ADVERTISEMENT

ಉಪ್ಪಿನಂಗಡಿ: ಮಲ ತ್ಯಾಜ್ಯ ಸಂಸ್ಕರಣಾ ಘಟಕ ಉದ್ಘಾಟನೆಗೆ ಸಿದ್ಧ

ಸಿದ್ದಿಕ್ ನೀರಾಜೆ
Published 7 ಜನವರಿ 2026, 4:07 IST
Last Updated 7 ಜನವರಿ 2026, 4:07 IST
<div class="paragraphs"><p>ಕಡಬ ತಾಲ್ಲೂಕಿನ ಆಲಂಕಾರು ಪಂಚಾಯಿತಿ ವ್ಯಾಪ್ತಿಯ ನೆಕ್ಕಿಲಾಡಿ ಪಟ್ಟೆ ಎಂಬಲ್ಲಿ ನಿರ್ಮಾಣವಾದ ಮಲ ತ್ಯಾಜ್ಯ ಸಂಸ್ಕರಣಾ ಘಟಕ</p></div>

ಕಡಬ ತಾಲ್ಲೂಕಿನ ಆಲಂಕಾರು ಪಂಚಾಯಿತಿ ವ್ಯಾಪ್ತಿಯ ನೆಕ್ಕಿಲಾಡಿ ಪಟ್ಟೆ ಎಂಬಲ್ಲಿ ನಿರ್ಮಾಣವಾದ ಮಲ ತ್ಯಾಜ್ಯ ಸಂಸ್ಕರಣಾ ಘಟಕ

   

ಆಲಂಕಾರು (ಉಪ್ಪಿನಂಗಡಿ): ಕಡಬ ತಾಲ್ಲೂಕಿನ ಪ್ರಥಮ ಮಲತ್ಯಾಜ್ಯ ಸಂಸ್ಕರಣಾ ಘಟಕ ಆಲಂಕಾರು ಗ್ರಾಮ ಪಂಚಾಯಿತಿ ಮೂಲಕ ನಿರ್ಮಾಣವಾಗಿದ್ದು, ಬಹುತೇಕ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆ ಸಿದ್ಧಗೊಂಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ನೆಕ್ಕಿಲಾಡಿ, ಪಂಜ, ಕೊಳ್ತಿಗೆ, ಕೊಳ್ನಾಡು, ಚಾರ್ಮಾಡಿ, ಆಲಂಕಾರು ಗ್ರಾಮ ಪಂಚಾಯಿತಿಗಳಿಗೆ ಈ ಯೋಜನೆ ಮಂಜೂರಾಗಿದ್ದು, ಕಡಬ ತಾಲ್ಲೂಕಿನಲ್ಲಿ ಆಲಂಕಾರು ಪಂಚಾಯಿತಿಯ ನೆಕ್ಕಿಲಾಡಿ ಪಟ್ಟೆ ಎಂಬಲ್ಲಿರುವ 3 ಎಕರೆ ಜಾಗದಲ್ಲಿ ಪಂಚಾಯಿತಿ ಈಗಾಗಲೇ ಎರಡೂವರೆ ಎಕರೆಯಲ್ಲಿ ಘನ ತ್ಯಾಜ್ಯ ಘಟಕ ಹಾಗೂ ತೆಂಗಿನ ತೋಟ ನಿರ್ಮಿಸಿದೆ. ಉಳಿದ ಅರ್ಧ ಎಕರೆಯಲ್ಲಿ ಮಲ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ ಮಾಡಲಾಗಿದೆ.

ADVERTISEMENT

₹ 1 ಕೋಟಿ ವೆಚ್ಚದ ಕಾಮಗಾರಿ: ಕೇಂದ್ರ ಸಚಿವಾಲಯವು ಬಯಲು ಬಹಿರ್ದೆಸೆ ಮುಕ್ತ ಸುಸ್ಥಿರತೆಗೆ ಹಾಗೂ ಘನ ಮತ್ತು ದ್ರವ ಹಾಗೂ ಮಲ ತ್ಯಾಜ್ಯ ನಿರ್ವಹಣೆಯನ್ನು ರಾಜ್ಯದ ಎಲ್ಲ ಗ್ರಾಮಗಳಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಹಂತ-2 ಯೋಜನೆಯಲ್ಲಿ ಈ ಘಟಕ ಸ್ಥಾಪಿಸಲಾಗಿದೆ. ಯೋಜನೆಗೆ ಕೇಂದ್ರ ಸರ್ಕಾರದ ಶೇ 60 ಹಾಗೂ ರಾಜ್ಯ ಸರ್ಕಾರದ ಶೇ 40 ಅನುದಾನದಲ್ಲಿ ಸುಮಾರು ₹ 1 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಈ ಘಟಕದಲ್ಲಿ ಈಗಾಗಲೇ 2 ಸಂಸ್ಕರಣಾ ಘಟಕದ ಕಟ್ಟಡ, ಸಿಬ್ಬಂದಿ ಕೊಠಡಿ ನಿರ್ಮಾವಾಗಿದ್ದು, ರಸ್ತೆ, ಆವರಣ ನಿರ್ಮಾಣ ಮಾಡಲಾಗಿದೆ. ಎರಡೂ ಘಟಕಗಳನ್ನು ತಲಾ 6 ತಿಂಗಳಂತೆ ಬಳಕೆ ಮಾಡಲಾಗುತ್ತದೆ. ಇದರಲ್ಲಿ ಸ್ಕ್ರೀನಿಂಗ್ ಚೇಂಬರ್, ಪ್ಲಾಂಟೆಡ್ ಡ್ರೈಯಿಂಗ್ ಬೆಡ್ಸ್, ಇಂಟಗ್ರೇಟೆಡ್‌ ಸೆಟ್ಲರ್ ಮತ್ತು ಅನರೇಬಿಕ್ ಫಿಲ್ಟರ್, ಪ್ಲಾಂಟೆಡ್ ಗ್ರಾವೆಲ್ ಫಿಲ್ಟರ್, ಕಲೆಕ್ಷನ್ ಟ್ಯಾಂಕ್‌ ಒಳಗೊಂಡಿದೆ.

ತಾಲ್ಲೂಕು ವ್ಯಾಪ್ತಿಯ ಎಲ್ಲೆಡೆಯಿಂದ ಸಂಗ್ರಹ: ಕಡಬ ತಾಲ್ಲೂಕು ವ್ಯಾಪ್ತಿಯಲ್ಲಿರುವ ಶೌಚಾಲಯಗಳ ಮಲತ್ಯಾಜ್ಯವನ್ನು ಸಕ್ಕಿಂಗ್ ಯಂತ್ರದ ಮೂಲಕ ಸಂಗ್ರಹಿಸಿ ಘಟಕಕ್ಕೆ ತರಲಾಗುತ್ತದೆ. ಮನೆಗಳ ಶೌಚ ಗುಂಡಿ ತುಂಬಿದಾಗ ತಾಲ್ಲೂಕು ಪಂಚಾಯಿತಿ ಸೂಚಿಸುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ ಪಂಚಾಯಿತಿಯು ಮಲತ್ಯಾಜ್ಯ ಸಾಗಾಟಕ್ಕೆ ವ್ಯವಸ್ಥೆ ಮಾಡಲಿದ್ದು, ಶುಲ್ಕ ವಿಧಿಸಲಿದೆ.

ಗೊಬ್ಬರವಾಗಿ ಪರಿವರ್ತನೆ: ಸಂಗ್ರಹಿಸಲಾದ ಮಲತ್ಯಾಜ್ಯವನ್ನು ಘಟಕದಲ್ಲಿ ಸಂಸ್ಕರಿಸಿ ದುರ್ವಾಸನೆ ಬರದಂತೆ ವ್ಯವಸ್ಥೆ ಮಾಡಲಾಗುತ್ತದೆ. ಸಂಸ್ಕರಣೆಯಾದ ತ್ಯಾಜ್ಯ ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ. ಇದನ್ನು ನಿಗದಿತ ದರದಲ್ಲಿ ಮಾರಾಟ ಮಾಡಲಾಗುವುದು. ನಿರ್ವಹಣೆಯ ಹೊಣೆ ಗ್ರಾಮ ಪಂಚಾಯಿತಿ ವಹಿಸಲಿದೆ.

ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿರುವ ಆಲಂಕಾರು ಪಂಚಾಯಿತಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.

ಅಧಿಕಾರಿಗಳು, ಪಂಚಾಯಿತಿ ಸದಸ್ಯರು, ಕ್ಷೇತ್ರದ ಶಾಸಕರು, ಸಂಸದರು ಸಂಪೂರ್ಣ ಸಹಕಾರದಿಂದ ಈ ಕಾರ್ಯ ಸಾಧ್ಯವಾಗಿದೆ ಎಂದು ಆಲಂಕಾರು ಪಂಚಾಯಿತಿ ಅಧ್ಯಕ್ಷೆ ಸುಶೀಲಾ ತಿಳಿಸಿದರು.

ಹಿಂದೆ ಮಲ ತ್ಯಾಜ್ಯವನ್ನು ಮಂಗಳೂರು, ಪುತ್ತೂರು ಅಥವಾ ಇನ್ನಿತರ ಕಡೆ ಸಾಗಿಸಲಾಗುತ್ತಿತ್ತು. ಕೆಲವರು ನದಿ, ತೋಡು ಅರಣ್ಯಗಳಲ್ಲಿ ಹಾಕಿ ಪರಿಸರಕ್ಕೆ ಹಾನಿ ಮಾಡುತ್ತಿದ್ದರು. ಇದೀಗ ನಮ್ಮಲ್ಲಿ ಘಟಕ ನಿರ್ಮಾಣವಾಗಿ ತಾಲ್ಲೂಕಿನ ಜನರಿಗೆ ಅನುಕೂಲವಾಗಲಿದೆ. ಪರಿಸರವೂ ಸ್ವಚ್ಛವಾಗಿ ಪಂಚಾಯಿತಿಗೂ ಆದಾಯ ಬರುತ್ತದೆ ಎಂದು ಪಿಡಿಒ ಸುಜಾತಾ ಹೇಳಿದರು.

21 ಗ್ರಾಮ ಪಂಚಾಯಿತಿಗಳೊಂದಿಗೆ ಒಡಂಬಡಿಕೆ: ನವೀನ್ ಭಂಡಾರಿ ಕಡಬ ತಾಲ್ಲೂಕಿಗೆ ಮಂಜೂರು ಆಗಿರುವ ಘಟಕವನ್ನು ಆಲಂಕಾರು ಪಂಚಾಯಿತಿ ಅಧೀನದ ಜಾಗ ಗುರುತಿಸಿ ನಿರ್ಮಿಸಲಾಗಿದೆ. ಘಟಕ ಕಾರ್ಯಾಚರಣೆಗಾಗಿ ತಾಲ್ಲೂಕಿನ 21 ಗ್ರಾಮ ಪಂಚಾಯಿತಿಗಳೊಂದಿಗೆ ಒಡಂಬಡಿಕೆ ಮಾಡಲಾಗುವುದು. ಸರ್ಕಾರಿ ಸಕ್ಕಿಂಗ್ ವಾಹನಗಳ ಬಳಕೆಯ ಜತೆಗೆ ಖಾಸಗಿ ಸಕ್ಕಿಂಗ್ ವಾಹನ ನಿರ್ವಾಹಕರೊಂದಿಗೂ ಕರಾರು ಒಪ್ಪಂದ ಮಾಡಿಕೊಂಡು ಕನಿಷ್ಠ ದರದಲ್ಲಿ ಮಲ ತ್ಯಾಜ್ಯ ಸಂಗ್ರಹಿಸಿ, ವೈಜ್ಞಾನಿಕ ನಿರ್ವಹಣೆಗೆ ಯೋಜನೆ ರೂಪಿಸಲಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗಲು ಸಹಾಯವಾಣಿ ಸಂಖ್ಯೆಯನ್ನು ತೆರೆಯಲಾಗುವುದು.
ನವೀನ್ ಭಂಡಾರಿ, ಇಒ, ಕಡಬ ತಾಲ್ಲೂಕು ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.