ಚನ್ನಗಿರಿ: ಒಂದು ವಾರದಿಂದ ಅಡಿಕೆ ದರ ಏರುಮುಖದಲ್ಲಿ ಸಾಗಿದ್ದು, ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಅಡಿಕೆ ದರ ಕ್ವಿಂಟಲ್‌ಗೆ ₹ 65,000 ಗಡಿ ದಾಟಿದೆ.
ತಾಲ್ಲೂಕಿನಲ್ಲಿ 36,000 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆ ಬೆಳೆಯಲಾಗುತ್ತಿದೆ. ಶುಕ್ರವಾರ ತುಮ್ಕೋಸ್ ಮಾರುಕಟ್ಟೆಯಲ್ಲಿ ಅಡಿಕೆಯ ವಹಿವಾಟು ಕ್ವಿಂಟಲ್‌ಗೆ ಕನಿಷ್ಠ ₹ 59,000, ಗರಿಷ್ಠ ₹ 65,069ರಂತೆ ನಡೆಯಿತು. ಕಳೆದ ವರ್ಷ ಇದೇ ತಿಂಗಳಲ್ಲಿ ₹ 49,000 ದರ ಇತ್ತು.
‘ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಹೊಸ ಅಡಿಕೆ ಬರುತ್ತಿದೆ. ಮಳೆಯ ಕಾರಣ ಹೊಸ ಅಡಿಕೆ ಕೊಯ್ಲು ಸಾಧ್ಯವಾಗಿರಲಿಲ್ಲ. ಕೊಯ್ಲು ಮಾಡಿದರೂ ಬೇಯಿಸಿದ ಅಡಿಕೆಯನ್ನು ಒಣಗಿಸಲು ಬಿಸಿಲು ಇರಲಿಲ್ಲ. ಮಾರುಕಟ್ಟೆಯಲ್ಲಿ ಅಡಿಕೆಯ ಕೊರತೆ ಉಂಟಾದ ಪರಿಣಾಮ ದರ ಹೆಚ್ಚಿದೆ. ನಾಲ್ಕು ದಿನಗಳಿಂದ ಮಳೆ ಬಿಡುವು ನೀಡಿದ್ದು, ಬಿಸಿಲು ಇದೆ. ಬೆಳೆಗಾರರು ಅಡಿಕೆ ಕೊಯ್ಲು ಆರಂಭಿಸಿದ್ದು, ಹೊಸ ಅಡಿಕೆ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಅವಕವಾದರೆ ಮಾತ್ರ ಅಡಿಕೆ ದರ ಸ್ವಲ್ಪ ಕಡಿಮೆಯಾಗಬಹುದು’ ಎಂದು ತುಮ್ಕೋಸ್ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ತಿಳಿಸಿದರು.
‘ಹಸಿ ಅಡಿಕೆಯ ದರವೂ ₹ 7,700 ತಲುಪಿರುವುದು ಅಡಿಕೆ ಬೆಳೆಗಾರರಲ್ಲಿ ಹರ್ಷ ತಂದಿದೆ. ಮಳೆಯ ಕಾರಣದಿಂದಾಗಿ ಅಡಿಕೆ ಕೊಯ್ಲು ತಡವಾಗಿತ್ತು. ಎಕರೆಗೆ 13ರಿಂದ 15 ಕ್ವಿಂಟಲ್ ಇಳುವರಿ ದೊರೆತಿದೆ. ಹೊಸ ಅಡಿಕೆಯನ್ನು ಮಾರಲು ಉತ್ಸುಕರಾಗಿದ್ದೇವೆ. ಈ ತಿಂಗಳು ಪೂರ್ತಿ ಅಡಿಕೆ ದರ ಸ್ಥಿರವಾಗಿದ್ದರೆ ಅಡಿಕೆ ಬೆಳೆಗಾರರು ನೆಮ್ಮದಿಯ ನಿಟ್ಟುಸಿರು ಬಿಡಬಹುದು’ ಎನ್ನುತ್ತಾರೆ ತಾಲ್ಲೂಕಿನ ಕಾಕನೂರು ಗ್ರಾಮದ ಅಡಿಕೆ ಬೆಳೆಗಾರ ಕೆ.ಸಿ. ಸತೀಶ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.