
ವಿಟ್ಲ: ಇಲ್ಲಿನ ಕಲ್ಲಡ್ಕ ರಸ್ತೆಯ ವಿಟ್ಲ ಪೇಟೆಯಲ್ಲಿ ಬುಧವಾರ ರಾತ್ರಿ ಶಾರ್ಟ್ ಸರ್ಕಿಟ್‌ನಿಂದ ಸಂಭವಿಸಿದ ಅಗ್ನಿಆಕಸ್ಮಿಕದಲ್ಲಿ ಸುಮಾರು ₹ 3 ಕೋಟಿಗೂ ಅಧಿಕ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಪಟ್ಟಣದಲ್ಲಿ ಆಗ್ನಿಶಾಮಕದಳ ಠಾಣೆ, ಅಗ್ನಿಶಾಮಕ ವಾಹನ ಇಲ್ಲದೆ ಇರುವುದರಿಂದ ಹಾನಿಯ ಪ್ರಮಾಣ ಹೆಚ್ಚಾಗಿದೆ ಎಂದು ಇಲ್ಲಿನ ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ.
ಕೊಡಂಗೆಯ ಸಂತೋಷ್ ಕುಮಾರ್ ಅವರ ಮಾಲೀಕತ್ವದ ಎಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಅಂಗಡಿಯೊಳಗಿದ್ದ ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಸುಲಭವಾಗಿ ಬೆಂಕಿ ಹತ್ತಿಕೊಳ್ಳುವ ವಸ್ತುಗಳು ತೀವ್ರತೆಯನ್ನು ಹೆಚ್ಚಿಸಿದವು. ಅಗ್ನಿಶಾಮಕ ವಾಹನ ಬಂಟ್ವಾಳದಿಂದ ಬರುವಷ್ಟರಲ್ಲಿ ಅಂಗಡಿಗಳು ಶೇ 90ರಷ್ಟು ಹಾನಿಗೀಡಾಗಿದ್ದವು.
ಬೆಂಕಿಯ ಜ್ವಾಲೆ ಸಣ್ಣಪುಟ್ಟ ಅಂಗಡಿಗಳಿಗೂ ಹಬ್ಬಿ ಸಮೀಪದ ಅಮಿತ್ ಹೋಟೆಲ್‌ವರೆಗೂ ಅವರಿಸಿತ್ತು. ಬಳಿಕ ಬೆಂಕಿ ಸ್ಟಾರ್ ವೈನ್ಸ್‌ವರೆಗೂ ವಿಸ್ತರಣೆಯಾಯಿತು. ಇದರ ನಡುವೆ ಇದ್ದ ಎಸ್.ಬಿ.ಟೈಲರಿಂಗ್ ಶಾಪ್, ಪಡೀಲ್ ಫಾಸ್ಟ್ ಫುಡ್ ಅಂಗಡಿ ಸಹಿತ ಸಣ್ಣ ಅಂಗಡಿಗಳೂ ಬೆಂಕಿಗೆ ಆಹುತಿಯಾಗಿದ್ದು, ಪಕ್ಕದಲ್ಲಿರುವ ಗಣೇಶ್ ಡ್ರೈವಿಂಗ್ ಕಟ್ಟಡಕ್ಕೂ ಹಾನಿಯಾಗಿದೆ.
ಅಗ್ನಿಶಾಮಕ ವಾಹನಗಳಲ್ಲಿ ನೀರು ಇರಲಿಲ್ಲ. ಬಳಿಕ ಐದಾರು ಟ್ಯಾಂಕರ್‌ಗಳಲ್ಲಿ ನೀರು ತಂದು ಹಾಯಿಸಿದರೂ ಬೆಂಕಿ ಜ್ವಾಲೆ ತಕ್ಷಣಕ್ಕೆ ಕಡಿಮೆ ಅಗಲಿಲ್ಲ. ಒಂದು ವರ್ಷದಲ್ಲಿ ವಿಟ್ಲ ಕಲ್ಲಡ್ಕ ರಸ್ತೆಯ ಅಂಗಡಿಗಳಲ್ಲಿ ಸಂಭವಿಸಿದ ಮೂರನೇ ಅವಘಡ ಇದಾಗಿದ್ದು, ರಸ್ತೆಯ ಬಲಗಡೆ ಇರುವ ಒಂದು ದಿನಸಿ ಅಂಗಡಿಯಲ್ಲಿ ಹಾಗೂ ಇನ್ನೊಂದು ಅಂಗಡಿಯಲ್ಲಿ ಕೆಲವೇ ತಿಂಗಳ ಅಂತರದಲ್ಲಿ ಶಾರ್ಟ್ ಸರ್ಕಿಟ್ ಉಂಟಾಗಿತ್ತು. ಸ್ಥಳೀಯರೇ ಬೆಂಕಿ ನಂದಿಸಿದ್ದರು.
ವಿಟ್ಲದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸಬೇಕು ಎಂಬ ಕೂಗು ಮತ್ತೆ ಕೇಳಿ ಬಂದಿದೆ. ವಿಟ್ಲ ಪೇಟೆ ಮತ್ತು ಗ್ರಾಮಾಂತರ ಭಾಗಗಳಲ್ಲಿ ಹಳೆಯ ವಿದ್ಯುತ್ ಕಂಬಗಳು, ಸ್ವಿಚ್ ಬೋರ್ಡ್‌ಗಳು, ತುಕ್ಕು ಹಿಡಿದ ತಂತಿಗಳು ಇವೆ. ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಈ ಬಗ್ಗೆ ಜನರು ಗಮನ ಸೆಳೆದರೂ ಸ್ಪಂದನೆ ಸಿಕ್ಕಿಲ್ಲ. ನಾಲ್ಕು ಮಾರ್ಗದಿಂದ ಆರಂಭ ಆಗುವ ವಿಟ್ಲ ಕಲ್ಲಡ್ಕ ರಸ್ತೆ ಅರ್ಧ ಕಿ.ಮೀ. ವರೆಗೂ ಕಿರಿದಾಗಿದೆ. ಜನನಿಬಿಡ ರಸ್ತೆಯಲ್ಲಿ ವಾಹನ ದಟ್ಟಣೆ ಇರುತ್ತದೆ. ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು, ಆಡಳಿತ ವ್ಯವಸ್ಥೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.