ಪಿಲಿಕುಳ ಜೈವಿಕ ಉದ್ಯಾನದಲ್ಲಿನ ವನ್ಯಜೀವಿ
(ಸಾಂದರ್ಭಿಕ ಚಿತ್ರ)
ಮಂಗಳೂರು: ನಗರದ ಹೊರವಲಯದ ಪಿಲಿಕುಳ ಜೈವಿಕ ಉದ್ಯಾನದ ವನ್ಯಪ್ರಾಣಿಗಳಿಗೆ ಸರಬರಾಜು ಆಗುವ ಮಾಂಸಕ್ಕೆ ಅನ್ಯ ಪದಾರ್ಥ ಸೇರಿಸಿ ವನ್ಯಪ್ರಾಣಿಗಳನ್ನು ಕೊಲ್ಲುವ ಹುನ್ನಾರ ನಡೆದ ಬಗ್ಗೆ ಮಾಹಿತಿ ದೊರೆತಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಉದ್ಯಾನದ ನಿರ್ದೇಶಕರು ಕಾವೂರು ಠಾಣೆಗೆ ದೂರು ನೀಡಿದ್ದಾರೆ.
‘ಈ ಹಿಂದೆ ಖಾದರ್ ಎಂಬುವವರು ಮಾಂಸ ಪೂರೈಸುವ ಗುತ್ತಿಗೆ ನಿರ್ವಹಿಸುತ್ತಿದ್ದರು, ಅವರ ಜೊತೆ ಕೆಲಸ ಮಾಡುವ ಅಬ್ಬಾಸ್ ಹಾಗೂ ಹನೀಫ್ ಮಾಂಸ ಸರಬರಾಜು ಮಾಡುತ್ತಿದ್ದರು. ಪ್ರಸ್ತುತ ಹೊಸ ಗುತ್ತಿಗೆದಾರರು ಮಾಂಸ ಪೂರೈಕೆ ಮಾಡುತ್ತಿದ್ದಾರೆ. ಈ ನಡುವೆ ಆ.7ರಂದು ಉದ್ಯಾನದ ನೌಕರ ಹರೀಶ್‌ಗೆ ಕರೆ ಮಾಡಿದ ಹನೀಫ್ (ಹಿಂದಿನ ಗುತ್ತಿಗೆದಾರರ ಸಹ ಕೆಲಸಗಾರ), ಪ್ರಾಣಿಗಳಿಗೆ ಪೂರೈಕೆಯಾಗುವ ಮಾಂಸದ ಜೊತೆ ಕೊಳೆತ ಅಥವಾ ವಿಷ ಮಾಂಸವನ್ನು ಸೇರಿಸುವಂತೆ ತಿಳಿಸಿದ್ದಾನೆ. ಉದ್ಯಾನದ ವೈದ್ಯಾಧಿಕಾರಿ ನೀಡಿದ ದೂರಿನಂತೆ ಹರೀಶ್‌ನ ವಿಚಾರಣೆ ನಡೆಸಿದಾಗ ಈ ವಿಷಯ ಗೊತ್ತಾಗಿದೆ’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಸೂಚನೆಯಂತೆ ಈ ವಿಷಯವನ್ನು ಪೊಲೀಸರ ಗಮನಕ್ಕೆ ತರಲಾಗಿದೆ. ಹರೀಶ್ ಮತ್ತು ಹನೀಫ್ ಮಾತನಾಡಿರುವ ಧ್ವನಿ ಮುದ್ರಣದ ತುಣುಕು, ಅಬ್ಬಾಸ್ ಹಾಗೂ ಹನೀಫ್ ಇವರಿಬ್ಬರ ಮೊಬೈಲ್ ಫೋನ್ ಪರಿಶೀಲಿಸಿ, ಯಾರ ಕೈವಾಡದಿಂದ ಇದು ನಡೆದಿದೆ ಎಂಬ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕು ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ.
ಪಿಲಿಕುಳ ಉದ್ಯಾನದ ನಿರ್ದೇಶಕರ ದೂರಿನಂತೆ ತನಿಖೆ ಪ್ರಾರಂಭವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಉದ್ಯಾನದಲ್ಲಿರುವ ಪ್ರಾಣಿಗಳಿಗೆ ಯಾವುದೇ ಸಮಸ್ಯೆ ಆಗಿಲ್ಲ. ವಿಷಯ ಗಮನಕ್ಕೆ ಬಂದಾಗ ಮುನ್ನೆಚ್ಚರಿಕೆಯಾಗಿ ಪೊಲೀಸ್ ದೂರು ನೀಡಲಾಗಿದೆ’ ಎಂದು ಪಿಲಿಕುಳದ ಆಯುಕ್ತ ಡಾ.ಅರುಣ್ ಕುಮಾರ್ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.