ಮಂಗಳೂರು: ಅಭಿನವ ವಾಲ್ಮೀಕಿ, ಯಕ್ಷಗಾನದ ಪ್ರಸಂಗಕರ್ತ, ಭಾಗವತರಾದ ತಾಲ್ಲೂಕಿನ ಮಂಜನಾಡಿಯ ಬೊಟ್ಟಿಕೆರೆ ಪುರುಷೋತ್ತಮ ಪೂಂಜ (67) ಶನಿವಾರ ತಡ ರಾತ್ರಿ ನಿಧನರಾದರು.
ರಕ್ತ ಸಂಬಂಧಿತ ಮೈಲೋಡಿಸ್‌ಪ್ಲೇಸಿಯಾ ಎಂಬ ಕಾಯಿಲೆಯಿಂದಾಗಿ ಕೆಲವು ತಿಂಗಳಿಂದ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.
ರಾಮಾಯಣದ ಕಥಾಭಾಗ ‘ಮಾ ನಿಷಾದ’ ಅಲ್ಲದೆ, ವಧು ವೈಶಾಲಿನಿ, ನಳಿನಾಕ್ಷ ನಂದಿನಿ, ಉಭಯಕುಲ ಬಿಲ್ಲೋಜ, ಕ್ಷಾತ್ರ ಮೇಧ, ಮಾತಂಗ ಕನ್ಯೆ, ಗಾಂಗೇಯ, ಕಲಿ ಕೀಚಕ, ರಾಜಾ ದ್ರುಪದ, ಮೇಘ ಮಯೂರಿ, ಸ್ವರ್ಣ ನೂಪುರ, ಅಮೃತ ವರ್ಷಿಣಿ, ಮೇಘ ಮಾಣಿಕ್ಯ ಮೊದಲಾದ ಸೂಪರ್ ಹಿಟ್ ಪ್ರಸಂಗಗಳನ್ನು ರಚಿಸಿ, ಅಭಿನವ ವಾಲ್ಮೀಕಿ ಎಂದು ಅಭಿಮಾನಿಗಳಿಂದ ಕರೆಸಿಕೊಂಡವರು. 32ರಷ್ಟು ಯಕ್ಷಗಾನ ಕೃತಿಗಳನ್ನು ಅವರು ರಚಿಸಿದ್ದಾರೆ.
30 ವರ್ಷಗಳಿಂದ ಕಟೀಲು ಮೇಳದಲ್ಲಿ ಹಾಗೂ ಇದಕ್ಕೂ ಮೊದಲು ಪುತ್ತೂರು, ಕರ್ನಾಟಕ ಮೇಳಗಳಲ್ಲಿ ವ್ಯವಸಾಯ ಮಾಡಿದ್ದ ಅವರು ವೇಷಧಾರಿಯಾಗಿಯೂ, ಮದ್ದಳೆವಾದಕರಾಗಿಯೂ ಕಲಾಸೇವೆ ಸಲ್ಲಿಸಿದ್ದಾರೆ. ಇದಲ್ಲದೆ ಬಿಎಸ್‌ಸಿ ಪದವೀಧರರೂ ಹೌದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.