ADVERTISEMENT

ದಾವಣಗೆರೆ: ‘ಯಶಸ್ವಿನಿ’ ಜಿಲ್ಲೆಯಲ್ಲಿ ಶೇ 100ರಷ್ಟು ಪ್ರಗತಿ

ಜಿಲ್ಲೆಯಲ್ಲಿ 1.10 ಲಕ್ಷ ಫಲಾನುಭವಿಗಳು l ಈವರೆಗೆ 8,000 ಕಾರ್ಡ್‌ ವಿತರಣೆ

ಡಿ.ಕೆ.ಬಸವರಾಜು
Published 23 ಫೆಬ್ರುವರಿ 2023, 3:07 IST
Last Updated 23 ಫೆಬ್ರುವರಿ 2023, 3:07 IST
ಯಶಸ್ವಿನಿ ಕಾರ್ಡ್
ಯಶಸ್ವಿನಿ ಕಾರ್ಡ್   

ದಾವಣಗೆರೆ: ‘ಯಶಸ್ವಿನಿ’ ಯೋಜನೆ ಅಡಿ ಜಿಲ್ಲೆಯಾದ್ಯಂತ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು, ಶೇ 100ರಷ್ಟು ಪ್ರಗತಿ ಸಾಧಿಸಲಾಗಿದೆ.

2018ರಲ್ಲಿ ಸ್ಥಗಿತಗೊಂಡಿದ್ದ ‘ಯಶಸ್ವಿನಿ’ ಯೋಜನೆ 2022ರ ನವೆಂಬರ್‌ನಿಂದ ಪುನರಾರಂಭ ಆಗಿರುವುದು ಜನರಿಗೆ ಸಂತಸ ತಂದಿದೆ. ಆದರೆ ವಿವಿಧ ಕಾರಣಗಳಿಗಾಗಿ ಕಾರ್ಡ್‌ಗಳು ವಿಳಂಬವಾಗುತ್ತಿವೆ. ಆದರೂ ಫಲಾನುಭವಿಗಳಿಗೆ ಚಿಕಿತ್ಸೆ ಪಡೆಯಲು ಸಹಕಾರ ಇಲಾಖೆಯಿಂದ ಕಾರ್ಡ್‌ಗೆ ಪರ್ಯಾಯವಾಗಿ ದೃಢೀಕರಣ ಪತ್ರ ನೀಡಲಾಗುತ್ತಿದೆ. ಇದರಿಂದ ಚಿಕಿತ್ಸೆ ಪಡೆಯಲು ತೊಂದರೆಯಾಗಿಲ್ಲ.

ಸಹಕಾರ ಇಲಾಖೆ ಕಚೇರಿಗಳಲ್ಲಿ ಯಶಸ್ವಿನಿ ಯೋಜನೆ ಅಡಿ ಕಳೆದ ನವೆಂಬರ್ ತಿಂಗಳಿನಿಂದಲೇ ನೋಂದಣಿ ಆರಂಭವಾಗಿದೆ. 1 ಲಕ್ಷ ಫಲಾನುಭವಿಗಳ ಗುರಿ ಇದ್ದು, ಗುರಿ ಮೀರಿ ಸಾಧನೆಯಾಗಿದೆ. ಜಿಲ್ಲೆಯಾದ್ಯಂತ 1,456 ಸಹಕಾರ ಸಂಘಗಳ ನೋಂದಣಿ ಆಗಿದ್ದು, ಅವುಗಳಲ್ಲಿ 1,108 ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. ಈ ಸಂಘಗಳಲ್ಲಿ 1,01,000 ಫಲಾನುಭವಿಗಳಿದ್ದಾರೆ. ಇವುಗಳ ಪೈಕಿ ಅಂದಾಜು 8,000 ಕಾರ್ಡ್‌ಗಳು ಮಾತ್ರ ವಿತರಣೆಯಾಗಿದ್ದು, ಇನ್ನೂ 93,000 ಕಾರ್ಡ್‌ಗಳ ವಿತರಣೆ ಬಾಕಿ ಇದೆ.

ADVERTISEMENT

‘ಯಶಸ್ವಿನಿ ಯೋಜನೆ ಅಡಿ ಕಾರ್ಡ್‌ಗಳು ಬೆಂಗಳೂರಿನಿಂದಲೇ ಪ್ರಿಂಟ್ ಆಗಿ ಬರಬೇಕಿದ್ದು, ವಿಳಂಬವಾಗಿವೆ. ನಾವು ಅರ್ಜಿಗಳನ್ನು ಸ್ಕ್ಯಾನ್ ಮಾಡಿ ಬೆಂಗಳೂರಿಗೆ ಕಳುಹಿಸಲಿದ್ದು, ಬಳಿಕ ಪ್ರಿಂಟ್ ಆಗಿ ಬರಲಿವೆ. ಜಿಲ್ಲೆಯಿಂದ ಈ ವರ್ಷ 40,360 ಅರ್ಜಿಗಳನ್ನು ಸ್ವೀಕರಿಸಿ ಸ್ಕ್ಯಾನ್ ಮಾಡಿ ಕಳುಹಿಸಲಾಗಿದೆ’ ಎಂದು ದಾವಣಗೆರೆ ಸಹಕಾರ ಸಂಘಗಳ ಉಪನಿಬಂಧಕರಾದ ಎಚ್‌. ಅನ್ನಪೂರ್ಣಾ ‘ಪ್ರಜಾವಾಣಿ’ಗೆ ತಿಳಿಸಿದರು.

ಅರ್ಜಿ ಸಲ್ಲಿಕೆಗೆ 28 ಕಡೇ ದಿನ: ‘ವಿವಿಧ ಸಹಕಾರಿ ಸಂಘಗಳ ಸದಸ್ಯರಾಗಿರುವವರು ಆಯಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರ ಮೂಲಕ ಯಶಸ್ವಿನಿ ಯೋಜನೆ ವಿಮಾ ಸೌಲಭ್ಯ ಪಡೆದುಕೊಳ್ಳಬಹುದು. ಇದು ಒಂದು ವರ್ಷದ ಅವಧಿಯ ವಿಮೆಯಾಗಿರುತ್ತದೆ. ಈ ಸಾಲಿನಲ್ಲಿ ಸೌಲಭ್ಯ ಪಡೆಯಬೇಕಾದರೆ ಫೆ. 28ರೊಳಗೆ ಅರ್ಜಿ ಸಲ್ಲಿಸಬೇಕು’ ಎಂದು ಅವರು ತಿಳಿಸಿದರು.

‘ಎಲ್ಲಾ ಜಿಲ್ಲೆಗಳಿಂದ ಅರ್ಜಿಗಳು ಒಮ್ಮೆಲೇ ಈ ಸಂಸ್ಥೆಗೆ ರವಾನೆ ಆಗುತ್ತಿರುವುದರಿಂದ ಈ ಎಲ್ಲರಿಗೂ ಒಂದೇ ಸ್ಥಳದಲ್ಲಿ ಕಾರ್ಡ್ ಸಿದ್ಧಪಡಿಸಬೇಕಿರುವ ಕಾರಣಕ್ಕೆ ಯಶಸ್ವಿನಿ ಕಾರ್ಡ್ ವಿತರಣೆ ವಿಳಂಬವಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ವಿತರಣೆಯಾಗುತ್ತದೆ’ ಎಂದು ಹೇಳಿದರು.

=====

‘18 ಆಸ್ಪತ್ರೆಗಳ ಸಹಯೋಗ’

‘ಜಿಲ್ಲೆಯಲ್ಲಿ 18 ಆಸ್ಪತ್ರೆಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಫಲಾನುಭವಿ ಕುಟುಂಬ ವಾರ್ಷಿಕವಾಗಿ ₹ 5 ಲಕ್ಷದವರೆಗೂ ಚಿಕಿತ್ಸೆ ಪಡೆಯಬಹುದು. 1,650 ಕಾಯಿಲೆಗಳು ಒಳಗೊಂಡಿರುತ್ತವೆ’ ಎಂದು ಯಶಸ್ವಿನಿ ಯೋಜನೆಯ ಜಿಲ್ಲಾ ಸಂಯೋಜಕ ಮಂಜುನಾಥ್ ತಿಳಿಸಿದರು.

‘ಗ್ರಾಮೀಣ ಸಹಕಾರ ಸಂಘಗಳ ಸ್ವ–ಸಹಾಯ ಗುಂಪುಗಳ ನಾಲ್ಕು ಸದಸ್ಯರ ಕುಟುಂಬ ಒಂದಕ್ಕೆ ವಾರ್ಷಿಕ ₹ 500 ವಂತಿಗೆ ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಳ್ಳ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಶೇ 20ರಷ್ಟು ಹೆಚ್ಚುವರಿಯಾಗಿ ಅಂದರೆ ಪ್ರತಿ ಸದಸ್ಯರಿಗೆ ₹ 100 ಪಾವತಿಸಬೇಕು. ನಗರ ಸಹಕಾರ ಸಂಘಗಳ ನಾಲ್ಕು ಸದಸ್ಯರ ಗುಂಪಿಗೆ ₹ 1,000, ಅದಕ್ಕಿಂತ ಹೆಚ್ಚಿಗೆ ಸದಸ್ಯರು ಇದ್ದರೆ ಪ್ರತಿಯೊಬ್ಬ ಸದಸ್ಯರಿಗೆ ಶೇ 20ರಷ್ಟು ಅಂದರೆ ₹200 ಹೆಚ್ಚುವರಿಯಾಗಿ ಪಾವತಿಸಬೇಕಿದೆ’ ಎಂದು ಅವರು ಹೇಳಿದರು.

ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಉಚಿತ: ‘ಪರಿಶಿಷ್ಟ ಜಾತಿ ಹಾಗೂ ಪಂಗಡದ ಸದಸ್ಯರಿಗೆ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯ ಅಡಿ ಸಹಾಯಧನ ನೀಡುವ ಮೂಲಕ ವಾರ್ಷಿಕ ಸದಸ್ಯತ್ವದ ವಂತಿಗೆಯನ್ನು ಸರ್ಕಾರವೇ ಭರಿಸಲಿದೆ’ ಎಂದು ಅವರು ವಿವರಿಸಿದರು.

========

ಸಹಕಾರ ಸಂಘಗಳ ಸದಸ್ಯರಾಗಿ 15 ದಿವಸಗಳು ಕಳೆದ ಬಳಿಕ ಯಶಸ್ವಿನಿ ಕಾರ್ಡ್‌ ಪಡೆಯಲು ಅರ್ಜಿ ಸಲ್ಲಿಸಿದ ಬಳಿಕ ಸೌಲಭ್ಯ ಪಡೆಯಲು ಅರ್ಹರು. ಗುರುತಿನ ಪತ್ರ ಇಲ್ಲದವರಿಗೆ ಚಿಕಿತ್ಸೆಗೆ ತೊಂದರೆಯಾಗದಂತೆ ದೃಢೀಕರಣ ಪತ್ರ ನೀಡುತ್ತಿದ್ದು, ಚಿಕಿತ್ಸೆ ಪಡೆಯಬಹುದು.
-ಎಚ್‌. ಅನ್ನಪೂರ್ಣ, ಉಪ ನಿಬಂಧಕರು. ಜಿಲ್ಲಾ ಸಹಕಾರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.