ADVERTISEMENT

ಮಂಗಳೂರು | ತ್ಯಾಜ್ಯ ನಿರ್ವಹಣೆ: ಪಾಲಿಕೆ ನಿರ್ವಹಿಸುವುದೇ ಹೊಣೆ?

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಚ್ಚರಿಕೆ ನೀಡಿದ ನಂತರ ಮೈಕೊಡವಿ ನಿಂತ ಆಡಳಿತ; ಜನಜಾಗೃತಿ ಮೂಡಿಸಲು ಹಲವು ಕ್ರಮ

ವಿಕ್ರಂ ಕಾಂತಿಕೆರೆ
Published 21 ಏಪ್ರಿಲ್ 2025, 7:30 IST
Last Updated 21 ಏಪ್ರಿಲ್ 2025, 7:30 IST
ಮಂಗಳೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಪಿಟಿ ಬಳಿ ರಸ್ತೆ ಬದಿಯಲ್ಲೇ ಕಸದ ರಾಶಿ. ಇದು ಇಲ್ಲಿಯ ನಿತ್ಯದ ನೋಟ  ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್
ಮಂಗಳೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಪಿಟಿ ಬಳಿ ರಸ್ತೆ ಬದಿಯಲ್ಲೇ ಕಸದ ರಾಶಿ. ಇದು ಇಲ್ಲಿಯ ನಿತ್ಯದ ನೋಟ  ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್   

ಮಂಗಳೂರು: ನಗರಾಡಳಿತಕ್ಕೆ ಕೆಲವು ತಿಂಗಳಿಂದ ಸಮಸ್ಯೆಯಾಗಿದ್ದ ತ್ಯಾಜ್ಯ ವಿಲೇವಾರಿ ಈಗ ಅಕ್ಷರಶಃ ತಲೆನೋವಾಗಿ ಪರಿಣಮಿಸಿದೆ. ರಸ್ತೆಬದಿ, ತೆರೆದ ಸ್ಥಳ ಮುಂತಾಗಿ ಎಲ್ಲೆಂದರಲ್ಲಿ ತ್ಯಾಜ್ಯದ ರಾಶಿ ಕಂಡ ಕಾರಣ ಸೂಕ್ತ ರೀತಿಯ ವಿಲೇವಾರಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ ಕಳೆದ ವಾರ ಎಚ್ಚರಿಕೆ ನೀಡಿದ ನಂತರ ಪಾಲಿಕೆ ಮೈಕೊಡವಿ ನಿಂತಿದೆ. ಆದರೆ ಬೃಹದಾಕಾರವಾಗಿ ಬೆಳೆದು ನಿಂತಿರುವ ಸಮಸ್ಯೆಗೆ ಪರಿಹಾರ ಹೇಗೆ..?

ಸತತ ಸಭೆಗಳು, ಚರ್ಚೆಗಳು, ನಿರಂತರ ಓಡಾಟ...ಒಟ್ಟಿನಲ್ಲಿ ತರಾತುರಿ. ಉಸ್ತುವಾರಿ ಕಾರ್ಯದರ್ಶಿ ಸಭೆ ಮುಗಿಸಿ ಹೋದ ನಂತರ ಮಹಾನಗರ ಪಾಲಿಕೆಯ ಅರೋಗ್ಯ ಮತ್ತು ಪರಿಸರ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸದ್ಯದ ಸ್ಥಿತಿ. ಈ ಹಿಂದೆ ಆಡಳಿತ ನಡೆಸಿದ ಆಯುಕ್ತರುಗಳು, ಸಂಬಂಧಪಟ್ಟ ವಿಭಾಗಗಳ ಅಧಿಕಾರಿ ಮತ್ತು ಸಿಬ್ಬಂದಿ ಕಾಳಜಿ ಮೆರೆದಿದ್ದರೆ ಈಗ ಇಂಥ ತುರ್ತು ಅಗತ್ಯವಿರಲಿಲ್ಲ ಎಂಬ ಮಾತುಗಳು ಪಾಲಿಕೆಯ ಆವರಣದಲ್ಲಿ ಕೇಳತೊಡಗಿವೆ.

ವಿಲೇವಾರಿಗೆ ಎಲ್ಲ ಸೌಲಭ್ಯಗಳು ಇದ್ದರೂ ಕಂಡಕಂಡಲ್ಲಿ ತ್ಯಾಜ್ಯ ಬಿದ್ದಿರುವುದೇಕೆ ಎಂಬ ಮೂಲಪ್ರಶ್ನೆಗೆ ಉತ್ತರ ಹುಡುಕುತ್ತಿರುವ ಜನಜಾಗೃತಿಯೊಂದೇ ತ್ಯಾಜ್ಯದ ಸುಸೂತ್ರ ವಿಲೇವಾರಿಯ ಸೂತ್ರ ಎಂದು ಏ. 21ರಂದು ಜಾರಿಯಾಗುವಂತೆ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಅಂದ ಹಾಗೆ ಏ.22 ವಿಶ್ವ ಭೂಮಿದಿನವೂ ಆಗಿದೆ. ಜಗತ್ತನ್ನೇ ನುಂಗುತ್ತಿರುವ ಕಸವನ್ನು ನಿಯಂತ್ರಿಸುವ ಗುರುತರ ಜವಾಬ್ದಾರಿ ಸ್ಥಳೀಯಾಡಳಿತದ್ದು ಕೂಡ.

ADVERTISEMENT

ಪ್ಲಾಸ್ಟಿಕ್ ಮೂಲ ಕಾರಣ?

ಪ್ಲಾಸ್ಟಿಕ್ ಚೀಲಗಳು ಯತೇಚ್ಛವಾಗಿ ಸಿಗುವುದೇ ರಸ್ತೆಬದಿಗಳಲ್ಲಿ ಕಸ ಗುಡ್ಡಬೀಳಲು ಮೂಲ ಕಾರಣ ಎಂಬುದು ಪರಿಸರ ಚಿಂತಕರು ಮತ್ತು ಜಾಗೃತ ನಾಗರಿಕರ ಅಂಬೋಣ. ಪ್ಲಾಸ್ಟಿಕ್ ‘ತೊಟ್ಟೆ’ಗಳು ನಗರದ ಮೂಲೆಮೂಲೆಗಳಲ್ಲೂ ಧಾರಾಳವಾಗಿ ಸಿಗುತ್ತಿವೆ. ಆದರೆ ಪ್ಲಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ ಎಂಬುದು ಅಧಿಕಾರಿಗಳ ಸಮಜಾಯಿಷಿ.

‘ಪ್ಲಾಸ್ಟಿಕ್ ನಿಷೇಧ ಆಗಿದೆ ಎಂಬುದು ಅಧಿಕಾರಿಗಳು ತಮಗೆ ತಾವೇ ಸಮಾಧಾನಪಟ್ಟುಕೊಳ್ಳಲು ಹೇಳುತ್ತಿರುವ ಸುಳ್ಳು. ಏಕಬಳಕೆಯ ಪ್ಲಾಸ್ಟಿಕ್ ಎಲ್ಲೆಂದರಲ್ಲಿ ಸಿಗುತ್ತಿದೆ. ತ್ಯಾಜ್ಯ ಎಸೆಯಲು ಇಂಥಹುದೇ ಪ್ಲಾ‌ಸ್ಟಿಕ್ ಚೀಲ ಬೇಕೆಂದೇನೂ ಇಲ್ಲ. ಆದರೆ ಕನಿಷ್ಠ ಏಕಬಳಕೆಯ ಪ್ಲಾಸ್ಟಿಕನ್ನಾದರೂ ಕಟ್ಟುನಿಟ್ಟಾಗಿ ನಿಷೇಧಿಸಬೇಕಲ್ಲವೇ’ ಎಂಬುದು ಎನ್‌ಇಸಿಎಫ್ ಕಾರ್ಯಕರ್ತರೊಬ್ಬರ ಪ್ರಶ್ನೆ.

ಏನೇನು ಕ್ರಮಗಳು?

ತ್ಯಾಜ್ಯದ ಸಮಸ್ಯೆ ನಿವಾರಣೆಗೆ ಅಧಿಕಾರಿಗಳು ಮೊದಲು ಕಂಡುಕೊಂಡಿರುವ ಮಾರ್ಗ ಅರಿವು ಮೂಡಿಸುವುದು.

‘ಎಷ್ಟು ದಂಡ ವಿಧಿಸಿದರೂ ಜನಜಾಗೃತಿ ಮೂಡದೇ ಇದ್ದರೆ ಪ್ರಯೋಜನವಿಲ್ಲ. ಆದ್ದರಿಂದ ಜಾಗೃತಿಗೆ ಕ್ರಮ ಕೈಗೊಂಡಿದ್ದೇವೆ. ಕರಪತ್ರಗಳು ಸಿದ್ಧವಾಗಿದ್ದು ಆಯ್ದ ಪ್ರದೇಶಗಳಲ್ಲಿ ಜಾಗೃತಿ ಸಭೆಗಳನ್ನೂ ಆಯೋಜಿಸಲಾಗುವುದು. ತ್ಯಾಜ್ಯ ಸಂಗ್ರಹ ವಾಹನಗಳಲ್ಲಿ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡುವ ಯೋಜನೆಯೂ ಇದೆ. ಅಂಗಡಿಗಳ ಮುಂದೆ ಅಂಟಿಸುವ ಕರಪತ್ರಗಳನ್ನು ಕೂಡ ಸಿದ್ದಗೊಳಿಸಲಾಗಿದೆ’ ಎಂದು ಮಹಾನಗರ ಪಾಲಿಕೆ ಪರಿಸರ ಎಂಜಿನಿಯರ್ ದಯಾನಂದ ಅನಿಲ್ ಪೂಜಾರಿ ತಿಳಿಸಿದರು.

‘ಹೊರಗಿನಿಂದ ಬಂದು ಕೊಠಡಿ, ಹಾಸ್ಟೆಲ್‌ಗಳಲ್ಲಿ ವಾಸಿಸುತ್ತಿರುವ ಅನೇಕರು ತ್ಯಾಜ್ಯದ ಸಮಸ್ಯೆಗೆ ಕಾರಣರಾಗಿದ್ದಾರೆ. ಆನ್‌ಲೈನ್‌ನಲ್ಲಿ ತಿಂಡಿ ತರಿಸುವ ಅವರು ಒಣಕಸ ಮತ್ತು ಹಸಿತ್ಯಾಜ್ಯವನ್ನು ಪ್ಲಾಸ್ಟಿಕ್‌ ಚೀಲದಲ್ಲಿ ಕಟ್ಟಿ ದಾರಿಯಲ್ಲಿ ಎಸೆಯುತ್ತಾರೆ. ಮನೆಕೆಲಸ ಮಾಡುವ ಕೆಲವು ಕಡೆಗಳಲ್ಲಿ ಮನೆಯೊಡೆಯರು ವಿಲೇವಾರಿಗೆಂದು ಕೊಡುವ ಕಸವನ್ನು ಕೆಲಸದವರು ರಸ್ತೆ ಬದಿಯಲ್ಲಿ ಎಸೆದು ಹೋಗುತ್ತಾರೆ. ಇಂಥ ಅಭ್ಯಾಸಗಳು ನಿಲ್ಲಬೇಕು. ತ್ಯಾಜ್ಯ ಎಸೆಯುವುದನ್ನು ಕಂಡರೆ ಜನರು ಫೋಟೊ ತೆಗೆದು ಸಂಬಂಧಪಟ್ಟವರಿಗೆ ತಲುಪಿಸುವುದು ಕೂಡ ಒಳ್ಳೆಯ ಮಾರ್ಗ’ ಎಂದು ಪಾಲಿಕೆಯ ಆರೋಗ್ಯ ನಿರೀಕ್ಷಕಿ ದೀಪಿಕಾ ಅಭಿಪ್ರಾಯಪಟ್ಟರು.

ಏಕಬಳಕೆ ಪ್ಲಾಸ್ಟಿಕ್ ನಗರದಲ್ಲಿ ಇಲ್ಲ. ಅದರ ಉತ್ಪಾದನೆಯನ್ನೇ ನಿಲ್ಲಿಸಲಾಗಿದೆ. ಮತ್ತೆ ಎಲ್ಲಿಂದ ಸಿಗಬೇಕು. ಅಲ್ಲಿ ಇಲ್ಲಿ ಕೆಲವೊಮ್ಮೆ ಬಳಕೆಯಾಗುತ್ತಿದ್ದರೆ ಅದು ಹಳೆಯ ದಾಸ್ತಾನು ಇರಬಹುದು. ಬೇರೆ ಕಡೆಯಿಂದ ಬರುತ್ತಿದೆ ಎಂದಾದರೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗುವುದು.

–ರವಿಚಂದ್ರ ನಾಯಕ್‌ ಮಹಾನಗರ ಪಾಲಿಕೆ ಆಯುಕ್ತ

_______________

ತ್ಯಾಜ್ಯವನ್ನು ಸಮರ್ಪಕವಾಗಿ ವಿಂಗಡಣೆ ಮಾಡದೇ ಇರುವುದು ಅದರ ವಿಲೇವಾರಿ ಮತ್ತು ಸರಿಯಾದ ಸಂಸ್ಕರಣೆಗೆ ತುಂಬ ಅಡ್ಡಿಯಾಗಿದೆ. ಆದ್ದರಿಂದ ಹಸಿ ಒಣ ಕಸ ಮತ್ತು ಡೈಪರ್‌ ಡ್ಯಾಂಪರ್‌ಗಳನ್ನು ಪ್ರತ್ಯೇಕವಾಗಿ ಕೊಡುವಂತೆ ಮಾಡಲು ಕಟ್ಟುನಿಟ್ಟಿನಕ್ರಮ ಕೈಗೊಳ್ಳಲಾಗುವುದು.

–ಡಾ.ಎ ಮಂಜಯ್ಯ ಶೆಟ್ಟಿ ಪಾಲಿಕೆ ಆರೋಗ್ಯಾಧಿಕಾರಿ

_______________

ಬಂದರು ಭಾಗದ ಕೆಲವು ಅಂಗಡಿಗಳಲ್ಲಿ ಏಕಬಳಕೆಯ ಪ್ಲಾಸ್ಟಿಕ್ ಸಂಪೂರ್ಣ ನಿಷೇಧಿಸಲಾಗಿದೆ. ಅಲ್ಲಿ ಬದಲಿ ವ್ಯವಸ್ಥೆಯೂ ಆಗಿದ್ದು ಎಲ್ಲ ಅಂಗಡಿಗಳ ಮುಂದೆ ಪರ್ಯಾಯ ಚೀಲಗಳನ್ನು ನೇತುಹಾಕಲು ಸೂಚಿಸಲಾಗಿದೆ.

–ದಯಾನಂದ ಅನಿಲ್ ಪೂಜಾರಿ ಮಹಾನಗರ ಪಾಲಿಕೆ ಪರಿಸರ ಎಂಜಿನಿಯರ್‌

_______________

ಏಕಬಳಕೆಯ ಪ್ಲಾಸ್ಟಿಕ್ ಧಾರಾಳ ಸಿಗುತ್ತಿದೆ. ತ್ಯಾಜ್ಯದ ವಿಲೇವಾರಿ ಸಮರ್ಪಕವಾಗಿ ಆಗದೇ ಇರುವುದು ಸಮಸ್ಯೆಗೆ ದೊಡ್ಡ ಕಾರಣ. ಕಂಡಕಂಡಲ್ಲಿ ಕಸ ಎಸೆಯುವವರನ್ನು ಪತ್ತೆ ಮಾಡಿ ದಂಡ ವಿಧಿಸಬೇಕು. ಹಾಗೆ ಮಾಡದೇ ಇದ್ದರೆ ಪರಿಹಾರ ಕಷ್ಟ. ದಂಡ ವಿಧಿಸಿದರೆ ಪಾಲಿಕೆಗೆ ಆದಾಯವೂ ಬರುತ್ತದೆ.

–ಜೀತ್ ಮಿಲನ್ ರೋಚ್‌ ವನ ಟ್ರಸ್ಟ್ ಸ್ಥಾಪಕ

_______________

60 ಮಂಗಳೂರಿನ ಒಟ್ಟು ವಾರ್ಡ್‌ಗಳು

107 ತ್ಯಾಜ್ಯ ವಿಲೇವಾರಿಗೆ ಬಳಸುವ ಜೀಪ್ ಟಿಪ್ಪರ್ 137 ಜೀಪ್ ಟಿಪ್ಪರ್‌ಗಳ ಚಾಲಕರು 30 ಟಿಪ್ಪರ್‌ಗಳು 16 ಕಾಂಪ್ಯಾಕ್ಟರ್‌ಗಳು 24 ವಿದ್ಯುತ್ ಚಾಲಿತ ವಾಹನಗಳು 133 ಲೋಡರ್‌ ಮತ್ತು ಸಹಾಯಕರು 319 ಕಾಯಂ ಪೌರಕಾರ್ಮಿಕರು 452 ನೇರ ಪಾವತಿ ಪೌರಕಾರ್ಮಿಕರು

(ಮಾಹಿತಿ: ಮಹಾನಗರ ಪಾಲಿಕೆ ಆರೋಗ್ಯ ಇಲಾಖೆ)

ಶುದ್ಧ ವಾತಾವರಣ ಮಾನವ ಹಕ್ಕುಗಳ ಭಾಗ

ಸ್ವಚ್ಛ ಆರೋಗ್ಯಕರ ವಾತಾವರಣ ಮಾನವ ಬದುಕಿನ ಅವಿಭಾಜ್ಯ ಅಂಗವೆಂಬುದನ್ನು ನ್ಯಾಯಾಲಯವೇ ಹೇಳಿದೆ. ಶುದ್ಧ ವಾತಾವರಣದ ಹಕ್ಕು ಮಾನವ ಹಕ್ಕುಗಳ ಪ್ರಮುಖ ಭಾಗವಾಗಿದೆ. ತ್ಯಾಜ್ಯಗಳು ಪರಿಸರ ಮತ್ತು ಆರೋಗ್ಯ ಸಮಸ್ಯಗಳಿಗೆ ಕಾರಣವಾಗುತ್ತಿದ್ದು ಅದರ ನಿರ್ವಹಣೆ ಗಂಭೀರ ಸವಾಲಾಗಿ ಪರಿಣಮಿಸಿದೆ. ಆದ್ದರಿಂದ ಗುಣಾತ್ಕಕ ಮತ್ತು ಪರಿವರ್ತನಾತ್ಮಕ ಬದಲಾವಣೆ ಅಗತ್ಯ. ನಿರ್ವಹಣಾ ಕ್ರಮವು ಆಡಳಿತಾತ್ಮಕ ಶೈಕ್ಷಣಿಕ ಸಂಶೋಧನಾತ್ಮಕ ಅರಿವು ಮತ್ತು ಪ್ರಚಾರ ಮುಂತಾದ ಅಂಶಗಳನ್ನೂಳಗೊಂಡಿದೆ. ಪ್ಲಾಸ್ಟಿಕ್ ಬಳಕೆ ಸಂಪೂರ್ಣ ಕಡಿತ ತ್ಯಾಜ್ಯ ಮೂಲ ಕಡಿತ ನೀತಿ ಮರುಬಳಕೆ ತ್ಯಾಜ್ಯವನ್ನು ಗೊಬ್ಬರವಾಗಿ ಬಳಸಲು ಅಗತ್ಯ ಕ್ರಮಗಳ ಜೊತೆಗೆ ಪಠ್ಯಕ್ರಮಗಳ ಮೂಲಕ ತ್ಯಾಜ್ಯ ನಿರ್ವಹಣೆ ಬೋಧನೆ ಮತ್ತು ಅರಿವು ಮೂಡಿಸುವ ಕಾರ್ಯಗಳು ಇಂದಿನ ತುರ್ತು.

– ಆಶಾಲತಾ ಪಿ ಸಹಾಯಕ ಪ್ರಾಧ್ಯಾಪಕಿಗೋವಿಂದ ದಾಸ ಕಾಲೇಜು ಸುರತ್ಕಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.