂದಿದ ಆರೋಪದ ಮೇರೆಗೆ ಏಳು ವರ್ಷಗಳ ಹಿಂದೆ ಲೋಕಾಯುಕ್ತ ಪೊಲೀಸರಿಂದ ದಾಳಿಗೊಳಗಾಗಿ ವಿಚಾರಣೆ ಎದುರಿಸುತ್ತಿದ್ದ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಶಕ್ತಿನಗರ ಡಿಪೊ ಕಿರಿಯ ಸಹಾಯಕ ಅಧಿಕಾರಿ ಎಂ.ಎನ್. ರಾಜನ್ ನಂಬಿಯಾರ್‌ಗೆ ಶಿಕ್ಷೆ ವಿಧಿಸಿ 3ನೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಸೋಮವಾರ ಆದೇಶ ಪ್ರಕಟಿಸಿದೆ.

ADVERTISEMENT

ಲೋಕಾಯುಕ್ತದ ಡಿವೈಎಸ್ಪಿ ಉಮೇಶ್ ಶೇಟ್ ನೇತೃತ್ವದ ತಂಡವು 2014ರ ಜನವರಿ 28ರಂದು ದಾಳಿ ನಡೆಸಿ, ಕಾನೂನು ಕ್ರಮ ಜರುಗಿಸಿತ್ತು. ಇದರ ವಿಚಾರಣೆ ನಡೆಸಿದ ನ್ಯಾಯಾಧೀಶ ಬಿ.ಬಿ. ಜಕಾತಿ, ರಾಜನ್ ನಂಬಿಯಾರ್‌ಗೆ 6 ವರ್ಷ ಶಿಕ್ಷೆ ಮತ್ತು ₹ 75 ಲಕ್ಷ ದಂಡ ವಿಧಿಸಿದ್ದು, ದಂಡ ನೀಡಲು ತಪ್ಪಿದರೆ ಮತ್ತೆ 2 ವರ್ಷ ಶಿಕ್ಷೆ ನೀಡಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ರವೀಂದ್ರ ಮನ್ನಿಪ್ಪಾಡಿ ವಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.